ಮಂಡ್ಯ: ಮೂವರು ಅರ್ಚಕರ ಹತ್ಯೆ ಪ್ರಕರಣ: ಮತ್ತೆ 4 ಮಂದಿಯನ್ನು ಬಂಧಿಸಿದ ಪೊಲೀಸರು
Team Udayavani, Sep 19, 2020, 7:22 PM IST
ಮಂಡ್ಯ: ನಗರದ ಅರ್ಕೇಶ್ವರ ದೇವಸ್ಥಾನದ ಮೂವರು ಅರ್ಚಕರ ಹತ್ಯೆ ಮಾಡಿ ಹುಂಡಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ನಾಲ್ವರು ಆರೋಪಿಗಳನ್ನು ಪೂರ್ವ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಬೂವಳ್ಳಿ ಮೂಲದ ಬೆಂಗಳೂರು ಲವಕುಶ ನಗರದ ನಿವಾಸಿ ಬಿ.ಎ.ಶಿವರಾಜು ಅಲಿಯಾಸ್ ಶಿವು (30) ರಾಮನಗರ ತಾಲ್ಲೂಕು ಸಿದ್ದಬೋವಿಪಾಳ್ಯ ಗ್ರಾಮದ ಮಂಜಪ್ಪ ಅಲಿಯಾಸ್ ಡಬ್ಬಲ್ ಇಂಜಿನ್ ಮಂಜ (38), ಮದ್ದೂರು ತಾಲ್ಲೂಕು ಸಾದೊಳಲು ಗ್ರಾಮದ ಶಿವರಾಜ ಅಲಿಯಾಸ್ ಕುಳ್ಳಶಿವ (25) ಹಾಗೂ ಪಾಂಡವಪುರ ತಾಲ್ಲೂಕು ಹರಳಹಳ್ಳಿ ಗ್ರಾಮದ ಗಣೇಶ (20) ಬಂಧಿತ ಆರೋಪಿಗಳು. ಇವರಿಂದ 4,07,935 ರೂ. ನಗದು, ಎರಡು ಮೊಬೈಲ್, ಒಂದು ಜ್ಯುಪಿಟರ್ ಸ್ಕೂಟರ್, ಎರಡು ಬೈಕ್ ಹಾಗೂ ಒಂದು ಟಾಟಾ ಮ್ಯಾಜಿಕ್ ಪ್ಯಾಸೆಂಜರ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಮಹತ್ವದ ಸುಳಿವಿನ ಹಿನ್ನೆಲೆಯಲ್ಲಿ ಕಳೆದ ಸೆ.13 ಭಾನುವಾರ ಶ್ರೀರಂಗಪಟ್ಟಣ ತಾಲ್ಲೂಕು ಗಾಮನಹಳ್ಳಿ ಸಂತೆಮಾಳದ ಅಭಿ ಮತ್ತು ರಘು ಅವರನ್ನು ಬಂಧಿಸಿದ ಪೊಲೀಸರು, ವಿಚಾರಣೆ ನಡೆಸಿ ಇವರಿಂದ 1.75 ಲಕ್ಷ ರೂ.ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಅಲ್ಲದೆ, ಇವರು ನೀಡಿದ ಮಾಹಿತಿ ಆಧರಿಸಿ ಸೆ.14ರ ಸೋಮವಾರ ಮುಂಜಾನೆ ರಾಮನಗರ ಜಿಲ್ಲೆ ಹಾಲಿ ವಾಸ ಮದ್ದೂರು ತಾಲೂಕು ತೊಪ್ಪನಹಳ್ಳಿ ಗ್ರಾಮದ ಮಂಜು (25), ಆಂಧ್ರಪ್ರದೇಶದ ರೆಡೇರಿಪಲ್ಲಿ ಮೂಲದ ಮದ್ದೂರು ತಾಲೂಕು ಕೆ. ಹೊನ್ನಲಗೆರೆ ಗ್ರಾಮದ ವಿಜಯ್ ಅಲಿಯಾಸ್ ವಿಜಿ (28) ರಾಮನಗರ ಹುಗೇನಹಳ್ಳಿ ಗ್ರಾಮದ ಹಾಲಿ ಮದ್ದೂರು ತಾಲೂಕು ಅರೆಕಲ್ಲುದೊಡ್ಡಿ ಗ್ರಾಮದ ಚಂದ್ರ ಅಲಿಯಾಸ್ ಗಾಂಧಿ (22) ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಒಟ್ಟು 9 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಕೃತ್ಯದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಅವರ ಪತ್ತೆಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಘಟನೆ ಹಿನ್ನೆಲೆ:
ಕಳೆದ ಸೆ.11ರ ಶುಕ್ರವಾರ ತಡರಾತ್ರಿ ಶ್ರೀ ಅರ್ಕೇಶ್ವರಸ್ವಾಮಿ ದೇವಸ್ಥಾನಕ್ಕೆ ನುಗ್ಗಿದ ಆರೋಪಿಗಳ ತಂಡ ಮಲಗಿದ್ದ ಪ್ರಕಾಶ್, ಸತೀಶ್ ಮತ್ತು ಆನಂದ ಎಂಬ ಮೂವರು ಅರ್ಚಕರಿಗೆ ಮಾರಕಾಸ್ತ್ರಗಳಿಂದ ಕೊಲೆ ಮಾಡಿ, ದೇವಸ್ಥಾನದ ಬಾಗಿಲು ಒಡೆದು ಮೂರು ಹುಂಡಿಗಳನ್ನು ಹೊತ್ತೊಯ್ದು ಹಣ ದೋಚಿದ್ದರು.
ಈ ಸಂಬಂಧ ನಗರದ ಪೂರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ, ದೇವಾಲಯದಲ್ಲಿ ಸಿಕ್ಕ ಮಹತ್ವದ ಸಾಕ್ಷಿಯ ಬೆನ್ನು ಹತ್ತಿದ ಪೊಲೀಸರು ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ಪರಶುರಾಮ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷ ಧನಂಜಯ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ನವೀನ್ ಕುಮಾರ್, ಸಿಪಿಐಗಳಾದ ಸಂತೋಷ್, ಮಹೇಶ್, ಪ್ರಸಾದ್, ಪೊಲೀಸ್ ಇನ್‌ಸ್ಪೆಕ್ಟರ್ ಆನಂದ್‌ಗೌಡ, ಪಿಎಸ್‌ಐಗಳಾ ಶರತ್ ಕುಮಾರ್, ವೆಂಕಟೇಶ್, ಕೇಶವಮೂರ್ತಿ ಅವರ ನೇತೃತ್ವದಲ್ಲಿ ಆರೋಪಿಗಳಿಗಾಗಿ ಶೋಧ ನಡೆಸಲಾಗಿತ್ತು.
ಪ್ರಕರಣದಲ್ಲಿ ಕಳೆದ ಸೆ.14ರ ಸೋಮವಾರ ಬೆಳಗಿನ ಜಾವ ಆರೋಪಿಗಳಾದ ಮಂಜ ಅಲಿಯಾಸ್ ಕುಳ್ಳಮಂಜ, ವಿಜಯ್ ಅವರನ್ನು ಹಿಡಿಯುವ ಸಮಯದಲ್ಲಿ ಆರೋಪಿಗಳು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಹಲ್ಲೆ ಮಾಡಲಾಗಿ, ಆತ್ಮರಕ್ಷಣೆಗಾಗಿ ಪೊಲೀಸ್ ಅಧಿಕಾರಿಗಳು ಆರೋಪಿಗಳ ಕಾಲಿಗೆ ಗುಂಡು ಹಾರಿಸಿದ್ದು, ಮೂವರು ಆರೋಪಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆರೋಪಿಗಳು ದೇವಸ್ಥಾನದ ಬಾಗಿಲನ್ನು ಹೊಡೆದು ಹುಂಡಿ ದೋಚುವ/ಕಳ್ಳತನ ಮಾಡುವುದೇ ಇವರ ಕಸುಬಾಗಿದೆ. ಮಂಡ್ಯ, ಹಾಸನ, ರಾಮನಗರ, ಬೆಂಗಳೂರು, ಕೆ.ಆರ್.ನಗರ, ಹೊಳೆನರಸೀಪುರ, ಅರಸೀಕೆರೆ, ಹುಲಿಯೂರು ದುರ್ಗ, ಬೆಂಗಳೂರಿನ ದೊಡ್ಡಾಲದ ಮರ, ಮಾಗಡಿ, ಬನ್ನೂರು ಕಡೆಗಳಲ್ಲಿ ಸುಮಾರು 12 ರಿಂದ 15 ದೇವಾಲಯಗಳ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ತನಿಖೆಯಿಂದ ತಿಳಿದು ಬಂದಿದೆ. ಆರೋಪಿಗಳ ಪತ್ತೆ ಕಾರ್ಯದಲ್ಲಿ ತೊಡಗಿದ್ದ ಅಧಿಕಾರಿಗಳು ಮತು ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ ಪ್ರಶಂಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.