ಏಷ್ಯಾದ ಅತ್ಯಂತ ಸ್ವಚ್ಛ ಗ್ರಾಮ ನಮ್ಮಲ್ಲೇ ಇದೆ…ನೋಡ ಬನ್ನಿ…
Team Udayavani, Jul 18, 2020, 6:37 PM IST
ಏಷ್ಯಾದ ಅತ್ಯಂತ ಸ್ವಚ್ಛ ಗ್ರಾಮ ಭಾರತದಲ್ಲೇ ಇದೆ ಎನ್ನುವುದು ಹೆಮ್ಮೆಯ ವಿಚಾರ. ಇದನ್ನು ದೇವರ ಸ್ವಂತ ಉದ್ಯಾನವನ ಎಂತಲೂ ಕರೆಯಲಾಗುತ್ತದೆ. 2003ರಲ್ಲಿ ಮೇಘಾಲಯದ ಮಾವ್ಲಿನಾಂಗ್ ಗ್ರಾಮಕ್ಕೆ ಏಷ್ಯಾದ ಸ್ವಚ್ಛ ಗ್ರಾಮ ಪ್ರಶಸ್ತಿ ಸಂದಿದೆ. ಶೇ. 100ರಷ್ಟು ಸಾಕ್ಷರತೆ ಮತ್ತು ಮಹಿಳಾ ಸಬಲೀಕರಣ ಸಾಧಿಸಿದ ಹಿರಿಮೆಯೂ ಈ ಗ್ರಾಮಕ್ಕಿದೆ.
ಇವೆಲ್ಲದರ ಹೊರತಾಗಿ ಇದೊಂದು ಸುಂದರ ಪ್ರವಾಸಿ ತಾಣವೂ ಹೌದು. ಇಲ್ಲಿನ ಪ್ರಕೃತಿ ಸೌಂದರ್ಯ, ದೇಶೀಯ ಖಾದ್ಯಗಳ ರುಚಿಗೆ ಮನಸೋಲದವರಿಲ್ಲ. ಈ ಗ್ರಾಮದ ಬಗ್ಗೆ ತಿಳಿದುಕೊಂಡರೆ ಖಂಡಿತಾ ನೀವು ಇಲ್ಲಿಗೊಮ್ಮೆ ಭೇಟಿ ನೀಡುತ್ತೀರಿ.
ಭೇಟಿ ನೀಡಲು ಸೂಕ್ತ ಸಮಯ
ಮಳೆಗಾಲದಲ್ಲಿ ಭೇಟಿ ನೀಡುವುದು ಅತ್ಯಂತ ಪ್ರಶಸ್ತವಾದ ಸಮಯ. ಮಳೆಗೆ ಇಲ್ಲಿನ ಪ್ರಕೃತಿ ಹಸುರಿನಿಂದ ಕಂಗೊಳಿಸುತ್ತ ಬಗೆ ಬಗೆಯ ಹೂವುಗಳರಳಿ ಸ್ವರ್ಗವೇ ಭೂಮಿಗಿಳಿದಂತೆ ಕಾಣುತ್ತದೆ. ಇಲ್ಲಿ ಕೆಲವು ವಿಶೇಷ ಹಬ್ಬಗಳು ಜರಗುತ್ತವೆ. ಜುಲೈನಲ್ಲಿ ಬೆಹ್ದಿಯೇಂಖ್ಲ್ಯಾಮ್, ಸಂಪ್ಟೆಂಬರ್‌ನಿಂದ ಡಿಸೆಂಬರ್ ಮಧ್ಯೆ ನಡೆಯುವ ವಾಂಗಾಲಾ ಮತ್ತು ಅಕ್ಟೋಬರ್‌ನಿಂದ ನವೆಂಬರ್ ತಿಂಗಳ ಮಧ್ಯೆ ನಾಂಗ್‌ಕ್ರೇಮ್ ನೃತ್ಯ ಹಬ್ಬಗಳು ನಡೆಯುತ್ತವೆ. ಈ ಸಮಯದಲ್ಲೂ ಭೇಟಿ ನೀಡಿ ಇಲ್ಲಿನ ವಿಶಿಷ್ಟ ಆಚರಣೆಗಳನ್ನು ಕಣ್ತುಂಬಿಕೊಳ್ಳಬಹುದು.
ಈ ಕಾರಣಕ್ಕೆ ನೀವು ಭೇಟಿ ನೀಡಲೇಬೇಕು
ನೀವು ಯಾವುದೇ ಉದ್ದೇಶವಿಲ್ಲದೇ ಒಂದು ಸ್ಥಳಕ್ಕೆ ಭೇಟಿ ನೀಡಲು ಸಾಧ್ಯವಿಲ್ಲ. ಅದು ಅಲ್ಲಿನ ಪ್ರಕೃತಿ, ಛಾಯಾಚಿತ್ರಗ್ರಹಣ, ಇತಿಹಾಸ, ಸಂಸ್ಕೃತಿ, ನಿಗೂಢತೆ ಇನ್ನಾವುದೇ ವಿಷಯಗಳು ನಿಮ್ಮಲ್ಲಿ ಕುತೂಹಲ ಹುಟ್ಟುಹಾಕಿ ತನ್ನಲ್ಲಿಗೆ ಸೆಳೆದಿರುತ್ತವೆ. ಹೀಗೆ ಇಲ್ಲಿಗೂ ಭೇಟಿ ನೀಡಲು ಕೆಲವು ಕಾರಣಗಳಿವೆ. ಇಲ್ಲಿ ಕಂಡುಬರುವ ಶುಭ್ರತೆ, ಆದಿವಾಸಿ ಜನಾಂಗ, ಮರದ ಬೇರುಗಳ ಸೇತುವೆಗಳು, ಸ್ಥಳೀಯ ಖಾದ್ಯಗಳು ನಿಮ್ಮನ್ನು ಬರಸೆಳೆಯುತ್ತವೆ.
ಸ್ವಚ್ಛತೆಯೇ ಇವರ ಧ್ಯೇಯ
ಸ್ವಚ್ಛತೆಯೇ ಈ ಹಳ್ಳಿ ಜನರ ಧ್ಯೇಯ. 2007ರಲ್ಲೇ ಇಲ್ಲಿನ ಎಲ್ಲ ಮನೆಗಳೂ ಶೌಚಾಲಯವನ್ನು ಹೊಂದಿವೆ. ಪ್ರತಿ ಮನೆಯ ಎದುರು ಬಿದಿರಿನಿಂದ ತಯಾರಾದ ಕಸದ ಬುಟ್ಟಿಗಳಿರುತ್ತವೆ. ಮರದ ಒಣ ಎಲೆಗಳ ಸಮೇತ ಎಲ್ಲ ತ್ಯಾಜ್ಯವೂ ಕಸದ ಬುಟ್ಟಿ ಸೇರುತ್ತದೆ. ಇಲ್ಲಿ ಪ್ಲಾಸ್ಟಿಕ್ ಮತ್ತು ಧೂಮಪಾನವನ್ನು ನಿಷೇಧಿಸಲಾಗಿದ್ದು, ಧೂಮಪಾನ ಮಾಡಿದರೆ ಅದಕ್ಕೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ. ಇಲ್ಲಿನ ಜನ ತಮ್ಮ ಮನೆಯ ಜತೆಗೆ ಇಲ್ಲಿನ ದಾರಿಯನ್ನೂ ಸ್ವತ್ಛಗೊಳಿಸುವುದಲ್ಲದೇ ರಸ್ತೆ ಪಕ್ಕ ಗಿಡಗಳನ್ನೂ ನೆಡುತ್ತಾರೆ.
ಇಲ್ಲಿನ ಆದಿವಾಸಿ ಸಮುದಾಯ
ಮಾವ್ಲಿನಾಂಗ್‌ನಲ್ಲಿ ಪ್ರಮುಖವಾಗಿ ಕಾಶಿ ಬುಡಕಟ್ಟು ಸಮುದಾಯ ವಾಸಿಸುತ್ತಿದೆ. ಇದು ಮಾತೃ ಪ್ರಧಾನ ಕುಟುಂಬ ವ್ಯವಸ್ಥೆ ಹೊಂದಿದೆ. ಹೆಚ್ಚಾಗಿ ಪಿತೃ ಪ್ರಧಾನ ಕುಟುಂಬಗಳನ್ನು ನೋಡಿರುವ ನಾವು ಮಾತೃ ಪ್ರಧಾನ ಕುಟಂಬಗಳ ವೈಶಿಷ್ಟ್ಯವನ್ನು ಇಲ್ಲಿ ಕಾಣಬಹುದು. ಅತಿಥಿ ಸತ್ಕಾರವೂ ಇವರ ಪ್ರಮುಖ ಗುಣ.
ಲಿವಿಂಗ್ ರೂಟ್ ಸೇತುವೆಗಳು
ಲಿವಿಂಗ್ ರೂಟ್ ಸೇತುವೆಗಳು ಇಲ್ಲಿನ ಇನ್ನೊಂದು ಪ್ರಮುಖ ಆಕರ್ಷಣೆಗಳಾಗಿವೆ. ನದಿ, ಹಳ್ಳಗಳ ಎರಡು ಬದಿಯಲ್ಲಿ ಬೆಳೆದಿರುವ ರಬ್ಬರ್ ಮರಗಳ ಬೇರುಗಳು ಒಂದಕ್ಕೊಂದು ಹೆಣೆದುಕೊಂಡಿದ್ದು, ಗಟ್ಟಿಯಾದ ಜೀವಂತ ಸೇತುವೆಗಳನ್ನು ನಿರ್ಮಾಣ ಮಾಡಿವೆ. ಇವುಗಳನ್ನು ಯುನೆಸ್ಕೋದ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಲಾಗಿದ್ದು, ನೋಡುಗರನ್ನು ಚಕಿತಗೊಳಿಸುತ್ತವೆ.
ನೋಡಲೇಬೇಕಾದ ಇತರ ಸ್ಥಳಗಳು
ಮಾವ್ಲಿನಾಂಗ್ ಹಳ್ಳಿಗೆ ಭೇಟಿ ನೀಡುವವರು ಖಡ್ಡಾಯವಾಗಿ ನೋಡಲೇಬೇಕಾದ ಕೆಲವು ಸ್ಥಳಗಳಿವೆ. ಅವುಗಳಲ್ಲಿ ಸ್ಕೈ ವ್ಯೂ ಕೂಡ ಒಂದು. ಇದು 85 ಅಡಿಗಳಷ್ಟು ಎತ್ತರವಾಗಿದ್ದು ಸಂಪೂರ್ಣವಾಗಿ ಬಿದಿರಿನಿಂದಲೇ ನಿರ್ಮಾಣವಾಗಿದೆ. ಇದರ ತುತ್ತ ತುದಿಗೆ ತಲುಪಿದಾಗ ಅಗುವ ರೋಮಾಂಚನ ಅಲ್ಲಿ ಹೋಗಿಯೇ ಅನುಭವಿಸಬೇಕು. ಈ ಹಳ್ಳಿ ಬಾಂಗ್ಲಾ ಗಡಿಗೆ ಹತ್ತಿರವಿದ್ದು ಬಂಗ್ಲಾದ ಭೂ ಪ್ರದೇಶವನ್ನೂ ಇಲ್ಲಿಂದ ಕಾಣಬಹುದು. ಇದಕ್ಕೆ 10 ರೂ. ಪ್ರವೇಶ ಶುಲ್ಕವಿದೆ. ಇಲ್ಲಿನ ಹಸುರಿನ ಮಧ್ಯೆ ಜಾರುವ ಜಲಧಾರೆಗಳಿವೆ. ಇಲ್ಲಿ ನೂರು ವರ್ಷಗಳಷ್ಟು ಹಳೆಯದಾದ ಚರ್ಚ್ ಇದ್ದು, ಇಂದಿಗೂ ತನ್ನ ಹಳೆಯ ಸೊಬಗನ್ನು ಹಾಗೆಯೆ ಉಳಿಸಿಕೊಂಡಿದೆ.
ಸ್ಥಳೀಯ ಖಾದ್ಯಗಳು
ಇಲ್ಲಿನ ಬಗೆ ಬಗೆಯ ಖಾದ್ಯಗಳು ನಿಮ್ಮ ಬಾಯಿ ರುಚಿಯನ್ನು ತಣಿಸುತ್ತವೆ. ಎಲ್ಲವೂ ಸಾವಯವ ತರಕಾರಿಗಳಿಂದಲೇ ತಯಾರಾಗಿರುತ್ತವೆ. ಮಾಂಸಾಹಾರ ಮತ್ತು ಸಸ್ಯಾಹಾರ ಎರಡರಲ್ಲೂ ಬಗೆ ಬಗೆಯ ಖಾದ್ಯಗಳು ಇಲ್ಲಿ ಲಭ್ಯ. ಪೆಪ್ಪರ್ ಪೋರ್ಕ್, ತಾಜಾ ಮತ್ತು ಹೊಗೆಯಿಂದ ಬೇಯಿಸಿದ ಬಾಳೆ ಹೂ, ಮಾಂಸ ಮತ್ತು ಅಕ್ಕಿಯಿಂದ ತಾಯಾರಿಸಿದ ಜಾದೋ, ಸೋಯಾಬಿನ್‌ನಿಂದ ತಯಾರಿಸಿದ ತುಂಗ್ರಿಂಬೈ ಮತ್ತು ಸ್ಥಳೀಯವಾಗಿ ಬೆಳೆದ ಕಾಳು ಪದಾರ್ಥಗಳನ್ನು ಸವಿಯಬಹುದು.
ವಸತಿ ಮತ್ತು ತಲುಪುವುದು ಹೇಗೆ?
ಮಾವ್ಲಿನಾಂಗ್‌ನಲ್ಲಿ ಸಾಂಪ್ರದಾಯಿಕವಾಗಿ ಮತ್ತು ಕಾಂಕ್ರಿಟ್‌ನಿಂದ ನಿರ್ಮಾಣವಾದ ಸಾಕಷ್ಟು ಹೋಮ್ ಸ್ಟೇಗಳಿವೆ. ಒಂದು ರಾತ್ರಿಗೆ 2000 ರೂ.ನಿಂದ ಆರಂಭವಾದ ಬಾಡಿಗೆ ಇರುತ್ತದೆ. ಚಿರಾಪುಂಜಿ ಮತ್ತು ಶಿಲ್ಲಾಂಗ್ (78 ಕಿ.ಮೀ.)ಹತ್ತಿರದಲ್ಲಿದ್ದು, ಇಲ್ಲಿಂದ ಬಸ್ ಲಭ್ಯ. ವಿಮಾನದ ಮೂಲಕವೂ ಇಲ್ಲಿಗೆ ಸಾಗಬಹುದು. ಹೊರರಾಜ್ಯಗಳಿಂದ ಬರುವವರು ಕನೆಕ್ಟಿಂಗ್ ಫೈಟ್‌ಗಳ ಮೂಲಕ ಕೋಲ್ಕತಾ ಏರ್‌ಪೋರ್ಟ್‌ನಿಂದ ಶಿಲ್ಲಾಂಗ್ ಏರ್‌ಪೋರ್ಟ್ ತಲುಪಿ ಅಲ್ಲಿಂದ ಟ್ಯಾಕ್ಸಿ ಅಥವಾ ಬಸ್‌ಗಳ ಮೂಲಕ ಈ ಹಳ್ಳಿಗೆ ತಲುಪಬಹುದು. ರೈಲಿನ ಮೂಲಕ ಹೋಗ ಬಯಸುವವರು ಮಾವ್ಲಿನಾಂಗ್‌ನಿಂದ 178 ಕಿ.ಮೀ. ದೂರದಲ್ಲಿರುವ ಗುವಹಾಟಿ ರೈಲು ನಿಲ್ದಾಣ ತಲುಪಿ ಅಲ್ಲಿಂದ ಬಸ್ ಅಥವಾ ಟ್ಯಾಕ್ಸಿ ಮೂಲಕ ತೆರಳಬಹುದು.
– ಶಿವಾನಂದ ಎಚ್.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.