ತನ್ನಿಮಿತ್ತ: ಆಚರಣೆಯ ಹಿಂದಿತ್ತು ಸ್ವಾತಂತ್ರ್ಯದ ಕನಸು!
Team Udayavani, Aug 22, 2020, 6:44 AM IST
ಗಣೇಶ ಹಬ್ಬದ ಸಾರ್ವಜನಿಕ ಆಚರಣೆ ವೇಗ ಪಡೆಯಲಾರಂಭಿಸಿಬಿಟ್ಟಿತು. ದೇಶಾದ್ಯಂತ ಮೊಳಗಲಾರಂಭಿಸಿದ ಗಣಪನ ಜೈಕಾರಗಳು ಬ್ರಿಟಿಷರ ಎದೆಯಲ್ಲಿ ನಡುಕಹುಟ್ಟಿಸಿಬಿಟ್ಟವು.
ಬ್ರಿಟಿಷರ ಕಪಿಮುಷ್ಟಿಯಲ್ಲಿ ಸಿಲುಕಿ ಇಡೀ ದೇಶವೇ ತತ್ತರಿಸಿ ಹೋಗಿದ್ದ ಕಾಲವದು. ಹಾಗೆಂದು ಭಾರತೀಯರು ಸುಮ್ಮನೆ ಕೈಕಟ್ಟಿ ಕುಳಿತಿರಲಿಲ್ಲ. ಬ್ರಿಟಿಷರ ವಿರುದ್ಧ ನಿರಂತರ ಹೋರಾಟವನ್ನು ನಡೆಸುತ್ತಲೇ ಇದ್ದರು. ಆದರೆ ಬ್ರಿಟಿಷರು ಜಾತಿ ಜನಾಂಗಗಳ ನಡುವೆ ವಿಷಬೀಜ ಬಿತ್ತುತ್ತಾ, ಸ್ವಾತಂತ್ರ್ಯ ಹೋರಾಟ ಗಾರರ ನಡುವೆಯೂ ಕಂದಕ ನಿರ್ಮಾಣ ಮಾಡಿ ಸ್ವಾತಂತ್ರ್ಯ ಹೋರಾಟದ ಪ್ರಯತ್ನಗಳನ್ನು ನಿರಂತರ ವಾಗಿ ಹತ್ತಿಕ್ಕುವಲ್ಲಿ ಯಶಸ್ವಿ ಆಗುತ್ತಲೇ ಇದ್ದರು. ಸ್ವಾತಂತ್ರ್ಯದ ಬಗ್ಗೆ ಮಾತನಾಡಿದರೆ ಸಾಕು ಬ್ರಿಟಿಷ್ ಆಡಳಿತ ಅದನ್ನು ದೇಶ ವಿರೋಧಿ ಕೃತ್ಯ ಎಂದು ಬಿಂಬಿಸಿ ಅಂತಹ ನಾಯಕರನ್ನು ಬಂಧಿಸಿ ಅಮಾನುಷವಾಗಿ ಶಿಕ್ಷಿಸುತ್ತಿತ್ತು.
ಇಂತಹ ಬ್ರಿಟಿಷರ ಕುತಂತ್ರದ ಆಟಗಳನ್ನ ನೋಡಿ ಬೇಸತ್ತಿದ್ದ ಅಂದಿನ ಪ್ರಮುಖ ಸ್ವಾತಂತ್ರ್ಯ ಹೋರಾಟ ಗಾರರಾಗಿದ್ದ ಹಾಗೂ ಸ್ವಾತಂತ್ರ್ಯ ಚಳವಳಿಗಳ ಪಿತಾಮಹರೆಂದೇ ಗುರುತಿಸಿಕೊಂಡಿದ್ದ ಲೋಕ ಮಾನ್ಯ ಬಾಲಗಂಗಾಧರ ತಿಲಕರು ಭಾರತೀಯರಲ್ಲಿ ಒಗ್ಗಟ್ಟು ಮೂಡಿಸುವ ಪ್ರಯತ್ನಕ್ಕೆ ಧುಮುಕಿದರು. ಭಾರತೀಯರ ಮನಃಸ್ಥಿತಿ, ವೈವಿಧ್ಯತೆ, ಸಂಸ್ಕೃತಿಗಳ ಆಳ-ಅಗಲಗಳನ್ನು ಚೆನ್ನಾಗಿಯೇ ತಿಳಿದಿದ್ದ ತಿಲಕರು ಹೇಗಾದರೂ ಮಾಡಿ ನಮ್ಮವರೆಲ್ಲರಲ್ಲೂ ಒಗ್ಗ ಟ್ಟನ್ನು ಮೂಡಿಸಬೇಕೆಂಬ ನಿಶ್ಚಯಸಿದರು. ಆಗ ಅವರಿಗೆ ಅರಿವಾದದ್ದೆಂದರೆ, ಗಣಪತಿ ದೇವರು ಸರ್ವವಂದ್ಯ ಎನ್ನುವುದು. ಅಂದರೆ ಭಾರತೀಯರೆಲ್ಲರೂ ಗಣಪತಿಯನ್ನು ಪೂಜಿಸುತ್ತಿದ್ದರು. ಕೂಡಲೇ ತಿಲಕರು ಕೇವಲ ಕೆಲವು ಮನೆಗಳಲ್ಲಿ ಆಚರಿಸಲಾಗುತ್ತಿದ್ದ . ಗಣೇಶೋತ್ಸವವನ್ನು ಸಾರ್ವಜನಿಕ ಬೃಹತ್ ಉತ್ಸವವನ್ನಾಗಿ ಪರಿವರ್ತಿಸಿದರು. ಆ ಆಚರಣೆಗೆ ವ್ಯಾಪಕತೆಯನ್ನು ತಂದುಬಿಟ್ಟರು. ನೋಡನೋಡುತ್ತಿದ್ದಂತೆಯೇ, ಗಣೇಶ ಹಬ್ಬದ ಸಾರ್ವಜನಿಕ ಆಚರಣೆ ವೇಗ ಪಡೆಯಲಾರಂಭಿಸಿಬಿಟ್ಟಿತು. ದೇಶಾದ್ಯಂತ ಮೊಳಗಲಾರಂಭಿಸಿದ ಗಣಪನ ಜೈಕಾರಗಳು ಬ್ರಿಟಿಷರ ಎದೆಯಲ್ಲಿ ನಡುಕಹುಟ್ಟಿಸಿಬಿಟ್ಟವು.
ಆರಂಭದಲ್ಲಿ ಮಹಾರಾಷ್ಟ್ರ ಭಾಗಕ್ಕೆ ಸೀಮಿತವಾಗಿದ್ದ ಸಾರ್ವಜನಿಕ ಗಣೇಶೋತ್ಸವವು ದೇಶದ ಇನ್ನುಳಿದ ಭಾಗಗಳಲ್ಲೂ ಆಚರಣೆಗೆ ಬರುವಂತೆ ಮಾಡಿದರು ತಿಲಕರು. ಈ ಹಬ್ಬವು ಭಾರತದಲ್ಲಿ ಯಾವ ಪರಿ ಒಗ್ಗಟ್ಟು ಸೃಷ್ಟಿಸಲಾರಂಭಿಸಿತು, ಜನರ ನಡುವೆ ಜಾತಿ ತಾರತಮ್ಯವನ್ನು ತಗ್ಗಿಸಿ ಎಲ್ಲರೂ ಜತೆಯಾಗಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತಾಯಿತು ಎಂದರೆ, ನಿಜಕ್ಕೂ ಬ್ರಿಟಿಷರ ವಿರುದ್ಧ ಭಾರತೀಯರ ಗೆಲುವಲ್ಲಿ ಗಣೋಶೋತ್ಸವದ ಪಾತ್ರವೂ ಮಹತ್ತರವಾದದ್ದು ಎಂದು ಇತಿಹಾಸಕಾರರು ಹೇಳುತ್ತಾರೆ.
ಸಾಮಾನ್ಯವಾಗಿ ಆ ಸಮಯದಲ್ಲಿ ದೇಶ ಭಕ್ತ ಜನರೆಲ್ಲ ಒಂದಾದಾಗ ಬ್ರಿಟಿಷರು ಕೂಡಲೇ ಸ್ಥಳಕ್ಕೆ ತೆರಳಿ ಲಾಠಿ ಚಾರ್ಜ್ ಮೂಲಕವೋ ಅಥವಾ ಹಲವು ಬಾರಿ ಗೋಲಿಬಾರ್ ಮಾಡುತ್ತಾ ಜನರನ್ನು ಚದುರಿಸಿಬಿಡುತ್ತಿದ್ದರು. ಆದರೆ ಗಣೇಶೋತ್ಸವದ ವಿಚಾರದಲ್ಲಿ ಆ ರೀತಿ ಯೋಚಿಸುವುದಕ್ಕೂ ಬ್ರಿಟಿಷರಿಗೆ ಧೈರ್ಯ ಸಾಲಲಿಲ್ಲ. ಏಕೆಂದರೆ, ಇದು ಧರ್ಮಕ್ಕೆ ಸಂಬಂಧಿಸಿದ ವಿಚಾರವಾಗಿತ್ತು. ಒಂದು ವೇಳೆ, ಗಣೇಶೋತ್ಸವಕ್ಕೆ ಅಡ್ಡಿಪಡಿಸಿದರೆ, ಅದರ ಕಿಚ್ಚು ದೇಶಾದ್ಯಂತ ಬ್ರಿಟಿಷ್ ಆಡಳಿತವನ್ನು ಅಲುಗಿಸುವುದರಲ್ಲಿ ಸಂದೇಹವೇ ಇಲ್ಲ ಎಂದು ಬ್ರಿಟಿಷ್ ಉನ್ನತಾಧಿಕಾರಿಗಳ ಮಟ್ಟದ ಸಭೆಯಲ್ಲಿ ನಿರ್ಣಯಕ್ಕೆ ಬರಲಾಯಿತು.
ಗಣೇಶೋತ್ಸವದ ಉದ್ದೇಶ ಸ್ಪಷ್ಟವಾಗಿತ್ತು. ಒಂದು, ಭಾರತೀಯರನ್ನು ಒಂದುಗೂಡಿಸುವುದು, ದೇಶ ಪ್ರೇಮವನ್ನು ಉದ್ದೀಪಿಸುವುದು. ಎರಡು, ಸ್ವಾತಂತ್ರ್ಯ ಹೋರಾಟಗಾರರೆಲ್ಲ ಒಂದಾಗಿ ಬ್ರಿಟಿಷರ ವಿರುದ್ಧದ ಹೋರಾಟದ ರೂಪುರೇಷೆಗಳನ್ನು ನಿರ್ಣಯಿಸುವುದು.
ಗಮನಾರ್ಹ ಸಂಗತಿಯೆಂದರೆ, ಆಗಿನ ಗಣೇಶೋತ್ಸವವು ದೇಶಪ್ರೇಮದ ಭಾಷಣಗಳು, ದೇಶಭಕ್ತಿಯ ಕವನಗಳ ವಾಚನಗಳು, ಭಾರತೀಯ ಸಾಂಸ್ಕೃತಿಕ ವೈವಿಧ್ಯವನ್ನು ಸಾರುವಂಥ ನೃತ್ಯಪ್ರದರ್ಶನಗಳು, ಶಾರೀರಿಕ ಆಟಗಳ ಪ್ರದರ್ಶನಗಳು, ಸಾಂಸ್ಕೃತಿಕ ಚಟುವಟಿಕೆಗಳಿಗೆ ವೇದಿಕೆಯಾಗಿ ಮಾರ್ಪಟ್ಟಿದ್ದವು.
ಗಣೇಶೋತ್ಸವದ ಆಚರಣೆ ಸಾಕಾರಗೊಳ್ಳಲಿ
ಅಂದು ಬ್ರಿಟಿಷರ ದೌರ್ಜನ್ಯ, ಭಾರತೀಯರ ಮೇಲಾಗುತ್ತಿರುವ ಅವಮಾನ ಮತ್ತು ಅಪಚಾರಗಳ ವಿರುದ್ಧ ಧ್ವನಿ ಎತ್ತಲು ಹಾಗೂ ಭಾರತೀಯರಲ್ಲಿ ಏಕತೆಯನ್ನು ಮೂಡಿಸಲು ಹುಟ್ಟಿಕೊಂಡ, ಅನೇಕ ದೇಶಪ್ರೇಮಿ ಕ್ರಾಂತಿಕಾರಿಗಳ ಉಗಮಕ್ಕೆ ಹಾಗೂ ಮುಖ್ಯವಾಗಿ ಭಾರತೀಯ ಸಂಸ್ಕೃತಿಯ ಉತ್ಥಾನಕ್ಕೆ ಕಾರಣವಾದ ಸಾರ್ವಜನಿಕ ಗಣೇಶೋತ್ಸವವೆಂಬ ಬಾಲಗಂಗಾಧರ ತಿಲಕರ ಕಲ್ಪನೆ ಈಗ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿದೆ.
ಗಣೇಶೋತ್ಸವಗಳು ಈಗ ದೇಶದ ಸಮಸ್ಯೆಗಳ ಕುರಿತು ಚರ್ಚೆ ನಡೆಸುವ ವೇದಿಕೆಗಳಾಗಿ ಬದಲಾಗಲಿ, ನಮ್ಮ ದೇಶದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಭಯೋತ್ಪಾದನೆ ಅನಕ್ಷರತೆ, ಬಡತನಗಳಿಂದ ಹೇಗೆ ನಾವು ಮುಕ್ತಿ ಹೊಂದಬೇಕು ಎಂಬುದರ ಬಗ್ಗೆ ಚಿಂತನ ಗೋಷ್ಠಿಗಳು ಏರ್ಪಡಲಿ, ಜನರ ನಡುವಿನ ತಾರತಮ್ಯ ನಿವಾರಣೆಯ ಹಬ್ಬವಾಗಲಿ. ಒಳ್ಳೆಯ ರೀತಿಯಲ್ಲಿ ಗಣೇಶೋತ್ಸವವನ್ನು ಆಚರಿಸುವುದಕ್ಕೆ ಈಗಲಾದರೂ ನಾವೆಲ್ಲ ಮುಂದಾಗೋಣ.
ಅಮಿತ್‌ಕುಮಾರ್ ಬಿರಾದಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.