ಆನ್‌ಲೈನ್ ತರಗತಿ ನಡೆಯಲಿ ವ್ಯವಸ್ಥೆಯೂ ಚೆನ್ನಾಗಿರಲಿ
Team Udayavani, Aug 27, 2020, 6:18 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಅಕ್ಟೋಬರ್ 1ರಿಂದ ರಾಜ್ಯದಲ್ಲಿ ಪದವಿ ತರಗತಿಗಳನ್ನು ಆರಂಭಿಸುವ ಬಗ್ಗೆ ರಾಜ್ಯ ಸರಕಾರ ಘೋಷಣೆ ಮಾಡಿದೆ.
ಜತೆಗೆ ಪದವಿ ಕಾಲೇಜುಗಳು ಸೆಪ್ಟಂಬರ್ 1ರಿಂದ ಶೈಕ್ಷಣಿಕ ವರ್ಷದ ಆನ್‌ಲೈನ್ ತರಗತಿಗಳನ್ನು ಪೂರ್ಣ ಪ್ರಮಾಣದಲ್ಲಿ ಆರಂಭಿಸಲಿವೆ ಎಂದು ಉನ್ನತ ಶಿಕ್ಷಣ ಸಚಿವ ಉಪಮುಖ್ಯಮಂತ್ರಿ ಡಾ| ಸಿ.ಎನ್.ಅಶ್ವತ್ಥ ನಾರಾಯಣ ಅವರು ಪ್ರಕಟಿಸಿದ್ದಾರೆ.
ಈ ಮೂಲಕ ಸರಕಾರ ರಾಜ್ಯದ ಪದವಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಂಡಿದೆ.
ಮಾರ್ಚ್‌ನಲ್ಲಿ ಲಾಕ್‌ಡೌನ್ ಘೋಷಣೆಯಾದ ದಿನದಿಂದ ಇಂದಿನವರೆಗೂ ಪದವಿ ತರಗತಿಗಳು ಸಮರ್ಪಕವಾಗಿ ನಡೆದಿಲ್ಲ.
ಆನ್‌ಲೈನ್ ವೇದಿಕೆಯ ಮೂಲಕ ತರಗತಿಗಳು ನಡೆದಿದ್ದರೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಸಮರ್ಪಕವಾಗಿ ತಲುಪುವುದು ಸಾಧ್ಯವಾಗಿರಲಿಲ್ಲ.
ಅಲ್ಲದೆ, ಪೂರ್ವ ಮುದ್ರಿತ ವೀಡಿಯೋ ತರಗತಿಗಳನ್ನು ಕಾಲೇಜು ಶಿಕ್ಷಣ ಇಲಾಖೆ ಮತ್ತು ಆಯಾ ಕಾಲೇಜಿನ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸಿ, ಆ ಮೂಲಕ ವಿದ್ಯಾರ್ಥಿಗಳ ಕಲಿಕೆಗೆ ವ್ಯವಸ್ಥೆ ಮಾಡಲಾಗಿತ್ತು.
ಇನ್ನು ಕೆಲವು ಕಾಲೇಜುಗಳ ಪ್ರಾಧ್ಯಾಪಕರು ಹಾಗೂ ಪ್ರಾಂಶುಪಾಲರು ಯೂ-ಟ್ಯೂಬ್ ಚಾನೆಲ್ ಮೂಲಕ ಪಠ್ಯ ಬೋಧನೆ ಮಾಡಿದ್ದಾರೆ. ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಆನ್‌ಲೈನ್ ತರಗತಿಯಿಂದ ಇನ್ನಷ್ಟು ಸಂಕಷ್ಟ ಎದುರಿಸಿದ್ದರು. ಪ್ರಾಯೋಗಿಕ ತರಗತಿಗಳು ಆನ್‌ಲೈನ್‌ನಲ್ಲಿ ಅಸಾಧ್ಯವಾಗಿದೆ.
ಇಷ್ಟೆಲ್ಲ ಅಡೆತಡೆಗಳ ನಡುವೆಯೂ ಅನೇಕ ಕಾಲೇಜುಗಳು ಉತ್ತಮ ಪ್ರಯತ್ನ ನಡೆಸಿವೆ. ಆದರೆ ಇದ್ಯಾವುದು ತರಗತಿ ಕೊಠಡಿಯ ಬೋಧನೆಗೆ ಸಮಾನದ ಫಲಿತಾಂಶ ನೀಡಿಲ್ಲ.
ಗ್ರಾಮೀಣ ಭಾಗದಲ್ಲಿ ಇಂದಿಗೂ ಇಂಟರ್‌ನೆಟ್, ನೆಟ್‌ವರ್ಕ್ ಹಾಗೂ ಇತರೆ ತಾಂತ್ರಿಕ ಸಮಸ್ಯೆಗಳು ಜೀವಂತವಾಗಿವೆ. ಸರಕಾರದ ಬಹುತೇಕ ಪ್ರಥಮ ದರ್ಜೆ ಪದವಿ ಕಾಲೇಜುಗಳು ಗ್ರಾಮೀಣ ಭಾಗದಲ್ಲಿವೆ.
ಇಲ್ಲಿ ವ್ಯಾಸಂಗ ಮಾಡುವ ಹೆಚ್ಚಿನ ವಿದ್ಯಾರ್ಥಿಗಳು ಮಾಸಿಕ ದುಬಾರಿ ವೆಚ್ಚ ಮಾಡಿ ಮೊಬೈಲ್ ಇಂಟರ್‌ನೆಟ್ ಖರೀದಿಸಿ, ಕಲಿಯುವಷ್ಟು ಆರ್ಥಿಕವಾಗಿಯೂ ಶಕ್ತರಾಗಿಲ್ಲ. ಸರಕಾರ ಪದವಿ ತರಗತಿಗಳನ್ನು ಆನ್‌ಲೈನ್ ಮೂಲಕ ಪೂರ್ಣಪ್ರಮಾಣದಲ್ಲಿ ಆರಂಭಿಸುವ ಜತೆಗೆ ಅದಕ್ಕೆ ಬೇಕಾದ ಅಗತ್ಯ ಮತ್ತು ಕನಿಷ್ಠ ಸೌಲಭ್ಯವನ್ನಾದರೂ ವಿದ್ಯಾರ್ಥಿಗಳಿಗೆ ಹಾಗೂ ಕಾಲೇಜುಗಳಿಗೆ ಒದಗಿಸಬೇಕು.
ಪದವಿ ತರಗತಿಗಳನ್ನು ಆನ್‌ಲೈನ್ ಮೂಲಕ ಪೂರ್ಣ ಪ್ರಮಾಣದಲ್ಲಿ ಆರಂಭಿಸುವಷ್ಟು ಸುಸಜ್ಜಿತ ವ್ಯವಸ್ಥೆಯನ್ನು ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಸರಕಾರ ಮೊದಲು ಒದಗಿಸಬೇಕು. ಅನೇಕ ಕಾಲೇಜುಗಳಲ್ಲಿ ಇಂಟರ್‌ನೆಟ್ ಸಮಸ್ಯೆಯಿದೆೆ. ಇದನ್ನು ಸರಿಪಡಿಸಿಕೊಂಡು ಆನ್‌ಲೈನ್ ತರಗತಿ ನಡೆಸಬೇಕು.
ಹಲವು ಕಾರಣಗಳಿಗಾಗಿ ಅನೇಕ ವಿದ್ಯಾರ್ಥಿಗಳು ಆನ್‌ಲೈನ್ ತರಗತಿಯಿಂದ ಹೊರಗುಳಿಯುವ ಸಾಧ್ಯತೆಯಿದೆ. ಹೀಗಾಗದಂತೆ ಸರಕಾರ ಹಾಗೂ ಶಿಕ್ಷಣ ಇಲಾಖೆ ಎಚ್ಚರ ವಹಿಸಬೇಕು. ಯೂ-ಟ್ಯೂಬ್ ಮೂಲಕ ತರಗತಿ ನಡೆಸಿದರೆ, ವಿದ್ಯಾರ್ಥಿಗಳು ಸಕ್ರಿಯವಾಗಿ ಅದನ್ನು ಕೇಳುತ್ತಿದ್ದಾರೆ ಅಥವಾ ಭಾಗವಹಿಸಿದ್ದಾರೆ ಎಂಬುದನ್ನು ನಿಗಾವಹಿಸಲು ಸಾಧ್ಯವಿಲ್ಲ. ಆನ್‌ಲೈನ್ ವೇದಿಕೆ ಮೂಲಕ ತರಗತಿ ನಡೆಸಿದರೆ, ವಿದ್ಯಾರ್ಥಿಗಳು ಅದರಲ್ಲಿ ಭಾಗಿಯಾಗಿರುವುದು ತಿಳಿಯುತ್ತದೆ.
ಈ ವ್ಯವಸ್ಥೆಯಲ್ಲಿ ಎಲ್ಲ ವಿದ್ಯಾರ್ಥಿಗಳು ತಾವಿರುವ ಪ್ರದೇಶದಿಂದಲೇ ಭಾಗವಹಿಸಲು ಸಾಧ್ಯವೇ ಎಂಬುದನ್ನು ಖಚಿತಪಡಿಸಿಕೊಂಡು, ಶಿಕ್ಷಣ ದಿಂದ ಯಾವೊಬ್ಬ ವಿದ್ಯಾರ್ಥಿಯೂ ವಂಚತರಾಗದ ರೀತಿಯಲ್ಲಿ ಆನ್‌ಲೈನ್ ತರಗತಿಗಳನ್ನು ನಡೆಸಬೇಕು. ಇಲ್ಲವಾದರೆ, ಅನೇಕ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಯ ಲಾಭ ಪಡೆದುಕೊಳ್ಳಲು ಸಾಧ್ಯವಾಗದೇ ಇರಬಹುದು.
ಸಮಾನ ಸೌಲಭ್ಯ ಆನ್‌ಲೈನ್ ತರಗತಿ ಬೋಧನೆ ಹಾಗೂ ಕಲಿಕೆಗೂ ನೀಡಬೇಕು. ಆನ್‌ಲೈನ್ ಶಿಕ್ಷಣ ತರಗತಿ ಕೊಠಡಿಯೊಳಗಿನ ಬೋಧನೆಗೆ ಪರ್ಯಾಯವಲ್ಲದೇ ಇದ್ದರೂ ನಗರ, ಗ್ರಾಮೀಣ ಪ್ರದೇಶದ ಭೇದವಿಲ್ಲದೆ ಪ್ರತಿ ವಿದ್ಯಾರ್ಥಿಯೂ ಇದರ ಉಪಯೋಗ ಪಡೆಯುವಂತಾಗಬೇಕು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.