ಈಬಾರಿಯೂ ವಿದ್ಯಾರ್ಥಿನಿಯರೇ ಮುಂದು ; ಶೇ. 68.73 ಬಾಲಕಿಯರು, ಶೇ. 54.77ರಷ್ಟು ಬಾಲಕರು ಪಾಸ್
ಶೇ. 68.73 ಬಾಲಕಿಯರು, ಶೇ. 54.77ರಷ್ಟು ಬಾಲಕರು ಪಾಸ್
Team Udayavani, Jul 15, 2020, 6:43 AM IST
ಬೆಂಗಳೂರು: ಈ ಬಾರಿಯೂ ಪಿಯುಸಿ ವಿದ್ಯಾರ್ಥಿನಿಯರು ಉತ್ತಮ ಸಾಧನೆ ಮಾಡಿದ್ದಾರೆ.
ಆದರೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಮೀರಿಸುವ ಸಾಧನೆಯನ್ನು ನಗರ ಪ್ರದೇಶದ ವಿದ್ಯಾರ್ಥಿಗಳು ತೋರಿದ್ದಾರೆ.
ಒಟ್ಟಾರೆ ಫಲಿತಾಂಶದಲ್ಲಿ ಶೇ. 68.73ರಷ್ಟು ಬಾಲಕಿಯರು ಹಾಗೂ ಶೇ. 54.77ರಷ್ಟು ಬಾಲಕರು, ಶೇ. 62.60ರಷ್ಟು ನಗರ ಪ್ರದೇಶ ಹಾಗೂ ಶೇ. 58.99ರಷ್ಟು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.
70 ಕೇಂದ್ರಗಳಲ್ಲಿ 11,970 ಮೌಲ್ಯಮಾಪಕರು ಉತ್ತರ ಪತ್ರಿಕೆಯನ್ನು ಮೌಲ್ಯಮಾಪನ ಮಾಡಿದ್ದರಿಂದ ನಿಗದಿತ ಅವಧಿಯ ಮೊದಲೇ ಫಲಿತಾಂಶ ಪ್ರಕಟಿಸಲು ಸಾಧ್ಯವಾಯಿತು ಎಂದು ಸಚಿವ ಸುರೇಶ್ ಕುಮಾರ್ ಮಾಹಿತಿ ನೀಡಿದರು.
ಈ ವರ್ಷ ನೂರಕ್ಕೆ ನೂರಷ್ಟು ಫಲಿತಾಂಶ ಪಡೆದ ಕಾಲೇಜುಗಳ ಸಂಖ್ಯೆಯೂ ಹೆಚ್ಚಾಗಿದ್ದು, ಶೂನ್ಯ ಫಲಿತಾಂಶ ಪಡೆದ ಕಾಲೇಜುಗಳ ಸಂಖ್ಯೆ ಕಡಿಮೆಯಾಗಿದೆ. ಸರಕಾರಿ ಕಾಲೇಜುಗಳಲ್ಲಿ ಕಾರ್ಕಳ ತಾಲೂಕಿನ ಶಿರ್ಲಾಲು ಸರಕಾರಿ ಪಿಯು ಕಾಲೇಜು, ಹಾಸನ ಜಿಲ್ಲೆಯ ಚಂಗಡಿಹಳ್ಳಿ ಸರಕಾರಿ ಪಿಯು ಕಾಲೇಜು, ಚಿಕ್ಕಮಗಳೂರು ಜಿಲ್ಲೆ ಜೋಡಿಹೊಚ್ಚೇಹಳ್ಳಿ ಸರಕಾರಿ ಪಿಯು ಕಾಲೇಜು ಶೇ. 100 ಫಲಿತಾಂಶ ದಾಖಲಿಸಿವೆ. ಕಳೆದ ವರ್ಷ 15 ಕಾಲೇಜುಗಳಿದ್ದವು ಎಂದು ವಿವರ ನೀಡಿದರು.
ಹಿಂದುಳಿದ ಕಲಾ, ಕನ್ನಡ ಮಾಧ್ಯಮ
2019-20ನೇ ಸಾಲಿನ ಫಲಿತಾಂಶದಲ್ಲಿ ಕನ್ನಡ ಮಾಧ್ಯಮದ ಮತ್ತು ಕಲಾ ವಿಭಾಗದ ಮಕ್ಕಳ ಸಾಧನೆ ತೀರ ಕಳಪೆಯಾಗಿದೆ. ಇಂಗ್ಲಿಷ್ ಮಾಧ್ಯಮದ ಶೇ.72.45 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರೆ, ಕನ್ನಡ ಮಾಧ್ಯಮದ ಕೇವಲ ಶೇ. 47.56ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ.
ವಾಣಿಜ್ಯ ವಿಭಾಗದ ಶೇ. 65.52, ವಿಜ್ಞಾನ ವಿಭಾಗದ ಶೇ. 76.20ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಕಲಾ ವಿಭಾಗದ ಶೇ. 41.27 ವಿದ್ಯಾರ್ಥಿಗಳಷ್ಟೇ ತೇರ್ಗಡೆಯಾಗಿದ್ದಾರೆ.
ಖಾಸಗಿ ಕಾಲೇಜಿನ ಶೇ. 72.51, ಅನುದಾನಿತ ಕಾಲೇಜಿನ ಶೇ. 57.64ರಷ್ಟು ಮಕ್ಕಳು ತೇರ್ಗಡೆ ಹೊಂದಿದ್ದರೆ, ಸರಕಾರಿ ಕಾಲೇಜಿನ ಕೇವಲ ಶೇ. 46.24ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.
ಕೃಪಾಂಕ: 9 ಸಾವಿರ ವಿದ್ಯಾರ್ಥಿಗಳು ಉತ್ತೀರ್ಣ
ಪಿಯುಸಿ ವಿದ್ಯಾರ್ಥಿಗಳಿಗೆ ಐದು ಕೃಪಾಂಕಗಳನ್ನು (ಗ್ರೇಸ್ ಮಾರ್ಕ್ಸ್) ನೀಡುವ ಪದ್ಧತಿ ಹಿಂದಿನಿಂದಲೂ ಜಾರಿಯಲ್ಲಿದ್ದು, 2019-20ನೇ ಸಾಲಿನಲ್ಲಿ ಕೃಪಾಂಕದಿಂದಲೇ 9 ಸಾವಿರ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಪಿಯು ಇಲಾಖೆ ನಿರ್ದೇಶಕಿ ಕನಗವಲ್ಲಿ ಹೇಳಿದರು.
ಇಂಗ್ಲಿಷ್ ಪರೀಕ್ಷೆಯ ಪ್ರಶ್ನೆಪತ್ರಿಕೆಗೆ ಸಂಬಂಧಿಸಿದಂತೆ ಪ್ರಶ್ನೆ ಸಂಖ್ಯೆ 8 ಮತ್ತು 28ರಲ್ಲಿ ಗೊಂದಲವಿದೆ ಎಂಬ ಕಾರಣಕ್ಕೆ ಆಕ್ಷೇಪಣೆ ಆಹ್ವಾನಿಸಿದ್ದೆವು. ಸುಮಾರು 350 ಆಕ್ಷೇಪಣೆ ಬಂದಿದ್ದವು. ಎಲ್ಲವನ್ನು ಪರಿಶೀಲಿಸಿ, ಬಹು ಆಯ್ಕೆ ಪ್ರಶ್ನೆಯಾಗಿದ್ದರಿಂದ ಉತ್ತರವೂ ಸರಿಯಾಗಿತ್ತು. ಹೀಗಾಗಿ ಇಂಗ್ಲಿಷ್ ವಿಷಯಕ್ಕೆ ಪ್ರತ್ಯೇಕವಾಗಿ ಕೃಪಾಂಕ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.
ಸಹಾಯವಾಣಿ
ವಿದ್ಯಾರ್ಥಿಗಳು ಯಾವುದೇ ಸಮಸ್ಯೆಯಿದ್ದರೂ ಇಲಾಖೆಯ ಸಹಾಯವಾಣಿ 080-23083900ಕ್ಕೆೆ ಕರೆ ಮಾಡಬಹುದಾಗಿದೆ ಎಂದು ಹೇಳಿದರು.
ಮರು ಮೌಲ್ಯಮಾಪನ
ಫಲಿತಾಂಶದಲ್ಲಿ ತೃಪ್ತಿಯಾಗದ ವಿದ್ಯಾರ್ಥಿಗಳಿಗೆ ಉತ್ತರ ಪತ್ರಿಕೆಯ ಸ್ಕ್ಯಾನಿಂಗ್ ಪ್ರತಿ ಪಡೆಯಲು, ಉತ್ತರ ಪತ್ರಿಕೆ ಮರು ಮೌಲ್ಯಮಾಪನಕ್ಕೆ ಹಾಗೂ ಅಂಕಗಳ ಮರು ಏಣಿಕೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಉತ್ತರ ಪತ್ರಿಕೆಯ ಸ್ಕ್ಯಾನಿಂಗ್ ಪ್ರತಿಗಾಗಿ ಅರ್ಜಿ ಪ್ರಕ್ರಿಯೆಗೆ ಜು. 16ರಿಂದ 30ರ ವರೆಗೆ ಅವಕಾಶ ಕಲ್ಪಿಸಿದೆ. ಸ್ಕ್ಯಾನಿಂಗ್ ಪ್ರತಿ ಪಡೆಯಲು ಶುಲ್ಕ ಪ್ರತಿ ವಿಷಯಕ್ಕೆ 530 ರೂ. ನಿಗದಿ ಪಡಿಸಿದೆ.
ಉತ್ತರ ಪತ್ರಿಕೆಯ ಸ್ಕ್ಯಾನಿಂಗ್ ಪ್ರತಿ ಡೌನ್‌ಲೋಡ್ ಮಾಡಿಕೊಳ್ಳಲು ಆ. 3ರಿಂದ 7ರ ವರೆಗೆ ಅವಕಾಶ ಕಲ್ಪಿಸಿದೆ. ಮರು ಮೌಲ್ಯಮಾಪನಕ್ಕೆ ಮತ್ತು ಮರು ಎಣಿಕೆಗಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆ. 4ರಂದು ಆರಂಭವಾಗಲಿದ್ದು, ಆ. 10ರವರೆಗೆ ಸಲ್ಲಿಸಬಹುದಾಗಿದೆ. ಮರು ಮೌಲ್ಯಮಾಪನದ ಶುಲ್ಕ ಪ್ರತಿ ವಿಷಯಕ್ಕೆ 1,670 ರೂ. ನಿಗದಿ ಪಡಿಸಿದೆ ಎಂದು ಮಾಹಿತಿ ನೀಡಿದರು.
ರಾಜ್ಯಕ್ಕೆ ಪ್ರಥಮ ರ್‍ಯಾಂಕ್ ಗಳಿಸಿದ ರೈತನ ಪುತ್ರ
ಬಳ್ಳಾರಿ: ಸಾಧನೆಗೆ ಬಡತನ ಸಹಿತ ಯಾವುದೇ ಆತಂಕಗಳು ಅಡ್ಡಿಯಾಗುವುದಿಲ್ಲ ಎಂಬುವುದಕ್ಕೆ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ರ್‍ಯಾಂಕ್‌ನಲ್ಲಿ ಉತ್ತೀರ್ಣರಾಗಿರುವ ಕೊಟ್ಟೂರಿನ ಇಂದು ಪಿಯು ಕಾಲೇಜಿನ ಕರೆಗೌಡ ದಾಸನಗೌಡ ವಿದ್ಯಾರ್ಥಿಯೇ ಸಾಕ್ಷಿಯಾಗಿದ್ದಾನೆ. ಜಿಲ್ಲೆಯ ಹಡಗಲಿ ತಾಲೂಕು ಮಹಾಜನದ ಹಳ್ಳಿಯ ರೈತ ಕುಟುಂಬದ ಡಿ. ಕೊಟ್ರೇಶ್-ಭಂತಮ್ಮ ದಂಪತಿ ಪುತ್ರ ಕರೆಗೌಡ ದಾಸನಗೌಡ ಪ್ರತಿದಿನ 30 ಕಿ.ಮೀ. ಸಂಚರಿಸಿ ಕಾಲೇಜಿಗೆ ಬಂದು ವ್ಯಾಸಂಗ ಮಾಡಿದ್ದಾನೆ.
ರೈತನ ಪುತ್ರಿ ರಾಜ್ಯಕ್ಕೆ ದ್ವಿತೀಯ
ಮೈಸೂರು: ಹಾಸ್ಟೆಲ್‌ನಲ್ಲಿ ಇದ್ದುಕೊಂಡೇ ಕಠಿನ ಪರಿಶ್ರಮದಿಂದ ಓದಿದ ರೈತನ ಪುತ್ರಿ ಬೃಂದಾ ದ್ವಿತೀಯ ಪಿಯುಸಿ ವಾಣಿಜ್ಯ ವಿಷಯದಲ್ಲಿ ರಾಜ್ಯಕ್ಕೆ 2ನೇ ಸ್ಥಾನ ಪಡೆದಿದ್ದಾಳೆ. ಮೂಲತಃ ಚನ್ನಪಟ್ಟಣ ತಾಲೂಕಿನ ಕೊಡಂಬಹಳ್ಳಿ ಹೋಬಳಿಯ ಜಗದಾಪುರ ಗ್ರಾಮದ ನಿವಾಸಿ ನಾಗೇಶ್ ಮತ್ತು ಕಮಲಾ ದಂಪತಿ ಪುತ್ರಿ ಜೆ.ಎನ್. ಬೃಂದಾ 600ಕ್ಕೆ 596 ಅಂಕಗಳನ್ನು ಪಡೆದಿದ್ದಾರೆ.
ಪೂರಕ ಪರೀಕ್ಷೆ
ಆಗಸ್ಟ್ ಅಂತ್ಯದೊಳಗೆ ಪೂರಕ ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಕೋವಿಡ್ 19 ಪರಿಸ್ಥಿತಿಯನ್ನು ಅವಲೋಕಿಸಿ, ವೇಳಾಪಟ್ಟಿ ಬಿಡುಗಡೆ ಮಾಡಲಿದ್ದೇವೆ. ಅನುತ್ತೀರ್ಣರಾದ ವಿದ್ಯಾರ್ಥಿಗಳು ಜು. 31ರೊಳಗೆ ಪೂರಕ ಪರೀಕ್ಷೆಯ ಶುಲ್ಕ ಪಾವತಿಸಬಹುದಾಗಿದೆ. ಒಂದು ವಿಷಯಕ್ಕೆ 140 ರೂ., ಎರಡು ವಿಷಯಗಳಿಗೆ 270 ರೂ., ಮೂರು ಅಥವಾ ಹೆಚ್ಚಿನ ವಿಷಯಗಳಿಗೆ 400 ರೂ., ಅಂಕಪಟ್ಟಿ ಶುಲ್ಕ ಎಲ್ಲರಿಗೂ 50 ರೂ. ನಿಗದಿ ಮಾಡಲಾಗಿದೆ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.