ಉದಯವಾಣಿ ರಿಯಾಲಿಟಿ ಚೆಕ್: ಕರಾವಳಿ ಜಿಲ್ಲೆಗಳಲ್ಲಿ ಕೋವಿಡ್ ಚಿಕಿತ್ಸೆಗೆ ಸರ್ವಸನ್ನದ್ಧ
ದ.ಕ., ಉಡುಪಿಯಲ್ಲಿ ಸೋಂಕು ಹೆಚ್ಚಿದರೂ ಹಾಸಿಗೆ, ಐಸಿಯು ಕೊರತೆ ಎದುರಾಗದು
Team Udayavani, Jul 8, 2020, 7:26 AM IST
ಸಾಂದರ್ಭಿಕ ಚಿತ್ರ
ಮಂಗಳೂರು/ ಉಡುಪಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಹಾವಳಿ ನಿಧಾನವಾಗಿ ಏರುಗತಿಯಲ್ಲಿದೆ. ಸೋಂಕು ಈಗ ಗ್ರಾಮಾಂತರ ಭಾಗಗಳಿಗೂ ಹಬ್ಬುತ್ತಿರುವುದು ಎಚ್ಚರಿಕೆಯ ಗಂಟೆ. ಸದ್ಯ ಎರಡೂ ಜಿಲ್ಲೆಗಳಲ್ಲಿ ಸೋಂಕು ಪೀಡಿತರ ಸಂಖ್ಯೆಗೆ ಹೋಲಿಸಿದರೆ ಚಿಕಿತ್ಸೆಗೆ ಲಭ್ಯವಿರುವ ವೈದ್ಯಕೀಯ ಸೌಲಭ್ಯಗಳು ಹೆಚ್ಚು ಇವೆ. ಆದರೂ ಮುನ್ನೆಚ್ಚರಿಕೆಯ ಕ್ರಮವಾಗಿ ಹೆಚ್ಚುವರಿ ಬೆಡ್, ಖಾಸಗಿ ಆಸ್ಪತ್ರೆಗಳ ನಿಯೋಜನೆಯಂತಹ ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ. ಈ ಸಂಬಂಧ “ಉದಯವಾಣಿ’ ನಡೆಸಿರುವ ರಿಯಾಲಿಟಿ ಚೆಕ್ ಇದು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸದ್ಯ ಸೋಂಕುಪೀಡಿತರ ಸಂಖ್ಯೆ ಹೆಚ್ಚಿದ್ದು, ಖಾಸಗಿ ಆಸ್ಪತ್ರೆಗಳಲ್ಲಿಯೂ ಚಿಕಿತ್ಸೆ ಆರಂಭಿಸಲಾಗಿದೆ. ಇಲ್ಲಿ ಕೋವಿಡ್ ಮೀಸಲು ಆಸ್ಪತ್ರೆಯಲ್ಲಿ ಹಾಸಿಗೆ, ಐಸಿಯು ಹಾಸಿಗೆ, ವೆಂಟಿಲೇಟರ್ ಸಂಖ್ಯೆ ಉಡುಪಿಗಿಂತ ಹೆಚ್ಚು. ಉಡುಪಿಯಲ್ಲಿ ಸೋಂಕುಪೀಡಿತರ ಸಂಖ್ಯೆ ಕಡಿಮೆ ಇದ್ದರೂ ಕೋವಿಡ್ ಮೀಸಲು ಆಸ್ಪತ್ರೆಯ ಹಾಸಿಗೆಗಳಲ್ಲದೆ ಹೆಚ್ಚುವರಿಯಾಗಿ 2,500ರಷ್ಟು ಹಾಸಿಗೆ ಸಾಮರ್ಥ್ಯವನ್ನು ಈಗಾಗಲೇ ಕಾಯ್ದಿರಿಸಲಾಗಿದ್ದು, ದ.ಕ.ಕ್ಕಿಂತ ಹೆಚ್ಚು ಚಿಕಿತ್ಸೆ ಸನ್ನದ್ಧ ಸ್ಥಿತಿಯಲ್ಲಿದೆ.
ವೆನ್ಲಾಕ್ ಕೋವಿಡ್ ಆಸ್ಪತ್ರೆ: 230 ಹಾಸಿಗೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಸೋಂಕು ಪತ್ತೆಯ ಆರಂಭದಲ್ಲಿಯೇ ವೆನ್ಲಾಕ್ ಸರಕಾರಿ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಲಾಗಿತ್ತು. ಇಲ್ಲಿ ಸುಮಾರು 230 ಹಾಸಿಗೆಗಳು ಕೋವಿಡ್ ಪೀಡಿತರ ಚಿಕಿತ್ಸೆಗೆ ಮೀಸಲಿವೆ. ಜಿಲ್ಲೆಯಲ್ಲಿ ಈಗ ಕೋವಿಡ್ ಹಾವಳಿ ಹೆಚ್ಚುತ್ತಿದ್ದು, ವೆನ್ಲಾಕ್ ಸಾಮರ್ಥ್ಯ ಬಹುತೇಕ ಭರ್ತಿಯಾಗಿದೆ. ಹೀಗಾಗಿ ಮೂರು ಖಾಸಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಆರಂಭವಾಗಿದೆ. ಕೋವಿಡ್ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳನ್ನು ಬಳಸಿಕೊಳ್ಳುವ ಬಗ್ಗೆ ಸರಕಾರದ ನಿರ್ದೇಶನದಂತೆ ಜಿಲ್ಲೆಯ 30 ಖಾಸಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳು ಕೋವಿಡ್ ಸೋಂಕುಪೀಡಿತರ ಚಿಕಿತ್ಸೆಗೆ ಮುಂದೆ ಬಂದಿವೆ. ಮುಂದಿನ ಅಗತ್ಯಗಳನ್ನು ಗಮನಿಸಿ ಇನ್ನುಳಿದ 27 ಖಾಸಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿಯೂ ಸದ್ಯದಲ್ಲೇ ಕೋವಿಡ್ ಚಿಕಿತ್ಸೆ ಆರಂಭಿಸಲಾಗುತ್ತದೆ. ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಕೊರೊನಾ ಚಿಕಿತ್ಸೆಗೆ ಹಾಸಿಗೆಗಳ ಕೊರತೆ ಎದುರಾಗುವ ಸಾಧ್ಯತೆ ಕಡಿಮೆ.
ವೆನ್ಲಾಕ್ ನ ಐಸಿಯುನಲ್ಲಿ ಸದ್ಯ ಒಟ್ಟು 10 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಈ ಪೈಕಿ ಮೂವರಿಗೆ ವೆಂಟಿಲೇಟರ್ ಅಳವಡಿಸಲಾಗಿದೆ. ಹೀಗಾಗಿ ಐಸಿಯು ಸೌಲಭ್ಯ, ವೆಂಟಿಲೇಟರ್ ಕೊರತೆಯಾಗದು ಎನ್ನುತ್ತಾರೆ ಅಧಿಕಾರಿಗಳು. ಖಾಸಗಿಯಲ್ಲಿ 240 ಹಾಸಿಗೆ ರೆಡಿ ಖಾಸಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳ ಪೈಕಿ ಮಂಗಳೂರು ಕೆಎಂಸಿಯಲ್ಲಿ 100, ದೇರಳಕಟ್ಟೆ ಯೇನಪೊಯದಲ್ಲಿ 90 ಮತ್ತು ಕೆ.ಎಸ್. ಹೆಗ್ಡೆ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ 50 ಹಾಸಿಗೆಗಳನ್ನು ಈಗಾಗಲೇ ಮೀಸಲಿಟ್ಟು ಚಿಕಿತ್ಸೆ ಆರಂಭಿಸಲಾಗಿದೆ. ಎ.ಜೆ. ಆಸ್ಪತ್ರೆಯಲ್ಲಿ ಸದ್ಯದಲ್ಲೇ ಚಿಕಿತ್ಸೆ ಆರಂಭವಾಗಲಿದೆ. ಉಳಿದ 26 ಆಸ್ಪತ್ರೆಗಳಲ್ಲಿ ಕೂಡ ಹಂತ ಹಂತವಾಗಿ ಕೋವಿಡ್ ಚಿಕಿತ್ಸೆ ಆರಂಭವಾಗಲಿದೆ. ಈ ಆಸ್ಪತ್ರೆಗಳಲಿಯೂ ಅಗತ್ಯ ಸಂಖ್ಯೆಯ ವೆಂಟಿಲೇಟರ್, ಐಸಿಯು ಸೌಲಭ್ಯಗಳಿವೆ.
ರೋಗ ಲಕ್ಷಣ ಇಲ್ಲದೇ ಪಾಸಿಟಿವ್ ಬಂದ ವ್ಯಕ್ತಿಗಳಿಗೆ ಮನೆಯಲ್ಲಿ ಸರಿಯಾದ ವ್ಯವಸ್ಥೆ ಇದ್ದರೆ ಅಲ್ಲೇ ಚಿಕಿತ್ಸೆ ನೀಡಲು ಸರಕಾರ ಸೂಚಿಸಿದೆ. ಮನೆಯಲ್ಲಿ ಸೂಕ್ತ ವ್ಯವಸ್ಥೆ ಇಲ್ಲದಿದ್ದಲ್ಲಿ ಕೊಣಾಜೆ ಮತ್ತು ಎನ್‌ಐಟಿಕೆ ಹಾಸ್ಟೆಲ್‌ಗಳಿಗೆ ಸ್ಥಳಾಂತರಿಸಿ ಚಿಕಿತ್ಸೆ ಒದಗಿಸಲಾಗುವುದು. ಹೀಗಾಗಿ ಜಿಲ್ಲೆಯಲ್ಲಿ ರೋಗಿಗಳಿಗೆ ಹಾಸಿಗೆ ಕೊರತೆಯಾಗದು ಮತ್ತು ಚಿಕಿತ್ಸೆಗೆ ಸಮಸ್ಯೆಯಾಗದು ಎನ್ನುತ್ತಾರೆ ಡಿಎಚ್‌ಒ (ಪ್ರಭಾರ) ಡಾ| ರತ್ನಾಕರ್.
ಬೆಡ್ ಕೊರತೆಯಾಗದು: ಡಿಸಿ
ಈಗಾಗಲೇ ಜಾರಿಯಾಗಿರುವ ಹೊಸ ಮಾರ್ಗಸೂಚಿ ಪ್ರಕಾರ ಲಕ್ಷಣರಹಿತ ಸೋಂಕುಪೀಡಿತರಿಗೆ ಮನೆಯಲ್ಲೇ ಚಿಕಿತ್ಸೆ ನೀಡಲಾಗುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚಳಕ್ಕೆ ಮಾತ್ರೆ ನೀಡಲಾಗುತ್ತದೆ. ಮನೆಯವರಿಂದ ದೂರ ಇರುವುದರ ಸಹಿತ ಎಲ್ಲ ನಿಯಮಗಳನ್ನು ಪಾಲಿಸಲು ರೋಗಿ ಮತ್ತು ಆತನ ಮನೆಯವರು ಒಪ್ಪಿದಲ್ಲಿ ಮಾತ್ರ ಈ ವ್ಯವಸ್ಥೆ. ಇದರೊಂದಿಗೆ ಖಾಸಗಿ ಆಸ್ಪತ್ರೆಗಳಲ್ಲಿಯೂ ಚಿಕಿತ್ಸೆ ಆರಂಭವಾಗಿರುವುದರಿಂದ ಹಾಸಿಗೆ, ವೆಂಟಿಲೇಟರ್ ಕೊರತೆಯಂತಹ ಸಮಸ್ಯೆಗಳು ಜಿಲ್ಲೆಯಲ್ಲಿ ಉದ್ಭವಿಸವು.
-ಸಿಂಧೂ ಬಿ. ರೂಪೇಶ್ , ದ.ಕ. ಜಿಲ್ಲಾಧಿಕಾರಿ
ಚಿಕಿತ್ಸೆ ಸಾಮರ್ಥ್ಯ: ಎಲ್ಲಿ ಎಷ್ಟು ?
ಆಸ್ಪತ್ರೆ ವೆನ್ಲಾಕ್ ಕೋವಿಡ್ ಆಸ್ಪತ್ರೆ
ಹಾಸಿಗೆ 230
ಐಸಿಯು 60
ವೆಂಟಿಲೇಟರ್ 26
ಸಾಂದರ್ಭಿಕ ಚಿತ್ರ
ಉಡುಪಿ ಜಿಲ್ಲೆ: 2,500 ಹೆಚ್ಚುವರಿ ಹಾಸಿಗೆ ಸಿದ್ಧತೆ
ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಪೀಡಿತರು ಪತ್ತೆಯಾಗಲು ಆರಂಭವಾದಾಗ ಖಾಸಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಾದ ಡಾ| ಟಿಎಂಎ ಪೈ ಆಸ್ಪತ್ರೆ ಕೋವಿಡ್ ಚಿಕಿತ್ಸೆಗೆ ಮೀಸಲಾಗಲು ಸ್ವತಃ ಮುಂದೆ ಬಂದಿತ್ತು. ಹೀಗಾಗಿ ಇಲ್ಲೇ ಕೋವಿಡ್ ಪೀಡಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದಲ್ಲದೆ ಉಡುಪಿಯ ನರ್ಸಿಂಗ್ ತರಬೇತಿ ಸಂಸ್ಥೆ, ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್, ಕುಂದಾಪುರ ಮತ್ತು ಕಾರ್ಕಳಗಳ ತಾಲೂಕು ಆಸ್ಪತ್ರೆಗಳು, ಕುಂದಾಪುರದ ಹಿಂದಿನ ಆದರ್ಶ ಆಸ್ಪತ್ರೆ, ಕೊಲ್ಲೂರಿನ ವಸತಿಗೃಹಗಳನ್ನು ಈಗಾಗಲೇ ಕೋವಿಡ್ ಚಿಕಿತ್ಸೆಗಾಗಿ ಸಿದ್ಧಪಡಿಸಲಾಗಿದೆ. ಕುತ್ಪಾಡಿ ಎಸ್‌ಡಿಎಂ ಆಯುರ್ವೇದ ಆಸ್ಪತ್ರೆಯನ್ನು ಅಗತ್ಯವಿದ್ದರೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ.”
ಉಡುಪಿ ಜಿಲ್ಲೆಯಲ್ಲಿ ಸದ್ಯ ಒಟ್ಟು 16ರಷ್ಟು ವೆಂಟಿಲೇಟರ್ ಸೌಲಭ್ಯ ಇದ್ದರೂ ಪ್ರಸ್ತುತ ಇದನ್ನು ಬಳಸುತ್ತಿರುವ ಸೋಂಕು ಪೀಡಿತರು ಒಬ್ಬರು ಮಾತ್ರ. ಈಗ 1,200 ಬೆಡ್ ಕೋವಿಡ್ ಚಿಕಿತ್ಸೆಗೆ ಸಿದ್ಧವಿದ್ದರೂ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿರುವವರು 202. ಈಗಾಗಲೇ ಗುರುತಿಸಿರುವ 2,500 ಬೆಡ್‌ಗಳನ್ನೂ ಸಿದ್ಧಪಡಿಸಿಟ್ಟುಕೊಳ್ಳಲು ಜಿಲ್ಲಾಡಳಿತ ಮುಂದಾಗಿದೆ. ಹೀಗಾಗಿ ಸದ್ಯ ಕೋವಿಡ್ ಚಿಕಿತ್ಸೆಯ ಮಟ್ಟಿಗೆ ಉಡುಪಿ ಜಿಲ್ಲೆ ಹೆಚ್ಚು ಸನ್ನದ್ಧವಾಗಿದೆ ಮತ್ತು ಸಾಕಷ್ಟು ಚಿಕಿತ್ಸೆಯ ಸನ್ನದ್ಧತೆ ಹೊಂದಿದೆ.
ಜಿಲ್ಲಾಡಳಿತ ಸಿದ್ಧವಿದೆ
ಯಾವುದೇ ಪರಿಸ್ಥಿತಿಯನ್ನು ಎದುರಿಸಲು ವಿಶೇಷ ತಂಡಗಳನ್ನು ರಚಿಸಿದ್ದು, ಅವರಿಗೆ ಸೂಕ್ತ ನಿರ್ದೇಶನಗಳನ್ನು ನೀಡಲಾಗಿದೆ. ಪ್ರಸ್ತುತ 1,200 ಬೆಡ್ ಸಿದ್ಧವಿದ್ದು, ಇನ್ನಷ್ಟು ಅಗತ್ಯವಾದರೆ ಪೂರೈಸಲು ಜಿಲ್ಲಾಡಳಿತ ಸಿದ್ಧವಿದೆ.
-ಜಿ.ಜಗದೀಶ್ , ಜಿಲ್ಲಾಧಿಕಾರಿ, ಉಡುಪಿ ಜಿಲ್ಲೆ.
ಜಿಲ್ಲಾಧಿಕಾರಿ ಸೂಚನೆ
ಈಗಿರುವ 1,200 ಬೆಡ್‌ಗಳಲ್ಲದೆ ಈಗಾಗಲೇ ಗುರುತಿಸಿರುವ ಒಟ್ಟು 2,500 ಬೆಡ್‌ಗಳನ್ನು ಸಿದ್ಧಪಡಿಸಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
-ಡಾ| ಸುಧೀರ್‌ಚಂದ್ರ ಸೂಡ ಜಿಲ್ಲಾ ಆರೋಗ್ಯಾಧಿಕಾರಿ, ಉಡುಪಿ ಜಿಲ್ಲೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್
Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್ ಗೆದ್ದ ವಿಜ್ಞಾನಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.