ಕೋವಿಡ್ 19 ಕಲಿಸಿದ ಪಾಠ: ಪರ್ಯಾಯ ಶಿಕ್ಷಣ ಪದ್ಧತಿಗೆ ಇದು ಸಕಾಲವೇ?
Team Udayavani, Jul 30, 2020, 6:28 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
– ಡಾ. ನೀತಾ. ರಾವ್
ಕೋವಿಡ್ 19 ಸೋಂಕಿನಿಂದಾಗಿ ಶಾಲೆ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಮತ್ತವರ ಪಾಲಕರಲ್ಲಿ ಒಂದು ತರಹದ ಗೊಂದಲದ ಮನಸ್ಥಿತಿ ಉಂಟಾಗಿರುವುದು ಸುಳ್ಳಲ್ಲ.
ಮಕ್ಕಳನ್ನು ಶಾಲೆಗಳಿಗೆ ಕಳುಹಿಸುವುದೋ ಬಿಡುವುದೋ ಎನ್ನುವ ದ್ವಂದದಲ್ಲಿ ಪಾಲಕರಿದ್ದಾರೆ.
ಶಾಲೆಯ ಮಕ್ಕಳು ಇವೆಲ್ಲ ಗೊಂದಲಗಳಿಂದ ದೂರವಾಗಿ ಆಟಗಳನ್ನಾಡಿಕೊಂಡು ಖುಷಿಯಾಗಿದ್ದರೆ. ಕಾಲೇಜಿನ ಮಕ್ಕಳಿಗೆ ಆನ್ ಲೈನ್ ಅಸೈನ್ ಮೆಂಟುಗಳು, ವೆಬಿನಾರುಗಳೆಂದು ಒಂದಿಷ್ಟು ಹೊಸಬಗೆಯ ಕಿರಿಕಿರಿಗಳು ಪ್ರಾರಂಭವಾಗಿವೆ. ಆದರೆ ಇದು ಎಲ್ಲಿಯವರೆಗೆ? ಉತ್ತರ ಯಾರಿಗೂ ಸ್ಪಷ್ಟವಾಗಿಲ್ಲ.
ಕೋವಿಡ್ 19ನೊಂದಿಗೆ ರಾಜಿ ಮಾಡಿಕೊಂಡು ನಮ್ಮ ಮುಂದಿನ ಜೀವನವನ್ನು ಕಳೆಯಬೇಕಾಗಿರುವ ಕಹಿ ಸತ್ಯಕ್ಕೆ ಎಲ್ಲರೂ ತಯಾರಾಗುತ್ತಿರುವ ಈ ಹಿನ್ನೆಲೆಯಲ್ಲಿ ನಮ್ಮ ಮುಂದಿರುವ ಸವಾಲುಗಳು ಅನೇಕ.
ದೇಶದ ಮತ್ತು ಸ್ವಂತದ ಆರ್ಥಿಕ ಪರಿಸ್ಥಿತಿಯು ಎಲ್ಲರನ್ನೂ ಚಿಂತೆಗೊಳಗಾಗಿಸಿದ್ದು ಒಂದು ಕಡೆಯಾದರೆ ದೇಶದ ಭಾವಿ ಪ್ರಜೆಗಳ ಶಿಕ್ಷಣದ ಸಮಸ್ಯೆಯನ್ನು ಬಗೆಹರಿಸುವುದು ಹೇಗೆಂದು ಅನೇಕರು ತಲೆಯ ಮೇಲೆ ಕೈಹೊತ್ತು ಕುಳಿತಿದ್ದಾರೆ.
ಖಾಸಗಿ ಶಾಲೆಗಳಿಗೆ ತಮ್ಮ ದೊಡ್ಡ ಜೇಬು ಬರಿದಾಗಿರುವ ಚಿಂತೆಯಾದರೆ, ಸರಕಾರಿ ಶಾಲೆಗಳು ತೆರೆಯದಿದ್ದರೆ ಮಕ್ಕಳನ್ನು ಮನೆಯಲ್ಲಿಟ್ಟುಕೊಂಡು ಸಂಭಾಳಿಸುವುದು ಹೇಗೆಂದು ತಾಯಂದಿರು ಚಿಂತಿತರಾಗಿದ್ದಾರೆ.
ಗಂಡ-ಹೆಂಡತಿ ಇಬ್ಬರೂ ಕೆಲಸದ ಮೇಲಿದ್ದವರಾದರೆ ಇನ್ನೂ ಹೆಚ್ಚಿನ ತೊಂದರೆ. ಮಕ್ಕಳನ್ನೆಲ್ಲಿ ಬಿಡುವುದು? ಶಾಲೆಯೊಂದು ಇದ್ದುಬಿಟ್ಟರೆ ಅವರ ಬಹುತೇಕ ಸಮಸ್ಯೆಗಳು ಸುಲಭವಾಗಿ ಪರಿಹಾರವಾಗಿರುತ್ತಿದ್ದವು.
ಈ ಎಲ್ಲ ಹಿನ್ನೆಲೆಯಲ್ಲಿ ಕೆಲ ಪಾಲಕರು ಒಂದು ಹೆಜ್ಜೆ ಮುಂದೆ ಹೋಗಿ ಹೊಸ ವ್ಯವಸ್ಥೆಯೊಂದನ್ನು ಮಾಡಬಹುದೇ ಎನ್ನುವ ಸಂಭವನೀಯತೆಯ ಬಗ್ಗೆ ತಲೆ ಕೆಡಿಸಿಕೊಂಡಿದ್ದಾರೆ. ಅವರಿಗೆ ಸಿಗುವ ಪರಿಹಾರವೆಂದರೆ ತಾವೇ ಮನೆಯಲ್ಲಿ ಕಲಿಸುವುದು ಮತ್ತು ಒಂದೆರಡು ವರ್ಷಗಳು ತಮ್ಮ ಮಕ್ಕಳು ಶಾಲೆಗೆ ಹೋಗುವುದನ್ನು ತಪ್ಪಿಸುವುದು.
ಗೃಹ ಗುರುಕುಲದ ಕಲ್ಪನೆಯು ಸಾಕಾರವಾಗಲು ಇದು ಸರಿಯಾದ ಸಮಯ ಎಂದು ಅವರ ಅನಿಸಿಕೆಯಾಗಿದ್ದರೆ ಅದರಲ್ಲಿ ತಪ್ಪೇನೂ ಇಲ್ಲ. ಇಂಥ ಅನೇಕ ಸಾಧ್ಯತೆಗಳನ್ನು ಕುರಿತು ಶಿಕ್ಷಣ ತಜ್ಞರೂ ಬಹಳ ಆಳವಾಗಿ, ಕೂಲಂಕಷವಾಗಿ ಚರ್ಚಿಸುತ್ತಿದ್ದಾರೆ.
ಮನೆ-ಪಾಠಶಾಲೆ ಮತ್ತು ಬಯಲು ಶಾಲೆಗಳು ಇಂದಿನ ಪರಿಸ್ಥಿತಿಯಲ್ಲಿ ಸೂಕ್ತ ಪರ್ಯಾಯಗಳಾಗಿ ಹೊರಹೊಮ್ಮಬಹುದೆಂಬುದು ಕೆಲವರ ವಾದವಾಗಿದ್ದರೆ, ಹಿಂದಿನಿಂದಲೂ ಭಾರತೀಯ ಪದ್ಧತಿಯ ಶಿಕ್ಷಣ, ಭಾರತೀಯ ಚಿಂತನೆಗಳನ್ನು ಸಾರುತ್ತಲೇ ಬಂದಿರುವ ಅನೇಕರ ಸ್ಪಷ್ಟ ನಂಬುಗೆಯೇ ಅದಾಗಿದೆ.
ಗೃಹ ಗುರುಕುಲಗಳು ಮತ್ತು ಬಯಲು ಶಾಲೆಗಳು ಪರ್ಯಾಯ ಶಿಕ್ಷಣ ವ್ಯವಸ್ಥೆಗೆ ಉತ್ತಮ ಮಾದರಿಯಾಗಬಲ್ಲವು ಎಂದು ಅವರು ಬಲವಾಗಿ ನಂಬುತ್ತಾರೆ. “ಮನೆಯೇ ಮೊದಲ ಪಾಠಶಾಲೆ, ಜನನಿ ತಾನೇ ಮೊದಲ ಗುರುವು” ಎಂದು ನಾವು ಮೊದಲಿನಿಂದಲೂ ಹೇಳುತ್ತಲೇ ಬಂದಿದ್ದೇವೆ. ಅಂದರೆ ಮಗುವೊಂದು ಹುಟ್ಟಿದ ಮೇಲೆ ಅನೇಕ ಚಟುವಟಿಕೆಗಳನ್ನು, ಮಾತುಗಳನ್ನು ಮನೆಯಲ್ಲಿಯೇ ಕಲಿಯುತ್ತದೆ. ಅನುಕರಣೆ ಅತ್ಯಂತ ಸಹಜವಾಗಿ ಬಂದ ವರದಾನವಾದರೆ, ಇನ್ನು ಕೆಲವನ್ನು ಪ್ರಯತ್ನಪೂರ್ವಕವಾಗಿ ಕಲಿಯುತ್ತದೆ ಮಗು.
ಮೂರು – ನಾಲ್ಕು ತಿಂಗಳು, ಮಲಗಿಸಿದಲ್ಲೇ ಮಲಗಿಕೊಂಡಿರುವ ಅದು ಒಮ್ಮಿಲೇ ಡಬ್ಬಾಗಿ ಬೀಳುವ ಪ್ರಯತ್ನವನ್ನು ಮಾಡುತ್ತದೆ. ಎಷ್ಟೋ ಸಲ ಮೂಗು ಜಜ್ಜಿಕೊಂಡು ಅಳುತ್ತದೆ, ಇನ್ನೆಷ್ಟೋ ಸಲ ತನ್ನಡಿಯಲ್ಲೇ ಕೈಸಿಕ್ಕಿಹಾಕಿಕೊಂಡು ತೆಗೆಯಲು ಹರಸಾಹಸ ಪಡುತ್ತದೆ.
ಆದರೂ ತನ್ನ ಪ್ರಯತ್ನವನ್ನದು ಬಿಟ್ಟು ಕೊಡುವುದೇ ಇಲ್ಲ. ಒಂದಾದ ಮೇಲೊಂದರಂತೆ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತದೆ. ಮೊದಲ ಸಲ ನಮ್ಮ ಮಗು, ಎದ್ದು ನಿಲ್ಲಲು ಕಲಿತಾಗ ಅದರ ಮೊಗದ ಮೇಲಿನ ನಗುವನ್ನು ನಾವು, ನೀವೆಲ್ಲ ಅನುಭವಿಸಿಯೇ ಇದ್ದೇವೆ. ಮೊದಲ ಹೆಜ್ಜೆಗಳು, ಮೊದಲ ತೊದಲು ನುಡಿ, ಹೀಗೆ ಎಷ್ಟೋ ಹೊಸತುಗಳನ್ನು ಕಲಿಯುತ್ತ ತನಗೆ ತಾನೇ ಖುಷಿಪಡುತ್ತ ಬೆಳೆಯುವ ಮಗುವಿನ ಸಹಜ ಬೆಳೆವಣಿಗೆಗೆ ನಾವೆಲ್ಲ ಸಾಕ್ಷಿಯಾಗಿದ್ದೇವೆ.
ಮುದ್ದಾದ ತಪ್ಪುಗಳನ್ನು ಮಾಡುತ್ತ ಮಗು ಮಾತನಾಡುವುದರ ಸುಖವನ್ನು ಅನುಭವಿಸುತ್ತಲೇ ನಿರಾಯಾಸವಾಗಿ ಅದಕ್ಕೆ ಸರಿಯಾದ, ಸ್ಪಷ್ಟವಾದ ಶಬ್ದಗಳನ್ನು ತಾಯಿ ಕಲಿಸುತ್ತ ಹೋಗುತ್ತಾಳೆ. ಇನ್ನೊಂದಿಷ್ಟನ್ನು ತಂದೆ, ಅಜ್ಜ, ಅಜ್ಜಿ, ಅಣ್ಣ, ಅಕ್ಕ, ಅಕ್ಕಪಕ್ಕದವರು ತಾವು ಮಾತನಾಡುತ್ತ ಆಡುತ್ತ ಅರಿವಿಲ್ಲದೇ ಕಲಿಸಿರುತ್ತಾರೆ.
ಆದರೆ ನಂತರದಲ್ಲಿ ಅದೆಂಥ ಮಾಯಾ ಆವರಣ ನಮ್ಮನ್ನು ಆವರಿಸಿಕೊಳ್ಳುತ್ತದೋ ಕಾಣೆ. ನಮ್ಮ ಮಕ್ಕಳು ಅಸಹಜವಾದದ್ದನ್ನೆಲ್ಲ ಕಲಿತು ಪಂಡಿತರಾಗಿಬಿಡಬೇಕೆಂಬ ಜಿದ್ದಿಗೆ ಬಿದ್ದುಬಿಡುತ್ತೇವೆ. ನಮ್ಮದಲ್ಲದ ಭಾಷೆಯನ್ನು ಕಲಿಸುವುದು ಈ ಅಸಹಜ ಕಲಿಕೆಯ ಮೊದಮೊದಲ ದುರಂತ. ಆನಂತರ ಮಗು ತನ್ನದಲ್ಲದ ಇಂಗ್ಲೀಷನಲ್ಲೇ ಮಾತನಾಡಬೇಕೆಂದು ಅತಿಯಾಸೆ ಪಡುವುದು ಅದರ ಎರಡನೇ ಮಜಲು.
ನಮ್ಮ ಆಸೆಗೆ ತಕ್ಕಂತೆ ಹೊಸ ಪೀಳಿಗೆಯ ಇಂಗ್ಲೀಷ ಮಾಧ್ಯಮ ಶಾಲೆಗಳು ಪರಕೀಯ ಭಾಷೆಯನ್ನೇ ಬಂಡವಾಳ ಮಾಡಿಕೊಂಡು ಲಕ್ಷಗಟ್ಟಲೇ ಶುಲ್ಕವನ್ನು ಪೀಕಿಸಿಕೊಳ್ಳುತ್ತಿವೆ. ಒಳ್ಳೆಯ ಕಟ್ಟಡ, ಶಿಸ್ತಿನ ಸಮವಸ್ತ್ರಗಳು ಮತ್ತು ಇಂಗ್ಲೀಷ್ ಮಾತುಗಳನ್ನೇ ಆಕರ್ಷಣೆಯ ಕೇಂದ್ರವಾಗಿಸಿಕೊಂಡು ಅವುಗಳ ಸುತ್ತಲೂ ಪಾಲಕರು ಗಿರಕಿ ಹೊಡೆಯುವಂತೆ ಮಾಡುವ ಸಾಮರ್ಥ್ಯವನ್ನು ಅತಿ ಕಡಿಮೆ ಸಮಯದಲ್ಲೇ ಅವು ಸಾಧಿಸಿಕೊಂಡುಬಿಟ್ಟ ಪರಿ ಅಚ್ಚರಿ ಮೂಡಿಸುತ್ತದೆ.
ಅದಕ್ಕೆ ತಕ್ಕಂತೆ ನಮ್ಮ ಸರಕಾರಿ ಶಾಲೆಗಳ ಸ್ಥಿತಿ ಅಧೋಗತಿಗಿಳಿದದ್ದು, ರಾಜಕಾರಣಿಗಳು ಮತ್ತು ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಮಧ್ಯೆ ಏರ್ಪಟ್ಟಿರಬಹುದಾದ ಅಲಿಖಿತ ಒಡಂಬಡಿಕೆಯ ಪರಿಣಾಮ ಸ್ವರೂಪವೇ ಆಗಿರಬಹುದಾದ ಶಂಕೆ ಬರದೇ ಇರಲು ಸಾಧ್ಯವೇ ಇಲ್ಲ.
ಒಂದೊಮ್ಮೆ ಎಲ್ಲರ ಮಕ್ಕಳೂ ಇದೇ ಸರಕಾರಿ ಶಾಲೆಗಳಲ್ಲಿ ಕಲಿತೇ ಮುಂದೆ ಬಂದಿರುವುದನ್ನು ಎಲ್ಲರೂ ಅತ್ಯಂತ ಸಹಜವಾಗಿ ಮರೆತು ಹೋದರು. ಹಿಂದೊಮ್ಮೆ ಗಿಜಗುಡುತ್ತಿದ್ದ ಶಾಲೆಗಳು ನೋಡನೋಡುತ್ತಲೇ ಮಕ್ಕಳ ಗೌಜಿ-ಗದ್ದಲವಿಲ್ಲದೇ ಬಿಕೋ ಎನ್ನತೊಡಗಿದವು. ಈ ಮೌನವನ್ನು ನೋಡಿ ಮತ್ತಷ್ಟು ಪಾಲಕರು ಹಿಂಜರಿದರು. ಶಾಲೆಯಲ್ಲಿ ಕಲಿಸುವ ಗುರುಗಳೇ ಸ್ವತಃ ತಮ್ಮ ಮಕ್ಕಳನ್ನು ಇಂಗ್ಲೀಷ್ ಮಾಧ್ಯಮದ ಖಾಸಗಿ ಶಾಲೆಗಳಿಗೆ ಕಳಿಸತೊಡಗಿದರು. ಒಮ್ಮೆ ಅವರ ಕೈ ಮೇಲಾದೊಡನೆ ಅವರು ಇದ್ದಬಿದ್ದ ನಿಯಮಗಳನ್ನೆಲ್ಲ ಹೇರಿ ಪಾಲಕರನ್ನೂ, ವಿದ್ಯಾರ್ಥಿಗಳನ್ನೂ ಹೈರಾಣು ಮಾಡತೊಡಗಿದರು.
ಮಕ್ಕಳು ಕೇವಲ ಬಾಯಿಪಾಠ ಮಾಡುವ ಗಿಳಿಗಳಾದರೇ ಹೊರತು ತಮ್ಮದೇ ಸ್ವಂತ ಬುದ್ಧಿಯಿಂದ ಯೋಚಿಸಿ ಕೆಲಸ ಮಾಡುವುದು, ಬರೆಯುವುದು, ತಮ್ಮದೇ ಕಲ್ಪನೆಗಳಿಗೆ ಗರಿ ಮೂಡಿಸುವುದು, ಮುಂತಾದ ಸೃಜನಾತ್ಮಕ ಚಟುವಟಿಕೆಗಳನ್ನು ಬಿಟ್ಟುಬಿಟ್ಟರು. ತಂದೆ-ತಾಯಿಗಳಿಗೂ ಮಕ್ಕಳ ಮಾರ್ಕುಗಳೇ ಪ್ರತಿಷ್ಠೆಯ ವಿಷಯವಾದವು.
ಇದೆಲ್ಲದರ ಮಧ್ಯೆ ನಾವು ಕಲ್ಪನೆಯನ್ನೇ ಮಾಡಿರದ, ಎದುರಿಸಲು ಯಾವುದೇ ರೀತಿಯಲ್ಲೂ ಸಿದ್ಧತೆ ಮಾಡಿಕೊಳ್ಳದ ಕೋವಿಡ್ 19 ಎಂಬ ಸೂಕ್ಷ್ಮಾತಿ ಸೂಕ್ಷ್ಮ ವೈರಾಣುವು ನಮ್ಮೆಲ್ಲರ ನಿದ್ದೆಗೆಡಿಸಿಬಿಟ್ಟಿತು. ಭವಿಷ್ಯದ ಬಗ್ಗೆ ಯಾವುದೇ ಭರವಸೆಯ ಮಾತುಗಳನ್ನು ಯಾರೂ ಆಡದಿರುವ ಇಂಥ ಸಮಯದಲ್ಲಿ ಮಕ್ಕಳ ಶಾಲೆ ಶುರುವಾಗಬೇಕಿದ್ದ ಜೂನ್ ಒಂದನೇ ತಾರೀಖು ಸದ್ದಿಲ್ಲದೇ ಬಂದು ಹೋಗಿಬಿಟ್ಟಿದೆ.
ಶುಲ್ಕ ತುಂಬಲು ಹೇಳಿರುವ ಶಾಲೆಗಳು ತುಂಬಿದ ಶುಲ್ಕಕ್ಕೆ ನ್ಯಾಯ ಒದಗಿಸಿ ಪಾಲಕರನ್ನು ಖುಷ್ ಮಾಡುವ ಸಲುವಾಗಿ ಆನ್-ಲೈನ್ ಕ್ಲಾಸುಗಳನ್ನು ಶುರು ಮಾಡಿದ್ದರೆ ಕಂಪ್ಯೂಟರ್, ಮೊಬೈಲ್ ಮುಂದೆ ಕುಳಿತ ಹಸುಳೆಗಳು ತೂಕಡಿಸುತ್ತ ಜೋಲಿ ಹೊಡೆಯುತ್ತಿವೆ. ಕೆಲವರಿಗೆ ಗೃಹ ಗುರುಕುಲವೆಂಬ ಹೊಸ ಕಲ್ಪನೆಯು ತಲೆಯಲ್ಲಿ ಮಿಂಚಿದ ಹಿನ್ನೆಲೆಯಿದು.
ಹಾಗೆ ನೋಡಿದರೆ ಇದು ತುಂಬ ಹೊಸದೇನಲ್ಲ. ಅಮೇರಿಕದಲ್ಲಿ ಎಪ್ಪತ್ತರ ದಶಕದಲ್ಲಿಯೇ ಕೆಲ ಪಾಲಕರಿಗೆ ಶಾಲೆಗಳ ನಿರರ್ಥಕತೆ ಮನದಟ್ಟಾಗಿ ಅವರೆಲ್ಲ ಒಟ್ಟಾಗಿ ಶಾಲೆಯ ನಿರಾಕರಣಕ್ಕೆ (Deschooling) ಮೊದಲಿಟ್ಟುಕೊಂಡರು. ಅದು ಒಂದು ಸಣ್ಣ ಚಳುವಳಿಯ ರೂಪವನ್ನು ಕೂಡ ಪಡೆದುಕೊಂಡಿತ್ತಂತೆ.
ಭಾರತದಲ್ಲೂ ವಿರಳವಾಗಿಯಾದರೂ ಅನೇಕರು ತಮ್ಮ ಮಕ್ಕಳ ಅವಶ್ಯಕತೆಯನ್ನು ಗಮನದಲ್ಲಿಟ್ಟುಕೊಂಡು ಇಂಥ ಪ್ರಯೋಗಗಳಿಗೆ ಕೈಹಾಕಿ ಯಶಸ್ಸು ಕಂಡ ಉದಾಹರಣೆಗಳು ಸಿಗುತ್ತವೆ. ಅಂಥ ಪಾಲಕರು ಹೇಳುವ ಪ್ರಕಾರ, ಮಕ್ಕಳು ಅತ್ಯಂತ ಚುರುಕಾಗಿದ್ದು ಮತ್ತು/ಅಥವಾ ಸೃಜನಶೀಲರಾಗಿದ್ದು ಅವರ ಶಿಕ್ಷಣದ ಅವಶ್ಯಕತೆಗಳನ್ನು ಪೂರೈಸುವದು ಶಿಕ್ಷಕರ ತಾಕತ್ತನ್ನು ಮೀರಿದ ಮಾತಾಗಿದ್ದರೆ ಶಾಲೆಗಿಂತ ಮನೆಯ ಮುಕ್ತ ವಾತಾವರಣವೇ ಅವರಿಗೆ ಹಿತವಾದದ್ದು.
ಮಕ್ಕಳು ಉಳಿದ ಮಕ್ಕಳಿಗಿಂತ ಕಲಿಕೆಯಲ್ಲಿ ಹಿಂದುಳಿಯುವ ಸಮಸ್ಯೆಯಿದ್ದರೆ, ಅಂದರೆ ಅವರಲ್ಲಿನ ದೈಹಿಕ ಅಥವಾ ಮಾನಸಿಕ ದೌರ್ಬಲ್ಯದಿಂದಾಗಿ ಕಲಿಯಲು ಪ್ರಯಾಸ ಪಡುತ್ತಿದ್ದರೆ, ಅಂಥ ಮಕ್ಕಳಿಗೆ ಮನೆಯಲ್ಲಿಯೇ ತಂದೆ-ತಾಯಿ ಕಲಿಸುವುದು ಉತ್ತಮ. ಇಂಥವರು ತಮ್ಮ ಮಕ್ಕಳಿಗೆ ಮನೆ-ಪಾಠಶಾಲೆಯನ್ನು ಪರಿಚಯಿಸಿದ್ದಾರೆ.
ಇನ್ನು ಪದವಿಗಳು, ಮತ್ತವು ನೀಡುವ ಪ್ರಮಾಣ ಪತ್ರಗಳ ಬಗ್ಗೆ ಆಸಕ್ತಿಯೇ ಇಲ್ಲದವರು, ಸ್ವಂತವಾಗಿಯೇ ಏನನ್ನಾದರೂ ಮಾಡಬಯಸುವವರು, ತಮ್ಮ ಮಕ್ಕಳಿಗೆ ಇಂಥ ಸ್ವಂತಿಕೆಯನ್ನು ಬೆಳೆಸುವ ವಾತವರಣವನ್ನು ನೀಡಬಯಸುವವರು ಕೂಡ ಗೃಹ ಗುರುಕುಲಗಳಿಗೆ ಮೊರೆ ಹೋಗಿದ್ದಾರೆ. ಇದೀಗ ಇಂಥ ಚಿಂತನೆ ಇನ್ನೂ ಹೆಚ್ಚಾಗಿದೆ.
ಮಕ್ಕಳನ್ನು ಶಾಲೆಗೆ ಕಳಿಸುವ ರಿಸ್ಕ್ ತೆಗೆದುಕೊಳ್ಳ ಬಯಸದವರು ಇಂಥ ಗೃಹ ಗುರುಕುಲ ಮಾದರಿಯ ಹೊಸ ಹೊಸ ಸಾಧ್ಯತೆಗಳ ಬಗ್ಗೆ ಚಿಂತನೆ ನಡೆಸಿದ್ದಾರೆ. ಪ್ರತಿಷ್ಠಿತ ಎಂದು ಕರೆಸಿಕೊಳ್ಳುವ ಶಾಲೆಗಳಲ್ಲಿ ತಮ್ಮ ಮಕ್ಕಳಿಗೆ ಸಧ್ಯ ಸಿಗುತ್ತಿರುವ ಶಿಕ್ಷಣದ ಕುರಿತು ಅವರಿಗೆ ಖುಷಿಯೂ ಇಲ್ಲ. ಮೇಲಾಗಿ ಶಾಲೆಗಳಲ್ಲಿ ಸಹಜವಾಗಿ ಕಲಿಸಬೇಕಾಗಿರುವ ಜೀವನ ಕೌಶಲಗಳು, ಮೌಲ್ಯಗಳು, ನಾಳಿನ ಕಟುವಾಸ್ತವಗಳನ್ನು ಎದುರಿಸಲು ಬೇಕಾದ ಧೈರ್ಯ ಮುಂತಾದವುಗಳ ನೆನಪೇ ಸಧ್ಯಕ್ಕೆ ಈ ಶಾಲೆಗಳಿಗಾಗಲೀ, ಅಲ್ಲಿ ಕಲಿಸುತ್ತಿರುವ ಶಿಕ್ಷಕರಿಗಾಗಲಿ ಉಳಿದಿಲ್ಲ.
ಇಂಥ ಶಾಲೆಗಳಲ್ಲಿ ಕಲಿತು ಮುಂದೆ ಉದ್ಯೋಗ ಶುರು ಮಾಡುವ ಮಕ್ಕಳು ಸ್ವಾರ್ಥದಿಂದ ಬರಿ ದುಡ್ಡಿನ ಹಿಂದೆ ಬೀಳುವುದವನ್ನು ಬಿಟ್ಟು ದೇಶದ ಬಗ್ಗೆ ಚಿಂತಿಸಬಹುದೆಂಬ ಯಾವ ನಂಬಿಕೆಯೂ ಉಳಿದಿಲ್ಲ. ಹೀಗಾಗಿ ಶಾಲೆಗಳ ಉದ್ದೇಶಗಳ ಬಗ್ಗೆಯೇ ಸಂಶಯವು ವ್ಯಕ್ತವಾಗುತ್ತಿರುವ ಇಂಥ ಸಮಯದಲ್ಲಿ ಪರ್ಯಾಯ ವ್ಯವಸ್ಥೆಯ ಕುರಿತು ಯಾರಾದರೂ ಮಾತನಾಡಿದರೆ ಕನಿಷ್ಠ ಕಿವಿಗೊಡಲಾದರೂ ಒಂದಿಷ್ಟು ಜನ ಕುತೂಹಲ ತೋರಬಹುದೆಂಬ ವಿಶ್ವಾಸ ನನಗಿದೆ.
ಇನ್ನೊಂದು ಕಲ್ಪನೆ ಬಯಲು ಶಾಲೆಯದ್ದು. ಒಂದೇ ಅಪಾರ್ಟಮೆಂಟಿನಲ್ಲಿರುವ, ಅಥವಾ ಒಂದು ಏರಿಯಾದಲ್ಲಿರುವ ಮಕ್ಕಳನ್ನು ಒಂದು ಕಡೆ ಸೇರಿಸಿ ಅವರಿಗೆ ಕ್ಲಾಸರೂಮಿನ ನಾಲ್ಕು ಗೋಡೆಗಳಿಂದ ಮುಕ್ತವಾದ ಬಯಲು ಶಿಕ್ಷಣವನ್ನು ಕೊಡುವ ಯೋಚನೆಯು ಕೂಡ ಇಂದಿನದೇನಲ್ಲ. ಬಹಳ ಹಿಂದೆಯೇ ಶ್ರೀ. ರಬೀಂದ್ರನಾಥ ಟ್ಯಾಗೋರರು ಕೊಲ್ಕೊತ್ತಾದಲ್ಲಿ ಶಾಂತಿನಿಕೇತನವನ್ನೂ, ಪಾಂಡೀಚೇರಿಯ ಶ್ರೀ ಅರವಿಂದೋ ಆಶ್ರಮದಲ್ಲಿ ಮದರ್ ಅವರು ಆಂತರಾಷ್ಟ್ರೀಯ ಶಾಲೆಯನ್ನೂ, ತೆರೆದು ಬಯಲು ಶಾಲೆಯ ಅಥವಾ ನಮ್ಮ ಹಿಂದಿನ ಗುರುಕುಲಗಳ ಪರಿಕಲ್ಪನೆಯನ್ನು ಇಂದಿನ ಸಮಾಜದಲ್ಲಿ ಸಾಕಾರಗೊಳಿಸಿದ್ದಾರೆ.
ಅಲ್ಲಿನ ವಿದ್ಯಾರ್ಥಿಗಳು ತಮ್ಮಿಷ್ಟದ ವಿಷಯಗಳನ್ನು ಕಲಿತು ಜೀವನದಲ್ಲಿ ಯಶಸ್ಸನ್ನು ಸಾಧಿಸಿದ್ದಾರೆ. ಇವತ್ತಿಗೂ ಇಂಥ ಅನೇಕ ಶಾಲೆಗಳು ನಮ್ಮ ದೇಶದಲ್ಲಿವೆ. ಇದೀಗ ಸಂಪೂರ್ಣವಾಗಿ ಅಲ್ಲದಿದ್ದರೂ ಅದೇ ಚಿಂತನೆಯನ್ನಿಟ್ಟುಕೊಂಡು ಬಯಲು ಶಾಲೆಗಳನ್ನು (Open School) ತೆರೆಯುವ ಯೋಚನೆಯನ್ನೂ ಪಾಲಕರು ಮಾಡುತ್ತಿದ್ದಾರೆ.
ಸಧ್ಯ ನಮ್ಮ ಶಾಲೆಗಳಲ್ಲಿರುವ ಪಠ್ಯಕ್ರಮ, ಬೋಧನಾ ಪದ್ಧತಿಗಳಲ್ಲಿರುವ ನ್ಯೂನ್ಯತೆಗಳೇ ಇಂಥ ಅನಿವಾರ್ಯತೆಯನ್ನು ಮುನ್ನೆಲೆಗೆ ತರುತ್ತಿವೆ. ಕಾಲೇಜಿನಲ್ಲಿ ಕಲಿಯಬೇಕಾದ ಅರ್ಥಶಾಸ್ತ್ರ, ಸಂಖ್ಯಾಶಾಸ್ತ್ರ ಮುಂತಾದವುಗಳನ್ನು ಒಂಬತ್ತು ಹತ್ತನೇ ಕ್ಲಾಸಿಗೆ ಒಮ್ಮಿಲೇ ತಂದು ಹಾಕಿರುವ ಸರಕಾರಗಳು ಶಾಲೆಯಲ್ಲಿಯೇ ಮಕ್ಕಳು ಇವನ್ನೆಲ್ಲ ಕಲಿಯುವಷ್ಟು ಪ್ರಬುದ್ಧರಾಗಿರುತ್ತಾರೆ ಎಂದು ಯೋಚಿಸಿದ ಮೇಲೆ, ಕಾಲೇಜುಗಳಲ್ಲಿರುವಂತೆ ಇಲ್ಲಿಯೂ ವಿದ್ಯಾರ್ಥಿಗಳು ತಮಗೆ ಬೇಕಾದ ವಿಷಯಗಳನ್ನಷ್ಟೇ ಆರಿಸಿಕೊಂಡು ಕಲಿಯುವಂಥ ವ್ಯವಸ್ಥೆಯನ್ನೇಕೆ ಮಾಡಬಾರದು? ಎಂಟನೇ ತರಗತಿಯಿಂದ ಮುಂದೆ ವಿದ್ಯಾರ್ಥಿಗಳು ತಮಗೆ ಅಭಿರುಚಿಯಿರುವ ವಿಷಯಗಳನ್ನಷ್ಟೇ ಕಲಿಯುವಂತೆ ಮಾಡಿದರೆ ಅನೇಕ ಸಮಸ್ಯೆಗಳು ಕಡಿಮೆಯಾಗುತ್ತವೆ.
ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗಿ ಖಿನ್ನತೆಗೆ ಒಳಗಾಗುವುದು, ಸಾವಿಗೆ ಶರಣಾಗುವುದಾದದರೂ ತಪ್ಪುತ್ತದೆ. ಮತ್ತೆ ತಮಗೆ ಬೇಕಾದ ವಿಷಯಗಳನ್ನೇ ಮುಂದೆ ಕಾಲೇಜಿನಲ್ಲೂ ಕಲಿಯುವಂತಾಗುತ್ತದೆ. ಆದರೆ ಸಧ್ಯ ಇವೆಲ್ಲ ಅನುಕೂಲತೆಗಳು ಇಲ್ಲದ್ದರಿಂದ ಅನೇಕ ಮಕ್ಕಳು ಕಬ್ಬಿಣದ ಕಡಲೆಯಂತಿರುವ ಗಣಿತವನ್ನು ತಿಳಿದುಕೊಳ್ಳಲಾರದೇ ಅದರ ಬದ್ಧ ದ್ವೇಷಿಯಾಗಿ ಮಾರ್ಪಡುತ್ತಾರೆ. ಇತಿಹಾಸ, ಭುಗೋಳದ ಬಗ್ಗೆ ಆಸಕ್ತಿಯಿಲ್ಲದ ಮಕ್ಕಳು ಯಾವಾಗ ಈ ಇತಿಹಾಸದ ಭೂತ ನಮ್ಮನ್ನು ಬಿಟ್ಟುಹೋಗುವುದೋ ಎಂದು ಕಾಯುತ್ತಿರುತ್ತಾರೆ.
ಬಯಲು ಶಾಲೆಗಳು ಅಂಥ ಮಕ್ಕಳಿಗೆ ಅವರ ಆಸಕ್ತಿ ಮತ್ತು ಅಭಿರುಚಿಗೆ ತಕ್ಕಂಥ ವಿಷಯಗಳನ್ನು ಕಲಿಸುವುದರ ಮೂಲಕ ಒಳ್ಳೆಯ ಫಲಿತಾಂಶಗಳನ್ನು ನೀಡಬಹುದು. ಇಂಥ ಗುರುಕುಲ ಮತ್ತು ಬಯಲು ಶಾಲೆಗಳಲ್ಲಿ ಕಲಿತ ಮಕ್ಕಳು ಹತ್ತನೇ ತರಗತಿಯ ಪರೀಕ್ಷೆಯನ್ನು ಬರೆಯಬೇಕೆಂದರೆ ಸರಕಾರವು ಅದಕ್ಕೂ ಅನುಕೂಲ ಒದಗಿಸಿದೆ. ಇಂಥ ಹುಡುಗರು NIOS (National Institute for Open Schooling) ಅಥವಾ IGCSE (International General Certificate of Secondary Education) ಮೂಲಕ ಪರೀಕ್ಷೆ ಬರೆದು ಮುಂದೆ ಬೇಕಿದ್ದರೆ ಸಾಂಪ್ರದಾಯಿಕ ಪದವಿ ಕೋರ್ಸ್ ಗಳಿಗೆ ಪ್ರವೇಶ ಪಡೆಯಬಹುದಾಗಿದೆ.
ಗುರುಕುಲಗಳಂತೂ ನಮ್ಮ ದೇಶದ ನಾನಾ ಭಾಗಗಳಲ್ಲಿ ಇದ್ದೇ ಇವೆ. ಸುಮಾರು ಸಾವಿರದಿನ್ನೂರಕ್ಕೂ ಹೆಚ್ಚು ಗುರುಕುಲಗಳು ನಮ್ಮ ದೇಶದ ನಾನಾ ಭಾಗಗಳಲ್ಲಿ ಒಳ್ಳೆಯ ಶಿಕ್ಷಣವನ್ನು ನೀಡುತ್ತಿವೆ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯ ಜೊತೆಜೊತೆಗೆ ಅವರಿಗೆ ಆಸಕ್ತಿ ಇರುವ ಅನೇಕ ವಿಷಯಗಳನ್ನು ಕಲಿಸುತ್ತಿರುವ ಗುರುಕುಲಗಳು ತಮ್ಮ ವಿದ್ಯಾರ್ಥಿಗಳು ಮುಂದೆ ಜೀವನದಲ್ಲಿ ಯಶಸ್ಸು ಸಾಧಿಸಲು ಪಡೆಯಬೇಕಾದ ವೃತ್ತಿ ಕೌಶಲಗಳನ್ನೂ ಕಲಿಸುತ್ತವೆ.
ಜೊತೆಗೆ ಸ್ವಯಂರಕ್ಷಣೆ, ಭಾರತೀಯ ಮೌಲ್ಯಗಳು, ಪರಂಪರೆ, ಜ್ಞಾನ, ಸಂಸ್ಕೃತ ಇವೆಲ್ಲವುಗಳನ್ನೂ ಒಳಗೊಂಡ ಒಂದು ಪರಿಪೂರ್ಣ ಪಠ್ಯಕ್ರಮವನ್ನು ಹೊಂದಿರುವ ಈ ಗುರುಕುಲಗಳು ಕೇವಲ ದುಡ್ಡು ಗಳಿಸುವ ಯಂತ್ರಗಳನ್ನು ತಯಾರಿಸುವುದಿಲ್ಲ, ಬದಲಾಗಿ ಪರಿಪೂರ್ಣ ವ್ಯಕ್ತಿಗಳನ್ನು ಮತ್ತು ಅದರ ಮುಖಾಂತರ ರಾಷ್ಟ್ರ ನಿರ್ಮಾಣಕ್ಕೆ ಬೇಕಾಗುವ ಕುಶಲಮತಿಗಳನ್ನೂ ತಯಾರು ಮಾಡುತ್ತಿವೆ.
ಮಕ್ಕಳು ಇಲ್ಲಿ ತಮ್ಮ ಆಸಕ್ತಿಯ ಕಲೆ, ಕ್ರೀಡೆ ಮುಂತಾದವುಗಳಲ್ಲಿ ಪರಣಿತಿ ಸಾಧಿಸಿ ಜೀವನದಲ್ಲಿ ಮುಂದೆ ಬರಬಹುದಾಗಿದೆ. ಇಲ್ಲಿ ನಾವು ನಮ್ಮದೇ ದೇಶದ ಅನೇಕ ಸಂಗೀತ, ನಾಟ್ಯ, ಚಿತ್ರಕಲೆಗಳ ದಿಗ್ಗಜರನ್ನು ನೆನಪಿಸಿಕೊಳ್ಳಬಹುದು. ಇವರ್ಯಾರೂ ಮಖ್ಯವಾಹಿನಿಯಲ್ಲಿ ಸಾಂಪ್ರದಾಯಿಕ ಶಿಕ್ಷಣವನ್ನು ಕಲಿತವರಲ್ಲ.
ಗುರುಗಳ ಮನೆಗಳಲ್ಲಿ ಇದ್ದು ಅವರ ಸೇವೆ ಮಾಡಿಕೊಂಡು, ಅವರು ಕಲಿಸಿದಾಗ ಕಲಿತು ಅವರು ವೇದಿಕೆಯ ಮೇಲೆ ಬಾ ಎಂದಾಗಲೇ ಬಂದು ಜನರೆದುರು ನಿಂತವರು. ನಮ್ಮದೇ ನೆಲದ ಹೆಮ್ಮೆ ಪಂಡಿತ ಭೀಮಸೇನ ಜೋಶಿ ಅವರಾಗಲಿ, ಗಾನಕೋಗೆಲೆ ಗಂಗೂಬಾಯಿ ಹಾನಗಲ್ ಆಗಲಿ ಯಾವುದೇ ವಿಶ್ವವಿದ್ಯಾಲಯದ ಪದವಿಧರರಲ್ಲ. ಆದರೆ ತಾವೇ ಒಂದು ವಿಶ್ವವಿದ್ಯಾಲಯವಾಗಿ ಬೆಳೆದವರು. ಅಂಥ ಅಪ್ರತಿಮ ಪ್ರತಿಭೆಗಳು ಅರಳುವುದು ಬಯಲಿನ ಮುಕ್ತ ವಾತಾವರಣದಲ್ಲಿಯೇ ಅಲ್ಲವೇ?
ಈ ಎಲ್ಲ ಹಿನ್ನೆಲೆಯಲ್ಲಿ ಹೊಸ ಚಿಂತನೆಗಳ ಮಂಥನವಾಗಿ ಹಳೆಯದೆಂದು ಬಿಟ್ಟುಬಿಟ್ಟ, ಬಿಸುಟ ನಮ್ಮದೇ ಶ್ರೇಷ್ಠ ಪದ್ಧತಿಗಳು ಹೊಸ ರೂಪದಲ್ಲಿ ಬರುವವೆಂದಾದರೆ ಮುಕ್ತಬಾಹುಗಳಿಂದ ಸ್ವಾಗತಿಸೋಣ. ಹೊಸತಾದರೂ ನಮ್ಮ ಜಡತ್ವವನ್ನು ನೀಗಿಸಿ ನವ ಚೈತನ್ಯವನ್ನು ಕೊಡಬಹುದೇನೋ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Maharstra: ಫಲಿತಾಂಶಕ್ಕೂ ಮೊದಲೇ ರಾರಾಜಿಸುತ್ತಿದೆ ಅಜಿತ್ ಪವಾರ್ ಗೆಲುವಿನ ಬ್ಯಾನರ್
Aaram Aravinda Swamy Movie Review: ಪಕ್ಕದ್ಮನೆ ಹುಡುಗನ ಫನ್‌ರೈಡ್
Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
Karkala: ಶಾಲಾ ವಾಹನಕ್ಕೆ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.