ಆಧಾರ್ ಕಾರ್ಡ್‌ಗೆ ಸಿಮ್ ಖರೀದಿ ಕಡ್ಡಾಯ
ಮಕ್ಕಳಿಗೂ ಸಿಗುತ್ತಿದೆ ಬಿಎಸ್‌ಎನ್‌ಎಲ್ ಸಿಮ್ ಕಾರ್ಡ್ ,ಒಂದು ಸಿಮ್ ಖರೀದಿಗೆ 130 ರೂ.
Team Udayavani, Sep 8, 2020, 3:38 PM IST
ಮಂಡ್ಯ: ಹೊಸದಾಗಿ ಆಧಾರ್ ಕಾರ್ಡ್ ಹಾಗೂ ತಿದ್ದುಪಡಿ ಮಾಡಲು ಮೊಬೈಲ್ ಸಿಮ್ ಕಡ್ಡಾಯವಾಗಿ ಖರೀದಿಸಬೇಕು ಎಂಬ ನಿಯಮ ನಗರದ ಬಿಎಸ್‌ಎನ್ ಎಲ್ ಕಚೇರಿಯಲ್ಲಿ ನಡೆಯುತ್ತಿದೆ.
ನಗರದ ವಿವಿಧೆಡೆ ಆಧಾರ್ ಕಾರ್ಡ್ ಹಾಗೂ ತಿದ್ದುಪಡಿ ಮಾಡಲಾಗುತ್ತಿದೆ. ಆದರೆ, ಸಾರ್ವಜನಿಕರ ದಟ್ಟಣೆ ಹಾಗೂ ದಿನದ ಕೆಲಸಗಳನ್ನು ಬಿಟ್ಟು ಬಂದು ದಿನಗಟ್ಟಲೇ ಕಾಯಬೇಕಾದ ಪರಿಸ್ಥಿತಿ ಇರುವುದರಿಂದ ಸಾರ್ವಜನಿಕರು ಬಿಎಸ್‌ಎನ್‌ಎಲ್ ಕಚೇರಿಯಲ್ಲಿ ಬೇಗ ಆಗಲಿದೆ ಎಂದು ಆಗಮಿಸುತ್ತಾರೆ. ಆದರೆ, ಅದನ್ನೇ ಬಂಡವಾಳ ಮಾಡಿಕೊಂಡಿರುವ ಬಿಎಸ್‌ಎನ್‌ಎಲ್ ಅಧಿಕಾರಿಗಳು ಮಾರ್ಕೆಟಿಂಗ್ ಹೆಸರಿನಲ್ಲಿ ಸಿಮ್ ಖರೀದಿಸುವ ಕಡ್ಡಾಯ ನಿಯಮ ಮಾಡಿದ್ದಾರೆ. ಹೊಸದಾಗಿ ಆಧಾರ್ ಕಾರ್ಡ್ ಅಥವಾ ತಿದ್ದುಪಡಿ ಮಾಡಿಸಲು ನಗರದ ಬಿಎಸ್‌ಎನ್‌ಎಲ್ ಕಚೇರಿಗೆ ಆಗಮಿಸುವ ಸಾರ್ವಜನಿಕರು ಕಡ್ಡಾಯವಾಗಿ ಸಿಮ್ ಕಾರ್ಡ್ ಖರೀದಿಸಬೇಕಾಗಿದೆ. ಇಲ್ಲದಿದ್ದರೆ ಆಧಾರ್ ಕಾರ್ಡ್ ಆಗಲೀ, ತಿದ್ದುಪಡಿಯಾಗಲೀ ಮಾಡಿಕೊಡುವುದಿಲ್ಲ ಎಂದು ಅಲ್ಲಿನ ಸಿಬ್ಬಂದಿ ಸಮಜಾಯಿಷಿ ನೀಡುತ್ತಾರೆ.
ಚಿಕ್ಕ ಮಕ್ಕಳಿಗೂ ಸಿಗುತ್ತಿದೆ ಸಿಮ್: ಒಂದು ಮನೆಯಲ್ಲಿ ತಂದೆ-ತಾಯಿ, ಮಗು ಇದ್ದರೆ ಮೂವರಿಗೂ ಮೂರು ಸಿಮ್ ಖರೀದಿಸಲೇಬೇಕು. ನಿಯಮಾವಳಿ ಪ್ರಕಾರ ಚಿಕ್ಕ ಮಕ್ಕಳಿಗೆ ಸಿಮ್ ಖರೀದಿಸುವ ಅವಕಾಶವಿಲ್ಲ. ಆದರೆ, ಬಿಎಸ್‌ಎನ್‌ಎಲ್ ಕಚೇರಿಯಲ್ಲಿ ಸಿಮ್ ಸಿಗುತ್ತಿದೆ. ಮಗು ಹೆಸರಿನಲ್ಲಿ ಖರೀದಿಸದಿದ್ದರೆ ಒಬ್ಬರೇ ಮೂರು ಸಿಮ್ ಅಥವಾ ಅದಕ್ಕಿಂತ ಹೆಚ್ಚು ಸಿಮ್ ಖರೀದಿಸಬಹುದಾಗಿದೆ.
ಒಂದು ಸಿಮ್‌ಗೆ 130 ರೂ.: ಒಂದು ಸಿಮ್ ಖರೀದಿಗೆ 130 ರೂ. ನೀಡಬೇಕು. ಮನೆಯಲ್ಲಿ ಮೂವರಿದ್ದರೆ 390 ರೂ. ಹಣ ಕೊಟ್ಟು 3 ಸಿಮ್ ಕಾರ್ಡ್ ಖರೀದಿಸಲೇಬೇಕು. ನಮ್ಮ ಬಳಿ ಈಗಾಗಲೇ ಸಿಮ್ ಇದೆ ಬೇಡ ಎಂದರೆ, ಹಾಗಾದರೆ ಇಲ್ಲಿ ಆಧಾರ್ ಕಾರ್ಡ್ ಅಥವಾ ತಿದ್ದುಪಡಿ ಮಾಡುವುದಿಲ್ಲ. ಬೇರೆ ಕಡೆ ಮಾಡಿಸಿಕೊಳ್ಳಿ. ಸಿಮ್ ಖರೀದಿಸಿದರೆ ಮಾತ್ರ ಇಲ್ಲಿ ಮಾಡಲಾಗುವುದು ಎಂದು ಸಿಬ್ಬಂದಿ ಹೇಳುತ್ತಾರೆ.
ಸಿಮ್ ಮಾರ್ಕೆಟಿಂಗ್‌ಗಾಗಿ ಸಾರ್ವಜನಿಕರಿಗೆ ಬರೆ: ಇದರ ಬಗ್ಗೆ ಬಿಎಸ್‌ಎನ್‌ಎಲ್ ಕಚೇರಿ ಸಿಬ್ಬಂದಿಯನ್ನು ವಿಚಾರಿಸಿದರೆ, ಆಧಾರ್ ಕಾರ್ಡ್ ಹಾಗೂ ತಿದ್ದುಪಡಿ ಮಾಡುವುದನ್ನು ಖಾಸಗಿಯವರಿಗೆ ನೀಡಲಾಗಿದೆ. ಅವರು ಈ ನಿಯಮ ಮಾಡಿದ್ದಾರೆ. ಅಲ್ಲದೆ, ಬಿಎಸ್‌ಎನ್‌ಎಲ್ ಸಿಮ್ ಮಾರ್ಕೆಟಿಂಗ್ ನಡೆಯುತ್ತಿರುವುದರಿಂದ ಇಲ್ಲಿಗೆ ಆಧಾರ್ ಕಾರ್ಡ್ ಹಾಗೂ ತಿದ್ದುಪಡಿ ಮಾಡಿಸಲು ಬರುವ ಪ್ರತಿಯೊಬ್ಬ ಸಾರ್ವಜನಿಕರು ಕಡ್ಡಾಯವಾಗಿ ಸಿಮ್ ಖರೀದಿಸಲೇಬೇಕು. ಇಲ್ಲದಿದ್ದರೆ ಬೇರೆ ಕಡೆ ಹೋಗಿ ಮಾಡಿಸಿಕೊಳ್ಳಿ ಎಂದು ಉಡಾಫೆ ಉತ್ತರ ನೀಡುತ್ತಾರೆ. ಬ್ಯಾಂಕ್‌ಗಳಲ್ಲಿ ನೂಕು ನುಗ್ಗಲು: ಬಿಎಸ್‌ಎನ್‌ಎಲ್
ಕಚೇರಿ ಸೇರಿದಂತೆ ನಗರದ 4-5 ಕಡೆ ಮಾತ್ರ ಹೊಸದಾಗಿ ಆಧಾರ್ ಹಾಗೂ ತಿದ್ದುಪಡಿ ಮಾಡಲಾಗುತ್ತದೆ. ಆದರೆ, ಬ್ಯಾಂಕ್‌ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಸೇರುವುದರಿಂದ ನೂಕು ನುಗ್ಗಲು ಇರುತ್ತದೆ. ಇದರಿಂದ ದಿನಗಟ್ಟಲೇ ಕಾಯಬೇಕಾಗಿದೆ. ಆದರೆ, ಬಿಎಸ್‌ಎನ್‌ಎಲ್ ಕಚೇರಿಯಲ್ಲಿ ಜನದಟ್ಟಣೆ ಕಡಿಮೆ ಇರುವುದರಿಂದಇಲ್ಲಿಗೆ ಬಂದರೆ ಸಿಮ್ ಕಾರ್ಡ್ ಖರೀದಿಸಲೇಬೇಕು ಎಂದು ಸಾರ್ವಜನಿಕರ ಮೇಲೆ ಒತ್ತಡ ಹಾಕುತ್ತಾರೆ.
ದಿನಕ್ಕೆ 20 ಮಂದಿಗೆ ಮಾತ್ರ ಅವಕಾಶ: ಪ್ರತಿದಿನ ಕೇವಲ 20 ಮಂದಿಗೆ ಮಾತ್ರ ಆಧಾರ್ ತಿದ್ದುಪಡಿ ಮಾಡಲಾಗುತ್ತದೆ. ಬೆಳಗ್ಗೆ ಕಚೇರಿ ತೆರೆಯುತ್ತಿದ್ದಂತೆ ಬರುವ 20 ಮಂದಿ ಸಾರ್ವಜನಿಕರಿಗೆ ಟೋಕನ್ ವಿತರಿಸಲಾಗುತ್ತದೆ. ಆ ನಂತರ ಬರುವ ಯಾರಿಗೂ ತಿದ್ದುಪಡಿ ಮಾಡುವುದಿಲ್ಲ. ಆ 20 ಮಂದಿಗೂ ಸಮಯ ನಿಗದಿ ಮಾಡುವ ಸಿಬ್ಬಂದಿ ದಿನಗಟ್ಟಲೇ ಕಾಯಿಸುತ್ತಾರೆ.
ದಿನಗಟ್ಟಲೇ ಕಾಯಬೇಕು: ಸಿಮ್ ಖರೀದಿಗೆ ಫೋಟೋ, ದಾಖಲೆಗಳು ಸರಿಯಾಗಿಲ್ಲದಿದ್ದರೆ ಮತ್ತೆ ಒಂದು ದಿನ ಕಾಯಬೇಕು. ಆಧಾರ್ ಕಾರ್ಡ್ ಅಥವಾ ತಿದ್ದುಪಡಿಗೆ ಬೇಕಾದ ಅಗತ್ಯ ದಾಖಲೆ ಸಲ್ಲಿಸದಿದ್ದರೂ ಸಿಮ್ ಖರೀದಿಗೆ ಮಾತ್ರ ದಾಖಲೆಗಳನ್ನು ನೀಡಲೇಬೇಕು.
ಏನಾದರೂ ಮಾಡಿಕೊಳ್ಳಿ: ನಮ್ಮ ಬಳಿ ಈಗಾಗಲೇ ಸಿಮ್ ಇದೆ ಎಂದು ಹೇಳಿದರೂ ಸಿಬ್ಬಂದಿ ಮಾತ್ರ ಸಿಮ್ ಖರೀದಿಸದಿದ್ದರೆ, ಆಧಾರ್ ಕಾರ್ಡ್ ತಿದ್ದುಪಡಿ ಮಾಡುವುದಿಲ್ಲ. ಸಿಮ್ ಖರೀದಿಸಿ ಬೇರೆ ಯಾರಿಗಾದರೂ ಕೊಡಿ, ಇಲ್ಲದಿದ್ದರೆ ವ್ಯಾಲಿಡಿಟಿ ಇರುವವರೆಗೆ ಉಪಯೋಗಿಸಿ ನಂತರ ಬಿಸಾಡಿ ನಮಗೇನು ಎಂದು ನಿರ್ಲಕ್ಷ್ಯದಿಂದ ಮಾತನಾಡುತ್ತಾರೆ. ಆದರೆ, ಸಾರ್ವಜನಿಕರ ಬಳಿ ಈಗಾಗಲೇ ಸಿಮ್ ಇದ್ದು, ಅದೇ ನಂಬರ್ ಅನ್ನು ಆಧಾರ್ ಕಾರ್ಡ್, ಬ್ಯಾಂಕ್, ಅಡುಗೆ ಅನಿಲ ಖರೀದಿ ಸೇರಿದಂತೆ ಇನ್ನಿತರ ಕಡೆ ನೀಡಿದ್ದಾರೆ. ಇದನ್ನು ತೆಗೆದುಕೊಂಡು ಏನು ಮಾಡಲಿ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ನನ್ನ ಬಳಿ ಈಗಾಗಲೇ ಸಿಮ್ ಇದೆ. ನನ್ನ ಹಾಗೂ ನನ್ನ ಮಗಳ ಆಧಾರ್ ಕಾರ್ಡ್‌ನಲ್ಲಿರುವ ಮೊಬೈಲ್ ನಂಬರ್ ತಿದ್ದುಪಡಿ ಮಾಡಿಸಲು ಬಂದರೆ, ಸಿಮ್ ಖರೀದಿಸಲೇಬೇಕು. ಅದಕ್ಕಾಗಿ 260 ರೂ. ಕೊಟ್ಟು 2 ಸಿಮ್ ಖರೀದಿಸಿದ್ದೇನೆ. ನನ್ನ ಮಗಳ ಫೋಟೋ ಇಲ್ಲದಿರುವುದರಿಂದ ನನ್ನ ಫೋಟೋ ಕೊಟ್ಟಿದ್ದೇನೆ. ನಾಳೆ ಬನ್ನಿ ಆಧಾರ್ ತಿದ್ದುಪಡಿ ಮಾಡಲಾಗುವುದು ಎಂದು ಹೇಳುತ್ತಾರೆ. – ಬೆಳ್ಳುಂಡೆಗೆರೆ ಗ್ರಾಮಸ್ಥ
ಆಧಾರ್ ಕಾರ್ಡ್ ಮತ್ತು ತಿದ್ದುಪಡಿ ಮಾಡುವುದನ್ನು ಖಾಸಗಿಯವರಿಗೆ ನೀಡಲಾಗಿದೆ. ಆದರೆ, ಅಲ್ಲಿ ಹಣದುರುಪಯೋಗ ಮಾಡಿಕೊಳ್ಳುತ್ತಾರೆ ಎಂದು ಬಿಎಸ್‌ಎನ್‌ಎಲ್ ಕಚೇರಿಯಲ್ಲಿಯೇ ಮಾಡಲಾಗುತ್ತಿದೆ. ಆದರೆ, ಬಿಎಸ್‌ಎನ್‌ಎಲ್ ಅಧಿಕಾರಿಗಳು ಮಾರ್ಕೆಟಿಂಗ್ ಮಾಡಲು ಸಾರ್ವಜನಿಕರು ಸಿಮ್ ಖರೀದಿಸಬೇಕು ಎಂಬ ನಿಯಮ ಮಾಡಿ ಒತ್ತಡ ಹಾಕುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. – ಉಮಾಕಾಂತ್, ನಗರ ನಿವಾಸಿ
ಮಾರ್ಕೆಟಿಂಗ್ ನಡೆಯುತ್ತಿರುವುದ ರಿಂದ ಬರುವ ಸಾರ್ವಜನಿಕರಿಗೆ ಸಿಮ್ ಕಡ್ಡಾಯವಾಗಿ ಪಡೆಯಲೇಬೇಕು ಎಂದು ಒತ್ತಾಯ ಮಾಡುತ್ತಿಲ್ಲ. ಅಗತ್ಯವಿರುವವರು ತೆಗೆದುಕೊಳ್ಳಬಹುದು. ಮಕ್ಕಳಿಗೂ ತೆಗೆದುಕೊಳ್ಳಿ ಎಂದು ಹೇಳುತ್ತಿಲ್ಲ. ಇದೊಂದು ಮಾರ್ಕೆಟಿಂಗ್ ಅಷ್ಟೆ. ಸಿಮ್ ತೆಗೆದುಕೊಂಡವರಿಗೆ ತಕ್ಷಣವೇ ತಿದ್ದುಪಡಿ ಮಾಡಿಕೊಡಲಾಗುವುದು. – ನೀತಾ, ಉಸ್ತುವಾರಿ ಅಧಿಕಾರಿ, ಬಿಎಸ್‌ಎನ್‌ಎಲ್, ಮಂಡ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya: ದಲಿತರ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು!
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
Waqf Notice: ಕೂಡಲೇ ವಕ್ಫ್ ಮಂಡಳಿ ರದ್ದು ಮಾಡಿ: ಆರ್. ಅಶೋಕ್ ಆಗ್ರಹ
Mandya: ಸ್ನೇಹಿತನ ಪತ್ನಿ ಜತೆ ಅಕ್ರಮ ಸಂಬಂಧ; ಸಕ್ಕರೆನಾಡಲ್ಲಿ ಯುವಕನ ಕೊಲೆ!
MUST WATCH
ಹೊಸ ಸೇರ್ಪಡೆ
Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು
Akhilesh Yadav: ಉ.ಪ್ರ.ದಲ್ಲಿ ಬಾಬಾ ಸಾಹೇಬ್ ಮತ್ತು ಬಾಬಾ ನಡುವಿನ ಹೋರಾಟ
Supreme Court: ನೇತಾಜಿ ಸಾವಿನ ರಹಸ್ಯ ತನಿಖೆ ನಡೆಸಲು ಕೋರಿದ್ದ ಅರ್ಜಿ ವಜಾ
Ullala Resort: ಮೃತ ಯುವತಿಯ ಕುಟುಂಬಸ್ಥರ ಆಕ್ರಂದನ
RSS ವಿರುದ್ಧ ಹೇಳಿಕೆ ಪ್ರಕರಣ: ಗೀತ ರಚನೆಕಾರ ಜಾವೇದ್ ಅಖ್ತರ್ ಖುಲಾಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.