ವಾತಾವರಣ ಏರುಪೇರು; ಹೆಚ್ಚುತ್ತಿದೆ ವೈರಲ್ ಜ್ವರ ; ಆತಂಕ ಬೇಡ: ನಿರ್ಲಕ್ಷ್ಯ ಸಲ್ಲದು
ಹವಾಮಾನ ಬದಲಾವಣೆ; ವೈರಲ್ ಜ್ವರ ಸಹಿತ ಆರೋಗ್ಯದಲ್ಲಿ ವ್ಯತ್ಯಾಸ ; ಮುಂಜಾಗ್ರತೆ ವಹಿಸುವುದು ಅಗತ್ಯ
Team Udayavani, Aug 7, 2020, 12:57 PM IST
ಮಹಾನಗರ: ಬಿಸಿಲು ಮಳೆಯ ವಾತಾವರಣದಿಂದಾಗಿ ಮಂಗಳೂರಿನಲ್ಲಿ ಕಳೆದೊಂದು ವಾರದಿಂದ ವೈರಲ್ ಜ್ವರವೂ ಹೆಚ್ಚುತ್ತಿದ್ದು, ಕೊರೊನಾ ಆತಂಕದ ನಡುವೆ ಜನರನ್ನು ಮತ್ತಷ್ಟು ಹೈರಾಣಾಗಿಸಿದೆ. ಖಾಸಗಿ ಕ್ಲಿನಿಕ್, ಫೀವರ್ ಕ್ಲಿನಿಕ್‌ಗಳಲ್ಲಿ ವೈರಲ್ ಜ್ವರ ತಪಾಸಣೆಗೆ ಬರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಏಕಾಏಕಿ ಸುರಿಯುವ ಮಳೆ, ಒಮ್ಮೆಲೆ ಬಿಸಿಲು, ತಂಪು… ವಾತಾವರಣದಲ್ಲಿನ ಈ ರೀತಿಯ ಬದಲಾವಣೆ ಯಿಂದಾಗಿ ವೈರಲ್ ಜ್ವರ, ಶೀತ, ತಲೆನೋವು ಹೆಚ್ಚುತ್ತಿದೆ. ಇದು ಮಳೆಗಾಲದಲ್ಲಿ ಸಾಮಾನ್ಯ. ಪ್ರಸ್ತುತ ನಗರದಲ್ಲಿ ಕೋವಿಡ್ ಆತಂಕವೂ ಇರುವುದರಿಂದ ಜನ ವೈರಲ್ ಜ್ವರಕ್ಕೂ ಹೆದರು ವಂತಾಗಿದೆ. ಆದರೆ ಆತಂಕ ಪಡುವ ಅಗತ್ಯವಿಲ್ಲ. ಸಾಮಾನ್ಯ ಕ್ಲಿನಿಕ್‌ಗಳಲ್ಲಿಯೂ ಜ್ವರ ತಪಾಸಣೆ ಮಾಡಿಸಿ ಕೊಳ್ಳಬಹುದು. ನಿರ್ಲಕ್ಷ್ಯ ಸಲ್ಲದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಮೆಡಿಕಲ್‌ಗಳಲ್ಲಿ ಸಿಗುತ್ತಿಲ್ಲ ಔಷಧ
ಸದ್ಯ ಕೊರೊನಾ ಭೀತಿ ಇರುವುದರಿಂದ ಮೆಡಿಕಲ್ ಶಾಪ್‌ಗ್ಳಲ್ಲಿ ಜ್ವರ, ತಲೆನೋವು, ಶೀತಕ್ಕೆ ಯಾವುದೇ ಔಷಧ, ಮಾತ್ರೆಗಳು ಸಿಗುವುದಿಲ್ಲ. ವೈದ್ಯರ ಚೀಟಿ ಇದ್ದಲ್ಲಿ ಮಾತ್ರ ಈ ಔಷಧಗಳನ್ನು ನೀಡಲಾಗುತ್ತದೆ. ಹೀಗಾಗಿ ಜನರಲ್ಲಿ ಹೆಚ್ಚಿನ ಗೊಂದಲ ಉಂಟಾಗಿದೆ. ಆದರೆ ವೈದ್ಯರ ಅನುಮತಿ ಇಲ್ಲದೆ, ಮೆಡಿಕಲ್ ಶಾಪ್‌ಗ್ಳಿಂದ ಔಷಧ ಪಡೆದುಕೊಳ್ಳುವುದು ಸಲ್ಲ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.
ಬಿಸಿ ನೀರು ಕುಡಿಯಿರಿ
ಸಾರ್ವಜನಿಕರು ಕುದಿಸಿ ಆರಿಸಿದ ಉಗುರು ಬೆಚ್ಚಗಿನ ನೀರನ್ನೇ ಕುಡಿಯಬೇಕು. ಜ್ವರ ಬಾಧಿಸಿದ ಯಾರೂ ಕೂಡ ತಣ್ಣೀರನ್ನು ಕುಡಿಯಲೇಬಾರದು. ಸ್ನಾನಕ್ಕೂ ಬಿಸಿನೀರನ್ನು ಉಪಯೋಗಿಸಬೇಕು. ತಲೆ ಮೇಲೆ ನೀರು ಹಾಕಿಕೊಂಡಾಗ ಶೀತ ಅಧಿಕವಾಗಿ ಜ್ವರ, ತಲೆನೋವು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಜ್ವರ ಕಡಿಮೆಯಾಗುವವರೆಗೆ ತಲೆ ಸ್ನಾನ ಮಾಡದಿರುವುದೇ ಉತ್ತಮ. ನಿತ್ರಾಣ ಇಲ್ಲದಂತಾಗಲು ಸರಿಯಾದ ರೀತಿಯಲ್ಲಿ ಆಹಾರ ತೆಗೆದುಕೊಳ್ಳಬೇಕು. ತಂಪು ಪಾನೀಯ ಸೇವಿಸದಿರುವುದೇ ಉತ್ತಮ.
ಮೈಕೈ ನೋವು: ಹೆದರದಿರಿ
ವೈರಲ್ ಜ್ವರಕ್ಕೆ ಒಳಗಾದ ಮಂದಿಗೆ ಚಳಿ ಜ್ವರದೊಂದಿಗೆ ಮೈಕೈ ನೋವು ಸಾಮಾನ್ಯವಾಗಿ ಇರುತ್ತದೆ. ಆದರೆ ಇದನ್ನು ಕೊರೊನಾ, ಡೆಂಗ್ಯೂ, ಮಲೇರಿಯಾದಂತಹ ಸಾಂಕ್ರಾಮಿಕ ಕಾಯಿಲೆಗಳೆಂದು ತಿಳಿದು ಭಯ ಬೀಳುವ ಅಗತ್ಯವಿಲ್ಲ. ಆದಷ್ಟು ವಿಶ್ರಾಂತಿ, ನಿದ್ದೆಗೆ ಗಮನ ಕೊಡಿ.
ಇರಲಿ ಮುನ್ನೆಚ್ಚರಿಕೆ
ಸಾಮಾನ್ಯ ಜ್ವರವು ವೈರಲ್ ಫೀವರ್ ಆಗಿರು ವುದರಿಂದ ಒಬ್ಬರಿಂದ ಇನ್ನೊಬ್ಬರಿಗೆ ಸುಲಭವಾಗಿ ಹರಡುತ್ತದೆ. ಜ್ವರ ಮತ್ತು ಶೀತ ಬಾಧಿತ ವ್ಯಕ್ತಿಗಳನ್ನು ಮುಟ್ಟಬಾರದು, ಕೈ ಕುಲುಕಬಾರದು. ರೋಗಿ ಬಳಸಿದ ಕರವಸ್ತ್ರವನ್ನು ಬಳಕೆ ಮಾಡಬಾರದು. ಅವರು ಮುಟ್ಟಿದ ವಸ್ತುಗಳನ್ನು ಮತ್ತೂಬ್ಬ ಮುಟ್ಟಿದ್ದಲ್ಲಿ ಸಾಬೂನಿನಿಂದ ಕೈ ತೊಳೆದುಕೊಳ್ಳಬೇಕು. ಕೆಮ್ಮುವಾಗ, ಸೀನುವಾಗ ಆದಷ್ಟು ಕರವಸ್ತ್ರವನ್ನು ಮುಚ್ಚಿಕೊಳ್ಳಬೇಕು.
ಮಂಗಳೂರು ತಾಲೂಕಿನ ಫೀವರ್ ಕ್ಲಿನಿಕ್‌ಗಳು
ಪ್ರಾಥಮಿಕ ಆರೋಗ್ಯ ಕೇಂದ್ರಗಳು: ಅತ್ತೂರು ಕೆಮ್ರಾಲ್, ಬೋಂದೆಲ್, ಬಜಪೆ, ನಾಟೆಕಲ್, ಪಾಲಡ್ಕ, ಉಳ್ಳಾಲ, ಬೆಳುವಾಯಿ, ಕಟೀಲು, ಕಲ್ಲಮುಂಡ್ಕೂರು, ಕುಡುಪು; ಸ.ಆ.ಕೇಂದ್ರ: ಮೂಲ್ಕಿ, ಮೂಡುಬಿದಿರೆ; ನ. ಪ್ರಾ. ಆ.ಕೇಂದ್ರ: ಜೆಪ್ಪು, ಕಸಬಾ ಬೆಂಗ್ರೆ, ಎಕ್ಕೂರು, ಕುಳಾಯಿ, ಸುರತ್ಕಲ್.
50ಕ್ಕೂ ಹೆಚ್ಚು ಫೀವರ್ ಕ್ಲಿನಿಕ್
ಖಾಸಗಿ ಕ್ಲಿನಿಕ್‌ಗಳಲ್ಲಿ ಜ್ವರ, ತಲೆನೋವು, ಶೀತದಂತಹ ವೈರಲ್ ಕಾಯಿಲೆಗಳಿಗೆ ಔಷಧ ನೀಡಲಾಗುತ್ತಿದೆ. ಬಳಿಕ ಆ ಕ್ಲಿನಿಕ್‌ನವರು ರೋಗಿಯ ವಿವರಗಳನ್ನು ಆರೋಗ್ಯ ಇಲಾಖೆಗೆ ಸಲ್ಲಿಸುತ್ತಾರೆ. ಔಷಧ, ಚಿಕಿತ್ಸೆ ನೀಡದ ಕೇಂದ್ರಗಳಿದ್ದರೆ ಜನ ಅಂತಹವರ ಬಗ್ಗೆ ಮಾಹಿತಿ ನೀಡಬಹುದು. ಮೆಡಿಕಲ್‌ಗಳಲ್ಲಿ ವೈದ್ಯರ ಸಲಹಾ ಚೀಟಿ ಇಲ್ಲದೆ ಯಾರೂ ಔಷಧ ಪಡೆದುಕೊಳ್ಳುವಂತಿಲ್ಲ. ಜಿಲ್ಲೆಯಲ್ಲಿ ಈಗಾಗಲೇ 50ಕ್ಕೂ ಹೆಚ್ಚು ಕಡೆಗಳಲ್ಲಿ ಫೀವರ್ ಕ್ಲಿನಿಕ್‌ಗಳು ಇರುವುದರಿಂದ ಜನರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ.
– ಡಾ| ರಾಜೇಂದ್ರ ಕೆ. ವಿ., ದ.ಕ. ಜಿಲ್ಲಾಧಿಕಾರಿ
ಚಿಕಿತ್ಸೆ ಪಡೆಯಿರಿ
ವಾತಾವರಣದಲ್ಲಾಗುವ ಬದಲಾವಣೆಯಿಂದಾಗಿ ವೈರಲ್ ಜ್ವರ ಸಾಮಾನ್ಯ. ಜನ ನಿರ್ಲಕ್ಷ್ಯ ವಹಿಸದೆ ಈ ಜ್ವರಕ್ಕೆ ಔಷಧ ಪಡೆದುಕೊಳ್ಳಬೇಕು. ಎಲ್ಲ ಕ್ಲಿನಿಕ್‌ಗಳಲ್ಲಿಯೂ ಚಿಕಿತ್ಸೆ ಪಡೆದುಕೊಳ್ಳಬಹುದು. ಕ್ಲಿನಿಕ್‌ಗಳಿಗೆ ಹೋದರೆ ಔಷಧ ನೀಡದೆ ವೈದ್ಯರು ಕಳುಹಿಸಬಾರದು. ಫೀವರ್ ಕ್ಲಿನಿಕ್‌ಗಳಲ್ಲಿಯೂ ತಪಾಸಣೆ ಮಾಡಿಸಿಕೊಳ್ಳಬಹುದು.
– ಡಾ| ರಾಮಚಂದ್ರ ಬಾಯರಿ, ಜಿಲ್ಲಾ ಆರೋಗ್ಯಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.