ಜನಗಣಮನ ಅಧಿನಾಯಕ ಜಯಹೇ ಭಾರತ ಭಾಗ್ಯವಿಧಾತ…


Team Udayavani, Aug 17, 2020, 8:59 AM IST

Indian Flag

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಬ್ರಿಟಿಷರ ದಾಸ್ಯದಿಂದ ಮುಕ್ತಿ ದೊರಕಿಸಿಕೊಟ್ಟು ದೇಶವನ್ನು ಸ್ವಾತಂತ್ರ್ಯದ ಹಳಿಯಲ್ಲಿ ನಿಲ್ಲಿಸಿದ ಅದೆಷ್ಟೋ ಪುಣ್ಯ ಪುರುಷರನ್ನು ನೆನೆಯುವ ದಿನ ಇದು.

ಇಂತಹ ದಿವ್ಯ ಘಳಿಗೆಯಲ್ಲಿ ದೇಶದ ಭವಿಷ್ಯವಾದ ಯುವಜನರನ್ನು ಆಲಿಸುವುದು ನಮ್ಮ ಕರ್ತವ್ಯ.

ಇಂದು ಅವರ ಕಲ್ಪನೆಯಲ್ಲಿ ಏನಿದೆ ಎಂಬುದು ಭಾರತದ ಭವಿಷ್ಯವಾಗಿದೆ.

ಈ ನಿಟ್ಟಿನಲ್ಲಿ “ಉದಯವಾಣಿ ಫ್ಯೂಷನ್‌’ “ಯುವ ಜನರ ದೃಷ್ಟಿಯಲ್ಲಿ ಭಾರತ ಹೇಗಿರಬೇಕು?’ ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಅವರ ಅಭಿಪ್ರಾಯವನ್ನು ಸಂಗ್ರಹಿಸಿತ್ತು. ಅವುಗಳಲ್ಲಿ ಆಯ್ದ ಅತ್ಯುತ್ತಮ ಅಭಿಪ್ರಾಯಗಳನ್ನು ಇಲ್ಲಿ ನೀಡಲಾಗಿದೆ.

 

ಗಡಿ ಕಾಯುವ ಸೈನಿಕನಿಗೆ ಗೌರವವಿರಲಿ
ಅಭಿವೃದ್ಧಿಯ ಪಥದತ್ತ ದಾಪುಗಾಲು ಹಾಕುತ್ತಿರುವ ಭಾರತದಲ್ಲಿ ಶಿಕ್ಷಣದಿಂದ ಯಾರೊಬ್ಬನೂ ವಂಚಿತರಾಗಬಾರದು. ವಿದ್ಯಾರ್ಹತೆಗೆ ತಕ್ಕ ಉದ್ಯೋಗ ಲಭಿಸಿ ನಿರುದ್ಯೋಗ ಸಮಸ್ಯೆಯಿಂದ ಮುಕ್ತರಾಗಬೇಕು. ಭ್ರಷ್ಟಾಚಾರ, ಹಸಿವುಗಳಿಂದ ದೇಶ ಮುಕ್ತವಾಗಬೇಕು. ಗಡಿ ಕಾಯುವ ಸೈನಿಕನ ತ್ಯಾಗವನ್ನು ಗೌರವಿಸುವ ಮನೋಭಾವ ಪ್ರತಿಯೊಬ್ಬರಲ್ಲೂ ಬೆಳೆಯಬೇಕು. ದೇಶದ ಮಹಾತ್ಮರನ್ನು ಜಾತಿ, ಧರ್ಮಗಳ ಆಧಾರದ ಮೇಲೆ ವಿಂಗಡಿಸುವುದನ್ನು ಬಿಟ್ಟು ಅವರು ನೀಡಿದ ಉದಾತ್ತ ಸಂದೇಶಗಳನ್ನು ಅಳವಡಿಸಿಕೊಳ್ಳಬೇಕು.


ತೇಜಶ್ರೀ ಶೆಟ್ಟಿ, ವಿ.ವಿ. ಕಾಲೇಜು, ಮಂಗಳೂರು

“ವಂದೇ ಮಾತರಂ’ ಬಾಳಬೇಕಿದೆ
ಭಾವ-ರಾಗ-ತಾಳ ಎಂಬ ಕಲ್ಪನೆಯನ್ನು ಹೊಂದಿರುವ ನಾವು ದೇಶ ನಮಗೇನು ನೀಡಿದೆ ಎನ್ನುವ ಬದಲು ನಾವು ದೇಶಕ್ಕೆ ಏನ್ನನ್ನು ನೀಡಿದ್ದೇವೆ ಅಥವಾ ನೀಡಬೇಕಾಗಿರುವ ಅಂಶಗಳತ್ತ ಗಮನ ಹರಿಸೋಣ. ಸ್ವಾತಂತ್ರ್ಯ, ಸಮಾನತೆ, ಸಹೋದರತ್ವವನ್ನು ಕಲಿಸುವ ಈ ಭಾರತ ನಾಡಿನಲ್ಲಿ ಇಂದು ಭಯೋತ್ಪಾದನೆ, ಭ್ರಷ್ಟಾಚಾರ, ಜಾತೀಯತೆ ಎಂಬ ಅಂಶಗಳನ್ನು ಕಿತ್ತೆಸೆದು ವಂದೇ ಮಾತರಂ ಎಂಬ ಗೀತೆಯ ಅರ್ಥವನ್ನು ಅರಿತು ಬಾಳಬೇಕಾಗಿದೆ.


ಸ್ಪರ್ಶಾ ಎಂ., ನೆಲಮಂಗಲ, ತುಮಕೂರು ವಿ.ವಿ. ಕಾಲೇಜು

ಕೃಷಿ ಕ್ಷೇತ್ರಕ್ಕೆ ಆದ್ಯತೆ ಸಿಗಲಿ
ಭಾರತ ಕೃಷಿ ಪ್ರಧಾನ ರಾಷ್ಟ್ರ. ರೈತರೇ ದೇಶದ ಬೆನ್ನೆಲುಬು. ಆದ್ದರಿಂದ ರೈತರ ಪ್ರಗತಿ ಅತ್ಯಗತ್ಯ. ಕೃಷಿಯನ್ನೇ ಅವಲಂಬಿಸಿ ಜೀವನ ನಡೆಸುತ್ತಿರುವ ಅದೆಷ್ಟೋ ರೈತರು ತಾವು ಬೆಳೆದ ಬೆಳೆಗೆ ಸರಿಯಾದ ಬೇಡಿಕೆ ದೊರೆಯದೇ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಅಂಥವರ ಕಡೆ ಹೆಚ್ಚು ಗಮನಹರಿಸಿ ಅವರಿಗೆ ಸರಿಯಾದ ರೀತಿಯಲ್ಲಿ ನ್ಯಾಯ ದೊರಕಿಸಿ ಕೊಟ್ಟರೆ ದೇಶ ಇನ್ನಷ್ಟು ಪ್ರಗತಿ ಹೊಂದುವುದರಲ್ಲಿ ಅನುಮಾನವಿಲ್ಲ. ಈ ನಿಟ್ಟಿನಲ್ಲಿ ದೇಶ ಪ್ರಜ್ಞಾವಂತ ಜನರಾದ ನಾವು ಜಾಗೃತರಾಗಬೇಕಾಗಿದೆ.


ಕಿಶನ್‌ ಪಿ.ಎಂ., ಕಾರ್ಕಳ, ಶಿವರಾಮ ಕಾರಂತ ಕಾಲೇಜು, ಬೆಳ್ಳಾರೆ

ಏಕತೆ ಸಾರಿ
ಭಾರತ ಎಂದರೆ ಸಾಕು ನಮಗೆಲ್ಲ ಗೌರವದ ಭಾವನೆ ತುಂಬಿ ಬರುತ್ತದೆ. ಹಲವು ಜನಾಂಗ, ಭಾಷೆ, ಸಂಸ್ಕೃತಿ, ಪರಂಪರೆಗಳ ತವರೂರು ನಮ್ಮ ದೇಶ. ಈಗಾಗಲೇ ತಿಳಿದಿರುವಂತೆ ನಮ್ಮ ದೇಶ ವಿವಿಧತೆಯಲ್ಲಿ ಏಕತೆಯ ಮನೋಭಾವ ಹೊಂದಿದೆ. ಭಾರತಾಂಬೆಯ ಮಕ್ಕಳಾಗಿ ನಾವು ವೀರ ಯೋಧರನ್ನು ಸ್ಮರಿಸಬೇಕು. ಎಲ್ಲ ಭಾರತೀಯರನ್ನು ಸಹೋದರರಂತೆ ಪ್ರೀತಿ, ಗೌರವದಿಂದ ಕಾಣಬೇಕು. ಯಾವುದೇ ಭೇದಭಾವ ಮಾಡದೇ ನಾವೆಲ್ಲರೂ ಒಂದಾಗಿ ಬಾಳುವ ಪ್ರತಿಜ್ಞೆ ಸ್ವೀಕರಿಸೋಣ.


ಶ್ರೀದೇವಿ ಗುಡದೂರ, ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ವಿಜಯಪುರ

ಪ್ರಜೆಗಳು ಬಲಿಷ್ಠರಾಗಿ ರೂಪುಗೊಳ್ಳಲಿ
ಭಾರತ ಮುಂದುವರಿಯುತ್ತಿರುವ ರಾಷ್ಟ್ರದಿಂದ ಮುಂದುವರಿದ ರಾಷ್ಟ್ರದ ಪಟ್ಟಿಯಲ್ಲಿ ಸೇರ್ಪಡೆಯಾಗಬೇಕು. ಮುಂದೆ ಯಾವುದೇ ಸಮಸ್ಯೆ ಬಂದರೂ ಪೂರ್ವಯೋಜನೆಗಳನ್ನು ರೂಪಿಸುವ ನಿಪುಣ ರಾಷ್ಟ್ರವಾಗಬೇಕು. ಯಾವ ದೇಶದ ಎದುರು ತಲೆಬಾಗಬಾರದು. ಸಮಸ್ಯೆಗಳು ಬರುವ ಮೊದಲೇ ನಿವಾರಿಸುವ ಚಾಕಚಕ್ಯತೆ ಪ್ರತಿಯೋರ್ವ ಪ್ರಜೆಯಲ್ಲಿರಬೇಕು. ಇದಕ್ಕೆ ಪೂರಕವಾಗಿ ಯುವಜನರಾದ ನಾವು ತಮ್ಮದೇ ಆದ ಕೊಡುಗೆ ನೀಡಬೇಕಾಗಿದೆ.


ಅಲ್ಲಾ ಭಕ್ಷ, ಕಾರ್‌ಸ್ಟ್ರೀಟ್‌ ಕಾಲೇಜು ಮಂಗಳೂರು

ಗಾಂಧಿ ಕನಸು ನನಸಾಗಲಿ
ಯುವ ಜನತೆಗೆ ಗಾಂಧಿ ಕಂಡ ರಾಮರಾಜ್ಯದ ಕನಸು ನನಸಾಗಬೇಕು ಎಂದು ಮನೋಭಾವನೆ ಇದ್ದರಷ್ಟೇ ಸಾಲದು,ಅದಕ್ಕೆ ಕಾರ್ಯೋನ್ಮುಖರಾಗುವ ಅಗತ್ಯವಿದೆ. ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಪ್ರಗತಿಯನ್ನು ಸಾಧಿಸುವುದರ ಜತೆಗೆ ಇಡೀ ವಿಶ್ವಕ್ಕೆ ಮಾದರಿ ರಾಷ್ಟ್ರವಾಗಿ ನಿರ್ಮಾಣವಾಗಬೇಕು ಎಂಬ ಸದಾಶಯ ಹೊಂದಬೇಕಿದೆ.


ಕಾಶೀಬಾಯಿ ಗು. ಬಿರಾದಾರ ಎಸ್‌.ಬಿ., ಕಲಾ ಮತ್ತು ಕೆ.ಸಿ.ಪಿ. ವಿಜ್ಞಾನ ಮಹಾವಿದ್ಯಾಲಯ ವಿಜಯಪುರ

ಸ್ವದೇಶಿ ಭಾರತ ನಿರ್ಮಾಣಕ್ಕೆ ಮುಂದಾಗಿ
ದೇಶದಲ್ಲಿ ಜಾತಿ ಅಸಮಾನತೆಯಲ್ಲಿ ತೊರೆದು ಸಮಾನತೆಯ ಸ್ವಾತಂತ್ರ್ಯ ನಮ್ಮದಾಗ ಬೇಕು. ಬೇರೆ ದೇಶದ ವಸ್ತುಗಳೊಂದಿಗೆ ಅವಲಂಬಿತವಾಗಿರುವ ನನ್ನ ದೇಶದ ಪ್ರಜೆಗಳು ಸ್ವದೇಶಿ ಭಾರತದತ್ತ ಗಮನ ಕೊಟ್ಟು ನಿಜವಾದ ಸ್ವಾತಂತ್ರ್ಯ ತಂದುಕೊಡಬೇಕಿದೆ. ಆತ್ಮ ನಿರ್ಭರ ಭಾರತ ಮತ್ತು ವೋಕಲ್‌ ಫಾರ್‌ ಲೋಕಲ್‌ನಂತಹ ಯೋಜನೆಗಳು ಕಾರ್ಯ ರೂಪಕ್ಕೆ ಬಂದರೆ ಪ್ರತಿಯೊಬ್ಬರಿಗೂ ನಿಜವಾದ ಸ್ವಾತಂತ್ರ್ಯ ಸಿಕ್ಕಂತಾಗುತ್ತದೆ.


ಸ್ವಾತಿ ಯು.ಪಿ., ಮೆಟ್ಟಿನಹೊಳೆ ಮನೆ ಕೆರ್ಗಾಲು, ಖಂಬದಕೋಣೆ

ಭಾರತ ಆರ್ಥಿಕವಾಗಿ ಸದೃಢವಾಗಲಿ
ಭಾರತ ಯಾವತ್ತೂ ಬೇರೆ ದೇಶದ ಮೇಲೆ ಅವಲಂಬನೆಯಾಗದೆ ತನ್ನದೇ ಅದ ಘನತೆಯನ್ನು ಕಾಪಾಡಬೇಕು. ಪ್ರಪಂಚದ ಪ್ರತಿಯೊಂದು ದೇಶವು ಭಾರತವನ್ನು ಅನುಸರಿಸುವ ಹಾಗೆ ಮಾಡಬೇಕು. ಆರ್ಥಿಕವಾಗಿ ಭಾರತವು ಸದೃಢವಾಗಬೇಕು. ಎಲ್ಲ ಹಣಕಾಸಿನ ವ್ಯವಹಾರ ನಮ್ಮೊಳಗೇ ನಡೆಯಬೇಕು. ಹೀಗಾದರೆ ಮಾತ್ರ ಭಾರತವು ತನ್ನ ಕೀರ್ತಿ ಪತಾಕೆಯನ್ನು ಎಲ್ಲ ಕಡೆ ಹಾರಿಸಲು ಸಾಧ್ಯ ಎಂಬುದು ನನ್ನ ಆಶಯ.


ಪಾರ್ಶ್ವನಾಥ ಹೆಗ್ಡೆ, ಉಪನ್ಯಾಸಕರು, ಎಸ್‌ಡಿಎಂ ಕಾಲೇಜು ಉಜಿರೆ

ಬಲಿಷ್ಠ ರಾಷ್ಟ್ರವಾಗಲಿ ಭಾರತ
ಡಾ| ಎಪಿಜೆ ಅಬ್ದುಲ್‌ ಕಲಾಂ ಭಾರತಕ್ಕಾಗಿ ಕನಸು ಕಂಡ ವರ್ಷ 2020. ಅವರ ಕನಸನ್ನು ನನಸು ಮಾಡುವ ಪ್ರಯತ್ನ ಮಾಡಬೇಕು. 74ನೇ ಸ್ವಾತಂತ್ರ್ಯ ದಿನಾಚರಣೆ ಯಲ್ಲಿ ಎಲ್ಲರೂ ಸ್ವದೇಶಿ ವಸ್ತುಗಳನ್ನೇ ಬಳಸುವತ್ತ ಗಮನ ಹರಿಸಿದರೆ ಉತ್ತಮ. ಜಗತ್ತಿನ ಬಲಿಷ್ಠ ರಾಷ್ಟ್ರಗಳ ಸಾಲಿನಲ್ಲಿ ಭಾರತವು ಉತ್ತಮ ಸ್ಥಾನ ಪಡೆಯಬೇಕು.


ಅಕ್ಷಯಕೃಷ್ಣ ಪಳ್ಳತ್ತಡ್ಕ, ದ್ವಿತೀಯ ಎಂ.ಎ. ಪತ್ರಿಕೋದ್ಯಮ ಮಂಗಳೂರು ವಿವಿ

ಹಳ್ಳಿಗಳು ಸುಧಾರಣೆಯಾಗಲಿ
ಸ್ವಾತಂತ್ರ್ಯ ದಿನಾಚರಣೆ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು. ದೇಶ ದಲ್ಲಿ ಬಡತನ, ನಿರುದ್ಯೋಗವನ್ನು ಹೋಗಲಾಡಿಸಿ, ಕಲಿತ ವಿದ್ಯೆಯ ಅರ್ಹತೆಗೆ ತಕ್ಕಂತೆ ಉದ್ಯೋಗ ದೊರಕಬೇಕು. ದೇಶ ಸೇವೆಯಲ್ಲಿ ಎಲ್ಲರೂ ಪಾಲ್ಗೊಳ್ಳುವಂತಾಗಬೇಕು. ಹಳ್ಳಿಗಳ ಸುಧಾರಣೆಯಾಗಬೇಕು. ಎಲ್ಲ ಮಕ್ಕಳಿಗೂ ಶಿಕ್ಷಣ ದೊರೆಯುವಂತಾಗಬೇಕು. ಸಾಕ್ಷರತೆಯ ಪ್ರಮಾಣ ಹಳ್ಳಿ ಮಟ್ಟದಿಂದಲೂ ಉತ್ತಮಗೊಳ್ಳಬೇಕು.


ದೀಪಾ ಮಂಜರಗಿ, ವಿಜಯಪುರ ವಿವಿ

ಬಲಿಷ್ಠ ರಾಷ್ಟ್ರವಾಗಲಿ ಭಾರತ
ಸ್ವಾವಲಂಬಿ ಭಾರತ ನನ್ನದಾಗಲಿ ದೇಶಕ್ಕಾಗಿ ಕೊಡುಗೆ ನೀಡಬೇಕಾದುದು ನಮ್ಮ ಆದ್ಯ ಕರ್ತವ್ಯವಾಗಿದೆ. ಯುವ ಸಮುದಾಯ ಜಾಗೃತಗೊಂಡು ಹಳ್ಳಿಗಳನ್ನು ಅಭಿವೃದ್ಧಿಗೆ ಪರಿಶ್ರಮಿಸಬೇಕಿದೆ. ಸ್ವಾವಲಂಬಿ ಜೀವನವನ್ನು ರೂಢಿಸಿಕೊಂಡು ಬದುಕಬೇಕಿದೆ. ಉನ್ನತ ಮಟ್ಟದ ಕೌಶಲವನ್ನು ಅಳವಡಿಸಿಕೊಂಡು ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಮುಂದಾಗಬೇಕಿದೆ.


ಲಿಂಗರಾಜ್‌ ಎಂ., ಬೈರಾಪುರ

ಸಹಬಾಳ್ವೆ ನೆಲೆಯಾಗಬೇಕು
ನಮ್ಮ ದೇಶ ಭಾರತವು ಎಂದಿನಿಂದಲೂ ವಿವಿಧತೆಯಲ್ಲಿ ಏಕತೆಯನ್ನು ಸಾರುತ್ತಾ ಬಂದಿದೆ. ಜಾತಿ ಧರ್ಮ ಆಚಾರ ವಿಚಾರಗಳು ಹಲವಾರು ಇದ್ದರೂ ನಾವು ಅದನ್ನೆಲ್ಲ ಒಂದೆಡೆ ಇರಿಸಿ ಮಾನವೀಯತೆಗೆ ಮೌಲ್ಯವನ್ನು ನೀಡಿದಾಗ ಪರಸ್ಪರ ಪ್ರೀತಿ ಹಾಗೂ ವಿಶ್ವಾಸವನ್ನು ಬೆಳೆಸಲು ಸಾಧ್ಯ. ಕ್ಷುಲ್ಲಕ ಕಾರಣಗಳಿಗೆ ಇತರರೊಂದಿಗೆ ಜಗಳವಾಡದೆ ಸಹಬಾಳ್ವೆಯಿಂದ ನಡೆದರೆ, ನಮ್ಮ ಸ್ವಾತಂತ್ರ್ಯಕ್ಕೆ ಹೊಸ ಹೊಳಪು ಸಿಕ್ಕೀತು.


ಪ್ರತೀಕ್ಷಾ ಪಿ., ಪೂರ್ಣಪ್ರಜ್ಞ ಪದವಿ ಕಾಲೇಜು,ಉಡುಪಿ

ಬಲಿಷ್ಠ ಭಾರತ ನಮ್ಮದಾಗಬೇಕು
ಗ್ರಾಮೀಣ ಮಟ್ಟದಿಂದ ಪ್ರಾರಂಭವಾಗಿ ರಾಷ್ಟ್ರೀಯ ಮಟ್ಟದ ವರೆಗಿನ ಪ್ರತಿಯೊಂದು ಸರಕಾರಿ ಕಾರ್ಯಕ್ರಮಗಳಿಗೂ ಕಾವಲು ಪಡೆಯ ನಿಯೋಜನೆ ಅತ್ಯಗತ್ಯ. ಆದರೆ ಭವಿಷ್ಯದಲ್ಲಿ ಯಾವುದೇ ನಿಯೋಜನೆಗಳಿಲ್ಲದೆ ಕಾರ್ಯಕ್ರಮಗಳು ಸುಸಜ್ಜಿತವಾಗಿ ನಡೆಯಬೇಕು. ಅಂತಹ ಒಂದು ಬಲಿಷ್ಠ ಭಾರತ ನಮ್ಮದಾಗಬೇಕು.


ಶ್ವೇತಾ ಪಿ. ಜೈನ್‌, ಭುವನೇಂದ್ರ ಕಾಲೇಜು, ಕಾರ್ಕಳ

ಬದಲಾವಣೆಗಳು ಆಗಬೇಕಾಗಿವೆ
1ನೇ ತರಗತಿಯಿಂದ 7ನೇ ತರಗತಿಯ ವರೆಗೆ ಎಲ್ಲರೂ ಸರಕಾರಿ ಶಾಲೆಗೆ ಹೋಗಬೇಕು. ಸರಕಾರಿ ಶಾಲೆಗೆ ಹೋದವರಿಗೆ ಮಾತ್ರ ಸರಕಾರಿ ನೌಕರಿ ಎಂಬ ಕಾನೂನು ಜಾರಿಗೆ ಬಂದರೆ ಸರಕಾರಿ ಶಾಲೆಗಳು ಮುಚ್ಚುವುದಿಲ್ಲ. ಎಲ್ಲರಿಗೂ ಗುಣಮಟ್ಟದ ಶಿಕ್ಷಣ ಸಿಗುತ್ತದೆ. ಸರಕಾರಿ ಆಸ್ಪತ್ರೆಗಳು ಅಭಿವೃದ್ಧಿ ಆಗಬೇಕಾದರೆ ರಾಷ್ಟ್ರಪತಿಯಿಂದ ಹಿಡಿದು ಎಲ್ಲ ಜನಪ್ರತಿನಿಧಿಗಳು ಸರಕಾರಿ ಆಸ್ಪತ್ರೆಗೆ ಹೋಗಬೇಕೆಂಬ ಕಾನೂನು ಜಾರಿಗೆ ತಂದರೆ ಸಹಜವಾಗಿ ಎಲ್ಲ ಸರಕಾರಿ ಆಸ್ಪತ್ರೆಗಳು ಮಲ್ಟಿನ್ಯಾಶನಲ್‌ ಲೆವೆಲ್‌ಗೆ ಬೆಳೆಯಲು ಸಾಧ್ಯ. ಗಾಂಧಿ ಕನಸಿನ ಭಾರತ ಸಾಧ್ಯವಾಗಬೇಕಾದರೆ ಜಾತಿ, ಮತ, ಧರ್ಮಗಳ ಭೇದ ಬಿಟ್ಟು ನಾವೆಲ್ಲರೂ ಒಂದೇ ಎನ್ನುವ ಮನೋಭಾವ ಬೆಳೆಸೋಣ.

ಜಾಸ್ಮಿನ್‌ ಥೋಮಸ್‌, ಎಂಪಿಎಂ ಕಾಲೇಜು, ಕಾರೀಮುಟಂ ಮನೆ ಕೆರ್ವಾಶೆ

ಸಮಸ್ಯೆಗಳಿಗೆ ವಿರಾಮ ಹಾಕಬೇಕು
ದೇಶದಲ್ಲಿ ಮಹಿಳಾ ಸ್ವಾತಂತ್ರ್ಯಕ್ಕೆ ಪ್ರಾಧಾನ್ಯ ಸಿಗಲಿ ಹಾಗೂ ಮಹಿಳಾ ಸ್ವಾತಂತ್ರ್ಯ ಕುರಿತಾದ ಕಾನೂನುಗಳು ಇನ್ನಷ್ಟು ಬಲಗೊಳ್ಳಬೇಕಿದೆ. ಆದರೆ ಸ್ತ್ರೀಯು ಅದೆಷ್ಟೇ ಸ್ವಾತಂತ್ರ್ಯಳಾಗಿ ಉದ್ಯೋಗದ ಉನ್ನತ ಸ್ತರಗಳಲ್ಲಿ ಕಂಡುಬಂದರೂ ತನ್ನ ಮಾನಾಪಮಾನಗಳಲ್ಲಿ ಉನ್ನತ ಸ್ಥಾನ ದಕ್ಕಿಸಿಕೊಳ್ಳಲು ಈ ಪುರುಷ ಪ್ರಧಾನ ಸಮಾಜದಲ್ಲಿ ವಿಫ‌ಲಳಾಗುತ್ತಿದ್ದಾಳೆ ಎಂದರೆ ತಪ್ಪಾಗಲಾರದು. ಎಷ್ಟೇ ಕಾನೂನುಗಳು ಸೃಷ್ಟಿಗೊಂಡರೂ ಯುವಜನತೆಯಾಗಿರುವ ನಮ್ಮೆಲ್ಲರ ಚಿಂತನೆಗಳಲ್ಲಿಯೂ ಬದಲಾವಣೆಗಳಾಗಬೇಕು. ಎಲ್ಲ ವಿಧಗಳ ಸಮಸ್ಯೆಗಳಿಗೆ ವಿರಾಮ ಹಾಕಬೇಕು. ಹೀಗಾದರೆ ಮಾತ್ರ ನನ್ನ ದೇಶದಲ್ಲಿ ಮಹಿಳೆಯರಿಗೂ ಸ್ವಾತಂತ್ರ್ಯ ಲಭಿಸಿದೆ ಎಂದು ಹೇಳಬಹುದು.


ಚೇತನಾ ನಾಯಕ್‌ ಕೆ., ಉಪನ್ಯಾಸಕಿ, ಸರಕಾರಿ ಪ್ರಥಮ ದರ್ಜೆ ಕಾಲೇಜು, ಮಂಗಳೂರು

ದೇಶ ಅಭಿವೃದ್ಧಿ ಪಥದತ್ತ ಸಾಗಲಿ
ಭಾರತ ವಿವಿಧತೆಯಲ್ಲಿ ಏಕತೆಯನ್ನು ಕಾಣುವ ನಾಡು. ಸುಸಂಸ್ಕೃತಿಯ ಬೀಡು. ಅಹಿಂಸಾ ಮಂತ್ರದಂಡದಿಂದ ಸ್ವಾತಂತ್ರ್ಯ ಪಡೆದು ಇಡೀ ವಿಶ್ವಕ್ಕೆ ಮಾದರಿಯಾಗಿದೆ. ನಾವು ಸ್ವತಂತ್ರರಾಗಿ ಬದುಕುತ್ತಿದ್ದು, ದೇಶವೂ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಯುವಕರಿಗೆ ಉದ್ಯೋಗ, ಬೆಳೆದ ರೈತರಿಗೆ ಉತ್ತಮ ದರ, ಹೆಣ್ಣುಮಕ್ಕಳು ನಿರ್ಭಯವಾಗಿ ಬದುಕಬೇಕಾದ ವಾತಾವರಣ, ಭ್ರಷ್ಟಾಚಾರ ನಿಗ್ರಹ, ಅಪರಾಧ ಕೃತ್ಯಗಳಿಗೆ ಕಡಿವಾಣ, ಹೀಗೆ ಒಂದೇ ಎರಡೇ? ಆಗಬೇಕಾಗಿದ್ದು ಬಹಳಷ್ಟಿದೆ. ಇವೆಲ್ಲವೂ ಸರಿಹೋದ ದಿನ ಸ್ವಾತಂತ್ರ್ಯ ದಿನಾಚರಣೆಯ ಆಶಯ ಈಡೇರಿದಂತಾಗುತ್ತದೆ.


ಪೂರ್ಣಿಮಾ ಬಿ.,ವಿಶ್ವವಿದ್ಯಾನಿಲಯ ಕಲಾ ಕಾಲೇಜು ತುಮಕೂರು

ದೇಶದ ಏಳಿಗೆ ಕರ್ತವ್ಯವಾಗಬೇಕು
“ನಮ್ಮ ಭಾರತ ನಮ್ಮ ಹೆಮ್ಮೆ’ ಎಂಬ ಮಾತು ಎಲ್ಲರ ಮನದಲ್ಲಿ ಮೂಡುವ ಅ ಶುಭದಿನ ಸ್ವಾತಂತ್ರ್ಯ ದಿನಾಚರಣೆಗೆ ಒಂದು ಸಂದೇಶ, ರಾಷ್ಟ್ರಧ್ವಜ, ಭೂಪಟ, ಮಹಾತ್ಮಾ ಗಾಂಧಿ ಚಿತ್ರ ಇರುವ ಚಿತ್ರ ಸಂದೇಶವನ್ನು ವಾಟ್ಸಾಪ್‌ನಲ್ಲಿ ತೇಲಿ ಬಿಡುತ್ತಾರೆ. “ಹ್ಯಾಪಿ ಇಂಡಿಪೆಂಡೆನ್ಸ್‌ ಡೇ’ ಎಂದು ಹೇಳಿ ತಾವು ಸ್ವಾತಂತ್ರ್ಯ ದಿನಾಚರಣೆ ಆಚರಿಸಿದೆವು ಎಂದು ಸಂಭ್ರಮಿಸುತ್ತಾರೆ. ಅದಕ್ಕೂ ಮಿಗಿಲಾಗಿ ಮಕ್ಕಳಿಗೆ ಪರಿಚಯಿಸುವುದು ಅತಿ ಮುಖ್ಯವಾದದು. ಯುವಜನರಲ್ಲಿ ದೇಶದ ಅಭಿವೃದ್ಧಿಯ ದೃಷ್ಟಿಕೋನ ಕಡಿಮೆಯಾಗಿದೆ. ದೇಶದ ಏಳಿಗೆ ನಮ್ಮ ಕರ್ತವ್ಯವಾಗಬೇಕು ಅದು ಯುವಜನತೆಯ ಹೊಣೆಗಾರಿಕೆ.


ಯು.ಎಚ್‌. ಎಂ. ಗಾಯತ್ರಿ, ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರ ತುಮಕೂರು

ಯುವಜನತೆ ಬೆಂಬಲ ಅನಿವಾರ್ಯ
ಭಾರತ ದೇಶದಲ್ಲಿ ಸಾಂಕ್ರಾಮಿಕ ರೋಗಗಳ ಹಾವಳಿ ಹೆಚ್ಚಾಗಿದೆ.ಇದನ್ನು ತಡೆಗಟ್ಟಲು ಯುವ ವಿಜ್ಞಾನಿಗಳು,ಯುವ ಪ್ರತಿಭಾವಂತರು ಶ್ರಮಿಸಬೇಕಾಗಿದೆ. ಭಾರತ ಬಡವರಿಂದ ಕೂಡಿದ ಶ್ರೀಮಂತ ದೇಶ. ಅನಕ್ಷರಸ್ಥರ ಸಂಖ್ಯೆ ಹೆಚ್ಚಾಗಿದೆ. ಸಂಪತ್ತುಗಳು ಸರಿಯಾಗಿ ಬಳಕೆ ಆಗುತ್ತಿಲ್ಲ.ಸಾಂಕ್ರಾಮಿಕ ರೋಗಗಳನ್ನು ನಿವಾರಿಸಿ ಜನತೆಗೆ ಆರೋಗ್ಯವನ್ನು ಕಲ್ಪಿಸುವಂತಹ ಶಿಕ್ಷಣಗಳು ಜಾರಿಯಲ್ಲಿರಬೇಕು.ವೈದ್ಯಕೀಯ ಸಂಶೋಧನ ಕೇಂದ್ರಗಳು ಈ ನಿಟ್ಟಿನಲ್ಲಿ ಶ್ರಮಿಸಬೇಕು.ಇದಕ್ಕಾಗಿ ಯುವಜನತೆ ಬೆಂಬಲ ನೀಡಬೇಕು.


ಯಶಸ್ವಿ ದೇವಾಡಿಗ, ಶಿರ್ಸಿ, ಕರ್ನಾಟಕ ರಾಜ್ಯ ಅಕ್ಕಮಹಾದೇವಿ ವಿಶ್ವವಿದ್ಯಾನಿಲಯ ವಿಜಯಪುರ

ಯುವ ಶಕ್ತಿ ದೇಶಕ್ಕೆ ಪೂರಕವಾಗಲಿ
ಭಾರತ ಪ್ರಪಂಚದ ಬೇರೆ ರಾಷ್ಟ್ರಗಳಿಗೆ ಮಾದರಿ ಹಾಗೂ ಎಲ್ಲ ಕ್ಷೇತ್ರಗಳಲ್ಲೂ ಮುಂದಿರಲು ಬಯಸುತ್ತೇನೆ. ಇತರ ರಾಷ್ಟ್ರಗಳಿಂದ ಭಾರತ ಭಿನ್ನ, ಬಲಿಷ್ಠ, ಸದೃಢವಾಗಿರಲು ನಾನು ಇಚ್ಛಿಸುತ್ತೇನೆ. ಭಾರತದ ನೂತನ ಶಿಕ್ಷಣ ನೀತಿ ನಮ್ಮ ಮುಂದಿನ ಪೀಳಿಗೆಯನ್ನು ಬಹಳ ಎತರದ ಹಾದಿಯಲ್ಲಿ ಕೊಂಡೊಯ್ಯಲಿದ್ದು, ನಮ್ಮ ಭಾರತಕ್ಕೆ ಯುವ ಜನರ ಶಕ್ತಿ ಪೂರಕವಾಗಿ ಇರಲಿದೆ. ಭಾರತ ವಿಶ್ವಸಂಸ್ಥೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದು, ನಮ್ಮ ಭಾರತ ಕೆಲವೇ ವರ್ಷಗಳಲ್ಲಿ ಬಲಿಷ್ಠ ಮತ್ತು ಸದೃಢವಾಗುವಲ್ಲಿ ಸಂಶಯವಿಲ್ಲ.


ದಿಶಾ ಸನಿಲ್‌, ಎಲ್‌ಎಲ್‌ಎಂ ಕಾಲೇಜು, ಎಸ್‌ಡಿಎಂ

ಪ್ರಜಾಪ್ರಭುತ್ವ ವ್ಯವಸ್ಥೆ ಇನ್ನೂ ಗಟ್ಟಿಯಾಗಲಿ
ನಾವು ಮಾನಸಿಕವಾಗಿ ಸ್ವಾತಂತ್ರ್ಯ ಪೂರ್ವದ ನಡೆ, ನುಡಿ, ಆಚರಣೆ, ಚಿಂತನೆಗಳನ್ನು ಒಗ್ಗೂಡಿಸಿಕೊಳ್ಳಬೇಕಾಗಿದೆ. ಅಂದು ಪ್ರಜೆಗಳಿಗೆ ಸ್ವಾತಂತ್ರ್ಯವಿಲ್ಲದಿದ್ದದರೂ ಬೇಕಾದ್ದನ್ನು ದಕ್ಕಿಸಿಕೊಳ್ಳುವ ಕೆಚ್ಚೆದೆ ಇತ್ತು. ರಾಜಕಾರಣವೆಂಬುದು ಪ್ರಜಾಹಿತಕ್ಕಾಗಿ ಮೀಸಲಿತ್ತು. ಸಾಕ್ಷರತೆ ಪ್ರಮಾಣ ಅಲ್ಪವಿದ್ದರೂ; ಕಲಿಯುವ, ಕಲಿಸುವ ಹಂಬಲ ಮಾತ್ರ ಆಕಾಶದಷ್ಟು ಇತ್ತು. ಕುಳಿತು ಸಂಗ್ರಹಿಸಿ ತಿನ್ನುವ ವರ್ಗಗಳಿಗಿಂತ ದುಡಿದು ತಿನ್ನುವ ವರ್ಗಗಳು ಮೇಲಾಗಬೇಕು. ಸ್ವಾಭಿಮಾನ , ಒಗ್ಗಟ್ಟು, ಸಹಬಾಳ್ವೆ, ಪ್ರಜಾಪ್ರಭುತ್ವ ವ್ಯವಸ್ಥೆ, ಭ್ರಷ್ಟಾಚಾರ ಮುಕ್ತ ಆಡಳಿತ, ಶಾಂತಿ, ಅಹಿಂಸೆ, ಏಕತೆ, ಎಲ್ಲೆಡೆ ತೆಲೆ ಎತ್ತಿ ನಿಲ್ಲುವಂತಾಗಲಿ. ಭವ್ಯ ಭಾರತದ ನವ ನಿರ್ಮಾಣ ಸತ್ಯದ ಅಡಿಪಾಯದಿಂದ ಮೇಲೆಳಲಿ.


ರಶ್ಮಿ ಎಂ.,ಮಾನಸ ಗಂಗೋತ್ರಿ ವಿವಿ ಮೈಸೂರು ಗೌರಿಪುರ, ಮೈಸೂರು

ಶ್ರಮಕ್ಕೆ ತಕ್ಕ ಪ್ರತಿಫ‌ಲ ಸಿಗಲಿ
ದೇಶದಲ್ಲಿ ಶ್ರಮಕ್ಕನುಗುಣವಾಗಿ ಲಭಿಸಬೇಕಾದ ವೇತನ/ಸಂಬಳ ಉದ್ಯೋಗದ ಮಟ್ಟಕ್ಕನುಗುಣವಾಗಿ ಸಿಗುತ್ತಿಲ್ಲ. ಇದರಿಂದಲೇ ದೇಶ ಇಷ್ಟೊಂದು ಅಭಿವೃದ್ಧಿ ಹೊಂದುತ್ತಿದ್ದರೂ ಶ್ರೀಮಂತ -ಬಡವ ಎಂಬ ದ್ವಂದ್ವ ಉಂಟಾಗಲು ಕಾರಣವಾಗಿದೆ. ದೇಶದ ಜನ ವೃತ್ತಿಗಿಂತ ಇರುವ ಭೂಮಿಯನ್ನು ನಂಬಿದರೆ ಬಹುಶಃ ಕೃಷಿಯಲ್ಲೇ ಖುಷಿ ಕಾಣೋ ಭಾಗ್ಯ ಒದಗಬಹುದು. ಆಡಳಿತ, ಉದ್ಯೋಗ, ಶಿಕ್ಷಣ ಇವೆಲ್ಲ ಕ್ಷೇತ್ರಗಳಲ್ಲಿಯೂ ಯುವಜನತೆ ಹೇಗೆ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಬಹುದು ಎಂಬುದರ ಬಗ್ಗೆ ಸರಕಾರ ಯೋಚನೆ ಮಾಡಬೇಕು. ಆ ನಿಟ್ಟಿನಲ್ಲಿ ಅನೇಕ ಚಿಂತನೆಗಳು ಕಾರ್ಯರೂಪಕ್ಕೆ ಬರಬೇಕು.


ಅರ್ಪಿತಾ ಕುಂದರ್‌, ವಿವೇಕಾನಂದ ಸ್ನಾತಕೋತ್ತರ ಕಾಲೇಜು, ಪುತ್ತೂರು

ಸ್ವಾತಂತ್ರ್ಯದ ಮೌಲ್ಯಗಳ ಬಗೆಗೆ ಅರಿವು ಬೇಕು
ನಮ್ಮ ದೇಶದ ಸ್ವಾತಂತ್ರ್ಯ ಪರಿಕಲ್ಪನೆಯನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ. ಲಕ್ಷಾಂತರ ಹೋರಾಟಗಾರರ ತ್ಯಾಗ, ಬಲಿದಾನಗಳಿಂದ ದೊರೆತ ಸ್ವಾತಂತ್ರ್ಯದಿಂದಾಗಿ ಇವತ್ತು ದೇಶದ ಜನರು ಅತ್ಯಂತ ಮುಕ್ತವಾಗಿ ಬದುಕಲು ಸಾಧ್ಯವಾಗಿದೆ. ಈ ದೇಶದ ಜನರು ಸ್ವಾತಂತ್ರ್ಯವನ್ನು ಗೌರವಿಸುವ ಅಗತ್ಯವನ್ನು ಮನಗಾಣದಿದ್ದರೆ ಅಂಥ ಪ್ರಜಾಪ್ರಭುತ್ವ ಸಂಕಷ್ಟದಲ್ಲಿದೆ ಎಂದೇ ಭಾವಿಸಬೇಕಾ ಗುತ್ತದೆ. ದೇಶದ ಜನರು ಸ್ವಾತಂತ್ರ್ಯದ ಬಗೆಗೆ ನಿರಾಸಕ್ತಿ ತಾಳಿದರೆ ಅದು ದೇಶದ ಸ್ವಾತಂತ್ರ್ಯಕ್ಕೇ ಕಂಟಕವಾಗಬಲ್ಲದು. ಈ ಹಿನ್ನೆಲೆಯಲ್ಲಿ ಯುವಜನರು ಮತ್ತು ವಿದ್ಯಾರ್ಥಿಗಳಲ್ಲಿ ದೇಶಭಕ್ತಿ, ಸ್ವಾತಂತ್ರ್ಯದ ಮೌಲ್ಯಗಳ ಬಗೆಗೆ ಅರಿವು ಮತ್ತು ಗೌರವ ಮೂಡಿಸುವುದು ಇಂದಿನ ಅಗತ್ಯ.


ಶಿವಾನಂದ ಎನ್‌. ದೊಡ್ಡಮನಿ,ಕುನ್ನೂರ, ಶಿಗ್ಗಾವಿ, ಹಾವೇರಿ

ಸಮಾನತೆ, ಒಗ್ಗಟ್ಟಿನ ಜೀವನ ನಮ್ಮದಾಗಲಿ
ಭಾರತವು ಸ್ವಾವಲಂಬಿಯಾಗಬೇಕಿದೆ. ಯಾವುದೇ ಸರಕು, ಉತ್ಪನ್ನಗಳಿಗಾಗಿ ಇನ್ನೊಂದು ದೇಶಕ್ಕೆ ಅವಲಂಬಿತವಾಗದೆ ದೇಶದಲ್ಲಿ ಉತ್ಪಾದಿಸುವ ಸಾಮರ್ಥ್ಯ ಹೊಂದುವಂತಾಗಲಿ. ಈ ವಿಚಾರವಾಗಿ ದೇಶದಲ್ಲಿ ರಕ್ಷಣೆ ವ್ಯವಸ್ಥೆಗೆ ಸಂಬಂಧಿಸಿದಂತೆ ಇನ್ನೂ ಅತ್ಯಾಧುನಿಕವಾದ ಯುದ್ಧೋಪಕರಣಗಳನ್ನು ಹೊಂದಬೇಕಾಗುತ್ತದೆ. ಅಲ್ಲದೇ ದೇಶದ ಭದ್ರತೆಯ ವಿಚಾರಕ್ಕೆ ಬಂದಾಗ ನಾವು ಜಾತಿ, ಮತ, ಭೇದ-ಭಾವ ಮರೆತು ಒಗ್ಗಟ್ಟಾಗಿ ನಿಲ್ಲಬೇಕಿದೆ. ಸಮಾನತೆ, ಸ್ವಾವಲಂಬಿ, ಒಗ್ಗಟ್ಟಿನ ಜೀವನ ನಮ್ಮದಾಗಲಿ.


ಶೈಲಶ್ರೀ ಬಾಯಾರು, ಸ್ನಾತಕೋತ್ತರ ವಿದ್ಯಾರ್ಥಿನಿ, ವಿವೇಕಾನಂದ ಕಾಲೇಜು ಪುತ್ತೂರು

ಸದೃಢ ಭಾರತ ತಲೆ ಎತ್ತಲಿ
ದೇಶದಲ್ಲಿ ಇತ್ತೀಚಿಗೆ ಕಾಡುತ್ತಿರುವ ಕೆಲವು ಸಮಸ್ಯೆಗಳು ಸಂಪೂರ್ಣವಾಗಿ ಬಗೆಹರಿಯಬೇಕು. ಯುವಜನರಿಗೆ ತಮ್ಮ ಸಾಮರ್ಥ್ಯಕ್ಕೆ ತಕ್ಕಂಥ ಉದ್ಯೋಗ ದೊರೆಯುತ್ತಿಲ್ಲ. ಇದು ಸಾಧ್ಯವಾಗಬೇಕಿದೆ. ನಮ್ಮ ದೇಶದ ಕಾನೂನುಗಳು ಸರಿಯಾಗಿ ಕೆಲಸ ಮಾಡುವಂತಾಗಬೇಕು. ಹಸಿವು ಮುಕ್ತ ಭಾರತ ನಿರ್ಮಾಣವಾಗಬೇಕು. ದೇಶವು ಭ್ರಷ್ಟಾಚಾರದಿಂದ ಪೂರ್ಣ ಮುಕ್ತವಾಗಬೇಕು. ಪ್ರತಿಯೊಂದು ಯೋಜನೆಯು ಹಳ್ಳಿ ಜನರ ಕೈ ಸೇರಿ ಸದೃಢ ಭಾರತ ನಿರ್ಮಾಣವಾಗಬೇಕು.


ಲಾವಣ್ಯಾ ಎಸ್‌.,ಸಂತ ಫಿಲೋಮಿನಾ ಕಾಲೇಜು, ದರ್ಬೆ ಪುತ್ತೂರು

ಸರ್ವತೋಮುಖ ಅಭಿವೃದ್ಧಿಗೆ ಒತ್ತು ಸಿಗಲಿ
ದೇಶವೂ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಕೆಲವೊಂದು ಹಿಂದುಳಿದ ಕ್ಷೇತ್ರಗಳ ಅಭಿವೃದ್ಧಿಗೆ ಗಮನ ಹರಿಸಬೇಕಿದೆ. ಇದು ಸರಿಪಡಿಸಬೇಕೆಂದರೆ ಶಿಕ್ಷಣ ವ್ಯವಸ್ಥೆಯನ್ನು ನಾವು ಸುಧಾರಿಸಬೇಕಿದೆ. ಅಷ್ಟೇ ಅಲ್ಲದೇ ಎಲ್ಲರೂ ಶಿಕ್ಷಣ ಪಡೆದು ಜ್ಞಾನದ ಜತೆಗೆ ಕೌಶಲವನ್ನು ವೃದ್ಧಿಸಿಕೊಳ್ಳಬೇಕಿದೆ. ಇಂಗ್ಲಿಷ್‌ ಮಾನಸಿಕತೆಯ ಗುಲಾಮಿತನವನ್ನು ಬಿಟ್ಟು ಭಾರತದ ಭಾಷಾ ಸಂಪತ್ತನ್ನು ನವೀಕರಿಸಬೇಕು. ಎಲ್ಲ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಿ ಉದ್ಯೋಗಾವಕಾಶಗಳಿಗೆ ಒತ್ತು ನೀಡಬೇಕಿದೆ.

– ಕೀರ್ತಿ ಗೋಖಲೆ, ಭುವನೇಂದ್ರ ಕಾಲೇಜು, ಕಾರ್ಕಳ

ನನ್ನ ಜನ್ಮ ಭೂಮಿಗೆ ಒಂದು ಸಲಾಂ
ನಮ್ಮ ಭಾರತ ದೇಶ ವಿವಿಧತೆಯಲ್ಲಿ ಏಕತೆಯನ್ನು ಕಂಡಂತಹ ದೇಶ. ಇಂತಹ ದೇಶದಲ್ಲಿ ಜನ್ಮ ತಾಳಿರುವುದು ನಮ್ಮೆಲ್ಲರ ಹೆಮ್ಮೆ. ಭಾರತ ಸ್ವಾತಂತ್ರ್ಯ ಆಗಿದೆ ಎಂದರೆ ಅದಕ್ಕೆ ಅದರದೇ ಆದ ಮಹತ್ವ ಇದೆ. ಇಂದಿಗೂ ಯಾವುದೇ ಜಾತಿ, ಮತ, ಜನಾಂಗ, ಭಾಷೆಗಳನ್ನು ತಿರಸ್ಕರಿಸದೆ ಪ್ರತಿಯೊಬ್ಬರಿಗೂ ತನ್ನ ಒಡಲಿನಲ್ಲಿ ಸ್ಥಾನ ನೀಡಿ ಸಲಹುತ್ತಿದೆ. ಇದೇ ನಮ್ಮ ಭಾರತ ದೇಶದ ಏಕತೆ. ಭವಿಷ್ಯದಲ್ಲೂ ಇದು ಹೀಗೆ ಮುಂದುವರಿಯಲಿ. ನನ್ನ ಜನ್ಮ ಭೂಮಿಗೆ ಒಂದು ದೊಡ್ಡ ಸಲಾಂ.


ಪೂರ್ಣಿಮಾ ಹಿರೇಮಠ, ವಿಜಯಪುರ

ಅಂತರ ತಗ್ಗಬೇಕಿದೆ
ಭಾರತದಲ್ಲಿ ಬಡವರು ಹಾಗೂ ಶ್ರೀಮಂತರ ನಡುವೆ ಇರುವ ಅಂತರ ಸರಿದೂಗಬೇಕಿದೆ. ಈ ಅಂತರ ತಗ್ಗಿ ಸಮಾನತೆ ಮೂಡಬೇಕಿದೆ. ಜೀವನ ಸಾಗಿಸಲು ಬೇಕಾಗುವ ಅಗತ್ಯ ವಸ್ತುಗಳು ಎಲ್ಲರಿಗೂ ಸಮಾನವಾಗಿ ಲಭಿಸಬೇಕಿದೆ. ಭೋಗ ಜೀವನವನ್ನು ತ್ಯಜಿಸಿ ಸುಖೀಗಳಾಗಿ ಬಾಳುವಂತಾಗಬೇಕಿದೆ. ಜನರಿಗೆ ನಿತ್ಯದ ಮೂಲ ಸೌಕರ್ಯ ಸರಿಯಾಗಿ ಹಂಚಿಕೆಯಾದರೆ ದೇಶ ತಾನಾಗಿಯೇ ಸದೃಢವಾಗುತ್ತದೆ. ಇದಕ್ಕಾಗಿ ದೇಶದ ನಾವುಗಳೆಲ್ಲ ಸ್ವಯಂ ಪ್ರೇರಿತವಾಗಿ ಸಹಕರಿಸಬೇಕು.

ಸಣ್ಣಮಾರಪ್ಪ, ಚಂಗಾವರ, ತುಮಕೂರು

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

17-bus

Emotions: ಭಾವನೆಗಳ ಬಸ್‌ ನಿಲ್ದಾಣ

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

12-uv-fusion

Success: ಯಶಸ್ವಿ ಜೀವನಕ್ಕೆ ಸೂತ್ರಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.