ಚಿಂತನೆ: ಕಲ್ಯಾಣ ಕರ್ನಾಟಕಕ್ಕೆ ಬೇಕು ಪ್ರತ್ಯೇಕ ಬಜೆಟ್
Team Udayavani, Sep 16, 2020, 7:18 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಮುಂದಿನ ವರ್ಷ ರಾಜ್ಯದಲ್ಲಿ ಎರಡೂವರೆ ಲಕ್ಷ ಕೋಟಿ ರೂಪಾಯಿ ಮೊತ್ತದ ಬಜೆಟ್ ಮಂಡನೆಯಾದರೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಭೌಗೋಳಿಕ ಸರಾಸರಿ ಹಾಗೂ ಜನಸಂಖ್ಯೆಗನುಣವಾಗಿ ಕನಿಷ್ಠ 50 ಸಾವಿರ ಕೋಟಿ ರೂಪಾಯಿಯನ್ನಾದರೂ ಮೀಸಲಿಡಬೇಕು.
ಸೆಪ್ಟೆಂಬರ್ 17, ಹೈದ್ರಾಬಾದ್ ಕರ್ನಾಟಕ ಭಾಗವು (ಈಗಿನ ಕಲ್ಯಾಣ ಕರ್ನಾಟಕ) ನಿಜಾಮನ ಆಡಳಿತದಿಂದ ವಿಮೋಚನೆ ಹೊಂದಿದ ದಿನ. ತನ್ನಿಮಿತ್ತ ಈ ಲೇಖನ. ರಾಜ್ಯದ ಸರ್ವತೋಮುಖ ಅಭಿವೃದ್ಧಿ ದೃಷ್ಟಿಕೋನ ಅವಲೋಕಿಸಿದರೆ ಕಲ್ಯಾಣ ಕರ್ನಾಟಕ ಭಾಗ ಹಿಂದುಳಿದಿರುವುದು ಎಲ್ಲರಿಗೂ ತಿಳಿದ ವಿಷಯ. ಎಲ್ಲ ಕ್ಷೇತ್ರಗಳಲ್ಲಿ, ಅದರಲ್ಲೂ ಮಾನವ ಅಭಿವೃದ್ಧಿ ಸೂಚಂಕ್ಯದಲ್ಲಿ ಹಿಂದೆ ಬಿದ್ದಿರುವ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಕಾಲಕಾಲಕ್ಕೆ ಯೋಜನೆಗಳನ್ನು ರೂಪಿಸಲಾದರೂ ಅವುಗಳ ಅನುಷ್ಠಾನದಲ್ಲಿ ಹಿಂದೆ ಬಿದ್ದಿರುವುದರಿಂದ ಇನ್ನೂ ರಾಜ್ಯದ ಇತರ ಭಾಗಗಳ ಜತೆಗೆ ಸರಿಸಮನಾಗಿ ಹೆಜ್ಜೆ ಹಾಕಲು ಸಾಧ್ಯವಾಗುತ್ತಿಲ್ಲ.
ಈ ಕಾರಣಕ್ಕಾಗಿಯೇ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಪ್ರತ್ಯೇಕ ಬಜೆಟ್ ಮಂಡನೆಯೇ ಸೂಕ್ತ ಪರಿಹಾರ ಎಂಬ ಮಾತು ಈಗ ಬಲವಾಗಿ ಕೇಳಿಬರುತ್ತಿದೆ. ಈ ಹಿಂದೆ ಆರ್. ಗುಂಡೂರಾವ್ ಮುಖ್ಯಮಂತ್ರಿಯಾಗಿದ್ದಾಗ ಸಚಿವರಾಗಿದ್ದ ಎನ್. ಧರ್ಮಸಿಂಗ್ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿ ಅದರ ಶಿಫಾರಸಿನ ಹಿನ್ನೆಲೆಯಲ್ಲಿ ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯನ್ನು ರಚಿಸಲಾಯಿತು.
ಸರಕಾರ ವರ್ಷಕ್ಕೆ 50 ಕೋ.ರೂ, 100 ಇಲ್ಲವೇ 200 ಕೋ.ರೂ. ಅನುದಾನ ನೀಡುತ್ತಾ ಬಂದಿತು. ಆದರೆ ಅಭಿವೃದ್ಧಿಗೆ ನಿರ್ದಿಷ್ಟ ಯೋಜನೆ ಹಾಗೂ ಗುರಿ ಇಲ್ಲದ ಪರಿಣಾಮ ನಿರೀಕ್ಷಿತ ಮಟ್ಟದಲ್ಲಿ ಕೆಲಸಗಳಾಗಲಿಲ್ಲ. ಸಂವಿಧಾನದ 371ಜೆ ವಿಧಿಗೆ ತಿದ್ದುಪಡಿಯಾಗಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಶಿಕ್ಷಣ, ಉದ್ಯೋಗದಲ್ಲಿ ವಿಶೇಷ ಮೀಸಲಾತಿಯ ಜತೆಗೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ರಚನೆಯಾಯಿತು.
ರಾಜ್ಯಪಾಲರೇ ಮಂಡಳಿ ಮುಖ್ಯಸ್ಥರು ಎಂಬ ನಿಯಮದೊಂದಿಗೆ ಕಾರ್ಯರೂಪಕ್ಕೆ ಬಂದಿತ್ತಾದರೂ ತದನಂತರ ಎಲ್ಲವನ್ನೂ ರಾಜ್ಯ ಸರ್ಕಾರವೇ ನಿರ್ವಹಿಸುತ್ತಿದೆ. ರಾಜಕೀಯ ಹಸ್ತಕ್ಷೇಪದಿಂದ ಹಾಗೂ ಇಚ್ಛಾಶಕ್ತಿಯ ಕೊರತೆಯಿಂದ ಮಂಡಳಿಯೂ ವಾಸ್ತವಿಕ ನಿಟ್ಟಿನಲ್ಲಿ ಕಾರ್ಯಗಳನ್ನು ಕೈಗೊಳ್ಳದೆ ಹೆಸರಿಗೆ ಮಾತ್ರ ಎನ್ನುವ ಮಟ್ಟಿಗೆ ಬಂದು ನಿಂತಿದೆ.
ಮಂಡಳಿಗೆ ಬಜೆಟ್‌ನಲ್ಲಿ 1,500 ಕೋ.ರೂ. ಘೋಷಣೆ ಮಾಡಲಾಗುತ್ತದೆ. ಆದರೆ ವಾಸ್ತವ ನೋಡಿದರೆ ಇದರಲ್ಲಿ 700-800 ಕೋಟಿ ರೂಪಾಯಿ ಮಾತ್ರ ನೀಡಿ ಕೈ ತೊಳೆದುಕೊಳ್ಳಲಾಗುತ್ತಿದೆ. ಗಮನಿಸಬೇಕಾದ ಅಂಶವೇನೆಂದರೆ ಪ್ರತಿಯೊಂದು ಕಾರ್ಯಕ್ಕೂ ಕೆಕೆಆರ್‌ಡಿಬಿ ಕಡೆಗೆ ಬೆರಳು ತೋರಿಸಲಾಗುತ್ತಿದೆ. ಪೊಲೀಸ್ ವಸತಿಗೃಹ ನಿರ್ಮಾಣ, ಎನ್‌ಇಕೆಎಸ್‌ಆರ್‌ಟಿಸಿ ಬಸ್‌ಗಳ ಖರೀದಿ ಇತರ ಕಾರ್ಯಗಳಿಗೂ ಮಂಡಳಿ ಅನುದಾನ ಬಳಕೆಯಾಗುತ್ತಿದೆ. ವಾಸ್ತವವಾಗಿ ಮಾನವ ಅಭಿವೃದ್ಧಿ ಸೂಚ್ಯಂಕ ಹೆಚ್ಚಳದ ಕಾರ್ಯವಾಗಬೇಕು.
ಪ್ರತ್ಯೇಕ ಬಜೆಟ್ ಬೇಡಿಕೆ: ಮುಂದಿನ ವರ್ಷ ರಾಜ್ಯದ ಬಜೆಟ್‌ನಲ್ಲಿ ಎರಡೂವರೆ ಲಕ್ಷ ಕೋಟಿ ರೂ. ಮೊತ್ತದ ಬಜೆಟ್ ಮಂಡನೆಯಾದರೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಭೌಗೋಳಿಕ ಸರಾಸರಿ ಹಾಗೂ ಜನಸಂಖ್ಯೆಗನುಣವಾಗಿ ಕನಿಷ್ಠ 50 ಸಾವಿರ ಕೋಟಿ ರೂಪಾಯಿಯನ್ನಾದರೂ ಮೀಸಲಿಡಬೇಕು.
ಬರೀ ಹೆಸರಿನಿಂದ ಕಲ್ಯಾಣವಾಗದು: ಹೈದ್ರಾಬಾದ್ ಕರ್ನಾಟಕದ ಹೆಸರನ್ನು ಕಳೆದ ವರ್ಷ ಕಲ್ಯಾಣ ಕರ್ನಾಟಕವೆಂದು ಬದಲಿಸಲಾಗಿದೆ. ಆದರೆ ಕೇವಲ ನಾಮಕರಣ ಮಾಡಿದರೆ ಸಾಲದು. ಜತೆಗೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಲ್ಲಿ ಮಾತ್ರ ಹೆಸರು ಬದಲಾವಣೆಗೆ ಅರ್ಥ ಬರುತ್ತದೆ. ದೇಶಕ್ಕೆ 1947ರ ಆಗಸ್ಟ್ 15ರಂದು ಸ್ವಾತಂತ್ರ್ಯ ಸಿಕ್ಕರೆ ಈ ಭಾಗ ಒಂದು ವರ್ಷ ಒಂದು ತಿಂಗಳು ಒಂದು ದಿನ ಕಾಯಬೇಕಾಯಿತು. ಅಂದರೆ 1948ರ ಸೆಪ್ಟಂಬರ್ 17ರಂದು ಈ ಭಾಗ ಹೈದ್ರಾಬಾದ್ ನಿಜಾಂನಿಂದ ವಿಮೋಚನೆ ಹೊಂದಿತು. ಹೀಗಾಗಿ ಆವತ್ತು ವಿಮೋಚನ ದಿನಾಚರಣೆ ಆಚರಿಸುತ್ತಾ ಬರಲಾಗುತ್ತಿತ್ತು. ಆದರೆ ಬಿಜೆಪಿ ಸರ್ಕಾರ ಬಂದ ನಂತರ, 2019ರಿಂದ ವಿಮೋಚನ ದಿನವನ್ನು ಕಲ್ಯಾಣ ಕರ್ನಾಟಕ ಉತ್ಸವವೆಂದು ಆಚರಿಸುತ್ತಾ ಬರಲಾಗುತ್ತಿದೆ.
ಮರೀಚಿಕೆಯಾದ ಪ್ರತ್ಯೇಕ ಸಚಿವಾಲಯ: ಕಲ್ಯಾಣ ಕರ್ನಾಟಕ ನಾಮಕರಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪ ಅವರು ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ವೇಗ ಹೆಚ್ಚಿಸುವ ನಿಟ್ಟಿನಲ್ಲಿ ಈ ಭಾಗಕ್ಕೆ ಪ್ರತ್ಯೇಕ ಸಚಿವಾಲಯ ಅಂದರೆ ಸೆಕ್ರೆಟರಿಯೇಟ್ ಸ್ಥಾಪಿಸುವುದಾಗಿ ಹೇಳಿದರು. ಎರಡೂ¾ರು ತಿಂಗಳೊಳಗೆ ಸಚಿವಾಲಯ ಅಸ್ತಿತ್ವಕ್ಕೆ ಬರಲಿದೆ ಎಂದಿದ್ದರು.
ಆದರೆ ವರ್ಷವಾದರೂ ಅದರ ಸುಳಿವೇ ಇಲ್ಲ. ಪ್ರತ್ಯೇಕ ಸಚಿವಾಲಯವಾದರೆ ಮಹತ್ವದ ಕಾರ್ಯಗಳಿಗೆ ಬೆಂಗಳೂರಿಗೆ ಅಲೆಯುವ ಹಾಗೂ ಹಿರಿಯ ಅಧಿಕಾರಿಗಳ ಮರ್ಜಿಗೆ ಕಾಯುವ ಆವಶ್ಯಕತೆಯೇ ಎದುರಾಗುವುದಿಲ್ಲ. ಕಲ್ಯಾಣ ಕರ್ನಾಟಕದ ಜನ ಪ್ರತ್ಯೇಕ ಸಚಿವಾಲಯಕ್ಕಾಗಿ ಎದುರು ನೋಡುತ್ತಿದ್ದಾರೆ. ಸೆ. 17ರಂದು ಸಿಎಂ ಏನು ಘೋಷಣೆ ಮಾಡ್ತಾರೆ ಎಂಬುದನ್ನು ಸಹ ಆಸಕ್ತಿಯಿಂದ ಕಾಯುತ್ತಿದ್ದಾರೆ.
ಕೆಕೆಆರ್‌ಡಿಬಿ ಅನುದಾನ ಕಡಿತ: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ (ಕೆಕೆಆರ್‌ಡಿಬಿ) ಪ್ರತಿವರ್ಷ 1,500 ಕೋ.ರೂ ಅನುದಾನ ನೀಡುತ್ತಾ ಬರಲಾಗುತ್ತಿದೆ. ಆದರೆ ರಾಜ್ಯ ಸರಕಾರ ಈ ವರ್ಷ ಮಂಡಳಿಗೆ ನೀಡಲಾಗುವ ಅನುದಾನ ಕಡಿತ ಮಾಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಮಂಡಳಿಗೆ ಈ ವರ್ಷ 1,136 ಕೋ.ರೂಗೆ ಮಾತ್ರ ಕ್ರಿಯಾ ಯೋಜನೆ ರೂಪಿಸುವಂತೆ ಸೂಚಿಸಲಾಗಿದೆ. ಈ ಅನುದಾನ ಸಂಪೂರ್ಣ ಬಿಡುಗಡೆಯಾಗುತ್ತದೆ ಎಂಬುದಕ್ಕೆ ಗ್ಯಾರಂಟಿ ಇಲ್ಲ. ಬಜೆಟ್‌ನಲ್ಲಿ ಘೋಷಣೆಯಾದ ಹಣದಲ್ಲಿ ಅರ್ಧದಷ್ಟು ಬಿಡುಗಡೆಯಾಗುತ್ತದೆ. ಮಂಡಳಿಯಲ್ಲಿ ಕೆಲಸ ಮಾಡುವ ಯಾವುದೇ ಪ್ರತ್ಯೇಕ ಎಂಜಿನಿಯರಿಂಗ್ ವಿಭಾಗ ಸಹ ಇಲ್ಲ. ಹೀಗಾಗಿ ಕೆಲಸ ಕಾರ್ಯಗಳಿಗೆ ಬೇರೆ ಇಲಾಖೆಯನ್ನು ಅವಲಂಬಿಸಲಾಗುತ್ತದೆ. ಹುದ್ದೆಗಳ ಕೊರತೆಯಿಂದ ಬಿಡುಗಡೆಯಾದ ಹಣದಲ್ಲಿ ಅರ್ಧ ಖರ್ಚು ಮಾಡಲಿಕ್ಕಾಗುತ್ತಿಲ್ಲ. ಈಗ ಘೋಷಣೆ ಅನುದಾನ ತರುವುದರ ಜತೆಗೆ ಮಂಡಳಿ ಬಲರ್ಧನೆ ನೀಡುವುದು ಅತಿ ಮುಖ್ಯದ ಕೆಲಸವಾಗಿದೆ. ಪ್ರಮುಖವಾಗಿ ಮಂಡಳಿಗೆ ಸ್ವಾಯತ್ತತೆ ನೀಡಬೇಕಿದೆ. ಹೀಗಾದಲ್ಲಿ ಎಲ್ಲದಕ್ಕೂ ಬೆಂಗಳೂರಿಗೆ ಅಲೆಯುವುದು ತಪ್ಪುತ್ತದೆ.
ಹುದ್ದೆಗಳ ಭರ್ತಿಗೆ ತಡೆ: ಕಲ್ಯಾಣ ಕರ್ನಾಟಕ ಭಾಗದ ಹುದ್ದೆಗಳ ನೇಮಕಾತಿಗೆ ಸಂವಿಧಾನದ ವಿಧಿ ಅಡಿಯೇ ವಿಶೇಷ ಮೀಸಲಾತಿ ಹಾಗೂ ನಿಯಮಾವಳಿ ರೂಪಿಸಲಾಗಿದೆ. ಆದರೆ ರಾಜ್ಯ ಸರಕಾರ ಕೋವಿಡ್-19 ಹಿನ್ನೆಲೆಯಲ್ಲಿ ಕರ್ನಾಟಕ ಭಾಗದ ಎಲ್ಲ ವಿಧದ ನೇಮಕಾತಿಗಳಿಗೆ ತಡೆ ನೀಡಿದೆ. 2020-21ನೇ ಸಾಲಿನ ಆರ್ಥಿಕ ವರ್ಷದಲ್ಲಿ ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳು ಮತ್ತು ಬ್ಯಾಕ್‌ಲಾಗ್ ಹುದ್ದೆಗಳು ಸೇರಿದಂತೆ ಎಲ್ಲಾ ನೇರ ನೇಮಕಾತಿ ಹುದ್ದೆಗಳ ಭರ್ತಿ ಮಾಡದಿರುವಂತೆ ಕಳೆದ ಜುಲೈಯಲ್ಲಿ ರಾಜ್ಯ ಸರಕಾರ ಆದೇಶ ಹೊರಡಿಸಿದ್ದು, ಮುಂದಿನ ಆದೇಶದವರೆಗೂ ನೇಮಕಾತಿ ತಡೆಹಿಡಿಯಲಾಗಿದೆ.
ಗಾಯದ ಮೇಲೆ ಬರೆ ಎಳೆಯುವಂತೆ ಈಗಾಗಲೇ ಆರ್ಥಿಕ ಇಲಾಖೆಯ ಅನುಮತಿ ಪಡೆದು ನೇಮಕಾತಿಯ ವಿವಿಧ ಹಂತಗಳಲ್ಲಿರುವ ಹುದ್ದೆಗಳಿಗೂ ಸಹ ತಡೆ ಹಿಡಿಯಲಾಗಿದೆ. ರಾಜ್ಯ ಸರಕಾರದ ಸಚಿವಾಲಯ ಸುತ್ತೋಲೆ ಹೊರಡಿಸಿದೆ. ಕೊವಿಡ್-19ನಿಂದ ಉಂಟಾದ ಆರ್ಥಿಕ ಪರಿಸ್ಥಿತಿ ಸುಸ್ಥಿತಿಗೆ ತರುವ ನಿಟ್ಟಿನಲ್ಲಿ ಈ ಕ್ರಮಕ್ಕೆ ಮುಂದಾಗಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
371ನೇ ಜೆ ವಿಧಿ ತಿದ್ದುಪಡಿಯಾಗಿ ಏಳು ವರ್ಷಗಳಾಗುತ್ತಿವೆ. ಆ ಸಂದರ್ಭದಲ್ಲಿ ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ ಅಂದಾಜು 50 ಸಾವಿರ ಹುದ್ದೆಗಳನ್ನು ವರ್ಷದೊಳಗೆ ಭರ್ತಿ ಮಾಡುವ ಕುರಿತಾಗಿ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಇಂದಿನ ದಿನದವರೆಗೆ ಕೇವಲ 14 ಸಾವಿರ ಹುದ್ದೆಗಳನ್ನು ಮಾತ್ರ ಭರ್ತಿ ಮಾಡಿಕೊಳ್ಳಲಾಗಿದೆ. ಏಳೆಂಟು ಸಾವಿರ ಹುದ್ದೆಗಳಿಗೆ ನೇಮಕಾತಿಯಾಗಿದ್ದರೂ ವಿವಿಧ ಕಾರಣಗಳಿಂದ ಇನ್ನೂ ಸೇವೆಗೆ ಹಾಜರಾಗಿಲ್ಲ. ಆಶ್ಚರ್ಯಕರ ಸಂಗತಿಯೇನೆಂದರೆ ಕಳೆದೆರಡು ವರ್ಷಗಳ ಅವಧಿಯಲ್ಲೇ ಈ ಭಾಗದಲ್ಲಿ 20 ಸಾವಿರಕ್ಕೂ ಅಧಿಕ ನೌಕರರು ನಿವೃತ್ತಿಯಾಗಿದ್ದಾರೆ.
ಇನ್ನು ನಿಗಮ ಮಂಡಳಿ ವಿಷಯದಲ್ಲೂ ಈ ಭಾಗ ಕಡೆಯಾಗುತ್ತಿದೆ. ಕಲ್ಯಾಣ ಕರ್ನಾಟಕದ ವಾಣಿಜ್ಯ ಬೆಳೆ ತೊಗರಿ ಬೇಳೆಯನ್ನು ಪಡಿತರದಲ್ಲಿ ವಿತರಣೆ ಮಾಡುವುದನ್ನು ನಿಲ್ಲಿಸಿ ಕಡಲೆ ಬೇಳೆ ವಿತರಿಸಲು ಮುಂದಾಗಲಾಗಿದೆ. ಗುಲ್ಬರ್ಗ ವಿವಿ ಹಾಗೂ ರಾಜ್ಯದ ಏಕೈಕ ಕರ್ನಾಟಕ ಕೇಂದ್ರೀಯ ವಿವಿಗಳ ಹುದ್ದೆ ಖಾಲಿಯಾಗಿ ವರ್ಷ ಕಳೆಯುತ್ತಿದ್ದರೂ ನೇಮಕಕ್ಕೆ ಮುಂದಾಗದಿರುವುದು ಸೇರಿದಂತೆ ಇತರ ನಿಟ್ಟಿನಲ್ಲಿ ಈ ಭಾಗ ವಂಚಿತ ಭಾಗವಾಗಿ ಮಾರ್ಪಾಡಾಗುತ್ತಿದೆ. ಇದಾಗದಿರಲಿ ಎಂಬುದೇ ಪ್ರತಿಯೊಬ್ಬರ ಆಶಯವಾಗಿದೆ.
– ಹಣಮಂತರಾವ ಭೈರಾಮಡಗಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.