ಬೆಂಗಳೂರು ಮಳೆ : ದಿಢೀರ್ ನೆರೆ ತಡೆಗೆ ಸುರಂಗ ಕೆರೆ
Team Udayavani, Sep 14, 2020, 11:27 AM IST
ಸಾಂದರ್ಭಿಕ ಚಿತ್ರ
ಅಪಾರ್ಟ್‌ಮೆಂಟ್‌ಗಳ ನಿರ್ಮಾಣಕ್ಕೂ ಮುನ್ನ ನೆಲದಡಿ ನೂರಾರು ಅಡಿ ಜಾಗವನ್ನು ಪಾರ್ಕಿಂಗ್‌ಗೆ ಮೀಸಲಿಡುತ್ತೇವೆ. ಆದರೆ, ಅದೇ ನೆಲದಡಿ ನೀರು ಸಂಗ್ರಹ ಘಟಕಗಳ ನಿರ್ಮಾಣದ ಬಗ್ಗೆ ನಾವು ಆಲೋಚಿಸುವುದೇ ಇಲ್ಲ ಯಾಕೆ? ಉದ್ಯಾನಗಳಡಿ ಚಿಕ್ಕ ಕೆರೆಗಳ ನಿರ್ಮಾಣ ಮಾಡಲು ಸಾಧ್ಯವೇ? ಕೆರೆಗಳ ಸಂರಕ್ಷಣೆ ಬಗ್ಗೆ ಮಾತನಾಡುವ ನಾವು, ಅವುಗಳಲ್ಲಿರುವ ನೀರಿನ ಬಳಕೆ ವಿಚಾರದಲ್ಲಿ ಯಾಕೆ ಮೌನ? ಮಳೆ ನೀರು ಕೊಯ್ಲು ಬೆಂಗಳೂರಿನ ನೆರೆಗೆ ಪರಿಹಾರ ಆಗಬಲ್ಲದೇ? ಇಲ್ಲ ಎಂದಾದರೆ, ಔಟ್ ಆಫ್ ದಿ ಬಾಕ್ಸ್ ಸಲ್ಯೂಷನ್ಸ್ ಯಾವುವು? ಈ ಎಲ್ಲ ಅಂಶಗಳು ಈಗ ರೂಪುಗೊಳ್ಳುತ್ತಿರುವ ನಗರದ ಯೋಜನೆಗಳನ್ನು ಮರುಚಿಂತನೆಗೆ ಹಚ್ಚಿವೆ. ಆ ಚಿಂತನೆಯ ಸುತ್ತ ಒಂದು ನೋಟ ಸುದ್ದಿ ಸುತ್ತಾಟದಲ್ಲಿ…
ಜಪಾನ್ ರಾಜಧಾನಿ ಟೋಕಿಯೊದ ಒಟ್ಟಾರೆ ಭೌಗೋಳಿಕ ಪ್ರದೇಶದಲ್ಲಿ ನೂರು ಚದರ ಕಿ.ಮೀ. ಸಮುದ್ರ ಮಟ್ಟದಿಂದ ಕೆಳಗಿದೆ. ಆ ನಗರದಲ್ಲಿ ವಾರ್ಷಿಕ ಅಂದಾಜು 1,500 ಮಿ.ಮೀ. ಮಳೆ ಬೀಳುತ್ತದೆ. ಜಾಗತಿಕ ತಾಪಮಾನದಂತಹ ಇತ್ತೀಚಿನ ಬೆಳವಣಿಗೆಗಳ ನಂತರವಂತೂ ವೈಪರೀತ್ಯಗಳು ಹೆಚ್ಚಿವೆ. ಪರಿಣಾಮ ಪದೇ ಪದೆ “ಫ್ಲ್ಯಾಶ್ ಫ್ಲಡ್’ (ದಿಢೀರ್ ನೆರೆ)ಗೆ ತುತ್ತಾಗುತ್ತಿತ್ತು. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಅದು ಸುರಂಗದಲ್ಲಿ ಒಂದು ಕೃತಕ ನದಿಯನ್ನೇ ನಿರ್ಮಿಸಿತು.
ಅಂದರೆ, ನೆರೆಗೆ ತುತ್ತಾಗುವ ಪ್ರದೇಶಗಳನ್ನು ಗುರುತಿಸಿ, ಅಲ್ಲಿ ನುಗ್ಗುವ ನೀರು ನೇರವಾಗಿ ಅತ್ಯಧಿಕ ಸಾಮರ್ಥ್ಯದ ಪಂಪ್‌ಸೆಟ್ ಮತ್ತು ಪೈಪ್‌ಲೈನ್ ಮೂಲಕ ಸುರಂಗದಲ್ಲಿರುವ ನೀರು ಶೇಖರಣಾ ಘಟಕಕ್ಕೆ ಹೋಗುವ ಜಾಲ ನಿರ್ಮಿಸಲಾಯಿತು. ಸುಮಾರು 6.5 ಕಿ.ಮೀ. ಉದ್ದದ ಈ ಘಟಕ ವಿಶ್ವದ ಅತಿ ದೊಡ್ಡ ಮಳೆ ನೀರುಗಾಲುವೆ. ನಂತರ ಆ ನಗರದಲ್ಲಿ ನೆರೆಹಾವಳಿಯೇ ಇಲ್ಲ. ಉಳಿದೆಲ್ಲ ನಗರಗಳಿಗೆ ಅದು ಮಾದರಿಯಾಗಿದೆ.
ಬೆಂಗಳೂರಿನ ಭೌಗೋಳಿಕ ಪ್ರದೇಶ ವ್ಯತಿರಿಕ್ತವಾಗಿದೆ. ಉಳಿದೆಲ್ಲ ನಗರಗಳಿಗಿಂತ ತುಸು ಎತ್ತರದಲ್ಲಿದೆ. ವಾರ್ಷಿಕ ಸುಮಾರು 830 ಮಿ.ಮೀ. ಇಲ್ಲಿ ಮಳೆ ಬೀಳುತ್ತಿದೆ. ಆದರೂ ಕೇವಲ 10-20 ಮಿ.ಮೀ. ಮಳೆಯಾದರೂ ಕೆಲವು ಕಡೆ ನೆರೆ ಉಂಟಾಗುತ್ತದೆ. ಇದಕ್ಕೆ ಪೂರಕವಾಗಿ ಪ್ರತಿ ಮಳೆಗಾಲದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ, ಮಳೆಗಾಲದ ಪೂರ್ವಸಿದ್ಧತೆಗಳು, ಹೂಳೆತ್ತುವುದು ಸೇರಿದಂತೆ “ಸಾಂಪ್ರದಾಯಿಕ ಚೌಕಟ್ಟಿನಲ್ಲಿ’ಯೇ ನಾವು ಗಿರಕಿ ಹೊಡೆಯುತ್ತಿದ್ದೇವೆ. ಟೋಕಿಯೊ ನದಿ ನಿರ್ಮಿಸಿರುವಾಗ, ನಮ್ಮಲ್ಲಿ ಕೊನೆಪಕ್ಷ ನೆಲದಡಿ ಚಿಕ್ಕ ಕೆರೆಗಳನ್ನು ಯಾಕೆ ನಿರ್ಮಿಸಬಾರದು? ಈಚೆಗೆ ಸುರಿದ ಕೇವಲ ಎರಡು ದಿನಗಳ ಮಳೆಯಿಂದ ಹೆಬ್ಟಾಳ ವ್ಯಾಲಿ ಭಾಗದಲ್ಲಿ ಉಂಟಾದ ದಿಢೀರ್ ನೆರೆ ಅವಾಂತರವು ನಮ್ಮನ್ನು ಈ ನಿಟ್ಟಿನಲ್ಲಿ ಚಿಂತೆಗೆ ಹಚ್ಚುತ್ತದೆ. ಯಾಕೆಂದರೆ, ಮಳೆ ನೀರುಗಾಲುವೆಯಿಂದ ಉಕ್ಕಿಹರಿದ ನೀರು ಅಪಾರ್ಟ್‌ಮೆಂಟ್‌ಗಳ ನೆಲಮಹಡಿಯಲ್ಲೇ ತುಂಬಿಕೊಂಡಿತು. ಇದರಿಂದಾಗಿ ಇನ್ನೂ ಹೆಚ್ಚಾಗಬಹುದಾದ ಅವಾಂತರ ತಪ್ಪಿತು. ತಗ್ಗುಪ್ರದೇಶಗಳಲ್ಲಿರುವ ಮನೆಗಳು ಇದರಿಂದ ಬಚಾವಾದವು ಎಂಬುದನ್ನು ಸೂಕ್ಷ್ಮವಾಗಿ ಗಮನಿಸಬಹುದು. ಹಾಗಿದ್ದರೆ, ನಗರದಲ್ಲಿ ನೆಲಮಹಡಿಗಳಲ್ಲಿ ನೀರು ಸಂಗ್ರಹ ಘಟಕಗಳು ನಿರ್ಮಿಸುವ ಕೂಗು ತಜ್ಞರಿಂದ ಕೇಳಿಬರುತ್ತಿದೆ.
ಆದರೆ, ಇದಕ್ಕಾಗಿ ನಗರಯೋಜನೆಯಲ್ಲಿ ಬದಲಾವಣೆ ಅವಶ್ಯಕ. ಅಪಾರ್ಟ್‌ಮೆಂಟ್‌ಗಳಿಗೆ ನೆಲಮಹಡಿಗಳಲ್ಲಿ ವಾಹನ ನಿಲುಗಡೆಗೆ ಅವಕಾಶ ಮಾಡಿಕೊಡಲಾಗಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಮಳೆ ನೀರು ಸಂಗ್ರಹಿಸಲಿಕ್ಕಾಗಿಯೇ ಯಾಕೆ ನೆಲಮಹಡಿಯ ಒಂದು ಭಾಗ ಮೀಸಲಿಡುವ ನಿಯಮ ರೂಪಿಸಬಾರದು. ಅಲ್ಲದೆ, ಸಾರ್ವಜನಿಕ ಉದ್ಯಾನಗಳನ್ನು ನೆರೆ ನಿಯಂತ್ರಣ ಕೇಂದ್ರಗಳಾಗಿ ಪರಿವರ್ತಿಸಬಹುದು. ಉದಾಹರಣೆಗೆ ನೆರೆ ಉಂಟಾಗುವ ಪ್ರದೇಶದ ಹತ್ತಿರದಲ್ಲಿ ಉದ್ಯಾನ ಗುರುತಿಸಿ, ಅದರ ನೆಲದಡಿ ನೀರು ಸಂಗ್ರಹ ಘಟಕಗಳನ್ನು ನಿರ್ಮಿಸಬೇಕು. ಅಲ್ಲಿ ಪ್ರವಾಹದ ನೀರನ್ನು ತಿರುಗಿಸಲು ಸಾಧ್ಯವಿದೆ ಎಂದು ಜಲತಜ್ಞರೊಬ್ಬರು ಅಭಿಪ್ರಾಯಪಡುತ್ತಾರೆ.
ಜಲಾಶಯಗಳಾಗಿ ಕೆರೆಗಳನ್ನು ಮಾರ್ಪಡಿಸಿ : ನಗರದ ಕೆರೆಗಳನ್ನು ಚಿಕ್ಕ ಜಲಾಶಯಗಳ ಮಾದರಿಯಲ್ಲಿ ಪರಿವರ್ತಿಸುವ ಅವಶ್ಯಕತೆ ಇದ್ದು, ಈ ಸಂಬಂಧದ ಅಧ್ಯಯನ ವರದಿಯೊಂದನ್ನು ಬಿಬಿಎಂಪಿ ಸಿದ್ಧಪಡಿಸಿದೆ. ವರ್ಷದ 12 ತಿಂಗಳೂ ನಗರದ ಬಹುತೇಕ ಕೆರೆಗಳು ತುಂಬಿರುತ್ತವೆ. ಈ ಹಿಂದೆ ಆ ನೀರು ಕೃಷಿ ಉದ್ದೇಶಕ್ಕೆ ಬಳಕೆಯಾಗುತ್ತಿತ್ತು. ಆದರೆ, ಈಗ ಉಪಯೋಗ ಆಗುತ್ತಿಲ್ಲ. ಈ ಮಧ್ಯೆ ಮಳೆನೀರುಗಾಲುವೆಗಳಿಂದ ಹರಿದುಹೋಗುವ ನೀರನ್ನು ಕೆರೆಗಳಿಗೆ ಹರಿಸಲಿಕ್ಕೂ ಸಾಧ್ಯವಾಗುತ್ತಿಲ್ಲ. ಮತ್ತೂಂದೆಡೆ ದಶಕದ ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ, ಇರುವ ಜಾಗದಲ್ಲಿ ದುಪ್ಪಟ್ಟು ಮನೆಗಳು ನಿರ್ಮಾಣವಾಗಿವೆ. ನೀರಿನ ಹೊರಹರಿವು ಹೆಚ್ಚಳವಾಗಿದೆ. ಆದರೆ, ಅದು ಹರಿಯುವ ಮಾರ್ಗ ಮತ್ತು ಗಾತ್ರ ದಶಕಗಳ ಹಿಂದೆ ಇದ್ದಷ್ಟೇ ಇದೆ. ಇದೆಲ್ಲದರ ಪರಿಣಾಮ ಕಾಲುವೆಗಳು ಉಕ್ಕಿಹರಿಯುತ್ತಿವೆ.
ಈ ಹಿನ್ನೆಲೆಯಲ್ಲಿ ಕೆರೆಗಳ ನೀರನ್ನು ಬೇಸಿಗೆಯಲ್ಲಿ ಶೇ. 50 ಖಾಲಿ ಮಾಡಿ, ಮಳೆಗಾಲದಲ್ಲಿ ನೀರುಗಾಲುವೆಗಳ ಮೂಲಕ ಆ ಕೆರೆಗಳಿಗೆ ನೀರು ಹರಿಸುವ ಮೂಲಕ ಪ್ರವಾಹ ತಗ್ಗಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಕೆರೆಗಳನ್ನು ಮಿನಿ ಅಣೆಕಟ್ಟೆಗಳ ಮಾದರಿಯಲ್ಲಿ ರೂಪಿಸುವ ಅಗತ್ಯವಿದೆ. ಈ ಸಂಬಂಧ ಅಧ್ಯಯನ ವರದಿಯನ್ನು ಪಾಲಿಕೆಗೆ ಸಲ್ಲಿಸಲಾಗಿದೆ ಎಂದು ಮುಖ್ಯ ಎಂಜಿನಿಯರ್ (ಬೃಹತ್ ನೀರುಗಾಲುವೆ) ಬಿ.ಎಸ್. ಪ್ರಹ್ಲಾದ್ “ಉದಯವಾಣಿ’ಗೆ ತಿಳಿಸಿದರು. ಬೆಳ್ಳಂದೂರು ಕೆರೆಯಲ್ಲಿ ನೀರಿನಮಟ್ಟ ತಿಳಿಯಲು ತೂಬು ಕಾಲುವೆ ಮಾದರಿಯ “ಸ್ಲುಯಸ್ ಗೇಟ್’ಗಳನ್ನು ನಿರ್ಮಿಸಲಾಗಿದೆ. ಅದೇ ರೀತಿ, ಉಳಿದ ಕೆರೆಗಳಿಗೂ ನಿರ್ಮಿಸಬೇಕು. ಅಲ್ಲದೆ, ಒಂದಕ್ಕೊಂದು ಪೂರಕವಾಗಿ ಕೆರೆಗಳ ಜಾಲ ರೂಪಿಸಬೇಕು. ಇದರಿಂದ ನೆರೆಯನ್ನು ಸಾಕಷ್ಟು ಪ್ರಮಾಣದಲ್ಲಿ ತಗ್ಗಿಸಬಹುದು ಎಂದು ಅವರು ಅಭಿಪ್ರಾಯಪಡುತ್ತಾರೆ.
“ಮಳೆ ನೀರುಗಾಲುವೆ ಉದ್ದಕ್ಕೂ ಸರಾಗವಾಗಿ ಹರಿಯದಂತೆ ಅಲ್ಲಲ್ಲಿ ಅಡ ತಡೆಗಳಿವೆ. ಇನ್ನು ನೀರುಗಾಲುವೆಗಳನ್ನು ಕಾಂಕ್ರೀಟ್‌ನಿಂದ ಲೈನಿಂಗ್ ಮಾಡಿದ್ದು, ಹಿಂದಿಗಿಂತ ಅವುಗಳ ಗಾತ್ರ ಚಿಕ್ಕದಾಗಿದೆ (ಈಗಾಗಲೇ ಒತ್ತುವರಿ ಯಿಂದ ಕಿರಿದಾಗಿದ್ದವು). ಇದರಿಂದ ಹರಿವಿನ ವೇಗ ಹೆಚ್ಚುವುದರ ಜತೆಗೆ ಇಂಗುವಿಕೆ ಕಡಿಮೆಯಗಿದೆ. ಇನ್ನೊಂದೆಡೆ ಕೆರೆಗಳೆಲ್ಲವೂ ಯಾವಾಗಲೂ ತುಂಬಿರುತ್ತವೆ. ಇವು ನೆರೆ ಹಾವಳಿಗೆ ಪ್ರಮುಖ ಕೊಡುಗೆ ನೀಡುತ್ತಿವೆ’ ಎಂದು ಹಿರಿಯ ವಿಜ್ಞಾನಿ ಮತ್ತು ನೀರು ನಿರ್ವ ಹಣಾ ಸಲಹೆಗಾರ ಎ.ಆರ್. ಶಿವಕುಮಾರ್ ತಿಳಿಸುತ್ತಾರೆ.
ನಮ್ಮ ಮುಂದಿದೆ ಟೋಕಿಯೋ ಮಾದರಿ : ದಿಢೀರ್ ನೆರೆಯನ್ನು ನಾವಿನ್ನೂ ಸಾಂಪ್ರದಾಯಿಕ ನೆಲೆಯಲ್ಲೇ ನೋಡುತ್ತಿದ್ದೇವೆ. ಇದು ಸಮಸ್ಯೆಯ ಮೂಲ. “ಔಟ್ ಆಫ್ ದಿ ಬಾಕ್ಸ್ ಸಲ್ಯೂಷನ್ಸ್’ ಕಡೆಗೆ ನೋಡುವ ಅವಶ್ಯಕತೆ ಇದೆ. ನಗರದ ಆಯ್ದ ಭಾಗಗಳಲ್ಲಿ ಸಣ್ಣ-ಪುಟ್ಟ ಕೆರೆಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಬೇಕಿದೆ. ಬೆಂಗಳೂರಿನಂಥ ನಗರಕ್ಕೆ ಇದು ಸವಾಲು. ಆದರೆ, ಅಸಾಧ್ಯವಲ್ಲ. ಯಾಕೆಂದರೆ, ಟೋಕಿಯೊದಂತಹ ಮಾದರಿಗಳು ನಮ್ಮ ಮುಂದಿವೆ. ಅಪಾರ್ಟ್‌ಮೆಂಟ್‌ಗಳ ನೆಲಮಹಡಿ, ಉದ್ಯಾನಗಳ ನೆಲದಡಿ ವಾಹನಗಳ ನಿಲುಗಡೆ ಬಗ್ಗೆ ನಮ್ಮ ಯೋಚನೆ ಕೇಂದ್ರೀಕೃತವಾಗಿದೆ. ಯಾಕೆ ಈ ಜಾಗಗಳನ್ನು ಸಣ್ಣ-ಪುಟ್ಟ ಕೆರೆಗಳಿಗೆ ಮೀಸಲಿಡಬಾರದು ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಜಲ ವಿಜ್ಞಾನಿ ಪ್ರೊ.ಎಂ.ಎಸ್. ಮೋಹನ್ ಕುಮಾರ್ ಅಭಿಪ್ರಾಯಪಡುತ್ತಾರೆ. “ನಾವು ನೀರನ್ನು ಶೇಖರಿಸಬೇಕು ಅಥವಾ ಬೇಕಾದಾಗ ಅದನ್ನು ಬಿಡುಗಡೆ ಮಾಡಲು ಅಗತ್ಯ ಮೂಲಸೌಕರ್ಯಗಳನ್ನು ನಿರ್ಮಿಸಿಕೊಳ್ಳಬೇಕಾಗುತ್ತದೆ. ಇವೆರಡೂ ಸದ್ಯಕ್ಕೆ ನಮ್ಮಲ್ಲಿಲ್ಲ. ಈ ನಿಟ್ಟಿನಲ್ಲಿ ಟನಲ್ ಗಳಿರಬೇಕು, ಅಧಿಕ ಸಾಮರ್ಥ್ಯದ ನೀರೆತ್ತುವ ಪಂಪ್‌ಗ್ಳಿರಬೇಕು. ಸಾಧ್ಯವಿರುವ ಕಡೆಗಳಲ್ಲಿ ಉದ್ಯಾನಗಳ ಕೆಳಗೆ ನೀರು ಸಂಗ್ರಹ ಘಟಕಗಳ ನಿರ್ಮಾಣದ ಸಾಧಕ-ಬಾಧಕಗಳ ಕುರಿತು ಯೋಜನೆ ರೂಪಿಸಬೇಕು. ಈ ನೀರನ್ನು ಹಲವು ಉದ್ದೇಶಗಳಿಗೆ ಬಳಸಬಹುದು’ ಎಂದು ಅವರು ಹೇಳುತ್ತಾರೆ.
ನೆರೆಗೆ ಕಾರಣ? : ಹೆಬ್ಟಾಳ, ಯಲಹಂಕ, ಆರ್.ಟಿ. ನಗರ ಸೇರಿದಂತೆ ವಿವಿಧ ಕಡೆಯಿಂದ ಮಾನ್ಯತಾ ಟೆಕ್‌ಪಾರ್ಕ್ ಕಡೆಗೆ ಮೂಲಕ ನೀರು ಹರಿದುಬರುತ್ತಿದೆ.ಅಲ್ಲದೆ, ಇದೇ ಸ್ಥಳದಲ್ಲಿ ಜಕ್ಕೂರು ಕೆರೆ, ರಾಚೇನಹಳ್ಳಿ ಕೆರೆಗಳ ರಾಜಕಾಲುವೆ ಹಾಗೂ ವೀರಣ್ಣ ಪಾಳ್ಯದ ಕಡೆಯಿಂದ ಬರುವ ರಾಜಕಾಲುವೆ ಬಂದುಸೇರುತ್ತದೆ. ಈ ಮಧ್ಯೆ ದಶಕದ ಹಿಂದೆ ವಿಶೇಷ ಆರ್ಥಿಕ ವಲಯ ನಿರ್ಮಾಣ ವೇಳೆ ತೆರೆದ ರಾಜ ಕಾಲುವೆಯನ್ನು 30 ಅಡಿಗೆ ಕುಗ್ಗಿಸಿ ಅದರ ಮೇಲೆ ಕಾಂಕ್ರೀಟ್ ಸ್ಲ್ಯಾಬ್ ಹಾಗೂ ರಸ್ತೆ ನಿರ್ಮಿಸಲಾಗಿದೆ. ಇದು ಸುತ್ತಮುತ್ತ ಅವಾಂತರ ಸೃಷ್ಟಿಸುತ್ತಿದೆ.
–ವಿಜಯಕುಮಾರ್ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಯುವತಿ ಜೊತೆ ಅಸಭ್ಯ ವರ್ತನೆ: ಮ್ಯಾನೇಜರ್, ಮತ್ತಿಬ್ಬರ ಮೇಲೆ ಕೇಸ್
Bengaluru: 3 ತಿಂಗಳ ಹಿಂದಷ್ಟೇ ವಿವಾಹ ಆಗಿದ್ದ ಚಿನ್ನಾಭರಣ ವ್ಯಾಪಾರಿ ಆತ್ಮಹತ್ಯೆ
Bengaluru: 40000 ರೂ. ಲಂಚ ಸ್ವೀಕರಿಸುವಾಗ ಎಎಸ್‌ಐ ಸೇರಿ ಇಬ್ಬರು ಲೋಕಾ ಬಲೆಗೆ
Bengaluru: ಸೆಂಟ್ರಿಂಗ್ ಮರಗಳು ಬಿದ್ದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಸಾವು
Bengaluru: ಬಿಬಿಎಂಪಿ ಕಸದ ಲಾರಿ ಹರಿದು ಇಬ್ಬರು ಸಹೋದರಿಯರ ಬಲಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್ ಗೆ ಆಹ್ವಾನವಿಲ್ಲ! ದಿಗ್ಗಜನ ಬೇಸರ
Gundlupete: ಅಕ್ರಮವಾಗಿ 3 ಕೆ.ಜಿ. 100 ಗ್ರಾಂ ಗಾಂಜಾ ಸಾಗಣೆ: ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.