ಎಲೆಕ್ಷನ್ ಮುಂದೂಡಿಕೆ ವಿರುದ್ಧ ಧರಣಿ
ಕೌನ್ಸಿಲ್ ಸಭೆಯಲ್ಲಿ ಸರ್ಕಾರದ ವಿರುದ್ಧ ಆಕ್ರೋಶ
Team Udayavani, Sep 9, 2020, 9:41 AM IST
ಬೆಂಗಳೂರು: ಪಾಲಿಕೆ ಚುನಾವಣೆ ಮುಂದೂಡಲು ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆ. ಮುಂದಿನ ಅವಧಿಯ ಚುನಾವಣೆ ಬಗ್ಗೆ ಚರ್ಚೆಗೆ ಅವಕಾಶ ಮಾಡಿಕೊಡಬೇಕು ಎಂದು ಪ್ರತಿಪಕ್ಷ ಸದಸ್ಯರು ಮಂಗಳವಾರ ಕೌನ್ಸಿಲ್ ಸಭೆಯಲ್ಲಿ ಪ್ರತಿಭಟನೆ ನಡೆಸಿದರು.
ಸಭೆ ಪ್ರಾರಂಭವಾಗುತ್ತಿದ್ದಂತೆ ವಿಷಯ ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜಿದ್, ಚುನಾಯಿತ ಸದಸ್ಯರ ಅವಧಿ ಮುಗಿಯುತ್ತಿದೆ. 2020-25 ನೇ ಅವಧಿಯ ಚುನಾವಣೆಗೆ ಬಗ್ಗೆ ಚರ್ಚೆ ನಡೆಯಬೇಕು. ಇದಕ್ಕೆ ಅವಕಾಶ ಮಾಡಿಕೊಡಬೇಕು ಎಂದರು. ಬಿಜೆಪಿಗೆ ಚುನಾವಣೆ ನಡೆಸುವುದು ಬೇಕಾಗಿಲ್ಲ. 2007-2010ರ ವರೆಗೆ ಚುನಾವಣೆ ಮುಂದೂಡಿದ ರೀತಿಯಲ್ಲಿಯೇ ರಾಜ್ಯ ಸರ್ಕಾರ ಚುನಾವಣೆ ಮುಂದೂಡಲು ಯತ್ನಿಸಲಾಗುತ್ತಿದೆ. ಚುನಾವಣೆ ನಡೆಸುವುದಕ್ಕೆ ಸರ್ಕಾರಕ್ಕೆ ಭಯ, ಕೊರೊನಾ ನೆಪ ಎಂದು ದೂರಿದರು. ಇದಕ್ಕೆ ದನಿಗೂಡಿಸಿದ ಪಾಲಿಕೆಯ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಲು ಮುಂದಾದರು. ಮೇಯರ್ ಎಂ. ಗೌತಮ್‌ಕುಮಾರ್ ಅವರು ಚುನಾವಣೆಯ ಬಗ್ಗೆ ಚರ್ಚೆ ಮಾಡುವುದಕ್ಕೆ ಅವಕಾಶ ನೀಡಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಟ್ಟರು.
ಆಯೋಗ ವಿಫಲ: ಎಲೆಕ್ಷನ್ ನಡೆಯದಿರಲು ಚುನಾವಣೆ ಆಯೋಗದ ವೈಫಲ್ಯ ಕಾರಣ. ಇದರಲ್ಲಿ ಸರ್ಕಾರದ ಯಾವುದೇ ಲೋಪವಿಲ್ಲ ಎಂದು ಆಡಳಿತ ಪಕ್ಷದ ಮಾಜಿ ನಾಯಕ ಪದ್ಮನಾಭರೆಡ್ಡಿ ಸಮರ್ಥಿಸಿಕೊಂಡರು. ಸೋಂಕು ಭೀತಿ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸೇರಿದಂತೆ ದೇಶದ ಹಲವು ಭಾಗದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದಿಲ್ಲ. ಯಾವುದೇ ಸ್ಥಳೀಯ ಚುನಾವಣೆಯ ಅಧಿಕಾರ ಅವಧಿ ಮುಕ್ತಾಯವಾಗುವ ಮೊದಲೇ ಚುನಾವಣೆ ನಡೆಸಬೇಕು. ಈ ಸಂಬಂಧ ಎಲ್ಲ ರೀತಿಯಅಧಿಕಾರ ಚುನಾವಣಾ ಆಯೋಗಕ್ಕೆ ಇದೆ. ಪಾಲಿಕೆಯೂ ಸಹಕಾರ ನೀಡಿದೆ ಎಂದರು. ವಾರ್ಡ್ ಮರುವಿಂಗಡಣೆ, ಚುನಾವಣಾ ಅಧಿಕಾರಿಗಳ ನೇಮಕ ಹಾಗೂ ಮತದಾರರ ಪಟ್ಟಿ ಸಿದ್ಧಪಡಿಸಿಕೊಳ್ಳಲೂ ಕ್ರಮವಹಿಸಲಾಗುತ್ತಿದೆ. ಚುನಾವಣೆಮುಂದೂಡುವುದೇ ಆಗಿದ್ದರೆ, ಇದೆಲ್ಲಾ ಮಾಡುತ್ತಿರಲಿಲ್ಲ. ಚುನಾವಣಾ ಆಯೋಗ ಮಾಡಬೇಕಾದ ಕೆಲಸಗಳನ್ನು ಸಕಾಲದಲ್ಲಿ ಮಾಡದೆ ತಪ್ಪು ಮಾಡಿದೆ. ಚುನಾವಣೆ ವಿಳಂಬಕ್ಕೂ ಆಯೋಗವೇ ಕಾರಣ. ಸರ್ಕಾರ ಕಾರಣವಲ್ಲ ಎಂದರು.
ಪಶ್ಚಿಮ ಬಂಗಾಳ ಮಾದರಿಯಲ್ಲಿ ಮುಂದುವರಿಸಿ : ಪಶ್ಚಿಮ ಬಂಗಾಳ ಮಾದರಿಯಲ್ಲಿ 91 ಸ್ಥಳೀಯ ಸಂಸ್ಥೆಗಳಲ್ಲಿನ ಸದಸ್ಯರ ಅಧಿಕಾರ ಅವಧಿಯನ್ನು ವಿಸ್ತರಣೆ ಮಾಡಲಾಗಿದ್ದು, ಇದೇ ಮಾದರಿಯಲ್ಲಿ ಪಾಲಿಕೆ ಸದಸ್ಯರ ಅಧಿಕಾರಅವಧಿಯನ್ನು ಮುಂದಿನ ಚುನಾವಣೆ ಘೋಷಿಸುವವರೆಗೆ ಮುಂದುವರಿಸಬೇಕು ಎಂದು ಸಲಹೆ ನೀಡಿದರು. ಇದಕ್ಕೆ ಪಕ್ಷಾತೀತವಾಗಿ ಬೆಂಬಲ ವ್ಯಕ್ತವಾಯಿತು. ಅಬ್ದುಲ್‌ವಾಜಿದ್ ಮಾತನಾಡಿ, ಎಲ್ಲ ಸದಸ್ಯರು ಈ ಕುರಿತು ಒಂದಾಗಿ ಸರ್ಕಾರಕ್ಕೆ ಮನವಿ ಮಾಡಬೇಕು ಎಂದರು. ಕಾಂಗ್ರೆಸ್‌ನ ಎಂ.ಶಿವರಾಜು ಅವರು, ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳು ಮುಂದೂಡಿಕೆಯಾಗುವುದಿಲ್ಲ. ಇದಕ್ಕೆ ಬೇಕಾದ ಸಿದ್ಧತೆಗಳು ಆರು ತಿಂಗಳ ಮುನ್ನವೇ ಆಗಿರುತ್ತದೆ. ಆದರೆ, ಪಾಲಿಕೆ ಸದಸ್ಯರ ಚುನಾವಣೆ ನಡೆಸುವುದಕ್ಕೆ ಮಾತ್ರ ಹೈಕೋರ್ಟ್ ಮಧ್ಯ ಪ್ರವೇಶ ಮಾಡಬೇಕು. ಚುನಾವಣೆ ನಡೆಸುವುದಕ್ಕೆ ಇವರಿಗೆ ಏನು ಸಮಸ್ಯೆ, ಎಲ್ಲೋ ಪಾಲಿಕೆ ಸದಸ್ಯರನ್ನು ತುಳಿಯುವ ವ್ಯೂಹ ಸೃಷ್ಟಿಯಾಗುತ್ತಲೇ ಇದೆ ಎಂದು ದೂರಿದ್ದಾರೆ.
ಪಾಲಿಕೆಗೆ ಆರ್ಥಿಕ ಹೊರೆ ಹೊಸತಲ್ಲ : ಹಲವು ವರ್ಷಗಳಿಂದ ಪಾಲಿಕೆಯು ಆರ್ಥಿಕ ಹೊರೆ ಸವಾಲು ಎದುರಿಸುತ್ತಿದೆ. ಬಿಬಿಎಂಪಿಯ ಆರ್ಥಿಕ ಹೊರೆ ವಿಚಾರವಾಗಿ ಆಯುಕ್ತರು ಸರ್ಕಾರಕ್ಕೆ ಪತ್ರ ಬರೆದಿರುವುದು ಮಾಧ್ಯಮಗಳ ಮೂಲಕ ಗಮನಕ್ಕೆ ಬಂದಿದೆ ಎಂದು ಮೇಯರ್ ಗೌತಮ್‌ಕುಮಾರ್ ತಿಳಿಸಿದರು. ಪ್ರತಿ ವರ್ಷ ಸೆಪ್ಟಂಬರ್-ಅಕ್ಟೋಬರ್ ಅವಧಿಯಲ್ಲಿ ಸಂಪನ್ಮೂಲ ಕ್ರೋಢೀಕರಣ ಕೊರತೆ ಉಂಟಾಗುತ್ತದೆ. ಮಾರ್ಚ್ ಅವಧಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆದಾಯ ಬರುವುದರಿಂದ ಆಗ ಗುತ್ತಿಗೆದಾರರ ಬಿಲ್ ಪಾವತಿ ಮಾಡಲಾಗುತ್ತದೆ. ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ತೆರಿಗೆ ಕಡಿಮೆ ಸಂಗ್ರಹವಾಗಿದೆ. ಬಿಲ್‌ಪಾವತಿ ಆಯುಕ್ತರ ವಿವೇಚನೆಗೆ ಬಿಡಲಾಗಿದೆ ಎಂದರು. ಪಾಲಿಕೆ ವ್ಯಾಪ್ತಿಯಲ್ಲಿನ ಬಡ ಮಕ್ಕಳಿಗೆ ಟ್ಯಾಬ್ ಹಾಗೂ ಲ್ಯಾಪ್‌ಟಾಪ್ ವಿತರಣೆ ಅವಶ್ಯಕತೆ ಇರುವ ಹಿನ್ನೆಲೆಯಲ್ಲಿ ವಿಶೇಷ ಅಭಿವೃದ್ಧಿಗೆ ಮೀಸಲಿಟ್ಟ ಅನುದಾನವನ್ನು ಮರು ಹಂಚಿಕೆ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಸಮರ್ಥಿಸಿಕೊಂಡ ಅವರು, ಟ್ಯಾಬ್ ಹಾಗೂ ಲ್ಯಾಪ್‌ಟಾಪ್ ಖರೀದಿಗೆ ಸಂಬಂಧಿಸಿದಂತೆ ದರ ನಿಗದಿ ಮಾಡುವುದಕ್ಕೆ ಆಯುಕ್ತರಿಗೆ ಸೂಚಿಸಲಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Bhairathi Ranagal Review: ರೋಣಾಪುರದ ರಣಬೇಟೆಗಾರ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.