ನನ್ನಿಷ್ಟದ ಸಿನೆಮಾ – ಯುವ ಜನರ ಆಯ್ಕೆ : ಬಹಳ ಕಾಡಿದ ಚಿತ್ರ ದಿಯಾ
Team Udayavani, Jul 7, 2020, 3:37 AM IST
‘ಕೆಲವು ಸಿನಿಮಾಗಳು ಹೇಗೆಂದರೆ, ವೀಕ್ಷಿಸುತ್ತಿದ್ದರೆ ಆ ಚಿತ್ರಕಥೆ, ಪಾತ್ರ, ನಟನೆ ಹಾಗೂ ಪ್ರಸ್ತುತ ಆ ಸನ್ನಿವೇಶದ ಸ್ಥಿತಿ – ಗತಿ ನಮ್ಮ ಮನಸ್ಸಿಗೆ ತುಂಬಾ ಹತ್ತಿರವಾಗಿ, ಆ ಸಿನಿಮಾದೊಳಗೆ ಅರಿವಿಲ್ಲದೆಯೇ ಒಳ ಹೊಕ್ಕುತ್ತೇವೆ. ಅಂತಹ ಸಿನೆಮಾಗಳಲ್ಲಿ ಒಂದು ಕನ್ನಡದ ಇತ್ತೀಚಿನ Dia – Life Is Full Of Surprises”
ಬಹಳ ಕಾಡಿದ ಚಿತ್ರ ಇದು. ಭರ್ಜರಿ ಫೈಟ್, ಹಾಡುಗಳಿಲ್ಲದೆಯೂ ಒಂದು ಅತ್ಯತ್ತಮ ಸಿನಿಮಾವನ್ನು ನೀಡಬಹುದು ಎಂಬುವುದಕ್ಕೆ ಉದಾಹರಣೆ. ಅನೀರಿಕ್ಷಿತ ತಿರುವುಗಳು, ಡೈಲಾಗ್‍ಗಳು, ಸಂಬಂಧಗಳು, ತಾಯಿ ಮಗನ ಪ್ರೀತಿ, ಗೆಳೆತನ, ಪ್ರೀತಿ, ತ್ಯಾಗವನ್ನು ಒಳಗೊಂಡಿದೆ. ಆದರೂ ಈ ಸಿನಿಮಾದ ಕ್ಲೈಮ್ಯಾಕ್ಸ್ ಮನಸ್ಸಿಗೆ ತುಂಬಾ ನೋವು ಮಾಡಿತು.
ಕೆಲವು ಚಲನಚಿತ್ರ ಕಾಮಿಡಿಯಲ್ಲೇ ಪ್ರೇಕ್ಷಕರನ್ನು ಮನರಂಜಿಸಿದರೆ, ಇನ್ನೂ ಕೆಲವು ತಮ್ಮ ಸಂಗೀತ ಸಂಯೋಜನೆಯ ಮೂಲಕ ಹಿಡಿದಿಟ್ಟುಕೊಳ್ಳುತ್ತವೆ. ಕೆಲವು ಸಿನಿಮಾದಲ್ಲಿ ಅಲ್ಲೊಂದು ಇಲ್ಲೊಂದು ತಿರುವುಗಳನ್ನಿಟ್ಟು, ಪ್ರೇಕ್ಷಕರಿಗೆ ಅಚ್ಚರಿ ಕೊಡೋ ನಿರ್ದೇಶಕರು, ಚಿತ್ರದಲ್ಲಿ ಕಥೆಯೇ ಇಲ್ಲದಿದ್ದರೂ, ಏನೋ ಕಾಮಿಡಿ-ಸಂಗೀತದಲ್ಲಿ ಆಟವಾಡಿ ಒಂದು ಪೂರ್ಣಪ್ರಮಾಣದ ಸಿನೆಮಾ ಹೊರತರುತ್ತಾರೆ. ಇವೆಲ್ಲದರ ಮಧ್ಯೆ, ಇತ್ತೀಚೆಗೆ ಬಿಡುಗಡೆಯಾದ ಸಿನೆಮಾ “ದಿಯಾ”ವಿಶಿಷ್ಟವಾಗಿ ಕಾಣುತ್ತದೆ.
ದಿಯಾ ಸಿನಿಮಾ ವಿಪಲಗೊಂಡಿದ್ದು ಪ್ರಚಾರದಲ್ಲಿ ಅಂದರೆ ತಪ್ಪಾಗಲಿಕ್ಕಿಲ್ಲ. ಏಕೆಂದರೆ ಇನ್ನು ಎಷ್ಟೋ ಜನಕ್ಕೆ ಈ ಸಿನಿಮಾ ಬಗ್ಗೆ ಗೊತ್ತೇ ಇಲ್ಲ. ಫೆಬ್ರುವರಿ ಮೊದಲ ವಾರ ಬಿಡುಗಡೆಯಾದ ಈ ಸಿನಿಮಾ, ಮೊದಲ ದಿನವೇ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಕಂಡಿತು. ಹಲವು ಪತ್ರಿಕೆಗಳು ಸಹ ಇದರ ಬಗ್ಗೆ ಒಳ್ಳೆ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೂ, ಈ ಸಿನಿಮಾ ಎಲ್ಲಾ ಕಡೆ ಬಿಡುಗಡೆಗೊಂಡಿರಲಿಲ್ಲ.
ಚಿತ್ರದ ಮೂಲಕ ನಿರ್ದೇಶಕರು ಒಂದು ನೆಗ್‍ಟಿವ್ ಸಂದೇಶ ರವಾನಿಸಿದರೂ, ಅದು ವಾಸ್ತವವೂ ಹೌದು.“Life is full of surprises and miracles”. ಜೀವನವು ಹೇಗೆಲ್ಲಾ ತಿರುವು ಪಡೆಯುತ್ತದೆ ಎಂದು ಚಿತ್ರ ತೋರಿಸುತ್ತದೆ.
ಪ್ರಾರಂಭದ ಸುಮಾರು ಅರ್ಧ ಗಂಟೆ ಒಂದು ಪ್ರೇಮಕಥೆ: ಬಳಿಕದ ಸುಮಾರು ಒಂದು ಗಂಟೆ ಮತ್ತೊಂದು ಪ್ರೇಮ ಕಥೆ. ಅದನ್ನು ನೋಡುವಾಗ ಮೊದಲ ಕಥೆಯನ್ನು ಯಾಕೆ ಹೆಣೆಯಲಾಗಿದೆ ಎಂದು ತಿಳಿಯದು. ಆದರೆ, ಸಿನಿಮಾದಲ್ಲಿ ಬಳಿಕ ಬರುವ ಎಲ್ಲಾ ಆಗುಹೋಗುಗಳಿಗೂ ಅದುವೇ ಬುನಾದಿ ಎಂದು ಕೊನೆಯಲ್ಲಿ ಗೊತ್ತಾಗುತ್ತದೆ.
ಹಲವಾರು ಸಿನಿಮಾಗಳಲ್ಲಿ ಒಂದೋ ಕಾಮಿಡಿ ಇಲ್ಲವೇ ಸಂಗೀತವೇ ಜೀವಾಳ ಆಗಿರುತ್ತದೆ. ಆದರೆ ದಿಯಾ ಸಿನಿಮಾದ ವಿಶೇಷತೆ ಎಂದರೆ ಇದರಲ್ಲಿ ಒಂದೇ ಒಂದು ಹಾಡು ಇಲ್ಲ. ಹಾಸ್ಯ ಕಲಾವಿದರೂ ಇಲ್ಲ. ಹಾಗಂತ ಇಡೀ ಸಿನಿಮಾ “ಬೋರ್ ಹೊಡೆಯದು. ಸಿನಿಮಾದ ನಾಲ್ಕು ಮುಖ್ಯಪಾತ್ರಧಾರಿಗಳಲ್ಲೇ ಹಾಸ್ಯ ಪ್ರಜ್ಞೆ ಇದೆ.
ಹಲವಾರು ಕಡೆ ಸಂಭಾಷಣೆಯೇ ಸಂಗೀತಮಯವಾಗಿ ಗೋಚರಿಸುತ್ತದೆ. ಕೆಲವೊಂದು ಸನ್ನಿವೇಶಗಳು ನಮ್ಮ ಜೀವನದಲ್ಲೂ ಆಗಿದೆ ಎಂಬಂತಹ ಭಾವನೆಯನ್ನು ಮೂಡಿಸುತ್ತದೆ. ಕೆಲವೊಮ್ಮೆ ಆ ಪಾತ್ರಕ್ಕೂ, ಘಟನೆಗಳಿಗೂ, ನಮ್ಮ ನಿಜ ಜೀವನಕ್ಕೂ ಏನೋ ಹೋಲಿಕೆ ಇದ್ದಂತೆ ಭಾಸವಾಗುತ್ತದೆ. ಇವೆಲ್ಲದರ ಹಿಂದೆ, ನಿರ್ದೇಶಕರು ಇಡೀ ಸಿನಿಮಾದಲ್ಲಿ ಕಾಪಾಡಿಕೊಂಡು ಬಂದಂತಹ ಪಾತ್ರಗಳಲ್ಲಿನ ನೈಜತೆ ಪ್ರಧಾನ ಅಂಶ.
ಚಿತ್ರವು ಪಾತ್ರಗಳ ಮುಗ್ದತೆಯನ್ನು ಬಹಳ ಪರಿಣಾಮಕಾರಿಯಾಗಿ ಸೆರೆಹಿಡಿಯುತ್ತದೆ. ಇಡೀ ಕಥಾಹಂದರದಲ್ಲಿ ಯಾವುದೇ ಅನಗತ್ಯ ಅಂಶಗಳಿಲ್ಲ ಮತ್ತು ನೃತ್ಯ- ಹೊಡೆದಾಟಗಳೂ ಇಲ್ಲ. ಹಾಗಾಗಿ ಈ ಚಿತ್ರವು ಅರ್ಥಪೂರ್ಣ ಸಿನೆಮಾ ಬಯಸುವವರಿಗೆ ಇಷ್ಟವಾಗುತ್ತದೆ.
ಒಟ್ಟಾರೆಯಾಗಿ ಹೇಳುವುದಾದರೆ, ಈ ಚಲನಚಿತ್ರವು ಶಕ್ತಿಯುತವಾದ ಒಂದು ಕಥೆಯನ್ನು ಹೊಂದಿದೆ ಮತ್ತು ಕೆಲವು ಹೃದಯಸ್ಪರ್ಶಿ ದೃಶ್ಯಗಳನ್ನು ಹೊಂದಿದೆ. ಇತ್ತೀಚಿನ ದಿನಗಳಲ್ಲಿ ಬಂದಂತಹ ಅತ್ಯುತ್ತಮ ಪ್ರೇಮಕಥೆಗಳಲ್ಲಿ ಈ ಸಿನಿಮಾವೂ ಒಂದು.
– ದೀಪಾ ಮಂಜರಗಿ, ಪತ್ರಿಕೋದ್ಯಮ ವಿದ್ಯಾರ್ಥಿನಿ, ಅಕ್ಕ ಮಹಾದೇವಿ ಮಹಿಳಾ ವಿವಿ ವಿಜಯಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Bengaluru: ಭುವನೇಶ್ವರಿ ಪ್ರತಿಮೆಗೆ ಹಾನಿ: ಆಕ್ರೋಶ
Bengaluru: ಕದ್ದ ಮೊಬೈಲ್ ಕೊರಿಯರ್ ಮೂಲಕ ಕೇರಳಕ್ಕೆ ರವಾನೆ!
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.