ಮಂಗಳೂರು: ಹಂಪನಕಟ್ಟೆಯಲ್ಲಿ ಪತ್ತೆಯಾದ ಶತಮಾನದ ಹಿಂದಿನ ಬಾವಿ!
ಅಪ್ಪಣ್ಣನ ಕಟ್ಟೆಗೂ ಬಾವಿಗೂ ಇತ್ತು ಭಾವನಾತ್ಮಕ ನಂಟು
Team Udayavani, Sep 18, 2020, 10:33 AM IST
ಮಹಾನಗರ: ಮಂಗಳೂರು ನಗರದ ಹೃದಯ ಭಾಗ ಹಂಪನಕಟ್ಟೆಯಲ್ಲಿ ಸುಮಾರು ಒಂದು ಶತಮಾನಕ್ಕೂ ಹಿಂದಿನ ಇತಿಹಾಸವಿರುವ ಬೃಹತ್ ಬಾವಿಯೊಂದು ಪತ್ತೆಯಾಗಿದ್ದು, ಕುತೂ ಹಲಕ್ಕೆ ಕಾರಣವಾಗಿದೆ. ವಿಶೇಷ ಅಂದರೆ ಈ ಬಾವಿಯು ಈಗಲೂ ಸುಸ್ಥಿತಿಯಲ್ಲಿದೆ.
ಈ ಬಾವಿಯ ಮತ್ತೂಂದು ವಿಶೇಷ ಅಂದರೆ ಅದು ಸಾಮಾನ್ಯವಾಗಿ ಯಾರು ಊಹಿಸಲು ಸಾಧ್ಯವಾಗದಷ್ಟು ಆಳವನ್ನು ಹೊಂದಿದೆ. ಸ್ಥಳೀಯ ನಿವಾಸಿ ಗಳ ಪ್ರಕಾರ, ಈ ಬಾವಿಯು ಸುಮಾರು 100 ಅಡಿ ಆಳವನ್ನು ಹೊಂದಿದೆ ಎನ್ನಲಾಗುತ್ತಿದೆ.
ಹಂಪನಕಟ್ಟೆಯ ಸಿಗ್ನಲ್ ಬಳಿಯಿರುವ ರಿಕ್ಷಾ ಪಾರ್ಕಿಂಗ್ ಹತ್ತಿರದಲ್ಲಿ ಹಳೆ ಕಾಲದ ಈ ಬಾವಿ ಪತ್ತೆಯಾಗಿದೆ. ಇಲ್ಲಿ ಕೆಲವು ದಿನಗಳಿಂದ ಸ್ಮಾರ್ಟ್‌ಸಿಟಿ ಯೋಜನೆಯಡಿ ಜಂಕ್ಷನ್ ಅಭಿವೃದ್ಧಿಪಡಿಸುವ ಹಿನ್ನೆಲೆಯಲ್ಲಿ ರಸ್ತೆ ಅಗೆಯುವ ಕಾಮಗಾರಿ ನಡೆಯು ತ್ತಿತ್ತು. ಈ ವೇಳೆ ಕಾಂಕ್ರೀಟ್ ಸ್ಲಾಬ್ ಕಾಣಿಸಿತ್ತು. ಆಗ ಸ್ಲಾಬ್ ಮೇಲೆತ್ತಿ ನೋಡಿದಾಗ ಆಳವಾದ ಬಾವಿ ಇರುವುದು ಗೊತ್ತಾಗಿದೆ. ಈ ವಿಚಾರವನ್ನು ಅಲ್ಲಿ ನೆಲೆಸಿರುವ ಜನರೊಂದಿಗೆ ಚರ್ಚಿಸಿದಾಗ ಶತಮಾನದಷ್ಟು ಹಳೆಯ ಬಾವಿ ಇದು ಎನ್ನುವುದು ಖಚಿತಗೊಂಡಿದೆ.
ಅಂದಹಾಗೆ, ಈ ಬಾವಿಗೂ ಹಂಪನಕಟ್ಟೆ ಪ್ರದೇಶಕ್ಕೂ ಭಾವನಾತ್ಮಕ ಸಂಬಂಧವಿದೆ. ಶತಮಾನದ ಹಿಂದೆ ಮಂಗಳೂರಿಗೆ ದೂರದಿಂದ ಬಂದವರಿಗೆ ಬಾಯಾರಿಕೆಗಾಗಿ ಸ್ಥಳೀಯರಾದ ಅಪ್ಪಣ್ಣ ಅವರು ಈಗಿನ ಹಂಪನಕಟ್ಟೆಯ ಅಶ್ವತ್ಥ ಮರದ ಕಟ್ಟೆಯ ಮೇಲೆ ಕುಳಿತು ನೀರು ಕೊಡುತ್ತಿದ್ದರು ಎನ್ನುವ ಪ್ರತೀತಿ ಇದೆ. ಆ ಕಾಲದಲ್ಲಿ ಅಪ್ಪಣ್ಣ ಅವರು ಇದೇ ಬಾವಿಯಿಂದ ನೀರು ತೆಗೆದುಕೊಂಡು ಬಂದು ನೀಡುತ್ತಿದ್ದರು ಎನ್ನಲಾಗುತ್ತಿದೆ. ಈ ರೀತಿ ಹಿಂದೆ “ಅಪ್ಪಣ್ಣ ಕಟ್ಟೆ’ಯಾಗಿದ್ದ ಆ ಪ್ರದೇಶ ಅನಂತರದಲ್ಲಿ “ಹಂಪನಕಟ್ಟೆ’ಯಾಗಿ ಹೆಸರು ಪಡೆದುಕೊಂಡಿದೆ. ಹೀಗಿರುವಾಗ ಆ ಕಾಲದಲ್ಲಿ ಈ ಬಾವಿ ಕೂಡ “ಅಪ್ಪಣ್ಣನ ಬಾವಿ’ ಎಂದೇ ಪ್ರಸಿದ್ಧಿ ಪಡೆದಿತ್ತು ಎನ್ನುತ್ತಾರೆ ಸ್ಥಳೀಯ ನಿವಾಸಿಗಳು.
“ಸುಮಾರು ನೂರು ವರ್ಷಗಳ ಇತಿಹಾಸ ಹೊಂದಿದ ಈ ಬಾವಿಯ ನೀರನ್ನು ಈ ಹಿಂದೆ ಸುತ್ತಮುತ್ತಲಿನ ಜನರು ಉಪಯೋಗಿಸುತ್ತಿದ್ದರು. 1962ರ ಸಮಯದಲ್ಲಿ ನಗರದಲ್ಲಿ ಸ್ಥಳೀಯಾಡಳಿತದಿಂದ ನೀರು ಸರಬರಾಜು ಆರಂಭವಾಗಿತ್ತು. ಆ ಬಳಿಕ ರಸ್ತೆ ಅಭಿವೃದ್ಧಿ ಕಾಮಗಾರಿ ವೇಳೆ ಈ ಬಾವಿಯನ್ನು ಮುಚ್ಚಲು ನಿರ್ಧರಿಸಲಾಗಿತ್ತು. ಆಗ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರು. ಆ ಕಾರಣದಿಂದ ಬಾವಿ ಮುಚ್ಚದೆ, ಮುನ್ನೆಚ್ಚರಿಕೆ ಕ್ರಮವಾಗಿ ಬಾವಿಗೆ ಕಾಂಕ್ರೀಟ್ ಸ್ಲಾಬ್ ಹಾಕಿ ಇಡಲಾಗಿದೆ. ಕಾಲ ಕ್ರಮೇಣ ಆ ಸ್ಲಾಬ್ ಮೇಲೆ ಡಾಮರು ಹಾಕ
ಲಾಗಿದ್ದು, ಬಾವಿ ಇದ್ದ ಕುರುಹು ಕೂಡ ಕಣ್ಮರೆಯಾಗಿ ಹೋಗಿತ್ತು. ಇದೀಗ ರಸ್ತೆ ಅಗೆಯುವ ವೇಳೆ ಆ ಬಾವಿ ಗೋಚರಿಸಿರುವುದು ಹಂಪನ ಕಟ್ಟೆಯ ಇತಿಹಾಸದ ಪುಟಗಳನ್ನು ನೆನಪಿಸುವಂತೆ ಮಾಡಿರುವುದು ವಿಶೇಷ’ ಎನ್ನುತ್ತಾರೆ ಸ್ಥಳೀಯರು.
ಈ ಹಿಂದೆ ಬಾವಿ ಇತ್ತು
ಬಾವಿ ಪತ್ತೆ ಬಗ್ಗೆ ಹಂಪನಕಟ್ಟೆ ಬಳಿಯ ಕೆನರಾ ಜುವೆಲರ್ಸ್ ಮಾಲಕ ಧನಂಜಯ ಪಾಲ್ಕೆ ಅವರು “ಉದಯವಾಣಿ ಸುದಿನ’ಕ್ಕೆ ಪ್ರತಿಕ್ರಿಯಿಸಿ, ಅನೇಕ ವರ್ಷಗಳ ಹಿಂದೆ ನಮ್ಮ ಮಳಿಗೆಯ ಎದುರು ಬಾವಿ ಇತ್ತು. ಈ ಬಾವಿ ನೀರನ್ನು ನಾವೂ ಉಪಯೋಗಿಸುತ್ತಿದ್ದೆವು. ಈ ಬಾವಿ ಸುಮಾರು 100 ಅಡಿ ಆಳ ಹೊಂದಿದೆ. ಈ ಹಿಂದೆ ಬಾವಿಯ ಸುತ್ತಲೂ ಕಟ್ಟೆ ಇತ್ತು. ಆ ಬಾವಿಗೆ ಮೂರು ರಾಟೆ ಇದ್ದು, ಹಗ್ಗದ ಮೂಲಕ ಸ್ಥಳೀಯರು ನೀರು ಎಳೆಯುತ್ತಿದ್ದರು. ಅಭಿವೃದ್ಧಿ ಕಾರಣ ಈ ಬಾವಿ ಮುಚ್ಚುವ ಸಂದರ್ಭ ಬಂದಾಗ ನನ್ನ ತಂದೆ ದಿ| ಪಾಲ್ಕೆ ಬಾಬುರಾಯ ಆಚಾರ್ಯ ಅವರು ಬಾವಿಗೆ ಸ್ಲಾ ಬ್ ಹಾಕಿ ಮುಚ್ಚಳ ಅಳವಡಿಸಿದ್ದರು. ಬಳಿಕ ಸ್ಲಾಬ್ ಮೇಲೆ ಡಾಮರು ಹಾಕಲಾಗಿತ್ತು. ಇದೀಗ ರಸ್ತೆ ಕಾಮಗಾರಿ ವೇಳೆ ಬಾವಿ ಕಂಡಿದೆ. ಈ ಬಾವಿಯಲ್ಲಿನ ನೀರು ಈಗಲೂ ಉತ್ತಮವಾಗಿದ್ದು, ಮುಂದಿನ ಪೀಳಿಗೆಗೆ ಈ ಬಾವಿಯನ್ನು ಸಂರಕ್ಷಿಸಬೇಕು’ ಎನ್ನುತ್ತಾರೆ.
ಒಂದು ಕಾಲದಲ್ಲಿ ಬಾವಿಗಳ ನಗರ !
ನಗರದಲ್ಲಿ ಅನೇಕ ವರ್ಷಗಳ ಹಿಂದೆ ಅನೇಕ ಕೆರೆ, ಬಾವಿಗಳಿದ್ದವು. ಇದೇ ಕಾರಣಕ್ಕೆ ಮಂಗಳೂರು ಬಾವಿಗಳ ನಗರ ಎಂದೂ ಕರೆಯುವುದುಂಟು. ಆದರೆ ಕಾಲಕ್ರಮೇಣ ಅಭಿವೃದ್ಧಿ ದೃಷ್ಟಿಯಿಂದ ಹಲವಾರು ಬಾವಿಗಳು ಮರೆಯಾದವು. ಕೆಲವು ತಿಂಗಳುಗಳ ಹಿಂದೆ ಬೋಳಾರದ ಮಾರಿಗುಡಿ ಸಮೀಪ ಬೋಳಾರ ಜಂಕ್ಷನ್‌ನಲ್ಲಿ ಬ್ರಿಟಿಷ್ ಆಡಳಿತ ಕಾಲದ ಬಾವಿಯೊಂದು ಗೋಚರಿಸಿತ್ತು.
ಹಂಪನಕಟ್ಟೆಯಲ್ಲಿ ಕೆಲವು ದಿನಗಳಿಂದ ಜಂಕ್ಷನ್ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಆ ವೇಳೆ ಬಾವಿಯೊಂದು ಕಾಣಿಸಿತು. ಅಲ್ಲಿನ ಸ್ಥಳೀಯರು ಹೇಳುವಂತೆ ಅನೇಕ ವರ್ಷಗಳ ಹಿಂದಿನ ಬಾವಿ ಇದಾಗಿದೆ. ಸದ್ಯಕ್ಕೆ ಆ ಭಾಗದ ಕಾಮಗಾರಿ ನಿಲ್ಲಿಸಿದ್ದೇವೆ. ಈ ಬಾವಿ ಉಳಿಸುವ ನಿಟ್ಟಿನಲ್ಲಿ, ಮುಂದಿನ ಯೋಜನೆಯ ಬಗ್ಗೆ ಸ್ಥಳೀಯಾಡಳಿತ ಸಹಿತ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಜತೆ ಚರ್ಚೆ ನಡೆಸಲಾಗುವುದು.
-ಮಹಮ್ಮದ್ ನಜೀರ್,
ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ
ಹಂಪನಕಟ್ಟೆಯಲ್ಲಿ ಅನೇಕ ವರ್ಷಗಳ ಹಿಂದೆ ನಮ್ಮ ಹೊಟೇಲ್ ಎದುರುಗಡೆ ಬಾವಿಯೊಂದು ಇದ್ದದ್ದು ನನಗೆ ನೆನಪಿದೆ. ಅಪ್ಪಣ್ಣ ಅವರು ಕೂಡ ಇದೇ ಬಾವಿ ನೀರು ಬಾಯಾರಿದವರಿಗೆ ನೀಡುತ್ತಿದ್ದರು ಎನ್ನುವುದನ್ನು ಹಿರಿಯರಿಂದ ಕೇಳಿದ್ದೇನೆ. ನೀರು ಸರಬರಾಜು ಆರಂಭಗೊಂಡ ಮೇಲೆ, ರಸ್ತೆ ಅಭಿವೃದ್ಧಿ ಸಮಯದಲ್ಲಿ ಆ ಬಾವಿಯನ್ನು ಸ್ಲಾಬ್ ಹಾಕಿ ಮುಚ್ಚಲಾಗಿತ್ತು. ಇದೀಗ ಬಾವಿ ಕಾಣಿಸಿಕೊಂಡಿದ್ದು, ಈ ಬಾವಿಯನ್ನು ಉಳಿಸಬೇಕಿದೆ.
–ಕುಡ್ಪಿ ಜಗದೀಶ ಶೆಣೈ, ದ.ಕ. ಜಿಲ್ಲಾ ಹೊಟೇಲ್ ಮಾಲಕರ ಸಂಘದ ಅಧ್ಯಕ್ಷ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.