ಚೌತಿ ಖಾದ್ಯ ರೆಸಿಪಿ
Team Udayavani, Aug 21, 2020, 5:25 AM IST
ಸಾಂದರ್ಭಿಕ ಚಿತ್ರ
ಚೌತಿ ಹಿನ್ನೆಲೆಯಲ್ಲಿ ಉದಯವಾಣಿ ಓದುಗರಿಂದ ಖಾದ್ಯ ರೆಸಿಪಿ ಆಹ್ವಾನಿಸಿದ್ದು, ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಬೇರೆ ಬೇರೆ ಪ್ರದೇಶಗಳಿಂದ ರೆಸಿಪಿಗಳು ಬಂದಿದ್ದವು. ಹೆಚ್ಚಿನವು ಮೋದಕ, ಕಜ್ಜಾಯ, ಕಡುಬು ಮತ್ತಿತರ ಸಾಮಾನ್ಯ ಖಾದ್ಯಗಳ ರೆಸಿಪಿಗಳಾಗಿದ್ದವು. ಇವುಗಳಲ್ಲಿ ವಿಶೇಷ ಎನಿಸಿದ ಆಯ್ದ ಕೆಲವು ಖಾದ್ಯಗಳ ವಿವರವನ್ನು ಇಲ್ಲಿ ಪ್ರಕಟಿಸಲಾಗಿದೆ. ರೆಸಿಪಿ ಕಳುಹಿಸಿದ ಎಲ್ಲರಿಗೂ ಧನ್ಯವಾದಗಳು.
ಅಗಸೆ ಬೀಜದ ಲಡ್ಡು
ಬೇಕಾಗುವ ಸಾಮಗ್ರಿಗಳು: ಅಗಸೆ ಬೀಜ: 1/4 ಕಪ್, ನೆಲಕಡಲೆ: 1/2 ಕಪ್, ಎಳ್ಳು: 1/4 ಕಪ್, ಬೆಲ್ಲ: 1 1/4 ಕಪ್, ಏಲಕ್ಕಿ: 3 ಜಾಯಿಕಾಯಿ: ಸಣ್ಣ ತುಂಡು, ನೀರು: 1/2
ಮಾಡುವ ವಿಧಾನ: ಅಗಸೆ ಬೀಜವನ್ನು ಚಟಪಟ ಹೊಟ್ಟುವ ವರೆಗೆ ಹುರಿಯಬೇಕು, ನೆಲಕಡಲೆ (ಶೇಂಗಾ)ವನ್ನು ಪರಿಮಳ ಬರುವ ವರೆಗೆ ಹುರಿಯಬೇಕು. ಅನಂತರ ಎಳ್ಳು ಚಟಪಟಹೊಟ್ಟುವ ವರೆಗೆ ಹುರಿಯಬೇಕು, ಹುರಿದು ತಣ್ಣಗಾದ ಅನಂತರ ಹುರಿದ ವಸ್ತುಗಳು ಏಲಕ್ಕಿ, ಜಾಯಿಕಾಯಿ ಸೇರಿಸಿ ಪುಡಿ ಮಾಡಬೇಕು. ಬಳಿಕ ಬೆಲ್ಲಕ್ಕೆ ನೀರು ಹಾಕಿ ಒಂದು ಎಳೆ ಪಾಕ ಬಂದ ಅನಂತರ ಪುಡಿ ಮಾಡಿದ ವಸ್ತುಗಳನ್ನು ಹಾಕಿ ಚೆನ್ನಾಗಿ ಬೆರೆಸಬೇಕು. ಇದನ್ನು ತಣ್ಣಗೆ ಆಗುವುದಕ್ಕೆ ಮೊದಲು ಉಂಡೆ ಮಾಡಬೇಕು.
– ಪೂರ್ಣಿಮ ಕೆ. ಬದಿಯಡ್ಕ
ಗೋಡಂಬಿ ಮೋದಕ
ಬೇಕಾಗುವ ಸಾಮಾಗ್ರಿಗಳು: 1/2 ತೆಂಗಿನ ಹಾಲು, ಗೋಡಂಬಿ, ಚಿರೋಟಿ ರವೆ ಅಥವಾ ಅಕ್ಕಿ ಹಿಟ್ಟು, ಸ್ವಲ್ಪ ಗೋದಿ ಹಿಟ್ಟು, ತೆಂಗಿನ ಹಾಲು ಅಥವಾ ತೆಂಗಿನ ನೀರು, ಪಿಸ್ತಾ, ಏಲಕ್ಕಿ, ಬೆಲ್ಲ, ತುಪ್ಪ, ಚಿಟಿಕೆ ಉಪ್ಪು, ತೆಂಗಿನ ಹೂರ್ಣ
ಮಾಡುವ ವಿಧಾನ: ಕಡಿಮೆ ಉರಿಯಲ್ಲಿ ನೀರು ಕುದಿಸಿ ಅದರಲ್ಲಿ ಅಕ್ಕಿ ಹಿಟ್ಟು ಅಥವಾ ಚಿರೋಟಿ ರವೆ ಸ್ವಲ್ಪ ಗೋಧಿ ಹಿಟ್ಟು ಹಾಕಿ ಸ್ವಲ್ಪ ಬೇಯಿಸಿಕೊಳ್ಳಿ. ಅದಕ್ಕೆ ತೆಂಗಿನ ಹಾಲು ಅಥವಾ ತೆಂಗಿನ ನೀರನ್ನು ಅಲ್ಪ ಪ್ರಮಾಣದಲ್ಲಿ ಹಾಕಿ ಮಿಕ್ಸ್ ಮಾಡಿ ಕಟ್ಟಿಯಾಗಿ ನಾದಿಕೊಳ್ಳಿ. ಕಾಯಿ ಹಾಲು ಅಥವಾ ಕಾಯಿ ನೀರು ಹಾಕಿ ಹಿಟ್ಟನ್ನು ಕಲಸಿಕೊಂಡರೆ, ಮೋದಕ ಕ್ರಿಸ್ಪಿಯಾಗಿರುತ್ತದೆ. ಅನಂತರ ತೆಂಗಿನ ಕಾಯಿ ತುರಿಗೆ ಬೆಲ್ಲವನ್ನು ಹಾಕಿ, ಪಿಸ್ತಾ, ಗೋಡಂಬಿ ಹಾಕಿ ಬೇಯಿಸಿ ಹೂರ್ಣ ತಯಾರಿಸಿಕೊಳ್ಳಿ. ಮಿಕ್ಸ್ ಮಾಡಿದ ಹಿಟ್ಟು ಸಣ್ಣದಾಗಿ ಲಟ್ಟಿಸಿ ಅದಕ್ಕೆ ಕಾಯಿ ಹೂರ್ಣ ತುಂಬಿ ಮೋದಕ ತಯಾರಿಸಿಕೊಳ್ಳಿ. ಕಾದ ಎಣ್ಣೆಗೆ ಹಾಕಿ ಮಂದ ಉರಿಯಲ್ಲಿ ಕರಿದರೆ ಮೋದಕ ಸಿದ್ಧ.
-ಪೂರ್ಣಿಮಾ ನಾಯಕ್, ಸಾಲೆತ್ತೂರು, ಬಂಟ್ವಾಳ
ಮೋತಿ ಚೂರ್ ಲಾಡು
ಬೇಕಾಗುವ ಸಾಮಾಗ್ರಿಗಳು: 2 ಚಿಟಿಕೆ ಏಲಕ್ಕಿ ಪುಡಿ, 2 ಕಪ್ ಕಡಲೆ ಹಿಟ್ಟು, 2 ಚಿಟಿಕೆ ಕೆಂಪು ಬಣ್ಣದ ಪುಡಿ( ಕಲರ್ ಪುಡಿ), 1/2 ಕಪ್ ಎಣ್ಣೆ, 1 ಕಪ್ ನೀರು, 11/2 ಕಪ್ ಸಕ್ಕರೆ, 3/4 ಕಪ್ ಹಾಲು, 1/2 ಕಪ್ ಗೋಡಂಬಿ, 6 ರಿಂದ 7 ಚಮಚ ತುಪ್ಪ ಬೇಕಾಗುತ್ತದೆ.
ಮಾಡುವ ವಿಧಾನ: ಮೊದಲಿಗೆ 2 ಕಪ್ ಕಡಲೆ ಹಿಟ್ಟು ತೆಗೆದುಕೊಂಡು ಅದಕ್ಕೆ ಸ್ವಲ್ಪ ಸ್ವಲ್ಪವೇ ನೀರು ಹಾಕಿ ಕಲಿಸಿ ಕೊಳ್ಳಬೇಕು. ಇದಕ್ಕೆ ಸ್ವಲ್ಪ ಕೆಂಪು ಬಣ್ಣದ ಪುಡಿ ಹಾಕಿ ತುಂಬಾ ದಪ್ಪವೂ ಅಲ್ಲ ತೆಳ್ಳಗೂ ಅಲ್ಲ ದಂತೆ ಹದವಾಗಿ ಕಲಿಸಿಟ್ಟುಕೊಳ್ಳಬೇಕು. ಎಣ್ಣೆಯನ್ನು ಕಾಯಲು ಇಟ್ಟು ಕಾದ ಬಳಿಕ ಸಣ್ಣ ರಂಧ್ರಗಳಿರುವ ಚಮಚ ವನ್ನು ಬಳಸಿ ಕಲಿಸಿದ ಹಿಟ್ಟಿನಿಂದ ಬೂಂದಿ ಮಾಡಿ ಎಣ್ಣೆಯಲ್ಲಿ ಕರಿಯಿರಿ. ಬಳಿಕ 1 ಕಪ್ ನೀರು, ಸ್ವಲ್ಪ ಏಲಕ್ಕಿ ಪುಡಿ, ಮುಕ್ಕಾಲು ಕಪ್ ಹಾಲು ಹಾಕಿ ಕಾಯಿಸಿರಿ. ಪಾಕ ಸ್ವಲ್ಪ ಅಂಟಿದಂತಾದಾಗ ಅದಕ್ಕೆ ಹುರಿದ ಬೂಂದಿಯನ್ನು ಬೆರೆಸಿ ಚೆನ್ನಾಗಿ ಕಲಿಸಿಕೊಳ್ಳಿ. ಅದಕ್ಕೆ ಗೋಡಂಬಿ ಹಾಕಿ ಕಲಿಸಿ ಮಿಶ್ರಣವನ್ನು ಸ್ವಲ್ಪ ತಣ್ಣಗಾಗಲು ಬಿಡಿ. ಬಳಿಕ ಕೈಗೆ ತುಪ್ಪವನ್ನು ಸವರಿಕೊಂಡು ಸಣ್ಣ ಉಂಡೆಯಾಕಾರದಲ್ಲಿ ತಯಾರಿಸಿಕೊಳ್ಳಿ.
– ಸುಜಾತಾ ಪಿ. ಅಮೀನ್ ಬೋಳ್ಜೆ, ಉದ್ಯಾವರ, ಉಡುಪಿ
ಕರಿ ಕಡುಬು
ಬೇಕಾಗುವ ಸಾಮಾಗ್ರಿಗಳು: ಮೈದಾ – 1 ಕಪ್, ಚಿರೋಟಿ ರವೆ – 1 ಕಪ್, ಕಡೆÛಬೇಳೆ – 1 ಕಪ್, ಬೆಲ್ಲ, ಏಲಕ್ಕಿ, ಎಣ್ಣೆ (ಕರಿಯಲು)
ಮಾಡುವ ವಿಧಾನ: ಕಡಲೆ ಬೇಳೆ ಬಿಸಿ ಮಾಡಿ ಬೆಲ್ಲ ಹಾಕಿ ಅದಕ್ಕೆ ಏಲಕ್ಕಿ ಹಾಕಿ ಗೂರಣದಂತೆ ಗಟ್ಟಿ ಮಾಡಿಟ್ಟುಕೊಳ್ಳಿ.
ಮೈದಾ ಹಾಗೂ ಚಿರೋಟಿ ರವೆಯನ್ನು ಸಮಪ್ರಮಾಣದಲ್ಲಿ ಮಿಶ್ರಮಾಡಿ ನೀರಿನಲ್ಲಿ ಕಲಸಿ ಚಪಾತಿ ಹಿಟ್ಟಿನಷ್ಟು ಗಟ್ಟಿಯಾ ಗುವಂತೆ ಮಾಡಿ ಪೂರಿಯಂತೆ ಲಟ್ಟಿಸಬೇಕು. ಅದರಲ್ಲಿ ಕಡಲೆ ಬೇಳೆ, ಏಲಕ್ಕಿ, ಬೆಲ್ಲದ ಮಿಶ್ರಣದ ಹೂರಣವನ್ನು ಇಟ್ಟು ವೃತ್ತಾಕಾರವಾಗಿ ಮಡಚಿ ಮುಚ್ಚಬೇಕು. ನಂತರ ಎಣ್ಣೆಯಲ್ಲಿ ಕಾಯಿಸಬೇಕು. ಲಟ್ಟಿಸಲು ಬೇಕಾಗುವ ದಪ್ಪ ಎಣ್ಣೆಯಲ್ಲಿ ಬಿಡುವಾಗ ಹೂರಣ ಹೊರಹೋಗದಂತೆ ಒಡೆಯದಷ್ಟಿರಲಿ.
ಇದನ್ನು ಖರ್ಜಿಕಾಯಿ ಮಾದರಿಯಲ್ಲಿ ಮಡಚಬಾರದು. ಮೋದಕದಂತೆ ಉಂಡೆ ಮಾಡಲೂಬಾರದು. ವೃತ್ತಾಕಾರವಾಗಿ ಮಡಚಿ ಮುಚ್ಚುವಂತಿರಬೇಕು.
– ಶೈಲಾ ಚಂದ್ರಶೇಖರ್, ಕುಂದಾಪುರ
ಚೌತಿಯ ವಿಶೇಷ ಮಂಡೋ
ಬೇಕಾಗುವ ಸಾಮಗ್ರಿಗಳು: ಮೈದಾ ಹಿಟ್ಟು ಅರ್ಧ ಕೆ.ಜಿ., ಸಕ್ಕರೆ 1 ಕೆ.ಜಿ., ಬಿಳಿ ಎಳ್ಳು ಅರ್ಧ ಕೆ.ಜಿ., ಏಲಕ್ಕಿ 10 ಗ್ರಾಂ, ಎಣ್ಣೆ 1 ಲೀ.,
ಪುಟಾಣಿ ಕಾಲಿ ಕೆ.ಜಿ.
ಮಾಡುವ ವಿಧಾನ: ಮೈದಾ ಹಿಟ್ಟಿಗೆ ಸ್ವಲ್ಪ ಸಕ್ಕರೆ, ಉಪ್ಪು ಹಾಕಿ ಅದಕ್ಕೆ ಸ್ವಲ್ಪ ಎಣ್ಣೆ ಮತ್ತು ನೀರು ಹಾಕಿ ಪೂರಿ ಹಿಟ್ಟಿನ ಹದಕ್ಕೆ ಕಲಸಿ ಅರ್ಧ ಗಂಟೆ ಇಡಬೇಕು. ಅನಂತರ ಸಕ್ಕರೆ ಪುಟಾಣಿ ಏಲಕ್ಕಿ ಹಾಕಿ ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಬೇಕು. ಅನಂತರ ಬಿಳಿ ಎಳ್ಳು ಹುರಿದು ಮಿಶ್ರಣ ಮಾಡಬೇಕು. ಕಾವಲಿಯನ್ನು ಒಲೆಯ ಮೇಲಿಟ್ಟು ಅದಕ್ಕೆ ಎಣ್ಣೆ ಹಾಕಿ ಕಾಯಲು ಬಿಡಿ. ಕಾದಮೇಲೆ ಕಲಸಿದ ಮೈದಾ ಹಿಟ್ಟನ್ನು ಸಣ್ಣ ಉಂಡೆ ಮಾಡಿ ತೆಳುವಾಗಿ ಲಟ್ಟಿಸಿ ಕರಿಯಬೇಕು. ಕರಿದ ಮೇಲೆ ತ್ರಿಕೋನಾಕಾರದಲ್ಲಿ ಅದನ್ನು ಮಡಚಿ ಅದರ ಮೇಲೆ ಪುಡಿ ಮಾಡಿದ ಸಕ್ಕರೆ ಹುಡಿಯನ್ನು ಉದುರಿಸಬೇಕು. ಈ ಮಂಡೋ ಸವಿಯಲು ಸಿದ್ಧ.
– ಮೋಹಿನಿ ಕಿಣಿ, ಕಂಚಿಕಾನ, ಬೈಂದೂರು
ಚುರ್ಮುಂಡೋ
ಬೇಕಾಗುವ ಸಾಮಗ್ರಿಗಳು: ಗೋಧಿ ಹಿಟ್ಟು 3 ಕಪ್, ಸಕ್ಕರೆ ಹುಡಿ ಒಂದು ಕಪ್, ಗೋಡಂಬಿ ಒಂದು ಕಪ್, ತುಪ್ಪ ಒಂದು ಕಪ್.
ಮಾಡುವ ವಿಧಾನ: ಗೋಡಂಬಿಯನ್ನು ತುಂಡುಗಳಾಗಿ ಮಾಡಿ ತುಪ್ಪದಲ್ಲಿ ಹುರಿಯಿರಿ. ಅನಂತರ ಅದೇ ಕಡಾಯಿಗೆ ಗೊಧಿ ಹಿಟ್ಟು ಹಾಕಿ ತುಪ್ಪದಲ್ಲಿ ಹುರಿಯಿರಿ. ಒಲೆಯನ್ನು ಕಡಿಮೆ ಇಡಿ. ಅನಂತರ ಅದಕ್ಕೆ ಹುರಿದ ಗೋಡಂಬಿ, ಸಕ್ಕರೆ ಹುಡಿ, ಏಲಕ್ಕಿ ಹುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಅನಂತರ ಉಂಡೆ ಮಾಡಿ ಕೊಂಡರೆ ರುಚಿ ರುಚಿಯಾದ ಚುರ್ಮುಂಡೋ ಸವಿಯಲು ಸಿದ್ಧ.
– ಡಾ| ಉಷಾಪ್ರಭಾ ನಾಯಕ್
ಮಾಜಿ ಅಧ್ಯಕ್ಷರು ಎಕ್ಸ್‌ಪರ್ಟ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್, ಮಂಗಳೂರು
ಡ್ರೈ ಫಫ್ರೂಟ್ ಲಡ್ಡು
ಬೇಕಾಗುವ ಸಾಮಗ್ರಿಗಳು: ಎಲ್ಲ ಬಗೆಯ ಡ್ರೈ ಫ್ರೂಟ್ಸ್ ಗಳಾದ ಬಾದಾಮ…, ಪಿಸ್ತಾ, ನೆಲಗಡಲೆ, ಗೇರುಬೀಜ, ದ್ರಾಕ್ಷಿ, ಖರ್ಜೂರ.
ಮಾಡುವ ವಿಧಾನ: ಖರ್ಜೂರದ ಬೀಜ ತೆಗೆದು ಹಣ್ಣನ್ನು ಮಿಕ್ಸಿಗೆ ಹಾಕಿ ತರಿಯಾಗಿ ರುಬ್ಬಿಕೊಳ್ಳಿ. ಅನಂತರ ಪ್ಯಾನ್‌ಗೆ 2 ಚಮಚ ತುಪ್ಪ ಹಾಕಿ, ಮೇಲೆ ಹೇಳಿದ ಡ್ರೈ ಫ್ರೂಟ್ಸ್ ಗಳನ್ನು ಚಿಕ್ಕ ತುಂಡುಗಳನ್ನಾಗಿ ಮಾಡಿ ಸ್ವಲ್ಪ ಫ್ರೈ ಮಾಡಿ. ಅನಂತರ ಅದಕ್ಕೆ ದ್ರಾಕ್ಷಿ, ರುಬ್ಬಿದ ಖರ್ಜೂರ ಹಾಗೂ ಏಲಕ್ಕಿ ಪುಡಿ ಸೇರಿಸಿ. ಮಿಶ್ರಣ ತಣ್ಣಗಾದ ಮೇಲೆ, ಕೈಗೆ ತುಪ್ಪ ಸವರಿ ಲಾಡನ್ನು ಮಾಡಿ. ರುಚಕರವಾಗಿರುವ ಡ್ರೈ ಫ್ರೂಟ್ಸ್ ಲಡ್ಡು ರೆಡಿ. ಇದು ಆರೋಗ್ಯಕ್ಕೆ ಒಳ್ಳೆಯದು. ಸಕ್ಕರೆ ಕಾಯಿಲೆ ಇರುವವರು ಕೂಡ ಇದನ್ನು ಸೇವಿಸಬಹುದು.
– ಲಕ್ಷ್ಮೀ ಎಸ್. ಶೆಣೈ, ಬೈಲಕೆರೆ, ಚಿತ್ಪಾಡಿ
ಹೆಸರು ಕಾಳಿನ ಉಂಡೆ
ಬೇಕಾಗುವ ಸಾಮಗ್ರಿಗಳು: 1/2 ಕೆ.ಜಿ.ಹೆಸರು ಕಾಳು, 1/4 ಕೆ.ಜಿ.ಬೆಲ್ಲ, 1/2 ಕಪ್ ಕಾಯಿತುರಿ, 100 ಗ್ರಾಂ ಗೋಡಂಬಿ, 50 ಗ್ರಾಂ ದ್ರಾಕ್ಷಿ, 50 ಗ್ರಾಂ ತುಪ್ಪ, 50 ಗ್ರಾಂ ಏಲಕ್ಕಿ ಪುಡಿ
ಮಾಡುವ ವಿಧಾನ: ಹೆಸರು ಕಾಳನ್ನು ಪರಿಮಳ ಬರುವವರೆಗೂ ಕಾಯಿಸಿ, ತಣ್ಣಗಾದ ಮೇಲೆ ಅದನ್ನು ಮಿಕ್ಸಿಯಲ್ಲಿ ಚೆನ್ನಾಗಿ ಪುಡಿ ಮಾಡಬೇಕು. ಬಣಲೆಗೆ ಅಗತ್ಯಕ್ಕೆ ತಕ್ಕಂತೆ ತುಪ್ಪವನ್ನು ಹಾಕಿ ಅದಕ್ಕೆ ಹೆಸರು ಕಾಳಿನ ಪುಡಿಯನ್ನು ಸೇರಿಸಿ, ಹಸಿ ವಾಸನೆ ಹೋಗುವವರೆಗೂ ಕಾಯಿಸಿ, ಅನಂತರ ಅದಕ್ಕೆ ಬೆಲ್ಲ ಹಾಗೂ ತೆಂಗಿನತುರಿಯನ್ನು ಸೇರಿಸಿ ತಳ ಹಿಡಿಯದಂತೆ ಕೈಯಾಡಿ ಸುತ್ತಿರಬೇಕು. ಅನಂತರ ಗೋಡಂಬಿಯನ್ನು ತುಪ್ಪ ದಲ್ಲಿ ಕೆಂಬಣ್ಣ ಬರುವವರೆಗೂ ಕಾಯಿಸಿ, ಮಿಕ್ಸಿಯಲ್ಲಿ ತರಿ-ತರಿಯಾಗಿ ರುಬ್ಬಿಕೊಂಡು, ಅದನ್ನು ಮೊದಲೇ ಮಾಡಿಟ್ಟುಕೊಂಡ ಹೆಸರು ಕಾಳಿನ ಮಿಶ್ರಣಕ್ಕೆ ಸೇರಿಸಬೇಕು. ದ್ರಾಕ್ಷಿ ಹಾಗೂ ಏಲಕ್ಕಿ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ, ಉಂಡೆಗಳನ್ನಾಗಿ ಮಾಡಬೇಕು.
– ಕೆ.ಎಸ್. ಪ್ರಮೀಳಾ ಮುನಿಯಾಲು, ಕಾರ್ಕಳ
ಚಾಕೊಲೇಟ್, ಖರ್ಜೂರದ ಮೋದಕ
ಬೇಕಾಗುವ ಸಾಮಗ್ರಿಗಳು: ಹಾಲು 1 ಲೋಟ, ಕಂಡೆನ್ಸ್ ಹಾಲು ಅರ್ಧ ಲೋಟ, ಚಾಕೊಲೇಟ್ ಚಿಪ್ಸ್ 3/4 ಕಪ್, ಬೇಕಾಗುವ ಸಾಮಗ್ರಿಗಳು: ಹಾಲು 1 ಲೋಟ, ಕಂಡೆನ್ಸ್ ಹಾಲು ಅರ್ಧ ಲೋಟ, ಚಾಕೊಲೇಟ್ ಚಿಪ್ಸ್ 3/4 ಕಪ್, ಖರ್ಜೂರ 1/4 ಕಪ್, ಡೈಜೆಸ್ಟ್ ಬಿಸ್ಕತ್ 11/2 ಕಪ್, ಪಿಸ್ತಾ 1/4 ಕಪ್
ಮಾಡುವ ವಿಧಾನ: ಬಾಣಲೆಗೆ ಹಾಲು, ಚಾಕೊಲೇಟ್ ಚಿಪ್ಸ್ , ಕಂಡೆನ್ಸ್ ಮಿಲ್ಕ್ ಹಾಕಿ ಸಣ್ಣ ಉರಿಯಲ್ಲಿ ಕಲಸಿರಿ. ಚಕೊಲೇಟ್ ಕರಗಿದ ಅನಂತರ ಪುಡಿ ಮಾಡಿದ ಬಿಸ್ಕತ್ತ್ ಮತ್ತು ಪುಡಿಮಾಡಿದ ಖರ್ಜೂರ, ಪಿಸ್ತಾ ಹಾಕಿ ಸರಿಯಾಗಿ ಅಂಟು ಬರುವವರೆಗೆ ಕಲಸಿ ಅನಂತರ ಕೆಲಗಿಳಿಸಿ. ಅದನ್ನು ತಟ್ಟೆಗೆ ಹಾಕಿ ತಣ್ಣಗಾದ ಮೇಲೆ ಅದನ್ನು ಕೈಗೆ ತುಪ್ಪ ಸವರಿ ಉಂಡೆ ಮಾಡಿ ಮೋದಕದ ಆಕಾರ ಮಾಡಿ. ಈಗ ರುಚಿಯಾದ ಚಾಕೊಲೇಟ್ ಖರ್ಜೂರ ಮೋದಕ ಸವಿಯಲಿ ಸಿದ್ಧ.
– ಸುನಿತಾ ಆರ್. ಶೆಟ್ಟಿ, ಉಡುಪಿ
ಕೇಸರ್ ಹಾಲಿನ ಪೇಡಾ
ಬೇಕಾಗುವ ಸಾಮಗ್ರಿಗಳು: 2 ಚಮಚ ತುಪ್ಪ, 100 ಎಂಎಲ್ ಮಂದಗೊಳಿಸಿದ ಹಾಲು, 1 1/2 ಕಪ್ ಹಾಲಿನ ಪುಡಿ, 2 ಚಮಚ ಕೇಸರಿ ಹಾಲು, ಅರ್ಧ ಟೀಸ್ಪೂನ್ ಏಲಕ್ಕಿ ಪುಡಿ, 20 ಬಾದಾಮ್
ಮಾಡುವ ವಿಧಾನ: ಮೊದಲು ದಪ್ಪ ತಳ ಭಾಗದ ಪ್ಯಾನ್ ಅಥವಾ ನಾನ್‌ಸ್ಟಿಕ್ ಪ್ಯಾನ್‌ನಲ್ಲಿ ತುಪ್ಪ ಹಾಕಿ ಮಂದಗೊಳಿಸಿದ ಹಾಲು ಮತ್ತು ಹಾಲಿನ ಪುಡಿಯನ್ನು ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ ಕಾಯಲು ಇಡಿ (ಜ್ವಾಲೆ ಕಡಿಮೆ ಇರಲಿ) ಮಂದಗೊಳಿಸಿದ ಹಾಲು ಸಂಪೂರ್ಣ ಕರಗುವ ವರೆಗೆ ನಿರಂತರವಾಗಿ ಮಿಶ್ರಣ ಮಾಡಿ. ಮಿಶ್ರಣ ದಪ್ಪವಾದಾಗ ಕೇಸರಿ ಹಾಲು, ಏಲಕ್ಕಿ ಪುಡಿ ಮತ್ತು ತುಪ್ಪ ಸೇರಿಸಿ. ಅನಂತರ ಒಲೆ ಆರಿಸಿ ಮಿಶ್ರಣ ತಣ್ಣಗಾಗಲು ಅದರ ಮೇಲೆ ಸ್ವಲ್ಪ ಹಿಟ್ಟನ್ನು ಹರಡಿ, ಪೇಡಾ ತಯಾರಿಸಲು ಸುಲಭವಾಗುತ್ತದೆ. ಈಗ ಕೈಗೆ ಸ್ವಲ್ಪ ತುಪ್ಪ ಸವರಿಕೊಂಡು ಸ್ವಲ್ಪ ಸ್ವಲ್ಪ ಮಿಶ್ರಣ ತೆಗೆದುಕೊಂಡು ಉಂಡೆ ಮಾಡಿ, ಮಧ್ಯದಲ್ಲಿ ಪಿಸ್ತಾ ಅಥವಾ ಬಾದಾಮ್ ಅನ್ನು ಇರಿಸಿ. ಅಂತಿಮವಾಗಿ ಕೇಸರಿ ಹಾಲಿನ ಪೇಡಾ ಸವಿಯಲು ಸಿದ್ಧ.
– ಅನ್ನಪೂರ್ಣಿಕಾ ಪ್ರಭು, ಉಪನ್ಯಾಸಕರು, ವಿವೇಕಾನಂದ ಕಾಲೇಜು ಪುತ್ತೂರು
ಬಿಸ್ಕತ್ತು ಮೋದಕ
ಬೇಕಾಗುವ ಸಾಮಗ್ರಿಗಳು: 180 ಗ್ರಾಮ್ ಬಿಸ್ಕತ್ತು (ಗುಡ್ಡೆ ಇದ್ದರೆ ಉತ್ತಮ), 4 ದೊಡ್ಡ ಚಮಚ ಚಾಕೊಲೇಟ್ ಸಿರಫ್ (ಕರಗಿಸಿದ ಚಾಕೊಲೇಟ್), ಗೇರು ಬೀಜದ ಚೂರುಗಳು
ಮಾಡುವ ವಿಧಾನ: ಮೊದಲು ಬಿಸ್ಕತ್ತುಗಳನ್ನು ಮಿಕ್ಸಿಯಲ್ಲಿ ಪುಡಿಮಾಡಿಕೊಳ್ಳಿ, ಅನಂತರ ಅದಕ್ಕೆ ಚಾಕೊಲೇಟ್ ಸಿರಫ್ನ್ನು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಅನಂತರ ಉಂಡೆಮಾಡಿ ತುಪ್ಪ ಸವರಿದ ಮೋಲ್ಡ… ಗೆ ಹಾಕಿ, ನಡುವೆ ಗೇರುಬೀಜದ ಚೂರುಗಳನ್ನು ಹಾಕಿ ಮುಚ್ಚಿದಾಗ ಮೊದಕ ರೆಡಿ. ಇದನ್ನು ಬೇಯಿಸುವ ಆವಶ್ಯಕತೆ ಇಲ್ಲ. ಕ್ಷಣ ಮಾತ್ರದಲ್ಲಿ ಮೊದಕ ರೆಡಿಯಾಗುತ್ತದೆ.
– ಅಶ್ವಿನಿ ಮಾರ್ಪಳ್ಳಿ, ಉಡುಪಿ
ಜೋಳದ ವಡೆ
ಬೇಕಾಗುವ ಸಾಮಗ್ರಿಗಳು: ಜೋಳ -1, ಹಸಿಮೆಣಸು -3, ಶುಂಠಿ -1 ಇಂಚು, ಉಪ್ಪು, ಮೆಣಸಿನ ಹುಡಿ, ಕರಿಬೇವು ಸೊಪ್ಪು, ಕೊತಂಬರಿ ಸೊಪ್ಪು
ಮಾಡುವ ವಿಧಾನ: ಮೊದಲು ಮಿಕ್ಸಿಗೆ ಜೋಳವನ್ನು ಹಾಕಿ ತರಿ ತರಿಯಾಗಿ ರುಬ್ಬಬೇಕು. ಇನ್ನೊಮ್ಮೆ ಮಿಕ್ಸಿಗೆ ಹಸಿಮೆಣಸು, ಕರಿಬೇವು, ಶುಂಠಿ ಎಲ್ಲವನ್ನು ರುಬ್ಬಿ ಜೋಳಕ್ಕೆ ಹಾಕಿ, ಮೇಲಿನ ಸಾಮಗ್ರಿ ಹಾಕಿ ಕಲಸಿ ಉಂಡೆ ಕಟ್ಟಿ ವಡೆ ಆಕಾರ ತಟ್ಟಿ ಕಾದ ಎಣ್ಣೆಗೆ ಬಿಡಬೇಕು.
– ಆಶಾ ಅಡೂರ, ಕಡಿರುದ್ಯಾವರ, ಬೆಳ್ತಂಗಡಿ
ಹಿಟ್ಟಿನುಂಡೆ
ಬೇಕಾಗುವ ವಸ್ತುಗಳು: ಕೆಂಪುಕಡ್ಲೆ (ಪದಾರ್ಥದ್ದು) – 1 ಕಪ್, ಹೆಸರು ಕಾಳು (ಹಸಿರು ಕಾಳು) – 1 ಕಪ್, ಬೆಲ್ಲ, ಗೇರುಬೀಜ, ತುಪ್ಪ
ಮಾಡುವ ವಿಧಾನ: ಪದಾರ್ಥಕ್ಕೆ ಉಪಯೋಗಿಸುವ ಕೆಂಪುಕಡಲೆ ಹಾಗೂ ಹೆಸರು ಕಾಳನ್ನು ಸಮಪ್ರಮಾಣದಲ್ಲಿ ಹುರಿದು ಹುಡಿ (ಹಿಟ್ಟು) ಮಾಡಬೇಕು. ಅನಂತರ ಮುಕ್ಕಾಲು ಪ್ರಮಾಣದಷ್ಟು ಬೆಲ್ಲವನ್ನು ನೀರಿಗೆ ಹಾಕಿ ಪಾಕ ಮಾಡಬೇಕು. ಗೇರುಬೀಜವನ್ನು ತುಂಡರಿಸಿ ಬೆಲ್ಲದ ಪಾಕಕ್ಕೆ ಹಾಕಬೇಕು. ಅನಂತರ ಬೆಲ್ಲದ ಪಾಕದಲ್ಲಿ ಮಿಶ್ರಗೊಳಿಸಿದ ಹಿಟ್ಟನ್ನು ಹಾಕಿ ಮಿಶ್ರ ಮಾಡಬೇಕು. ಕೈಗೆ ತುಪ್ಪ ಸವರಿ ಬಿಸಿ ಬಿಸಿ ಇರುವಾಗಲೇ ಉಂಡೆ ಕಟ್ಟಬೇಕು.
– ಸುರೇಖಾ ಕಿಶೋರ್ ಕುಮಾರ್, ಕುಂದಾಪುರ
ಎಳ್ಳು ಮೆಂತೆ ಪಾಕ
ಬೇಕಾಗುವ ಸಾಮಗ್ರಿಗಳು: ಎಳ್ಳು-1ಕೆ.ಜಿ, ಮೆಂತೆ- ಅರ್ಧ ಕೆ.ಜಿ, ಬೆಲ್ಲ- 1 ಕೆಜಿ, 3 ಅಥವಾ 4 ತೆಂಗಿನ ಕಾಯಿ, ಸ್ವಲ್ಪ ತುಪ್ಪ.
ವಿಧಾನ: ಮೊದಲಿಗೆ ಎಳ್ಳು ಮೆಂತೆಯನ್ನು ಚೆನ್ನಾಗಿ ಹುರಿದು ಮಿಕ್ಸಿಯಲ್ಲಿ ಪುಡಿಮಾಡಿ. ಬೆಲ್ಲವನ್ನು ಸಹ ಚೆನ್ನಾಗಿ ತುರಿದು ಪುಡಿ ಮಾಡಿಕೊಳ್ಳಿ. ಅನಂತರ ತೆಂಗಿನಕಾಯಿಯನ್ನು ತುರಿದು ಮಿಕ್ಸಿಯಲ್ಲಿ ರುಬ್ಬಿ ಹಾಲು ತೆಗೆದುಕೊಂಡು ಚೆನ್ನಾಗಿ ಬೆಂಕಿಯಲ್ಲಿ ಬೇಯಿಸಬೇಕು. ತೆಂಗಿನ ಹಾಲಿನ ಗಸಿ ಕೆಂಪಾಗಿ ಎಣ್ಣೆ ಬಿಡುತ್ತಾ ಬರುವಾಗ ಹುರಿದು ಮೆಂತೆಹುಡಿ ಹಾಕಿ ಚೆನ್ನಾಗಿ ಮಗುಚಬೇಕು. ಒಲೆಯಿಂದ ಇಳಿಸುವಾಗ ಸ್ವಲ್ಪ ತುಪ್ಪ ಹಾಕಿರಿ. ಕಹಿ ಮತ್ತು ಸಿಹಿ ಮಿಶ್ರಣದ ಈ ಪಾಕ ತಿನ್ನಲು ರುಚಿಯಾಗಿ ವಾರಗಳ ಕಾಲ ಇರಿಸಬಹುದು.
– ಸುನೀತಾ ಕೆ., ಕುಕ್ಕೆ ಸುಬ್ರಹ್ಮಣ್ಯ
ಪೋಹಾ ರವಾ ಲಾಡು
ಬೇಕಾಗುವ ಸಾಮಗ್ರಿಗಳು: ತುಪ್ಪ- ಅರ್ಧ ಕಪ್, ಪೋಹಾ (ಅವಲಕ್ಕಿ)- 1 ಕಪ್, ರವೆ- 1 ಕಪ್, ದ್ರಾಕ್ಷಿ , ಗೋಡಂಬಿ (ಹುರಿದದ್ದು) – ಅರ್ಧ ಕಪ್, ಕಡಲೆ ಬೇಳೆ- 4 ಲೋಟ, ಬೆಲ್ಲ- ಮುಕ್ಕಾಲು (3/4) ಕಪ್
ಮಾಡುವ ವಿಧಾನ: ಒಂದು ಕಡಾಯಿಗೆ 4 ಚಮಚ ತುಪ್ಪವನ್ನು ಹಾಕಿ ಅನಂತರ ಒಂದು ಕಪ್ ಪೋಹಾ(ಅವಲಕ್ಕಿ) ಮತ್ತು ರವೆಯನ್ನು ಕಂದು ಬಣ್ಣ ಬರುವವರೆಗೆ ಚೆನ್ನಾಗಿ ಫ್ರೈ ಮಾಡಿ. ಅದನ್ನು ಮಿಕ್ಸಿಗೆ ಹಾಕಿ ಚೆನ್ನಾಗಿ ಪುಡಿ ಮಾಡಿಕೊಳ್ಳಿ. ಈಗ ಅದೇ ಕಡಾಯಿಗೆ 3ರಿಂದ ನಾಲ್ಕು ಚಮಚ ತುಪ್ಪವನ್ನು ಹಾಕಿ ಸ್ವಲ್ಪ ದ್ರಾಕ್ಷಿ ಮತ್ತು ಗೋಡಂಬಿಯನ್ನು ಹುರಿದಿಟ್ಟುಕೊಳ್ಳಿ. ಇನ್ನೊಂದು ಕಡಾಯಿಗೆ ಮುಕ್ಕಾಲು ಕಪ್ ಬೆಲ್ಲವನ್ನು ಹಾಕಿ ಕಾಲು ಕಪ್ ನೀರು ಹಾಕಿ ಪಾಕ ಮಾಡಿ ಅದಕ್ಕೆ ಹುಡಿ ಮಾಡಿದ ಅವಲಕ್ಕಿ ಮತ್ತು ರವೆಯನ್ನು ಸೇರಿಸಿ ಚೆನ್ನಾಗಿ ಮಗುಚುತ್ತಾ ಬನ್ನಿ. ಅದು ಗಟ್ಟಿಯಾಗುತ್ತಾ ಬರುವಾಗ ಅದಕ್ಕೆ ತುಪ್ಪದಲ್ಲಿ ಹುರಿದ ಗೋಡಂಬಿ ಮತ್ತು ದ್ರಾಕ್ಷಿಯನ್ನು ಸೇರಿಸಿ ಆರಲು ಬಿಡಿ. ಬಳಿಕ ಸಣ್ಣಗೆ ಉಂಡೆ ಮಾಡಿ ಈಗ ಸ್ವಾದಿಷ್ಟವಾದ ಲಡ್ಡು ಸವಿಯಲು ಸಿದ್ದ.
– ಮೇಘ, ಮೂಡುಬಿದಿರೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.