ಬದುಕಿನಲ್ಲಿ ಅತ್ಯಮೂಲ್ಯವಾದುದು ಸ್ವತಃ ಬದುಕೇ !
Team Udayavani, Sep 17, 2020, 6:34 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಬದುಕಿನಲ್ಲಿ ಅತ್ಯಮೂಲ್ಯವಾದುದು ಯಾವುದು ಎಂದು ಕೇಳಿದನೊಬ್ಬ ವಿದ್ಯಾರ್ಥಿ ತನ್ನ ಗುರುಗಳನ್ನು. ಗುರುಗಳು ಒಮ್ಮೆ ದೀರ್ಘವಾಗಿ ಆಲೋಚಿಸಿ, ಒಂದು ಕೆಲಸ ಮಾಡು. ನಾಳೆ ನೀನು ನಿಮ್ಮ ತಂದೆಯನ್ನು ಒಂದು ಪ್ರಶ್ನೆ ಕೇಳಿಕೊಂಡು ಬಾ. ಅದು ಏನೆಂದರೆ, “ನೀವು ನಿಮ್ಮ ಜೀವನದಲ್ಲಿ ಏನೇನು ಮಾಡಿದ್ದೀರಿ? ಏನೇನು ಸಾಧಿಸಿದ್ದೀರಿ?’ ಎಂದು ಹೇಳಿದರು.
ಆಯಿತೆಂದು ಹೋದ ಆ ಬಾಲಕ, ತನ್ನ ತಂದೆಯಲ್ಲಿ ಗುರುಗಳ ಪ್ರಶ್ನೆಯನ್ನು ವಿವರಿಸಿದ. ಅದನ್ನು ಶಾಂತವಾಗಿ ಕೇಳಿಸಿಕೊಂಡ ತಂದೆ, ತನ್ನ ಬದುಕು, ಅದರಲ್ಲಿ ಬಂದ ಅವಕಾಶ, ಬಳಸಿಕೊಂಡ ಬಗೆ, ಈಗ ಇರುವ ಉತ್ತಮ ಸ್ಥಿತಿ-ಸಂಸಾರ, ಸುಖ ಎಲ್ಲವನ್ನೂ ವಿವರಿಸಿದ. ಬಾಲಕ ಎಲ್ಲವನ್ನೂ ಬರೆದುಕೊಂಡು ಮರುದಿನ ತನ್ನ ಗುರುಗಳಲ್ಲಿ ವಿವರಿಸಿದ.
ಗುರುಗಳು ಎಲ್ಲವನ್ನೂ ಕೇಳಿ ಅವನನ್ನು ಎದುರು ಕುಳ್ಳಿರಿಸಿ ಕೊಂಡರು. “ಈಗ ಹೇಳು, ನೀನು ಮುಂದೆ ಏನಾಗಬೇಕೆಂದು ಕೊಂಡಿದ್ದೀ?’ ಎಂದು ಕೇಳಿದರು. ಅದಕ್ಕೆ ತನ್ನ ಕನಸೆಲ್ಲವನ್ನೂ ಬಾಲಕ ಸಾದ್ಯಂತವಾಗಿ ವಿವರಿಸಿದ. ಅವನ ಕನಸು ಏನೆಂದರೆ ಗಗನಯಾತ್ರಿಯಾಗಬೇಕೆಂಬುದು.
ಬಹಳ ಖುಷಿಯಾಯಿತು ಗುರುಗಳಿಗೆ. “ನೋಡು, ನಿಮ್ಮ ತಂದೆ ಏನಾಗಿದ್ದರು? ಎಷ್ಟು ಕಷ್ಟದಲ್ಲಿದ್ದರು? ಎಷ್ಟೆಲ್ಲಾ ಅವಕಾಶಗಳನ್ನು ಬಳಸಿಕೊಂಡು ಮೇಲೆ ಹೇಗೆ ಬಂದರು? ನೀನೂ ಅಷ್ಟೇ. ಮುಂದೊಂದು ದಿನ ನಿನ್ನ ಕನಸಿನಂತೆ ಗಗನಯಾತ್ರಿಯಾಗುತ್ತೀ ಎಂದು ಇಟ್ಟುಕೋ. ಆಗ ಎಷ್ಟು ಖುಷಿಯಾಗುತ್ತದೆ ಅಲ್ಲವೇ?’ ಎಂದು ಪ್ರಶ್ನಿಸಿದರು ಗುರುಗಳು.
ನನ್ನ ಕನಸು ಈಡೇರಿದರೆ ಅದಕ್ಕಿಂತ ದೊಡ್ಡ ಖುಷಿ ಏನಿದೆ ಗುರುಗಳೇ ಎಂದು ಹೇಳಿದ ಬಾಲಕ. ಆಗ ಗುರುಗಳು, ಅಲ್ಲಿಗೆ ಯೋಚನೆ ಮಾಡು. ನಿನಗೂ ಮತ್ತು ನಿನ್ನ ತಂದೆಗೂ ಖುಷಿಯಾಗುವಂತ ವಾತಾವರಣ ಸೃಷ್ಟಿಸಿದ್ದು ಯಾರು ? ಅದು ಬದುಕು. ಹೌದು ತಾನೇ? ಎಂದು ಕೇಳಿದರು. “ಹೌದು’ ಎಂದು ಉತ್ತರಿಸಿದ ಬಾಲಕ.
ಬದುಕಿನಲ್ಲಿ ಅಮೂಲ್ಯವಾದುದು ಎಂದರೆ ಸ್ವತಃ ಬದುಕೇ. ಅದೇ ದೊಡ್ಡದು. ಅದಕ್ಕಿಂತ ಅಮೂಲ್ಯ ಮತ್ತು ದೊಡ್ಡದು ಜಗತ್ತಿನಲ್ಲಿ ಬೇರಾವುದೂ ಇಲ್ಲ. ಸಣ್ಣದೊಂದು ಕಷ್ಟ ಬಂದಾಗಲೂ ದೊಡ್ಡದೊಂದು ಸುಖ ಮುಂದಿದೆ ಎಂದುಕೊಂಡು ಬದುಕಿನಲ್ಲಿ ಸಾಗಬೇಕು. ಬದುಕನ್ನು ಗೆಲ್ಲುವುದು ಎಂದರೆ ಅದೇ ಅರ್ಥ. ನಿತ್ಯವೂ ಎದುರಾಗುವ ಕಡ್ಡಿಯಂಥ ಕಷ್ಟಗಳನ್ನು ಗುಡ್ಡದಂತೆ ಬಿಂಬಿಸಿಕೊಂಡು, ಅರ್ಥೈಸಿಕೊಂಡು, ಗೊಂದಲ ಮಾಡಿಕೊಂಡು, ನನ್ನ ಬದುಕೇ ಹೀಗೆ ಎಂದು ಹಳಿಯುತ್ತಾ ಸಾಗುವುದಲ್ಲ ಎಂದರು ಗುರುಗಳು.
ಅದಕ್ಕೇ ದಾಸರು ಹೇಳಿದ್ದು ಈಸಬೇಕು ಇದ್ದು ಜೈಸಬೇಕು ಎಂದು. ನಾವು ಬದುಕಿನಲ್ಲಿ ಸೋಲುವ ಭ್ರಮೆಯಲ್ಲೇ ಸದಾ ಇದ್ದು ಬಿಡುತ್ತೇವೆ, ಅದರ ಬದಲಾಗಿ ಗೆಲ್ಲುವ ಕನಸಿನಲ್ಲಿ ಬದುಕುವುದನ್ನು ಕಲಿಯಬೇಕು. ಆಗ ಬದುಕನ್ನು ಗೆಲ್ಲಲು ಸಾಧ್ಯ. ಧನಾತ್ಮಕವಾಗಿ ಆಲೋಚಿಸುತ್ತಾ ಬದುಕಿನ ಸಂಕಷ್ಟಗಳಿಗೆ ಪರಿಹಾರ ಹುಡುಕಬೇಕು, ಕೆಲವು ಸಮಯ ಹಿಡಿಯಬಹುದಷ್ಟೇ. ಆದರೆ ಪರಿಹಾರ ಸಿಕ್ಕೇ ಸಿಗುತ್ತದೆ, ಅದಕ್ಕೆ ಸಂಶಯ ಬೇಡ.
(ಸಂಗ್ರಹ)
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.