ಸಾಹಸದ ಪ್ರತೀಕ ಬಿಹಾರ ರೆಜಿಮೆಂಟ್
Team Udayavani, Jul 10, 2020, 2:32 PM IST
ಇತ್ತೀಚೆಗೆ ಗಾಲ್ವಾನ್ ಕಣಿವೆಯಲ್ಲಿ ಚೀನದ ಸೈನಿಕರೊಂದಿಗೆ ನಡೆದ ಮುಖಾಮುಖಿ ಸಂಘರ್ಷದಲ್ಲಿ ಹುತಾತ್ಮರಾದ ವೀರ ಯೋಧರಿಗೆ ಇಡೀ ದೇಶವೇ ಕಂಬನಿ ಮಿಡಿದಿತ್ತು. ಚೀನಿ ಸೈನಿಕರ ಕುತಂತ್ರಕ್ಕೆ ಎದೆಯೊಡ್ಡಿದ ಭಾರತೀಯ ಸೈನಿಕರು ಪ್ರತಿ ದಾಳಿ ನಡೆಸಿ, ಚೀನಿ ಸೈನಿಕರನ್ನು ಕೊಂದು ಪ್ರತೀಕಾರ ತೀರಿಸಿಕೊಂಡಿದ್ದರು. ಇದರಲ್ಲಿ ಪ್ರಮುಖವಾಗಿ ಕೇಳಿಬಂದಿದ್ದ ಹೆಸರು ಬಿಹಾರ್ ರೆಜಿಮೆಂಟ್. ಸ್ವಾತಂತ್ರ್ಯ ಪೂರ್ವ ಕಾಲದಿಂದಲೂ ಬಿಹಾರ್ ರೆಜಿಮೆಂಟ್ ದಿಟ್ಟ ಹೋರಾಟಕ್ಕೆ ಹೆಸರುವಾಸಿಯಾಗಿದೆ. ಸ್ವಾತಂತ್ರ್ಯ ಅನಂತರ ಭಾರತೀಯ ಸೇನೆಗೆ ಅದರ ಕೊಡುಗೆ ಅಗ್ರಗಣ್ಯವಾದುದು. ಈ ರೆಜಿಮೆಂಟ್ ಅನೇಕ ಯುದ್ಧಗಳಲ್ಲಿ ದೇಶದ ಪರವಾಗಿ ಭಾಗವಹಿಸಿ, ಮುಂಚೂಣಿಯಲ್ಲಿತ್ತು.
ಬ್ರಿಟಷರಿಂದ ಆರಂಭ
ಬಿಹಾರ್ ರೆಜಿಮೆಂಟ್ ಭಾರತೀಯ ಸೇನೆಯ ಕಾಲಾಳು ಪಡೆಯಾಗಿದ್ದು ಸುಮಾರು 23 ಬೆಟಾಲಿಯನ್‌ಗಳನ್ನು ಹೊಂದಿದೆ. ಇದು 1941ರಲ್ಲಿ ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ ಬ್ರಿಟಿಷ್‌ರಿಂದ ಸ್ಥಾಪನೆಗೊಂಡಿತು. ಪಾಟ್ನಾದ ದಾನಾಪುರ್ ದಂಡು ಪ್ರದೇಶದಲ್ಲಿ (ಕಂಟೋನ್ಮೆಂಟ್) ಇದರ ಕೇಂದ್ರ ಕಚೇರಿ ಇದೆ. ಇದು ಭಾರತದ ಎರಡನೇ ಅತ್ಯಂತ ಹಳೆಯ ದಂಡು ಪ್ರದೇಶವಾಗಿದೆ. ಭಾರತೀಯ ನೌಕಾಪಡೆಯ ಅತಿ ದೊಡ್ಡ ಹಡಗು ಮತ್ತು ಏಕೈಕ ಯುದ್ಧ ವಿಮಾನ ವಾಹಕ ನೌಕೆ “ಐಎನ್‌ಎಸ್ ವಿಕ್ರಮಾದಿತ್ಯ’ ಬಿಹಾರ ರೆಜಿಮೆಂಟ್‌ನೊಂದಿಗೆ ಸಂಯೋಜಿತವಾಗಿದೆ. ತನ್ನ ಅಧೀನದಲ್ಲಿ ಅತೀ ಹೆಚ್ಚು ಅಂದರೆ 4 ರಾಷ್ಟ್ರೀಯ ರೈಫಲ್ಸ್ ಪಡೆಗಳನ್ನು (4ಆರ್‌ಆರ್, 24ಆರ್‌ಆರ್, 47ಆರ್‌ಆರ್, 63ಆರ್‌ಆರ್) ಹೊಂದಿರುವ ಹೆಗ್ಗಳಿಕೆ ಇದಕ್ಕಿದೆ.
ವರ್ಣರಂಜಿತ
ರೆಜಿಮೆಂಟ್ ಎಂಬ ಹೆಗ್ಗಳಿಕೆ ಅನೇಕ ಯುದ್ಧ, ಕಾರ್ಯಾಚರಣೆಗಳಲ್ಲಿ ತನ್ನ ಶೌರ್ಯ ಪ್ರದರ್ಶಿಸಿ ಅತಿಹೆಚ್ಚು ಪದಕಗಳನ್ನು ಪಡೆದಿರುವ ಈ ಬಿಹಾರ್ ರೆಜಿಮೆಂಟ್ ವರ್ಣರಂಜಿತ ರೆಜಿಮೆಂಟ್ ಎಂದು ಗುರುತಿಸಿಕೊಂಡಿದೆ. 9 ಅಶೋಕ ಚಕ್ರ, 42 ವಿಶಿಷ್ಟ ಸೇವಾ ಪದಕ, 49 ಅತೀ ವಿಶಿಷ್ಟ ಸೇವಾ ಪದಕ, 35 ಪರಮ ವಿಶಿಷ್ಟ ಸೇವಾ ಪದಕ, 7 ಮಹಾವೀರ ಚಕ್ರ, 21 ಕೃತಿ ಚಕ್ರ, 49 ವೀರ ಚಕ್ರ, 70 ಶೌರ್ಯ ಚಕ್ರ, 9 ಯುದ್ಧ್ ಸೇವಾ ಪದಕ, 7 ಜೀವನ್ ರಕ್ಷಕ್ ಪದಕ ಮತ್ತು 448 ಸೇನಾ ಪದಕಗಳನ್ನು ಪಡೆದಿದೆ.
ಧ್ಯೇಯ, ಘೋಷ ವಾಕ್ಯ
“ಕರಮ್ ಹೀ ಧರಮ್’ ಇದರ ಧೇಯವಾಗಿದ್ದು, “ಜೈ ಭಜರಂಗ್ ಬಲಿ’ ಮತ್ತು “ಬಿರ್ಸಾ ಮುಂಡಾ ಕೀ ಜೈ’ ಈ ರೆಜಿಮೆಂಟ್‌ನ ಘೋಷ ವಾಕ್ಯಗಳಾಗಿವೆ.
ಮೇಜರ್ ಸಂದೀಪ್ ಉನ್ನಿ ಕೃಷ್ಣನ್
2008ರ ಮುಂಬಯಿ ದಾಳಿಯಲ್ಲಿ ಹುತಾತ್ಮನಾದ ಈ ವೀರಯೋಧ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರು ಬಿಹಾರ ರೆಜಿಮೆಂಟ್‌ನ 7ನೇ ಬೆಟಾಲಿಯನ್‌ಗೆ ಸೇರಿದವರು. ಘಾತಕ್ ತರಬೇತಿ ಪಡೆದಿದ್ದ ಇವರು ಆಪರೇಷನ್ ವಿಜಯ, ಕೌಂಟರ್ ಇನ್‌ಸರ್ಜೆನ್ಸಿಯಲ್ಲಿ ಭಾಗವಹಿಸಿದ್ದರು. ಮುಂಬಯಿ ದಾಳಿಯ ಆಪರೇಷನ್ ಬ್ಲ್ಯಾಕ್ ಟೊರ್ನಾಡೋದ ನೇತೃತ್ವ ವಹಿಸಿದ್ದರು. ಆಪರೇಷನ್ ಬ್ಲ್ಯಾಕ್ ಟೊರ್ನಾಡೋದ ಕಾರ್ಯಾಚರಣೆಗೆ ಇವರಿಗೆ ಭಾರತದ ಅತ್ಯುನ್ನತ ಶೌರ್ಯ ಪ್ರಶಸ್ತಿ ಅಶೋಕ ಚಕ್ರ ನೀಡಿ ಗೌರವಿಸಲಾಗಿತ್ತು.
ಪ್ರಮುಖ ಯುದ್ಧ, ಹೆಗ್ಗಳಿಕೆಗಳು
ಎರಡನೇ ಮಹಾಯುದ್ದ ಕಾಲದಲ್ಲಿ ಬರ್ಮಾ ಲಡಾಯಿಯಲ್ಲಿ ಭಾಗವಹಿಸಿ ಹಾಕಾ, ಗಂಗಾವ್, ಥಿಯೇಟರ್ ಆನರ್ ಗೌರವಕ್ಕೆ ಪಾತ್ರವಾಗಿದೆ.
ಎರಡನೇ ಮಹಾಯುದ್ಧ ಕಾಲದಲ್ಲಿ ಆಪರೇಷನ್ ಜಿಪ್ಪರ್ ಮತ್ತು 1947, 1965 ಹಾಗೂ 1971ರ ಇಂಡೋ-ಪಾಕ್ ಯುದ್ಧದಲ್ಲಿ ಭಾಗಿಯಾಗಿತ್ತು.
1999ರ ಕಾರ್ಗಿಲ್ ಯುದ್ಧದ ಆಪರೇಷನ್ ವಿಜಯ ಕಾರ್ಯಾಚರಣೆಯಲ್ಲಿ ಶತ್ರು ಪಡೆಯನ್ನು ಹಿಮ್ಮಟ್ಟಿಸುವಲ್ಲಿ ಮಹತ್ತರವಾದ ಪಾತ್ರ ವಹಿಸಿತ್ತು.
ಸೊಮಾಲಿಯಾ ಮತ್ತು ಕಾಂಗೋದಲ್ಲಿ ವಿಶ್ವ ಸಂಸ್ಥೆಯ ಶಾಂತಿ ಪಾಲನ ಪಡೆಯಲ್ಲಿ ಭಾಗಿಯಾಗಿತ್ತು.
- ಶಿವಾನಂದ ಎಚ್. ಗದಗ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.