ಉಳ್ಳಾಲದಲ್ಲಿ ಸ್ವಯಂ ಲಾಕ್‌ಡೌನ್ ಸ್ಥಿತಿ
ಕೋವಿಡ್-19 ಸೋಂಕಿತರ ಸಂಖ್ಯೆ ಹೆಚ್ಚಳ
Team Udayavani, Jul 2, 2020, 5:41 AM IST
ಉಳ್ಳಾಲ: ಕೋವಿಡ್-19 ಸೋಂಕಿತರ ಸಂಖ್ಯೆ 52 ದಾಟುವ ಮೂಲಕ ಕೋವಿಡ್-19 ಹಾಟ್‌ಸ್ಪಾಟ್ ಆಗಿರುವ ಉಳ್ಳಾಲದಲ್ಲಿ ಈ ವರೆಗೆ ಇಬ್ಬರು ಮೃತಪಟ್ಟಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿವೆ.
ನಗರಸಭೆ ವ್ಯಾಪ್ತಿಯಲ್ಲಿ 12 ಕಡೆ ಸೀಲ್‌ಡೌನ್ ಆಗಿದ್ದು, ಅತೀ ಹೆಚ್ಚು ಸೋಂಕು ಕಂಡು ಬಂದಿರುವ ಉಳ್ಳಾಲ ಅಝಾದ್ ನಗರದಲ್ಲಿ ಜನರೇ ಸ್ವಯಂ ಲಾಕ್‌ಡೌನ್ ಸ್ಥಿತಿ ನಿರ್ಮಿಸಿಕೊಂಡಿದ್ದಾರೆ.
ಇಲ್ಲಿನ ಮಹಿಳೆಯೊಬ್ಬರಿಗೆ ಸೋಂಕು ತಗಲಿರುವುದು ಪ್ರಥಮ ಬಾರಿಗೆ ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಯಲ್ಲಿ ದೃಢವಾಗಿತ್ತು. ಅವರು ಗಂಭೀರ ಸ್ಥಿತಿಯಲ್ಲಿದ್ದು, ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹಿಳೆಯ ಪ್ರಾಥಮಿಕ ಸಂಪರ್ಕ ಹೊಂದಿದ್ದ ಕುಟುಂಬದ ಎಲ್ಲ 16 ಮಂದಿಗೂ ಸೋಂಕು ದೃಢವಾಗಿತ್ತು. ದ್ವಿತೀಯ ಪ್ರಕರಣ ಕಂಡು ಬಂದ ಮಹಿಳೆ ಮೃತಪಟ್ಟಿದ್ದು, ಅವರ ಮನೆಯ ಎಲ್ಲ ಸದಸ್ಯರಿಗೂ ಸೋಂಕು ಇರುವುದು ದೃಢಪಟ್ಟಿದೆ. ಇಲ್ಲಿ ಮೃತ ಮಹಿಳೆ ಸಹಿತ 25 ಮಂದಿಯಲ್ಲಿ ಸೋಂಕು ದೃಢವಾಗಿದ್ದು, ಬುಧವಾರ ಯಾವುದೇ ಪರೀಕ್ಷೆಯ ವರದಿ ಬಂದಿಲ್ಲ. ಈ ಪ್ರದೇಶದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜನರೇ ಲಾಕ್‌ಡೌನ್ ಸ್ಥಿತಿ ನಿರ್ಮಿಸಿಕೊಂಡು ತಮ್ಮ ರಕ್ಷಣೆಗೆ ಆದ್ಯತೆ ನೀಡುತ್ತಿದ್ದಾರೆ.
ಪೊಲೀಸರಿಗೆ ಬೇಕು
14 ದಿನಗಳ ಕ್ವಾರಂಟೈನ್
ಉಳ್ಳಾಲದಲ್ಲಿ ಕೋವಿಡ್-19 ಹಾಟ್‌ಸ್ಪಾಟ್ ಆಗಿರುವ ಇನ್ನೊಂದು ಪ್ರದೇಶ ಉಳ್ಳಾಲ ಪೊಲೀಸ್ ಠಾಣೆ. ತಲಪಾಡಿ ಗಡಿ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಎಸ್‌ಐಗೆ ಸೋಂಕು ಖಚಿತವಾದ ಬಳಿಕ ಪ್ರತಿ ದಿನ ಪೊಲೀಸರಿಗೆ ಸೋಂಕು ದೃಢ ವಾಗುತ್ತಾ ಬಂದಿದ್ದು, ಎಸ್‌ಐ ಸಹಿತ 10 ಪೊಲೀಸ್ ಸಿಬಂದಿ, ಇಬ್ಬರು ಹೋಮ್‌ಗಾರ್ಡ್ಸ್, ಇಬ್ಬರು ಕೊಲೆ ಯತ್ನದ ಶಂಕಿತ ಆರೋಪಿಗಳು, ಅವರಿಗೆ ಆಹಾರ ಪೂರೈಸುತ್ತಿದ್ದ ಇಬ್ಬರು ಉಳ್ಳಾಲದ ನಿವಾಸಿಗಳಿಗೆ ಸೋಂಕು ದೃಢವಾಗಿತ್ತು. ಠಾಣಾ ಸಂಪರ್ಕದಿಂದ ಮಂಗಳೂರು ಗ್ರಾಮಾಂತರ ಠಾಣಾ ಸಿಬಂದಿಗೆ ಸೋಂಕು ತಗಲಿದ್ದು, ಠಾಣಾ ಸಂಪರ್ಕದಿಂದ ಒಟ್ಟು 17 ಜನರಿಗೆ ಸೋಂಕು ತಗುಲಿದಂತಾಗಿದೆ. ಸುಮಾರು 60ಕ್ಕೂ ಹೆಚ್ಚು ಸಿಬಂದಿಯಿರುವ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದವರಿಗೆ ಕನಿಷ್ಠ 14 ದಿನ ಸೀಲ್‌ಡೌನ್ ಮಾಡಿ ಕ್ವಾರಂಟೈನ್ ನಡೆಸುವುದು ಸೂಕ್ತ ಎನ್ನುತ್ತಾರೆ ಸ್ಥಳೀಯರು.
ಉಳ್ಳಾಲ ನಗರಸಭೆಯ ಎರಡು ಗ್ರಾಮಗಳಾದ ಉಳ್ಳಾಲದಲ್ಲಿ 45ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಪೆರ್ಮನ್ನೂರು ಗ್ರಾಮದಲ್ಲಿ ಐದು ಸೋಂಕು ಪತ್ತೆಯಾಗಿವೆ. ಉಳ್ಳಾಲ ನಗರಸಭೆಯ ವ್ಯಾಪ್ತಿಯಲ್ಲಿ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಲಾಕ್‌ಡೌನ್ ಮಾಡಬೇಕು ಎಂದು ಉಳ್ಳಾಲದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಸೋಂಕಿನ ಮೂಲ ತಿಳಿದಿಲ್ಲ
ಆರಂಭದಲ್ಲಿ ಮಹಿಳೆಯರಿಗೆ ಮತ್ತು ಪೊಲೀಸ್ ಸಿಬಂದಿಗೆ ಸೋಂಕು ಯಾರಿಂದ ಬಂತು ಎನ್ನುವುದು ಇನ್ನೂ ಪತ್ತೆಯಾಗಿಲ್ಲ. ಮುಖ್ಯವಾಗಿ ಈ ಪ್ರದೇಶದಿಂದ ಮೀನುಗಾರಿಕೆಗೆ ಹೆಚ್ಚು ಜನರು ತೆರಳುತ್ತಿದ್ದು, ಮೀನುಗಾರಿಕಾ ಬಂದರು ಅಥವಾ ಹೊರ ರಾಜ್ಯಗಳಿಂದ ಬರುತ್ತಿರುವ ಮೀನಿನ ಲಾರಿಗಳ ಚಾಲಕರಿಂದ ಸೋಂಕು ಹರಡಿರುವ ಸಾಧ್ಯತೆಯ ಕುರಿತು ಚರ್ಚೆ ನಡೆಯುತ್ತಿದೆ. ಈ ಪ್ರದೇಶದ ಮೀನುಗಾರಿಕಾ ಹಿನ್ನೆಲೆ ಯುಳ್ಳವರ ಮನೆಯ ಸದಸ್ಯರಲ್ಲೂ ಸೋಂಕು ಪತ್ತೆಯಾಗಿದೆ.
ತಮ್ಮ ರಕ್ಷಣೆ ಮಾಡಿಕೊಳ್ಳಿ
ಜನರಿಗೆ ಮಾಹಿತಿ ನೀಡುವ ಕಾರ್ಯ ನಡೆಯುತ್ತಿದೆ. ಪ್ರತಿಯೊಬ್ಬರು ತಮ್ಮ ರಕ್ಷಣೆ ಮಾಡಿಕೊಳ್ಳಬೇಕು ಪಕ್ಕದ ಮನೆಯಲ್ಲಿ ಅಥವಾ ತಮಗೆ ತಿಳಿದವರಿಗೆ ಯಾರಿಗಾದರೂ ಜ್ವರ ಶೀತ, ಕೆಮ್ಮು ಇದ್ದರೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡಲು ಸೂಚಿಸಲಾಗಿದೆ.
- ರಾಯಪ್ಪ,
ಉಳ್ಳಾಲ ನಗರಸಭೆ ಪೌರಾಯುಕ್ತರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.