ಸ್ವಾತಂತ್ರ್ಯ’ದ ಅರ್ಥಪೂರ್ಣ ಸಾಧ್ಯತೆಯ ಹಾದಿ
Team Udayavani, Aug 15, 2020, 6:30 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಸ್ವಾತಂತ್ರ್ಯ ದಿನಾಚರಣೆ ಎಂದಾಕ್ಷಣ ನನ್ನ ಪ್ರಾಥಮಿಕ, ಪ್ರೌಢಶಾಲಾ ದಿನಗಳ ಹಂತದ ಸಂಭ್ರಮ ನೆನಪಾಗುತ್ತದೆ.
ಊರಿನ ಪ್ರಮುಖ ರಸ್ತೆಗಳ ಮೂಲಕ ಸ್ವಾತಂತ್ರ್ಯೋತ್ಸವ ಮೆರವಣಿಗೆಯಲ್ಲಿ ಅತ್ಯುತ್ಸಾಹದಿಂದ ಪಾಲ್ಗೊಳ್ಳುತ್ತಿದ್ದ ಆ ಕ್ಷಣಗಳೇ ಅನನ್ಯ.
ಭಾಷಣ, ಪ್ರಬಂಧ, ಗಾಯನ ಸಹಿತ ವಿವಿಧ ಸ್ಪರ್ಧೆಗಳು ಕಲಿಕೆಯ ಚೌಕಟ್ಟುಗಳಾಚೆಗೆ ಭಿನ್ನವಾಗಿ ಯೋಚಿಸುವ ಧಾಟಿಯನ್ನು ನಮ್ಮೊಳಗೆ ರೂಢಿಸಿದ್ದವು.
ಪಠ್ಯ, ಅದನ್ನಾಧರಿಸಿದ ತರಗತಿಗಳು ಶೈಕ್ಷಣಿಕ ಅರ್ಹತೆ ಗಳಿಸಿಕೊಳ್ಳುವುದಕ್ಕೆ ಪೂರಕವಾದರೆ ಸ್ಪರ್ಧೆಗಳು ಶಾಲೆಯ ನಾಲ್ಕು ಗೋಡೆಗಳಾಚೆಯ ಜಗತ್ತಿನಲ್ಲಿ ಸಕಾರಾತ್ಮಕ ಭವಿಷ್ಯ ರೂಪಿಸುತ್ತಿದ್ದವು. ಅದು ಕೇವಲ ವ್ಯಕ್ತಿಗತ ಬೆಳವಣಿಗೆಯ ಭವಿಷ್ಯ ಮಾತ್ರವಲ್ಲ. ವ್ಯಕ್ತಿತ್ವವನ್ನು ಗಟ್ಟಿಗೊಳಿಸಿಕೊಳ್ಳುವ ಮೂಲಕ ದೇಶದ ಅಮೂಲ್ಯ ಸಂಪನ್ಮೂಲಗಳಾಗಿಸುತ್ತಿದ್ದವು.
ಈ ಕಾರಣಕ್ಕಾಗಿ ವ್ಯಕ್ತಿತ್ವದ ಬೆಳವಣಿಗೆಯಿಂದ ರಾಷ್ಟ್ರದ ಅಭ್ಯುದಯ ಸಾಧ್ಯ ಎಂಬುದನ್ನು ಈ ದಿನ ನಮಗೆ ಶಿಕ್ಷಕರು ಮನಗಾಣಿಸುತ್ತಿದ್ದರು. ಶಿಕ್ಷಕರ ವೃತ್ತಿಪರ ಬದ್ಧತೆ, ನಿಷ್ಠೆಯ ಕಾರಣಕ್ಕಾಗಿಯೇ ಈಗಲೂ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಈ ಬಗೆಯ ಆರೋಗ್ಯಕರ ವಾತಾವರಣ ಜೀವಂತವಾಗಿದೆ.
ಇದೇ ತೆರನಾದ ಸಕಾರಾತ್ಮಕ ಪ್ರಭಾವ ಪದವಿಪೂರ್ವ, ಪದವಿ ಮತ್ತು ಸ್ನಾತಕೋತ್ತರ ಪದವಿ ಹಂತದಲ್ಲೂ ನಿರಂತರವಾಗಿದೆಯೇ? ಈ ಪ್ರಶ್ನೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಯೋಚಿಸಿದರೆ ವಾಸ್ತವದ ಕಠೊರತೆ ಕಣ್ಣಿಗೆ ರಾಚುತ್ತದೆ. ಹಣ ಗಳಿಕೆಯ ವ್ಯಾಮೋಹ ನೆಲೆಗೊಳಿಸುವ ಏಕೈಕ ಕಾರ್ಯಸೂಚಿಯನ್ನಷ್ಟೇ ಕೇಂದ್ರವಾಗಿಸಿಕೊಂಡ ವೃತ್ತಿಪರ ಶಿಕ್ಷಣದ ಪರಿಕಲ್ಪನೆಯೊಂದಿಗೆ ಪ್ರೌಢಶಾಲೆ ಅನಂತರದ ಶೈಕ್ಷಣಿಕ ಹಂತಗಳು ರೂಪುಗೊಂಡ ನಂತರ ವಿದ್ಯಾರ್ಥಿಗಳ ವ್ಯಕ್ತಿತ್ವ ಬೆಳವಣಿಗೆಯು ಉದಾತ್ತ ಆಯಾಮವನ್ನು ಕಳಚಿಕೊಂಡು ಸ್ವಾರ್ಥಕ್ಕೆ ತಿರುಗಿಕೊಂಡಿತು.
ನಾವಿರುವ ಊರು, ಜಿಲ್ಲೆ, ವಿಭಾಗ, ರಾಜ್ಯ, ದೇಶ ಮತ್ತು ವಿಶ್ವದ ಸಮಗ್ರ ಜೀವಸಂಕುಲದ ಅಭ್ಯುದಯಕ್ಕೆ ಪೂರಕವಾಗುವಂಥ ಆಲೋಚನೆ ಕ್ರಮಗಳನ್ನು ಹೊಳೆಸಿಕೊಳ್ಳುವುದರ ಜತೆ ಜತೆಗೆ ವ್ಯಕ್ತಿತ್ವದ ಬೆಳವಣಿಗೆಯ ಹಾದಿ ಕ್ರಮಿಸಲ್ಪಡಬೇಕು ಎಂಬ ಎಚ್ಚರ ಕ್ರಮೇಣ ಹಿನ್ನೆಲೆಗೆ ಸರಿಯಲಾರಂಭಿಸಿತು. ಈ ಎಚ್ಚರದ ವಿಚಾರಗಳು ಕಾಲೇಜುಗಳೊಳಗೆ ವ್ಯಕ್ತವಾದರೂ ಅವುಗಳೆಡೆಗೆ ಗಮನಹರಿಸುವ ಸಂಯಮವನ್ನು ನವ ಮಾಧ್ಯಮಗಳು ಕಳೆದಿಟ್ಟಿವೆ. ಹೀಗಾಗಿಯೇ ಹೊಸ ಪೀಳಿಗೆಯು ಎಲ್ಲದಕ್ಕೂ ಸಿನಿಕತನದ ಪ್ರತಿಕ್ರಿಯೆಗಳನ್ನು ನೀಡುತ್ತಿದೆ.
ವಾಟ್ಸಾಪ್, ಫೇಸ್‌ಬುಕ್ ಸಹಿತ ಲಭ್ಯವಿರುವ ಎಲ್ಲ ಅಭಿವ್ಯಕ್ತಿಯ ಮಾಧ್ಯಮಗಳು ವ್ಯಕ್ತಿಗತ ಸ್ವಾರ್ಥಪರತೆಯನ್ನು ವಿಜೃಂಭಿಸುವ ಹಾಗೆಯೇ ಬಳಕೆಯಾಗುತ್ತಿವೆ. ಇವು ಮೇಲ್ನೋಟದಲ್ಲಿ ಸ್ವತಂತ್ರವಾಗಿ ಅಭಿವ್ಯಕ್ತಿಸುವ ಅವಕಾಶ ಒದಗಿಸುವ ವೇದಿಕೆಗಳು ಎಂದೆನ್ನಿಸಿದರೂ ಸರಿಯಾಗಿ ಯೋಚಿಸುವುದಕ್ಕೆ ಒತ್ತಡ ಸೃಷ್ಟಿಸುವಲ್ಲಿ ಸೋಲುತ್ತಿವೆ ಎಂದೆನ್ನಿಸುತ್ತಿದೆ. ಹೀಗಾಗಿ ಅಭಿವ್ಯಕ್ತಿ ಸ್ವಾತಂತ್ರ್ಯ ಅರ್ಥ ಕಳೆದುಕೊಳ್ಳುತ್ತಿದೆ. ಯುವಸಮೂಹ ಈ ವೇದಿಕೆಗಳ ಮೂಲಕ ಅತ್ಯುತ್ಸಾಹದಲ್ಲಿ ನಿವೇದಿಸಿಕೊಳ್ಳುವ ಅಭಿಪ್ರಾಯಗಳು ಉದಾತ್ತವಾಗುವ ಬದಲು ಸಂಕೀರ್ಣವಾಗಿವೆ. ವಿಲನ್‌ಗಳನ್ನು ತೆರೆಯ ಮೇಲೆ ಹಿಗ್ಗಾಮುಗ್ಗ ಥಳಿಸುವ ನಮ್ಮ ಸಿನೆಮಾಗಳ ಹೀರೋಗಳು, ದ್ವೇಷವನ್ನೇ ಬಿತ್ತಿ ದ್ವೇಷವನ್ನೇ ಉಸಿರಾಡುವ ರಾಜಕಾರಣಿಗಳು, ಜನಪ್ರಿಯತೆಯ ನಶೆಯಲ್ಲಿರುವ ಟಿವಿ ಚಾನೆಲ್‌ಗಳ ಸುದ್ದಿಜೀವಿಗಳು, ಧಾರಾವಾಹಿ-ರಿಯಾಲಿಟಿ ಶೋಗಳ ಮತಿಗೇಡಿ ನಟ-ನಟಿಯರನ್ನು ಆದರ್ಶವಾಗಿಸಿಕೊಂಡ ಯುವಕರು ಈ ದೇಶಕ್ಕೆ ಉಜ್ವಲ ಭವಿಷ್ಯಕ್ಕೆ ಬೇಕಾದ ಭಿನ್ನ ಚಿಂತನೆಯನ್ನು ರೂಢಿಸಿಕೊಳ್ಳುವಲ್ಲಿ ಸೋಲುತ್ತಿದ್ದಾರೆ.
ಉದಾತ್ತತೆಯೊಂದಿಗೆ ಭಿನ್ನವಾಗಿ ಆಲೋಚಿಸುವ ಯುವಕರ ಪ್ರಮಾಣ ಕಡಿಮೆ ಇರಬಹುದು. ಸಂಕುಚಿತತೆ ಸೋಷಿಯಲ್ ಮೀಡಿಯಾದಲ್ಲಿ ವಿಜೃಂಭಣೆಗೊಂಡಾಗಲೆಲ್ಲಾ ಭಿನ್ನ ಚಿಂತನೆಯ ವಿರಳ ಯುವಸಮೂಹ ಅದನ್ನು ಪ್ರಶ್ನಿಸುತ್ತಿದೆ ಎಂಬುದು ಸಮಾಧಾನಕರ ಸಂಗತಿ.
ರಾಜಕಾರಣದ ಸ್ವಾರ್ಥಕ್ಕೆ ಯುವಕರ ಅಭಿವ್ಯಕ್ತಿ ಸ್ವಾತಂತ್ರ್ಯ ಸೀಮಿತವಾಗಬಾರದು. ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣದ ಹಂತ ದಾಟಿಕೊಳ್ಳುವುದೆಂದರೆ ಮುಗ್ಧತೆಯ ಪೊರೆಯನ್ನು ಕಳಚಿಕೊಂಡು ಹೊಸದೊಂದು ಎಚ್ಚರ ಆವಾಹಿಸಿಕೊಳ್ಳುವುದು ಎಂದೇ ಅರ್ಥ. ಆ ಎಚ್ಚರದೊಂದಿಗೆ ಇದ್ದಾಗ ಮಾತ್ರ ನಮಗೆ ಲಭ್ಯವಾಗಿರುವ ಸ್ವಾತಂತ್ರ್ಯವನ್ನು ಅರ್ಥಪೂರ್ಣವಾಗಿ ನಿರ್ವಹಿಸಿಕೊಳ್ಳುವುದು ಸಾಧ್ಯವಾಗುತ್ತದೆ. ಹೊಸ ಪೀಳಿಗೆಯ ಅಭಿವ್ಯಕ್ತಿಯನ್ನು ಮೌಲಿಕವಾಗಿಸುತ್ತದೆ. ಪೀಳಿಗೆಯಿಂದ ಪೀಳಿಗೆಗೆ ಆ ಅಭಿವ್ಯಕ್ತಿ ಹೊಸದಾದ ಮೌಲ್ಯಗಳನ್ನು ದಾಟಿಸುತ್ತದೆ. ಪ್ರತಿ ವರ್ಷದ ಸ್ವಾತಂತ್ರ್ಯೋತ್ಸವ ಸಂದರ್ಭವೂ ಈ ಅಂಶವನ್ನು ಸ್ಪಷ್ಟಪಡಿಸಿಕೊಳ್ಳುವುದಕ್ಕೆ ಸಹಾಯಕವಾಗಬೇಕು. ಆಯಾ ಸಂದರ್ಭದ ಸವಾಲು ಮತ್ತು ಬಿಕ್ಕಟ್ಟುಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಸ್ವಾತಂತ್ರ್ಯದ ಅರ್ಥ ವಿಸ್ತರಿಸಿಕೊಳ್ಳುವ ಅವಕಾಶವಾಗಿ ಮಾರ್ಪಡಿಸಬೇಕು. ಹಾಗೆ ಮಾರ್ಪಡಿಸುವಲ್ಲಿಯೇ ಈ ದೇಶದ ಶಿಕ್ಷಣ, ರಾಜಕಾರಣ ಮತ್ತು ನೀತಿನಿರೂಪಕ ವಲಯದ ಹೆಗ್ಗಳಿಕೆ ಇದೆ.
-ಡಾ| ಎನ್.ಕೆ ಪದ್ಮನಾಭ, ಸಹಾಯಕ ಪ್ರಾಧ್ಯಾಪಕರು, ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ ಉಜಿರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.