ಖಜಾನೆ ಭರ್ತಿಗೆ ಮದ್ಯದಂಗಡಿ ತೆರೆಯಲು ತೀರ್ಮಾನ! ; ಆನ್‌ಲೈನ್ ಮದ್ಯ ಮಾರಾಟಕ್ಕೂ ಸಿದ್ಧತೆ
Team Udayavani, Aug 8, 2020, 7:05 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಬೆಂಗಳೂರು: ಲಾಕ್‌ಡೌನ್‌ನಿಂದ ಉಂಟಾಗಿದ್ದ ಆರ್ಥಿಕ ಸಂಕಷ್ಟದಿಂದ ಹೊರ ಬರಲು ಸರಕಾರವು ಹಳ್ಳಿಗಳಲ್ಲಿ ಹೊಸದಾಗಿ ಎಂಎಸ್‌ಐಎಲ್ ಮದ್ಯದಂಗಡಿಗಳನ್ನು ತೆರೆಯಲು ತೀರ್ಮಾನಿಸಿದೆ.
ರಾಜ್ಯ ಸರಕಾರ ಎಂಎಸ್‌ಐಎಲ್ ಮೂಲಕ ಮದ್ಯ ಮಾರಾಟ ಮಾಡಲು 2011ರಲ್ಲಿ 463 ಹಾಗೂ 2016ರಲ್ಲಿ 900 ಸಹಿತ ಒಟ್ಟು 1,363 ಮದ್ಯದಂಗಡಿಗಳನ್ನು ತೆರೆಯಲು ನಿರ್ಧರಿಸಿತ್ತು.
ಮಾರ್ಚ್ 31ಕ್ಕೂ ಮೊದಲು 759 ಎಂಎಸ್‌ಐಎಲ್ ಮದ್ಯದಂಗಡಿಗಳನ್ನು ಸರಕಾರ ತೆರೆದಿತ್ತು.
ಇನ್ನು ಡಿಸೆಂಬರ್ ಅಂತ್ಯಕ್ಕೆ 513 ಎಂಎಸ್‌ಐಎಲ್ ಮದ್ಯದಂಗಡಿಗಳನ್ನು ಗ್ರಾಮೀಣ ಪ್ರದೇಶದಲ್ಲಿ ತೆರೆಯುವಂತೆ ಎಂಎಸ್‌ಐಎಲ್‌ಗೆ ಸೂಚನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕೋವಿಡ್ 19 ನಷ್ಟ ಭರ್ತಿಗೆ ತೀರ್ಮಾನ
ಹಾಲಿ ಆರ್ಥಿಕ ವರ್ಷ ಆರಂಭವಾಗುತ್ತಿದ್ದಂತೆ ದೇಶಾದ್ಯಂತ ಲಾಕ್‌ಡೌನ್ ಘೋಷಣೆಯಾಗಿದ್ದರಿಂದ ರಾಜ್ಯ ಸರಕಾರದ ಆದಾಯಕ್ಕೆ ಹೊಡೆತ ಬಿದ್ದಿದೆ.
ಲಾಕ್‌ಡೌನ್‌ನಿಂದ ವ್ಯಾಪಾರ ವಹಿವಾಟಿಗೆ ಹೊಡೆತ ಬಿದ್ದಿರುವುದರಿಂದ ಸರಕಾರದ ಸಂಪನ್ಮೂಲ ಸಂಗ್ರಹಕ್ಕೆ ಈ ಮಾರ್ಗ ಅನುಸರಿಸುತ್ತಿದ್ದು, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಬೇಡಿಕೆ ಹೆಚ್ಚಿರುವ ಕಡೆಗಳಲ್ಲಿ ತೆರೆಯಲು ನಿರ್ಧರಿಸಲಾಗಿದೆ.
ಶಾಸಕರ ಅಭಿಪ್ರಾಯ ಅಗತ್ಯವಿಲ್ಲ
ಈ ಹಿಂದೆ ಎಂಎಸ್‌ಐಎಲ್‌ನಿಂದ ಸಿಎಲ್ 2 ಶಾಪ್‌ಗ್ಳನ್ನು ತೆರೆಯಲು ಸ್ಥಳೀಯ ಶಾಸಕರು ಹಾಗೂ ಜನ ಪ್ರತಿನಿಧಿಗಳ ಅಭಿಪ್ರಾಯ ಪಡೆಯುವುದುಕಡ್ಡಾಯವಾಗಿತ್ತು. ಸ್ಥಳೀಯರ ವಿರೋಧದ ಹಿನ್ನೆಲೆಯಲ್ಲಿ ಕೆಲವು ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಮದ್ಯದಂಗಡಿ ತೆರೆಯಲು ನಿರಾಕರಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ 2020ರ ಮಾರ್ಚ್‌ನಲ್ಲಿ ನಡೆದ ಅಬಕಾರಿ ಇಲಾಖೆ ಸಭೆಯಲ್ಲಿ ಶಾಸಕರ ಅಭಿಪ್ರಾಯ ಪಡೆಯುವ ನಿಯಮವನ್ನು ರದ್ದುಪಡಿಸಲಾಗಿದೆ.
ಮದ್ಯ ಮಾರಾಟಗಾರರ ವಿರೋಧ
ರಾಜ್ಯ ಸರಕಾರ ಹೊಸದಾಗಿ ಮತ್ತಷ್ಟು ಎಂಎಸ್‌ಐಎಲ್ ಮದ್ಯದ ಅಂಗಡಿಗಳನ್ನು ತೆರೆಯುವುದಕ್ಕೆ ಮದ್ಯ ಮಾರಾಟಗಾರರ ಒಕ್ಕೂಟದವರು ವಿರೋಧ ವ್ಯಕ್ತಪಡಿಸಿ ಕೋರ್ಟ್ ಮೆಟ್ಟಿಲೇರಿದ್ದಾರೆ. ರಾಜ್ಯ ಹೈಕೋರ್ಟ್ ಈ ಬಗ್ಗೆ ಅಬಕಾರಿ ಆಯುಕ್ತರಿಗೆ ಮನವಿ ಸಲ್ಲಿಸುವಂತೆ ನಿರ್ದೇಶನ ನೀಡಿದ್ದು, ಕೋರ್ಟ್ ನಿರ್ದೇಶನದಂತೆ ಬಾರ್ ಆನರ್ಸ್ ಅಸೋಸಿಯೇಶನ್‌ನವರು ಅಬಕಾರಿ ಆಯುಕ್ತರಿಗೆ ಹೊಸದಾಗಿ ಮದ್ಯದಂಗಡಿ ತೆರೆಯದಂತೆ ಮನವಿ ಮಾಡಿದ್ದಾರೆ. ಆದರೆ, ಈ ಕುರಿತು ಅಬಕಾರಿ ಆಯುಕ್ತರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ತಿಳಿದು ಬಂದಿದೆ.
ಆನ್‌ಲೈನ್ ಮದ್ಯ ಮಾರಾಟಕ್ಕೂ ಸಿದ್ಧತೆ
ರಾಜ್ಯ ಸರಕಾರ ಆನ್‌ಲೈನ್ ಮೂಲಕ ಮದ್ಯ ಮರಾಟ ಮಾಡುವ ಕುರಿತು ಚಿಂತನೆ ನಡೆಸಿದ್ದು, ಈಗಾಗಲೇ ಖಾಸಗಿ ಕಂಪೆನಿಯೊಂದಿಗೆ ಈ ಕುರಿತು ಮೇ 27ರಂದು ಸಭೆ ನಡೆಸಿ ರಾಜ್ಯಾದ್ಯಂತ ಆನ್‌ಲೈನ್ ಮೂಲಕ ಮದ್ಯ ಸರಬರಾಜು ಮಾಡಲು ಅವಕಾಶ ಕಲ್ಪಿಸಲು ಅಬಕಾರಿ ಇಲಾಖೆ ಮಟ್ಟದಲ್ಲಿ ಚರ್ಚೆಯಾಗಿದೆ. ಈ ಕುರಿತು ಸರಕಾರದ ಹಂತದಲ್ಲಿ ಚರ್ಚೆ ಮಾಡಿ ಶೀಘ್ರವೇ ಈ ಬಗ್ಗೆಯೂ ಅಧಿಕೃತ ಆದೇಶ ಹೊರಡಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.