ಹಲ್ದಾರ್‌ನಾಗ್ ಎಂಬ ಲೋಕಕವಿ ರತ್ನ
Team Udayavani, Jul 28, 2020, 9:00 AM IST
ಮನುಷ್ಯನಿಗೆ ಸಾಧಿಸುವ ಹಂಬಲ, ಗುರಿಯನ್ನು ತಲುಪಬಲ್ಲ ಇಚ್ಛಾಶಕ್ತಿ, ಸಂಕಷ್ಟದ ಸಮಯದಲ್ಲಿ ಅಡೆತಡೆಗಳನ್ನು ಮೀರಿ ನಡೆಯಬಲ್ಲ ಗಟ್ಟಿತನಬೇಕು.
ಪ್ರಾಮಾಣಿಕತೆ, ಮನಸ್ಸಿನ ಶುದ್ಧ ಅಂತಃಕರಣ, ನಿಷ್ಕಲ್ಮಶವಾದ ಪ್ರೇಮ, ಸೋಲಿನಲ್ಲೂ ಗೆಲುವನ್ನು ಕಾಣುವ ವಿಶಿಷ್ಟ ಅನುಭವವಿದ್ದರೆ ಈ ಜಗತ್ತಿನಲ್ಲಿ ಅಸಾಧ್ಯವಾದುದು ಯಾವುದೂ ಇಲ್ಲ.
ಏಕೆ ಬದುಕಬೇಕು? ಮತ್ತು ಹೇಗೆ ಬದುಕಬೇಕು? ಎಂಬುವ ಪ್ರಶ್ನೆಗಳಿಗೆ ನಮ್ಮಲ್ಲಿ ಉತ್ತರವೇ ಇಲ್ಲ. ಬಹುತೇಕರು ಜೀವನದಲ್ಲಿ ಒಮ್ಮೆ ಸೋತುಬಿಟ್ಟರೆ ಬದುಕೇ ಮುಗಿದುಹೋಯಿತು ಎಂದು ತಿಳಿದು ಆತ್ಮಹತ್ಯೆಯಂತಹ ಹೇಡಿತನಕ್ಕೆ ಮುಂದಾಗಿ ಬಿಡುತ್ತಾರೆ!
ಆದರೆ ಇಲ್ಲಿಯೊಬ್ಬರು ಮೂರನೇ ತರಗತಿಗೆ ಶಾಲೆಯನ್ನು ಬಿಟ್ಟರೂ, ಕಥೆ, ಕವನ, ಹಾಡುಗಳ ಮೂಲಕವೇ ಪದ್ಮಶ್ರೀ ಪ್ರಶಸ್ತಿಯನ್ನು ಮುಡಿಗೆರಿಸಿಕೊಂಡು ಕವಿರತ್ನ ಎಂಬ ಬಿರುದನ್ನು ಪಡೆದುಕೊಂಡಿದ್ದಾರೆ. ಅವರೇ ಶ್ರೀ ಹಲ್ದಾರ್ ನಾಗ್.
ಬಡತನವೇ ಶಾಪವಾಗಿದೆ ಎಂದು ಹೇಳುವವರು ನಮ್ಮಲ್ಲಿ ಇಲ್ಲಿದ್ದಾರೆ. ಆದರೆ ಬಡತನವನ್ನೇ ವರವನ್ನಾಗಿ ಪರಿವರ್ತಿಸಿಕೊಂಡು ಹಲವರು ಯಾರೂ ಊಹೆ ಮಾಡದ ರೀತಿಯಲ್ಲಿ ಅಚ್ಚರಿಯ ಸಾಧನೆಯನ್ನು ನೀಡಿದವರು ಹಲ್ದಾರ್ ನಾಗ್. 60ಕ್ಕಿಂತಲೂ ಹೆಚ್ಚು ಸ್ವರಚಿತ ಪದ್ಯಗಳನ್ನು ರಚನೆ ಮಾಡಿ, ಕಣ್ಣು ಮುಚ್ಚಿ ಪಟ ಪಟನೆ ಹೇಳಿ ಬಿಡುತ್ತಾರೆ.
ಪದ್ಯ ವಾಚನ ಮಾಡುವಾಗ ಇವರೂ ಸ್ವಲ್ಪವೂ ತಡವರಿಸುವುದಿಲ್ಲವಂತೆ. ಅದು ಹೇಗೆ ಸಾಧ್ಯ ಎಂದು ಕೇಳಿದರೆ ಅದೊಂದು “ದೇವರ ಇಚ್ಛೆ, ಪದ್ಯವನ್ನು ಹೇಳುತ್ತಾ ಹೋದಂತೆ ನನಗೆ ಎಲ್ಲವೂ ನೆನಪಾಗಿ ಬಿಡುತ್ತದೆ. ಇದಕ್ಕಿಂತ ಹೆಚ್ಚಾಗಿ ನನಗೆಏನು ತಿಳಿದಿಲ್ಲ’ ಎಂದು ಮುಗ್ಧವಾಗಿ ಮಾತನಾಡುತ್ತಾರೆ. ಒರಿಸ್ಸಾದ ಬುಡುಕಟ್ಟು ಜನಾಂಗಕ್ಕೆ ಸೇರಿದ್ದ ಇವರು ಬೇರೆಯವರ ಜಮೀನುಗಳಲ್ಲಿ ಕೂಲಿ ಮಾಡುತ್ತಾ, ಜೀತಕ್ಕೆ ಇದ್ದು ಜೀವನವನ್ನು ನಡೆಸುವ ಪರಿಪಾಠವನ್ನು ಬಹಳ ಹಿಂದಿನಿಂದಲೂ ಬೆಳೆಸಿಕೊಂಡು ಬಂದಿದ್ದರು. ಈ ಸಮುದಾಯದಲ್ಲಿ ಶಿಕ್ಷಣವೆನ್ನುವುದು ಅಷ್ಟಕ್ಕಷ್ಟೆ. ಅಕ್ಷರಕ್ಕಿಂತ ಅನ್ನ ಸಂಪಾದನೆ ಮಾಡುವುದೇ ಇವರ ಬಹುದೊಡ್ಡ ಗುರಿಯಾಗಿತ್ತು. ತಂದೆ ತೀರಿದ ಅನಂತರ ಮನೆಯನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊತ್ತುಕೊಂಡರು.
ಹೊಟೇಲ್ ಒಂದರಲ್ಲಿ ಕೆಲಸ ಮಾಡುತ್ತಾ, ಮುಂದೆ ಬಾರ್ಗಾ ಜಿಲ್ಲೆಯಯಲ್ಲಿದ್ದ ವಸತಿ ನಿಲಯಕ್ಕೆ ಅಡುಗೆ ಸಹಾಯಕರಾಗಿ ಸೇರಿಕೊಂಡರು. ಸ್ವಲ್ಪ ದಿನಗಳ ನಂತರ ತನ್ನದೇ ಸ್ವಂತ ಉದ್ಯೋಗ ಸ್ಥಾಪಿಸಬೇಕೆಂಬ ಉತ್ಕಟವಾದ ಇಚ್ಛೆ ಬ್ಯಾಂಕಿನಲ್ಲಿ ಸಾಲ ಮಾಡಿ ಒಂದು ಶಾಲೆಯ ಹತ್ತಿರ ಪುಟ್ಟ ಅಂಗಡಿಯನ್ನು ತೆರೆಯಲು ಕಾರಣವಾಯಿತು. ವಿದ್ಯಾರ್ಥಿಗಳೇ ಈ ಅಂಗಡಿಯ ಪ್ರಮುಖ ಗ್ರಾಹಕರಾದರು. ವಿದ್ಯಾರ್ಥಿಗಳು ಮೇಲಿಂದ ಮೇಲೆ ಅಂಗಡಿಗೆ ಬಂದು ಅಲ್ಲಿ ಕಥೆ, ಕವನ, ಪದ್ಯ, ಪಾಠ ಪ್ರವಚನಗಳ ಬಗ್ಗೆ ಮಾತನಾಡುತ್ತಿದ್ದಾಗ ಹಲ್ದಾರ್ ಅವರಿಗೂ ಅಕ್ಷರಗಳನ್ನು ಕಲಿಯಬೇಕೆಂಬ ಮಹದಾಸೆ ಶುರುವಾಯಿತು.
ಕಲಿಯುವ ಉತ್ಸಾಹ ಜತೆಗಿದ್ದರೆ ಕಲಿಯುವುದು ಕಷ್ಟವೇನಲ್ಲ ಎಂಬುವುದನ್ನು ಮನಗಂಡ ಇವರೂ “ಅಭಿಮನ್ಯು ಸಾಹಿತ್ಯ ಸಂಸತ್’ ಎಂಬ ಸಂಸ್ಥೆಯ ಸಹಾಯದೊಂದಿಗೆ ಕೆಲವೇ ತಿಂಗಳುಗಳಲ್ಲಿ ಓದುವುದನ್ನು ಮತ್ತು ಬರೆಯುವುದನ್ನು ಕಲಿತುಬಿಟ್ಟರು. ಕಥೆ, ಕವನ, ಪದ್ಯವನ್ನು ಬರೆಯಬೇಕಾದರೆ ಭಾಷೆ, ವಾಕ್ಯದ ಸ್ಪಷ್ಟತೆ, ಛಂದಸ್ಸು, ಪ್ರಾಸ ಇವುಗಳೆಲ್ಲವೂ ಬಹುಮುಖ್ಯ. ಅದಕ್ಕಾಗಿ ಒಡಿಯಾ ಭಾಷೆಯ ಪದ್ಯಗಳನ್ನು ಹೆಚ್ಚು ಓದಿ, ಮೊದಮೊದಲು ತಾವು ರಚಿಸಿದ ಕವನಗಳನ್ನು ಅವುಗಳಿಗೆ ಜೋಡಿಸಿ ಖುಷಿಪಡಲು ಆರಂಭಿಸಿದರು.
ಮುಂದೆ “ಮುದಿ ಆಲದ ಮರ’ ಎಂಬ ಶೀರ್ಷಿಕೆಯಲ್ಲಿ ಒಂದು ಸುಂದರವಾದ ಪದ್ಯವನ್ನು ಬರೆದು ಪತ್ರಿಕೆಗೆ ಕಳುಹಿಸಿಕೊಟ್ಟರು. ಅದು ಪ್ರಕಟವಾಯಯಿತು. ಸಾವಿರಾರು ಜನ ಅದಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು. ಹೀಗೆ ಪ್ರತಿ ವಾರ ಪತ್ರಿಕೆಗೆ ಪದ್ಯವನ್ನು ಕಳುಹಿಸಿದರು ಜನ ಅದನ್ನು ಓದಿ ಮೆಚ್ಚಿಕೊಂಡು ಹಲ್ದಾರ್ ನಾಗ್ ಅವರನ್ನು ಪ್ರೋತ್ಸಾಹಿಸಿದರು. ಇಂತಹ ಸುದ್ದಿ ಬಿಬಿಸಿ ನ್ಯೂಸ್‌ಗೆ ಗೊತ್ತಾದ ತತ್‌ಕ್ಷಣವೇ ಲಂಡನ್‌ನಿಂದ ಒಂದು ತಂಡ ಬಂದು ಇವರನ್ನು ಸಂದರ್ಶನ ಮಾಡಿ ವಿಸ್ಮಯ ಬದುಕಿನ ಕುರಿತಂತೆ ಸಾಕ್ಷ್ಯ ಚಿತ್ರವನ್ನು ನಿರ್ಮಿಸಿ ಪ್ರದರ್ಶಿಸಿದರು.
ರಾತ್ರೋ ರಾತ್ರಿ ಹಲ್ದಾರ್‌ನಾಗ್ ಜಗತ್ತಿಗೆ ಪರಿಚಯವಾದರು. ಇವರ ಕವಿತೆಗಳು ಬಂಗಾಳಿ, ಇಂಗ್ಲಿಷ್ ಭಾಷೆಗಳಿಗೆ ಅನುವಾದಗೊಂಡಿವೆ. ಇವರು ಬರೆದ ಪದ್ಯಗಳ ಕುರಿತಂತೆ ವಿಶೇಷ ಅಧ್ಯಯನ ಮಾಡಿ ಐದು ಮಂದಿ ಪಿಎಚ್.ಡಿ. ಮಾಡಿದ್ದಾರೆ. ಹಲ್ದಾರ್‌ನಾಗ್ ಬಹುತೇಕವಾಗಿ ಪುರಾಣ, ಪುಣ್ಯ ಕಥೆಗಳಲ್ಲಿ ನಿರ್ಲಕ್ಷಕ್ಕೆ ಒಳಗಾದ ಪಾತ್ರಗಳಿಗೆ ಒತ್ತು ಕೊಟ್ಟು ಪದ್ಯಗಳನ್ನು ರಚಿಸುತ್ತಾರೆ.
ಹೀಗಾಗಿ ಒರಿಸ್ಸಾದ ಜನ ಇವರನ್ನು “ಲೋಕ ಕವಿರತ್ನ’ ಎಂದು ಕರೆಯುತ್ತಾರೆ. ಭಾರತ ಸರಕಾರ ಇವರಿಗೆ 2016ರಲ್ಲಿ ಪದ್ಮ ಶ್ರೀ ಪ್ರಶಸ್ತಿಯನ್ನು ನೀಡಿದೆ. ಖನ್ನತೆಗೆ ಒಳಗಾಗಿ ನನಗೆ ಬದುಕೇ ಭಾರವಾಗಿದೆ ಎಂದು ಹೇಳಿಕೊಂಡು ಇಡೀ ಜೀವನವನ್ನೆ ಹಾಳು ಮಾಡಿಕೊಳ್ಳುತ್ತಿರುವ ಇಂದಿನ ಯುವಕರಿಗೆ ಎಪ್ಪತ್ತು ವರ್ಷ ತುಂಬಿದ ಹಲ್ದಾರ್‌ನಾಗ್ ಜೀವನವೇ ಪ್ರೇರಣೆ.
ಪ್ರವೀಣ ವಿವೇಕ, ಸಿಎಸ್‌ಐ ವಾಣಿಜ್ಯ ಮಹಾವಿದ್ಯಾಲಯ, ಧಾರವಾಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.