ಜಿಲ್ಲೆಯಲ್ಲಿ 1ಲಕ್ಷ ಗಿಡ ನೆಡುವ ಸಂಕಲ್ಪ
Team Udayavani, Jul 19, 2020, 1:42 PM IST
ಬಳ್ಳಾರಿ: ತಾಲೂಕಿನ ಕೊರ್ಲಗುಂದಿ ಜಿಲ್ಲಾಪಂಚಾಯಿತಿ ಕ್ಷೇತ್ರದಲ್ಲಿ 20 ಸಾವಿರ ಗಿಡಗಳನ್ನು ನೆಟ್ಟು ಕ್ಷೇತ್ರವನ್ನು “ಹಸಿರು ಕೊರ‌್ಲಗುಂದಿ’ಯನ್ನಾಗಿ ಮಾಡಲು ಸಂಕಲ್ಪ ತೊಟ್ಟಿದ್ದೇನೆ ಎಂದು ಜಿಪಂ ಸದಸ್ಯ, ಟಚ್ ಫಾರ್ ಲೈಫ್ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ನಾರಾ ಭರತ್‌ರೆಡ್ಡಿ ಹೇಳಿದರು.
ತಾಲೂಕಿನ ಕೊರ್ಲಗುಂದಿ ಜಿಪಂ ಕ್ಷೇತ್ರ ವ್ಯಾಪ್ತಿಯ ಹೊಸಮೋಕಾ ಗ್ರಾಮದಲ್ಲಿ ಟಚ್ ಫಾರ್ ಲೈಫ್ ಫೌಂಡೇಷನ್ ವತಿಯಿಂದ ಶನಿವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಗಿಡಗಳನ್ನು ನೆಟ್ಟು ಮಾತನಾಡಿದರು. ಕೊರ‌್ಲಗುಂದಿ ಜಿಪಂ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 20 ಸಾವಿರ ಗಿಡಗಳನ್ನು ನೆಡಲು ಸಂಕಲ್ಪ ಮಾಡಲಾಗಿದೆ. ಈಗಾಗಲೇ ಮೊದಲದಿನವೇ ಕ್ಷೇತ್ರದ ಹೊಸಮೋಕಾ, ಗೋಟೂರು, ಕೆ.ಕೆ. ಹಾಳ್, ಮಸೀದಿಪುರ, ಬಾಣಾಪುರ, ವಣೆನೂರು ಸೇರಿ ಈ ಆರು ಗ್ರಾಮಗಳಲ್ಲಿ ಒಟ್ಟು 1800 ಗಿಡಗಳನ್ನು ನಾಟಿ ಮಾಡಲಾಗಿದೆ. ಇದೇ ರೀತಿ ಕ್ಷೇತ್ರದ ಇನ್ನುಳಿದ ಗ್ರಾಮಗಳಲ್ಲೂ ಗಿಡಗಳನ್ನು ನಾಟಿ ಮಾಡುವ ಮೂಲಕ ಕ್ಷೇತ್ರವನ್ನು “ಹಸಿರು ಕೊರ‌್ಲಗುಂದಿ’ಯನ್ನಾಗಿ ರೂಪಿಸಲಾಗುವುದು ಎಂದವರು ವಿಶ್ವಾಸ ವ್ಯಕ್ತಪಡಿಸಿದರು.
ಕೊರ‌್ಲಗುಂದಿ ಕ್ಷೇತ್ರದಲ್ಲಿ ಗಿಡನೆಟ್ಟು ಹಸಿರು ಕ್ರಾಂತಿ ಮಾಡಬೇಕೆಂಬ ಹಲವು ದಿನಗಳ ಕನಸು ಶನಿವಾರ ಚಾಲನೆ ನೀಡುವ ಮೂಲಕ ಕಾರ್ಯರೂಪಕ್ಕೆ ಬಂದಿದೆ. ಕ್ಷೇತ್ರದ ಎಲ್ಲ ಗ್ರಾಮಗಳಲ್ಲೂ ಗಿಡಗಳನ್ನು ನೆಡುತ್ತೇನೆ. ಆದರೆ, ಅವು ಬೆಳೆದು ದೊಡ್ಡ ದೊಡ್ಡ ಮರಗಳಾಗಬೇಕಾದರೆ ಅದಕ್ಕೆ ಸ್ಥಳೀಯರ ಸಹಕಾರ ಅಗತ್ಯವಾಗಿದೆ. ಕೇವಲ 6 ತಿಂಗಳುಗಳ ಕಾಲ ನೀರುಣಿಸಿ ಪೋಷಣೆ ಮಾಡಿದಲ್ಲಿ ನಮಗೆ 60 ವರ್ಷಗಳ ಕಾಲ ಜೀವನ ಕೊಡುತ್ತದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಪ್ರತಿಯೊಬ್ಬರೂ ತಮ್ಮ ಸುತ್ತಮುತ್ತಲು ನೆಟ್ಟಿರುವ ಗಿಡಗಳಿಗೆ ನೀರುಣಿಸಿ ಪೋಷಿಸುವ ಕೆಲಸ ಮಾಡಬೇಕು. ಇದರಿಂದ ನಮಗೆ ನೆರಳು ಕೊಡುವುದರ ಜತೆಗೆ ನಮ್ಮ ಮುಂದಿನ ಪೀಳಿಗೆಗೆ ಉತ್ತಮ ಪರಿಸರ, ಶುದ್ಧವಾದ ಗಾಳಿಯನ್ನು ಕೊಡುತ್ತದೆ ಎಂದವರು ವಿವರಿಸಿದರು.
ಬಳ್ಳಾರಿ ಜಿಲ್ಲೆಯಲ್ಲಿ ಗಿಡಮರಗಳ ಸಂಖ್ಯೆ ಕ್ಷೀಣಿಸಿರುವುದರಿಂದ ಉಷ್ಣಾಂಶ ದಿನೇದಿನೆ ಹೆಚ್ಚುತ್ತಿದೆ. ಬೇಸಿಗೆ ಸೇರಿ ಇತರೆ ದಿನಮಾನಗಳಲ್ಲೂ ಹೊರಗಡೆ ತಿರುಗಾಡಲು ಆಗಲ್ಲ. ಇದನ್ನುನಿಯಂತ್ರಿಸಬೇಕಾದರೆ ಹೆಚ್ಚಿನ ಪ್ರಮಾಣದಲ್ಲಿ ಗಿಡಗಳನ್ನು ನೆಟ್ಟು
ಪೋಷಿಸುವುದು ಅನಿವಾರ್ಯವಾಗಿದೆ. ಹೀಗಾಗಿ ಕೊರ‌್ಲಗುಂದಿ ಕ್ಷೇತ್ರದಲ್ಲಿ 20 ಸಾವಿರ, ಬಳ್ಳಾರಿ ಜಿಲ್ಲೆಯಲ್ಲಿ ಒಂದು ಲಕ್ಷ ಗಿಡಗಳನ್ನು ನೆಡಬೇಕೆಂದು ಪಣ ತೊಟ್ಟಿದ್ದೇನೆ. ಈ ಮೂಲಕ ಬಳ್ಳಾರಿ ಜಿಲ್ಲೆಯನ್ನು ಸಹ ತಂಪಾದ ಬಳ್ಳಾರಿಯನ್ನಾಗಿ ರೂಪಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಕ್ಷೇತ್ರದಲ್ಲಿ ಸಂಸ್ಥೆಯಿಂದ ಗಿಡಗಳನ್ನು ನೆಟ್ಟಿದ್ದು ಮಾತ್ರವಲ್ಲದೇ, ತಮ್ಮ ತಮ್ಮ ಮನೆಗಳ ಬಳಿ ಗಿಡಗಳನ್ನು ನೆಡಲು ಆಸಕ್ತರು ನಮ್ಮ ಫೌಂಡೇಷನ್‌ಗೆ ಒಂದು ದೂರವಾಣಿ ಕರೆ ಮಾಡಿದಲ್ಲಿ ನಮ್ಮ ವಾಲೆಂಟೀಯರ್ ನಿಮ್ಮ ಮನೆ ಬಾಗಿಲಿಗೆ ಉಚಿತವಾಗಿ ಗಿಡವನ್ನು ತಲುಪಿಸಲಿದ್ದಾರೆ. ಅಲ್ಲದೇ, ಯುವಕರು ಗಿಡನೆಡಲು ಮುಂದೆ ಬಂದು ತಾವು ನೆಡುವುದರ ಜತೆಗೆ ತಮ್ಮ ಸ್ನೇಹಿತರಿಗೆ ವಾಟ್ಸ್‌ಆಪ್‌ನಲ್ಲಿ ಛಾಲೆಂಜ್ ಹಾಕುವ ಮೂಲಕ ಅವರಲ್ಲೂ ಗಿಡಗಳನ್ನು ನೆಟ್ಟು ಪೋಷಿಸುವಂತೆ ಪ್ರೇರೇಪಿಸಬೇಕು. ಹೀಗೆ ಎಲ್ಲರೂ ಸಹಕಾರ ನೀಡಿದಲ್ಲಿ ತ್ವರಿತವಾಗಿ ಒಂದು ಲಕ್ಷ ಗಿಡಗಳನ್ನು ನೆಡುವ ಮೂಲಕ ಕೊರ‌್ಲಗುಂದಿ ಕ್ಷೇತ್ರ, ಬಳ್ಳಾರಿ ಜಿಲ್ಲೆಯನ್ನು ಹಸಿರುಮಯವನ್ನಾಗಿ ಮಾಡಬಹುದು ಎಂದವರು ವಿಶ್ವಾಸ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayanagara: ಅನುದಾನ ಇಲ್ಲದೇ, ಜನರು ಅಭಿವೃದ್ಧಿ ಕೇಳಿದ್ರೆ ಏನು ಮಾಡಲಿ: ಕಾಂಗ್ರೆಸ್ ಶಾಸಕ
Kampli; ದರ ಕುಸಿತ: ಭತ್ತ ನೆಲಕ್ಕೆ ಚೆಲ್ಲಿ ರೈತರ ಪ್ರತಿಭಟನೆ
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Sandur By Election; ಕುಟುಂಬ ಸಮೇತ ಮತದಾನ ಮಾಡಿದ ಸಂಸದ ತುಕಾರಾಂ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.