ಕೊರೊನಾ ಲಾಕ್‌ಡೌನ್‌ನಿಂದಾಗಿ ಅತಿಥಿ ಉಪನ್ಯಾಸಕರ ಪರದಾಟ
Team Udayavani, Aug 13, 2020, 11:29 AM IST
ಹಾವೇರಿ: ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರಿ ಹಾಗೂ ಖಾಸಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿ ಸಿದ್ದರಿಂದ ಅತಿಥಿ ಉಪನ್ಯಾಸಕ ರಾಗಿ ಸೇವೆ ಸಲ್ಲಿಸುತ್ತಿದ್ದ ಸಾವಿರಾರು ಉಪನ್ಯಾಸಕರು, ಶಿಕ್ಷಕರ ಭವಿಷ್ಯ ಅತಂತ್ರವಾದ್ದು, ಕಳೆದ ನಾಲ್ಕು
ತಿಂಗಳಿನಿಂದ ವೇತನವಿಲ್ಲದೇ ಜೀವನ ನಡೆಸಲು ಪರದಾಡುವ ಸ್ಥಿತಿ ಎದುರಾಗಿದೆ.
ಸರ್ಕಾರ ಲಾಕ್‌ಡೌನ್ ಸಂದರ್ಭದಲ್ಲಿ ಕೂಲಿಕಾರ್ಮಿಕರು, ರೈತರು ಹಾಗೂ ಬೀದಿ ಬದಿ ವ್ಯಾಪಾರಸ್ಥರ ಬಗ್ಗೆ ಕಾಳಜಿ ವಹಿಸಿ ಅವರ ಸಂಕಷ್ಟಕ್ಕೆ ಸ್ಪಂದಿಸಿತ್ತು. ಆದರೆ, ಇತ್ತ ನಿರುದ್ಯೋಗಿಗಳು ಅಲ್ಲ, ಅತ್ತ ಸ್ವಯಂ ಉದ್ಯೋಗಿಗಳು ಅಲ್ಲದೇ ಪದವಿ ಪಡೆದು ಸರ್ಕಾರಿ ಹಾಗೂ ಖಾಸಗಿ ಶಾಲಾ-ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಸರ್ಕಾರ ವೇತನ ಬಿಡುಗಡೆ ಮಾಡದೇ
ತಾರತಮ್ಯ ಎಸಗುತ್ತಿದ್ದು, ನಮ್ಮ ಸಂಕಷ್ಟ ಯಾರಿಗೂ ಬರಬಾರದು ಎಂದು ಅತಿಥಿ ಉಪನ್ಯಾಸಕರು ಅಳಲು
ತೋಡಿಕೊಳ್ಳುತ್ತಿದ್ದಾರೆ.
ವೇತನ ಸಮಸ್ಯೆ: ಜಿಲ್ಲೆಯ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ 350ಕ್ಕೂ ಹೆಚ್ಚು ಉಪನ್ಯಾಸಕರು ಹಾಗೂ 1500ಕ್ಕೂ ಹೆಚ್ಚು ಅತಿಥಿ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಜ್ಯದಲ್ಲಿ ಅತಿಥಿ ಉಪನ್ಯಾಸಕರಿಗೆ ನೆಟ್, ಸೆಟ್ ಅಥವಾ ಪಿ.ಎಚ್‌ಡಿ ಆದವರಿಗೆ ತಿಂಗಳಿಗೆ 13 ಸಾವಿರ ಉಳಿದವರಿಗೆ 11 ಸಾವಿರ ರೂ. ಹಾಗೂ ಅತಿಥಿ ಶಿಕ್ಷಕರಿಗೆ 7,500 ರೂ. ನೀಡಲಾಗುತ್ತಿದೆ. ಇದನ್ನು ವರ್ಷದ ಕೂಲಿ ಲೆಕ್ಕ ಹಾಕಿದರೆ ದಿನಕ್ಕೆ 200 ರಿಂದ 300 ರೂ. ಆಗಬಹುದು ಅಷ್ಟೇ. ಕೊರೊನಾ ಹಿನ್ನೆಲೆಯಲ್ಲಿ ಅತಿಥಿ ಉಪನ್ಯಾಸಕರು ಹಾಗೂ ಶಿಕ್ಷಕರಿಗೆ ಕಳೆದ 3-4 ತಿಂಗಳಿನಿಂದ ಸಂಬಳ ಬಿಡುಗಡೆಗೊಳಿಸಿಲ್ಲ. ನಮಗೂ ಹೆಂಡತಿ, ಮಕ್ಕಳು ಇದ್ದಾರೆ. ಸಂಬಳವಿಲ್ಲದೇ
ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ ಎನ್ನುತ್ತಾರೆ ಅತಿಥಿ ಉಪನ್ಯಾಸಕರು.
ಬದುಕು ಬೀದಿಗೆ: ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರು ಹಾಗೂ ಶಿಕ್ಷಕರಿಗೆ ವರ್ಷದ ಮೂರು ತಿಂಗಳು ಸಂಬಳ ನೀಡುವುದಿಲ್ಲ. ಅಲ್ಲದೇ ಕೊರೊನಾ ಹಿನ್ನೆಲೆಯಲ್ಲಿ ಲಾಕ್‌ಡೌನ್ ಪರಿಸ್ಥಿತಿಯಿಂದಾಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ್ದು, ಇದನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದ ಹಲವಾರು ಅತಿಥಿ ಉಪನ್ಯಾಸಕರು ಹಾಗೂ ಶಿಕ್ಷಕರ ಬದುಕು ಬೀದಿಗೆ ಬಂದಂತಾಗಿದೆ. ವೇತನವಿಲ್ಲದೇ ಮನೆ ಬಾಡಿಗೆ, ಜೀವನೋಪಾಯ ಸೇರಿದಂತೆ ಕನಿಷ್ಟ ಸೌಕರ್ಯಗಳನ್ನು ಪೂರೈಸಲು ಸಾಧ್ಯವಾಗದ ಪರಿಸ್ಥಿತಿ ಅನೇಕ ಅತಿಥಿ ಉಪನ್ಯಾಸಕರು ತಮ್ಮ ಹಳ್ಳಿಗಳಿಗೆ ತೆರಳಿದ್ದಾರೆ. ಅಲ್ಲದೇ ಅನಿವಾರ್ಯವಾಗಿ ಕೆಲವು ಶಿಕ್ಷಕರು ಕೃಷಿ, ಕೂಲಿಕೆಲಸ, ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಕುಟುಂಬ ನಿರ್ವಹಣೆಗೆ ಹೋರಾಡುವ ಸ್ಥಿತಿ ಎದುರಿಸುವಂತಾಗಿದೆ.
ಬಾಕಿ ಸಂಬಳ ನೀಡಿ: ಅತಿಥಿ ಉಪನ್ಯಾಸಕರು ಹಾಗೂ ಶಿಕ್ಷಕರು ಕಳೆದ ಹಲವು ವರ್ಷಗಳಿಂದ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಕೂಡ ಜನಪ್ರತಿನಿ ಧಿಗಳು ಅತಿಥಿ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸದೇ ಮೌನ ವಹಿಸಿದ್ದಾರೆ. ಹಲವಾರು
ಬಾರಿ ಪ್ರತಿಭಟನೆ ನಡೆಸಿದರು ಕೂಡ ಪದವೀಧರ ಕ್ಷೇತ್ರದಿಂದ ಆಯ್ಕೆಯಾದ ಜನಪ್ರತಿನಿಧಿ ಗಳು, ಉನ್ನತ ಶಿಕ್ಷಣ ಸಚಿವರು, ಹೋರಾಟಗಾರರು ಹಾಗೂ ಶಿಕ್ಷಣ ತಜ್ಞರಿಗೆ ಅತಿಥಿ ಶಿಕ್ಷಕರ ಗೋಳು ಗಮನಕ್ಕೆ ಬರದಿರುವುದು ದುರದೃಷ್ಟಕರ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಶಾಲಾ-ಕಾಲೇಜುಗಳು ಬಂದ್ ಆಗಿ ಸಂಕಷ್ಟ ಎದುರಿಸುತ್ತಿರುವ ಅತಿಥಿ ಉಪನ್ಯಾಸಕರು ಹಾಗೂ ಶಿಕ್ಷಕರಿಗೆ ಬಾಕಿ ಇರುವ ಸಂಬಳವನ್ನು ಒಂದೇ ಬಾರಿಗೆ ಪಾವತಿಸಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಯಾವುದೇ ಸೇವಾ ಭದ್ರತೆ ಇಲ್ಲ. ಸರ್ಕಾರ ಅತಿಥಿ ಉಪನ್ಯಾಸಕರಿಗೆ ವೇತನ ನೀಡುವಲ್ಲಿ ತಾರತಮ್ಯ ಎಸಗುತ್ತಿದೆ. ಕಳೆದ ನಾಲ್ಕು ತಿಂಗಳಿಂದ ವೇತನವಿಲ್ಲದೇ ಸಮಸ್ಯೆಯಾಗಿದೆ. ಉನ್ನತ ಶಿಕ್ಷಣ ಸಚಿವರು ಸಹ ನಮ್ಮ ಸಂಕಷ್ಟಕ್ಕೆ ಸ್ಪಂದಿಸದೇ ನಿರ್ಲಕ್ಷ್ಯ ತೋರುತ್ತಿದ್ದಾರೆ. ಕೂಡಲೇ ರಾಜ್ಯ ಸರ್ಕಾರ ಪಶ್ಚಿಮ ಬಂಗಾಳದ ಮಾದರಿಯಲ್ಲಿ ವೇತನ ನೀಡಲು ಕ್ರಮ ಕೈಗೊಳ್ಳಬೇಕು. ಸಿ.ಕೆ.ಪಾಟೀಲ, ಜಿಲ್ಲಾಧ್ಯಕ್ಷರು, ಅತಿಥಿ ಉಪನ್ಯಾಸಕರ ಸಂಘ, ಹಾವೇರಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.