ಪರಿಸರಸ್ನೇಹಿ ಮನೆಗೆ ಇದು ಸೂಕ್ತ ಉದಾಹರಣೆ
Team Udayavani, Jul 29, 2020, 8:30 PM IST
ಅದು ಎರಡಂತಸ್ತಿನ ಮನೆ. ಆದರೆ ಅದರ ನಿರ್ಮಾಣಕ್ಕೆ ಸಿಮೆಂಟ್, ಜಲ್ಲಿ ಬಳಸಿರುವುದು ಅತ್ಯಲ್ಪ ಪ್ರಮಾಣದಲ್ಲಿ ಮಾತ್ರ.
ಮಣ್ಣು, ಬಿದಿರು, ಉಪಯೋಗಿಸಿದ ಬಿಯರ್ ಬಾಟಲ್, ಹಳೆಯ ಹೆಂಚು, ಮರು ಬಳಕೆಯ ಸಾಮಗ್ರಿ ಮುಂತಾದವುಗಳನ್ನು ಉಪಯೋಗಿಸಿದ ಸುಂದರವಾಗಿ ಈ ಮನೆಯನ್ನು ರಚಿಸಲಾಗಿದೆ.
ದೂ 4 ತಿಂಗಳ ಕಾಲಾವಧಿಯಲ್ಲಿ! ಪ್ರಕೃತಿ ಮಧ್ಯೆ, ಸೈಟ್‌ನಲ್ಲಿ ಬೃಹತ್ ಮರ ಕಡಿಯದೇ ಅದರ ಸುತ್ತಲೇ ಮನೆಯನ್ನು ಈ ಮನೆ ನಿರ್ಮಾಣವಾಗಿದ್ದು ವಿಶೇಷ. ಹೀಗಾಗಿ ಇದು ನಿಜಾರ್ಥದಲ್ಲಿ ಪರಿಸರ, ಹಸುರುಸ್ನೇಹಿ ಮನೆ.
ಎಲ್ಲಿದೆ ಮನೆ?
ಕೇರಳದ ರಾಜಧಾನಿ ತಿರುವನಂತಪುರಂನ ಕಜಕೂಟ್ಟಂನ ಪೌಡಿಕೋನಂನಲ್ಲಿ ಈ ಮನೆ ನಿರ್ಮಿಸಲಾಗಿದೆ. ಆರ್ಕಿಟೆಕ್ಟ್ ಆಶಮ್ಸ್ ರವಿ ಈ ಮನೆ ನಿರ್ಮಾತೃ. ಸುತ್ತಮುತ್ತಲಿನ ನೆಲಸಮಗೊಳಿಸಲಾದ ಕಟ್ಟಡಗಳ ಅವಶೇಷಗಳನ್ನು ಈ ಮನೆ ನಿರ್ಮಾಣಕ್ಕೆ ಬಳಸಲಾಗಿದೆ. ಬಾಲ್ಕನಿಯ ಹಾಲ್ ಅನ್ನು ಸೆಗಣಿ ಬಳಸಿ ರಚಿಸಲಾಗಿದೆ.
ನಿರ್ಮಾಣ ವಲಯದಿಂದ ಪರಿಸರಕ್ಕೆ ಹಾನಿ
ನಿರ್ಮಾಣ ವಲಯವೊಂದರಿಂದಲೇ ಪ್ರತಿ ವರ್ಷ ಶೇ. 25ರಿಂದ 40ರಷ್ಟು ಅಂಗಾರ ಪರಿಸರಕ್ಕೆ ಬಿಡುಗಡೆಯಾಗುತ್ತದೆ. ಶೇ. 50ರಷ್ಟು ಹವಾಮಾನ ಬದಲಾವಣೆ ಮತ್ತು ತ್ಯಾಜ್ಯ ಉತ್ಪತ್ತಿಗೂ ಈ ವಲಯ ಕಾರಣವಾಗುತ್ತಿದೆ. ಜತೆಗೆ ಶೇ. 40ರಷ್ಟು ಕುಡಿಯುವ ನೀರಿನ ಮಾಲಿನ್ಯ ಹಾಗೂ ಶೇ. 23ರಷ್ಟು ವಾಯು ಮಾಲಿನ್ಯಕ್ಕೂ ನಿರ್ಮಾಣ ಕ್ಷೇತ್ರ ಕಾರಣವಾಗುತ್ತದೆ ಎಂದು ಅಧ್ಯಯನವೊಂದು ತಿಳಿಸುತ್ತದೆ. ಆದ್ದರಿಂದ ತಾನು ಮನೆ ನಿರ್ಮಿಸುವಾಗ ಪರಿಸರಕ್ಕೆ ಆದಷ್ಟು ಕಡಿಮೆ ಹಾನಿಯಾಗುವಂತೆ ನೋಡಿಕೊಳ್ಳಬೇಕು ಎನ್ನುವ ರವಿಯ ಆಶಯದ ಹಿನ್ನೆಲೆಯಲ್ಲಿ ಈ ಯೋಜನೆ ರೂಪುಗೊಂಡಿತು.
ಬೇರೆಯವರ ಕಸವೇ ಇವರ ನಿಧಿ
ನೆಲಸಮಗೊಳಿಸಲಾಗುವ ಕಟ್ಟಡದ ವಸ್ತುಗಳನ್ನು ಮರು ಬಳಕೆ ಮಾಡಲು ನಿರ್ಧರಿಸದೆವು. ಬೇರೆಯವರು ಬೇಡವೆಂದು ಎಸೆದ ಕಸವೇ ನಮ್ಮ ಪಾಲಿಗೆ ನಿಧಿ ಇದ್ದಂತೆ ಎನ್ನುವ ರೀತಿಯಲ್ಲಿ ಕಾರ್ಯ ಪ್ರವೃತ್ತರಾದೆವು. ಮರ, ಮಂಗಳೂರು ಮಾದರಿಯ ಹೆಂಚು, ಇಟ್ಟಿಗೆ, ಕಲ್ಲು ಮುಂತಾದವುಗಳನ್ನು ಮನೆ ನಿರ್ಮಾಣಕ್ಕೆ ಬಳಸಿಕೊಂಡಿದ್ದೇವೆ. ಸಿಮೆಂಟ್ ಅನ್ನು ಅನಿವಾರ್ಯವಾದ ಕಡೆ ಮಾತ್ರ ಬಳಸಿಕೊಂಡಿದ್ದೇವೆ. ಸಿಮೆಂಟ್ ಉತ್ಪತ್ತಿ ಅಪಾರ ಪ್ರಮಾಣದ ಮಾಲಿನ್ಯಕ್ಕೆ ಕಾರಣವಾಗುವುದರಿಂದ ಅತೀ ಕಡಿಮೆ ಪ್ರಮಾಣದಲ್ಲಿ ಸಿಮೆಂಟ್ ಬಳಸಿಕೊಂಡಿದ್ದೇವೆ ಎಂದು ವಿವರಿಸುತ್ತಾರೆ ರವಿ.
ಬಿದಿರಿನ ಬಳಕೆ
ಮುಖ್ಯ ವಿಚಾರವೆಂದರೆ ರವಿ ಮನೆ ನಿರ್ಮಾಣದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬಿದಿರು ಬಳಸಿಕೊಂಡಿರುವುದು. ಬಿದಿರು ಶಕ್ತಿಶಾಲಿಯಾಗಿದ್ದು, ತುಂಬ ಸಮಯ ಬಾಳಿಕೆ ಬರುತ್ತದೆ. ಸ್ಥಳೀಯ ಬುಡಗಟ್ಟು ಜನಾಂಗದವರು ಬಿದಿರು ಪೂರೈಸಿದ್ದರು. ಇದರ ಜತೆಗೆ ತೆಂಗಿನ ಮರವನ್ನೂ ಉಪಯೋಗಿಸಲಾಗಿದೆ. ಬಲ್ಪ್ ಜತೆಗೆ ಬಿಯರ್ ಬಾಟಲ್ ಬಳಸಲಾಗಿದೆ. ಗೋಡೆಗಳನ್ನು ಮಣ್ಣು ಮತ್ತು ಸುಣ್ಣದ ಸಹಾಯದಿಂದ ಕಟ್ಟಲಾಗಿದೆ.
ಕಡಿಮೆ ಇಟ್ಟಿಗೆ
ಕಡಿಮೆ ಇಟ್ಟಿಗೆ ಬಳಸುವ ರ್ಯಾಟ್ ಟ್ರಾಪ್ ಬಾಂಡ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿದೆ. ಇದರಲ್ಲಿ ಇಟ್ಟಿಗೆಗಳನ್ನು ಲಂಬವಾಗಿಯೂ ಅಡ್ಡವಾಗಿಯೂ ಬಳಸಲಾಗುತ್ತದೆ. ಈ ರೀತಿಯ ವಿಧಾನದಲ್ಲಿ ಕಡಿನೆ ಇಟ್ಟಿಗೆ ಸಾಕಾಗುತ್ತದೆ ಮತ್ತು ಖರ್ಚಿನ ಶೇ. 30ರಷ್ಟು ಉಳಿಸಬಹುದಾಗಿದೆ. ಇನ್ನೊಂದು ಮುಖ್ಯ ಪ್ರಯೋಜನವೆಂದರೆ ಮನೆ ಸದಾ ತಂಪಾಗಿರುವುದರಿಂದ ಫ್ಯಾನ್ ಅಥವಾ ಎಸಿ ಅಗತ್ಯವಿರುವುದಿಲ್ಲ. ಅದೇ ರೀತಿ ಚಳಿಗಾಲದಲ್ಲಿ ಬೆಚ್ಚನೆ ವಾತಾವರಣವಿರುತ್ತದೆ. ಈ ಮೂಲಕವೂ ವಿದ್ಯುತ್ ಬಳಕೆ ಕಡಿತಗೊಳಸಬಹುದು. ಇವೆಲ್ಲದರ ಜತೆಗೆ ರವಿ ಮಳೆ ನೀರು ಸಂರಕ್ಷಣೆಗೆ ಟ್ಯಾಂಕ್ ಅನ್ನೂ ನಿರ್ಮಿಸಿದ್ದಾರೆ.
COSTFORD ಸ್ಫೂರ್ತಿ
COSTFORD ಈ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ರವಿಗೆ ಅದರಿಂದಲೇ ಈ ಪರಿಸರಸ್ನೇಹಿ ಮನೆ ನಿರ್ಮಾಣದ ಯೋಚನೆ ಬಂತು. 1985ರಲ್ಲಿ ಅಸ್ತಿತ್ವಕ್ಕೆ ಬಂದ COSTFORD ಈ ಪರಿಸ್ನೇಹಿ ಮನೆಗಳ ವಿನ್ಯಾಸಗೊಳಿಸುತ್ತದೆ. ಇದರಿಂದ ಸ್ಫೂರ್ತಿಗೊಂಡ ರವಿ ತನ್ನ ಮನೆಯನ್ನು ರಚಿಸಿದರು. ಇದೀಗ ಹಲವರು ತನ್ನ ಮನೆಯನ್ನು ಮಾದರಿಯಾಗಿಟ್ಟುಕೊಂಡು ಪ್ರಕೃತಿಗೆ ಪೂರಕವಾಗಿ ತಾವೂ ನಿರ್ಮಿಸಲು ಮುಂದಾಗುತ್ತಿರುವದಕ್ಕೆ ಸಂತಸ ವ್ಯಕ್ತಪಡಿಸುತ್ತಾರೆ ಆಶಮ್ಸ್ ರವಿ.
ಪ್ರಕೃತಿಗೆ ಪೂರಕ ಚಟುವಟಿಕೆ ಇರಲಿ
ನಾವು ಯಾವುದೇ ಚಟುವಟಿಕೆ ನಡೆಸುವ ಮುನ್ನ ಪ್ರಕೃತಿಯ ಸಂರಕ್ಷಣೆಗೆ ಗಮನ ಹರಿಸಬೇಕು. ಹಿರಿಯರಿಂದ ಬಳಿವಳಿಯಾಗಿ ಬಂದ ಸುಂದರ ಪರಿಸರವನ್ನು ಮುಂದಿನ ತಲೆಮಾರಿಗೂ ಉಳಿಸುವ ಅಗತ್ಯವಿದೆ ಎನ್ನುತ್ತಾರೆ ಆಶಮ್ಸ್ ರವಿ.
ರಮೇಶ್ ಬಿ., ಕಾಸರಗೋಡು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.