ನೊಳಂಬರ ಕಾಲದ 3 ವೀರಗಲ್ಲು ಪತ್ತೆ
Team Udayavani, Aug 3, 2020, 9:44 AM IST
ದೇವನಹಳ್ಳಿ: ಶಾಸನಗಳ ಕ್ಷೇತ್ರ ಅನ್ವೇಷನಾ ಕಾರ್ಯದಲ್ಲಿ ತೊಡಗಿದ್ದ ಸಂದರ್ಭದಲ್ಲಿ ಉಗನವಾಡಿ ಗ್ರಾಮದಲ್ಲಿ ನೊಳಂಬರ ಕಾಲದ ವೀರಗಲ್ಲು, ಶಾಸನಗಳು ಪತ್ತೆಯಾಗಿದೆ ಎಂದು ಸಾಹಿತಿ ಹಾಗೂ ಪುರಾತತ್ವ ವಸ್ತುಗಳ ಅನ್ವೇಷಕ ಬಿಟ್ಟಸಂದ್ರ ಗುರುಸಿದ್ಧಯ್ಯ ತಿಳಿಸಿದರು.
ವೀರಗಲ್ಲುಗಳು 6 ಅಡಿ ಉದ್ದ- 3.5ಅಡಿ ಅಗಲ, 5 ಅಡಿ ಉದ್ದ- 2 ಅಡಿ ಅಗಲ, 5 ಅಡಿ ಉದ್ದ- 2 ಅಡಿ ಅಗಲವುಳ್ಳ ಗ್ರಾನೈಟ್ ಶಿಲೆಯದ್ದಾಗಿವೆ. ತಾಲೂಕಿನ ಉಗನವಾಡಿ ಗ್ರಾಮದ ಕೆರೆ ಏರಿ ಮೇಲೆ ಸೂಕ್ಷ್ಮವಾಗಿ ಪರಿಶೀಲಿಸಿದಾಗ ಹಳೇ ಲಿಪಿ ಕಂಡುಬಂದಿದ್ದು, ಇವುಗಳ ಹೆಚ್ಚಿನ ಮಾಹಿತಿ ತಿಳಿಯಲು ಮೈಸೂರಿನ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅಧಿಕಾರಿಗಳಿಗೆ ಶಾಸನದ ಸಮಗ್ರ ವಿವರ ಕಳುಹಿಸಿಕೊಡಲಾಗಿದೆ. ಕಳೆದ 3 ವರ್ಷಗಳಿಂದ 50ಕ್ಕೂ ಹೆಚ್ಚು ಕನ್ನಡ ಮತ್ತು ತಮಿಳು ಸಂಸ್ಕೃತ ಭಾಷೆಯ ಅಪ್ರಕಟಿತ ಶಾಸನಗಳನ್ನು ಪತ್ತೆಹಚ್ಚಲಾಗಿದೆ. ಅನೇಕ ಕಡೆ ಶಾಸನ, ಮಾಸ್ತಿಗಲ್ಲು, ವೀರಗಲ್ಲು ಸಂರಕ್ಷಣೆ ಇಲ್ಲದೆ ಅನಾಥವಾಗಿ ಬಿದ್ದಿವೆ. ದಿನ ಕಳೆದಂತೆ, ಮಣ್ಣಿನಲ್ಲಿ ಹೂತು ಹೋಗುತ್ತಿವೆ. ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಅಧಿಕಾರಿಗಳು ಅಮೂಲ್ಯವಾದ ಶಾಸನ ರಕ್ಷಿಸಿ, ತಾಲೂಕಿನ ಚಪ್ಪರಕಲ್ಲು ಸರ್ಕಲ್‌ನ ಜಿಲ್ಲಾಡಳಿತ ಕೇಂದ್ರದಲ್ಲಿ ವಸ್ತು ಸಂಗ್ರಹಾಲಯ ಸ್ಥಾಪಿಸಬೇಕು ಎಂದರು.
ಮೈಸೂರು ಶಾಸನ ತಜ್ಞ ಡಾ.ಎಸ್.ನಾಗರಾಜಪ್ಪ, 3 ವೀರಗಲ್ಲುಗಳ ಪೈಕಿ ಒಂದು ನೊಳಂಬ ಅರಸ ಮಹೇಂದ್ರನ ಆಳ್ವಿಕೆಯ ಕಾಲಘಟ್ಟ ತೋರಿಸುತ್ತಿದ್ದು, ಜತೆಗೆ ಸಣ್ಣೆ ನಾಡಿನ ಉಲ್ಲೇಖ ಕಾಣಬಹುದು. ಹೋರಾಟವೊಂದರಲ್ಲಿ ವೀರ ಸ್ವರ್ಗವಾಸಿಯಾಗಿದ್ದನ್ನು ತಿಳಿಸುತ್ತದೆ. ವ್ಯಕ್ತಿಯ ದೇಹಕ್ಕೆ ಸುಮಾರು 8 ಬಾಣ ದೇಹ ಹೊಕ್ಕಿರುವಂತೆ ಚಿತ್ರಿಸಲಾಗಿದೆ. ರಾಜಮನೆತನಕ್ಕೆ ಸೇರಿದ ಸೇವಕನೊಬ್ಬ ಕತ್ತಿ ಹಿಡಿದಿರುವುದು ರಾಜತ್ವದ ಸಂಕೇತ ತೋರಿಸುತ್ತದೆ ಎಂದು ಪಾಠ ವಿವರಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.