ಆಫ್ರಿಕಾ ಸಂಗೀತ ಬೆಳೆಸಲು ಮಿ. ಈಝಿ ಯೋಜನೆ: ಸಂಗೀತ ನಿಧಿ ಸ್ಥಾಪನೆ
Team Udayavani, Jul 27, 2020, 5:45 PM IST
ಲಾಗೋಸ್: ಕಲೆ, ಕಲಾವಿದರಿಗೆ ಪ್ರೋತ್ಸಾಹ ನೀಡುವುದರೊಂದಿಗೆ ಸಂಸ್ಕೃತಿಯನ್ನು ಮುಂದುವರಿಸಿಕೊಂಡು ಹೋಗಬೇಕೆಂದು ಹಲವರು ಸಲಹೆ, ಸೂಚನೆ ನೀಡುತ್ತಾರೆ.
ಆದರೆ ಅದನ್ನು ಹೇಗೆ ಕಾರ್ಯರೂಪಕ್ಕೆ ತರಬಹುದೆಂದು ಯಾರೂ ಆಲೋಚಿಸುವುದಿಲ್ಲ, ಅದಕ್ಕಾಗಿ ವೆಚ್ಚವನ್ನು ಮಾಡಲೂ ಹಿಂದೆ ಮುಂದೆ ನೋಡುತ್ತಾರೆ.
ಅಂತಹವರ ಮಧ್ಯ ನೈಜೀರಿಯಾದ ಲಾಗೋಸ್‌ನ 29 ವರ್ಷದ ಸಂಗೀತ ಕಲಾವಿದ ಮಿ. ಈಝಿ ಎಲ್ಲರಿಗೂ ಮಾದರಿಯಾಗಿ ನಿಲ್ಲುತ್ತಾರೆ.
ಸಂಸ್ಕೃತಿ ಉಳಿಸುವ ಉದ್ದೇಶ
ಆಫ್ರಿಕಾ ಜನರೊಂದಿಗೆ ಅವರ ಸಂಸ್ಕೃತಿ ಇಂದಿಗೂ ಹಾಸುಹೊಕ್ಕಾಗಿದೆ. ಅವರ ಆಚಾರ ವಿಚಾರಗಳೊಂದಿಗೆ ಅವರ ಸಂಗೀತ ಪರಂಪರೆಯೂ ಭಿನ್ನವಾಗಿ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದೆ. ಅವರು ನುಡಿಸುವ ಎಂಬಿರಾ, ಕಲಿಂಬ, ಕೋರಾ, ಎನ್‌ಗೊನಿ ವಾದ್ಯ ಪರಿಕರಗಳು, ಕೊಂಗೋ, ಬೊಂಬಾ, ಕುಂಬಿಯಾದಂತಹ ರಿದಮಿಕ್ ಬ್ಯಾಂಡ್‌ಗಳಿಗೂ ಎಲ್ಲೆಡೆ ವಿಶೇಷ ಮಾನ್ಯತೆ ಇದೆ. ಆದರೆ ಸರಕಾರ, ಸ್ಥಳೀಯಾಡಳಿತದ ಸಹಕಾರ ಈ ಬಗ್ಗೆ ತುಂಬಾ ಕೆಳಮಟ್ಟದಲ್ಲಿದೆ. ಇಂತಹ ಸಂದರ್ಭ ಮಿ. ಈಝಿ ಅವರು ಆಫ್ರಿಕಾ ಖಂಡದಲ್ಲಿ ಅಸ್ತಿತ್ವದಲ್ಲಿರುವ ಮತ್ತು ಉದಯೋನ್ಮುಖ ಆಫ್ರಿಕನ್ ಸಂಗೀತಗಾರರನ್ನು ಬೆಂಬಲಿಸಲು 20 ಮಿಲಿಯನ್ ಡಾಲರ್‌ನಲ್ಲಿ ಆಫ್ರಿಕಾ ಮ್ಯೂಸಿಕ್ ಫಂಡ್ (ಎಎಂಎಫ್) ಹುಟ್ಟು ಹಾಕಿದ್ದಾರೆ.
ಕಲಾವಿದರಿಗೆ ತಮ್ಮ ಪ್ರತಿಭೆ ಅನಾವರಣಕ್ಕೆ ಹಣಕಾಸಿನ ನೆರವು ನೀಡುವುದು ಅಗತ್ಯ. ಇದು ಅವರನ್ನು ಪ್ರೇರಣೆ ಮೂಡಿಸಬಹುದು. ಕಲಾವಿದರು ತಮ್ಮ ಸಂಗೀತಕ್ಕಾಗಿ ಹಣವನ್ನು ಪಡೆಯಲು ಬ್ಯಾಂಕುಗಳಿಗೆ ಹೋಗಲು ಸಾಧ್ಯವಿಲ್ಲ. ಏಕೆಂದರೆ ಬೌದ್ಧಿಕ ಆಸ್ತಿಯ ಮೇಲೆ ಸಾಲ ಕೊಡುವ ಯಾವ ಬ್ಯಾಂಕ್‌ಗಳೂ ಇಲ್ಲಿಲ್ಲ. ಈ ಬಗ್ಗೆ ಯಾವುದೇ ವಿವರಣೆಯನ್ನೂ ಹಣಕಾಸು ಸಂಸ್ಥೆಗಳು ಕೇಳುವುದಿಲ್ಲ. ಹೀಗಾಗಿ ಇಂತಹ ಸಂಗೀತ ನಿಧಿಯನ್ನು ಹುಟ್ಟು ಹಾಕುವುದು ಅಗತ್ಯವಾಗಿತ್ತು.
ನಾವು ಯಾರೊಂದಿಗಾದರೂ ಎರಡು ವರ್ಷಗಳ ಒಪ್ಪಂದವನ್ನು ಹೊಂದಿದ್ದೇವೆ. ಆ ಎರಡು ವರ್ಷಗಳಲ್ಲಿ, ನಾವು ಅವರ ಪ್ರತಿನಿಧಿಯಾಗಿರುತ್ತೇವೆ, ಅವರ ಸಂಗೀತವನ್ನು ನಿರ್ವಹಿಸಲು ಅವರಿಗೆ ಸಹಾಯ ಮಾಡುತ್ತೇವೆ ಮತ್ತು ಅವರು ಬೆಳೆದಂತೆ ನಾವು ಅವರ ಗಳಿಕೆಯಿಂದ ಆರಂಭಿಕ ಹೂಡಿಕೆಯನ್ನು ಕಡಿತಗೊಳಿಸುತ್ತೇವೆ. ಕಲಾವಿದರು ಮೂಲತಃ ತಮ್ಮ ಸಂಗೀತವನ್ನು ವಿತರಿಸಲು ವೇದಿಕೆಯನ್ನು ಬಯಸುತ್ತಾರೆ ಮತ್ತು ಅವರ ಪ್ರಗತಿಯನ್ನು ನಾವು ಮೇಲ್ವಿಚಾರಣೆ ಮಾಡುತ್ತೇವೆ. ಆ ಮೂಲಕ ನಾವು ಯಾರಿಗೆ ಹೂಡಿಕೆ ಮಾಡಬೇಕೆಂಬುದರ ಬಗ್ಗೆ ಡೇಟಾ ಬೆಂಬಲಿತ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು ಎಂದು ಮಿ. ಈಝಿ ಹೇಳುತ್ತಾರೆ.
ಹೇಗೆ ನೆರವು?
ಆಯ್ದ ಕಲಾವಿದರಿಗೆ ಅವರ ಆದಾಯ ಮತ್ತು ಯೋಜಿತ ಆದಾಯವನ್ನು ಅವಲಂಬಿಸಿ, ಸ್ಟ್ರೀಮಿಂಗ್ ಆದಾಯದಂತಹ ಮಾಪನಗಳನ್ನು ಬಳಸಿ ಸಹಾಯಧನ ನೀಡಲಾಗುತ್ತದೆ. ಈ ಕ್ಷೇತ್ರದಲ್ಲಿ ಈಗಾಗಲೇ ಹೆಜ್ಜೆಗುರುತುಗಳನ್ನು ಮೂಡಿಸಿರುವ ಕಲಾವಿದರಿಗಾಗಿ, ಪ್ರತಿಭೆ ಉಳ್ಳವರ ಸ್ಟ್ರೀಮಿಂಗ್ ನಡೆಸಿ ಅವರಿಗೆ ಆದಾಯಗಳಿಸುವ ಮಾರ್ಗವನ್ನು ಒದಗಿಸುತ್ತದೆ. ಅಷ್ಟೇ ಅಲ್ಲದೆ ಕಲಾವಿದರಿಗೆ ಅವರ ಸಂಗೀತ ಅರಿವವನ್ನು ವಿಸ್ತರಿಸಲು ಅವರಿಗೆ ಮುಂಗಡ ಹಣವನ್ನು ನೀಡಲಾಗುವುದು. ಹೀಗೆ ಆರ್ಥಿಕವಾಗಿ ಬಲಗೊಂಡ ಬಳಿಕ ಆತನಿಗೆ ನೀಡಿದ ನೆರವನ್ನು ಮತ್ತೆ ಹಿಂಪಡೆದು ನಿಧಿಯಲ್ಲಿ ಆತನ ಸಹಭಾಗಿತ್ವವನ್ನು ಉಳಿಸಿಕೊಳ್ಳಲಾಗುತ್ತದೆ. ಇತರಿಂದ ಹಲವು ಕಲಾವಿದರಿಗೆ ನೆರವಾಗಲು ಸಹಾಯವಾಗುವ ಉದ್ದೇಶ ಎಎಂಎಫ್ನದ್ದು.
ಮಿ. ಈಝಿ ಬಗ್ಗೆ…
ಮಿ. ಈಝಿ ಅವರ ನಿಜವಾದ ಹೆಸರು ಒಲುವಾಟೋಸಿನ್ ಅಜಿಬಾಡೆ. ಸ್ಪಾಟಿಫೈನಲ್ಲಿ ಐದು ಮಿಲಿಯನ್‌ಂತಲೂ ಹೆಚ್ಚು ಫಾಲೋವರ್ಗಳನ್ನು ಹೊಂದಿರುವ ಮಿ. ಈಝಿ 2018ರಲ್ಲಿ ಎಂಪಾವಾ ಆಫ್ರಿಕಾ ಎಂಬ ಕಾರ್ಯಕ್ರಮವನ್ನು ರೂಪಿಸಿದ್ದರು. ಈ ಮೂಲಕ ಕಲಾವಿದರಿಗೆ ಸಂಗೀತ ಮಾರಾಟ, ರೇಡಿಯೋ, ದೂರದರ್ಶನದಲ್ಲಿ ಕಾರ್ಯಕ್ರಮ ನೀಡಲು ನೆರವು ನೀಡಿದ್ದರು. ಅಷ್ಟೇ ಅಲ್ಲದೆ ಸ್ವತಂತ್ರ ಸಂಗೀತ ಉದ್ಯಮಿಯಾಗಲು, ತರಬೇತಿ ನೀಡಿ ಸಂಗೀತ ಕ್ಷೇತ್ರದಲ್ಲಿ ಬೆಳೆಯಲು ಸಂಪನ್ಮೂಲಗಳನ್ನು ಒದಗಿಸಿಕೊಟ್ಟಿದ್ದರು. ಇದೀಗ ಎಎಂಎಫ್ನಂತಹ ಮತ್ತೂಂದು ಯೋಜನೆ ರೂಪಿಸಿ ಆಫ್ರಿಕಾ ಸಂಗೀತವನ್ನು ಜಗತ್ತಿಗೆ ಪಸರಿಸಲು ಹೊರಟಿದ್ದಾರೆ.
ಇಂತಹ ನೆರವು ಎಲ್ಲೆಡೆ, ಎಲ್ಲ ಬಗೆಯ ಕಲಾವಿದರಿಗೆ ಸಿಗಬೇಕಿದೆ. ಅದಕ್ಕಾಗಿ ಎಲ್ಲೆಡೆಯೂ ಮಿ. ಈಝಿಯಂತವರು ಇರಲು ಸಾಧ್ಯವಿಲ್ಲ. ಭಾರತದಲ್ಲಂತೂ ಸಂಗೀತ ಗುಣಮಟ್ಟದಲ್ಲಾಗಲಿ, ವೈಶಿಷ್ಟéದಲ್ಲಾಗಲಿ ಪ್ರಪಂಚಕ್ಕೆ ಮಾದರಿಯಾಗಿದೆ. ಇಲ್ಲಿಯೂ ಬಡ ಕಲಾವಿದರಿದ್ದಾರೆ, ಅವಕಾಶಕ್ಕಾಗಿ ಕಾದು ಕುಳಿತವರಿದ್ದಾರೆ. ನೂರರಲ್ಲಿ ಒಬ್ಬ ಮಿಂಚಿದರೆ ಹೆಚ್ಚು. ಎಷ್ಟೇ ಪ್ರತಿಭೆಯಿದ್ದರೂ ಗುರುತಿಸಿ ಬೆಳವಣಿಗೆಗೆ ಪೂರಕ ಸಂಪನ್ಮೂಲ ಒದಗಿಸದಿದ್ದಲ್ಲಿ ಕಲಾವಿದನೂ, ಕಲೆಯೂ ಸೊರಗುವುದರಲ್ಲಿ ಎರಡು ಮಾತೇ ಇಲ್ಲ. ಮಿ. ಈಝಿ ಯೋಜನೆ ಎಲ್ಲರಿಗೂ ಪ್ರೇರಣೆಯಾಗಲಿ. ಇಲ್ಲಿಯೂ ಸಂಗೀತ ನಿಧಿಯಲ್ಲಿ ಅನೇಕ ಪ್ರತಿಭೆಗಳು, ಭಾರತೀಯ ಸಂಸ್ಕೃತಿ ಮೇಳೈಸಲಿ ಎಂಬುವುದು ನಮ್ಮ ಆಶಯ.
-ಹನಿ ಕೈರಂಗಳ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.