ಶಾಸಕಿಗೆ ಧರಣಿ ಅರ್ಥ ತಿಳಿದಿಲ್ಲ
ರೂಪಕಲಾ ಡೀಸಿ ಕಚೇರಿ ಎದುರಿನ ಧರಣಿಗೆ ಮಾಜಿ ಶಾಸಕ ಸಂಪಂಗಿ ವ್ಯಂಗ್ಯ
Team Udayavani, Sep 22, 2020, 3:34 PM IST
ಕೆಜಿಎಫ್: ಧರಣಿ ಎಂಬ ಪದದ ಅರ್ಥ ತಿಳಿಯದ ಶಾಸಕಿ ಎಂ.ರೂಪಕಲಾರವರು ಬೇರೆಯವರ ಪ್ರೇರಣೆಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ವಿನಾಕಾರಣ ಧರಣಿ ನಡೆಸಿದ್ದಾರೆ ಎಂದು ಮಾಜಿ ಶಾಸಕ ವೈ. ಸಂಪಂಗಿ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹೋರಾಟ ಮಾಡಿ ಬಂದವರಿಗೆ ಹೋರಾಟದ ಮತ್ತು ಧರಣಿಯ ಅರ್ಥ ತಿಳಿದಿರುತ್ತದೆ. ತಂದೆಯ ನೆರಳಿನಲ್ಲಿ ರಾಜಕೀಯಕ್ಕೆ ಬಂದವರಿಗೆ ಇಂತಹ ಪದಗಳ ಅರ್ಥ ತಿಳಿದಿರುವುದಿಲ್ಲ ಎಂದರು.
ಪ್ರಭಾವ ಬೀರಿ ಅವಕಾಶ ನೀಡಲಿಲ್ಲ: ಯಾವ ನೈತಕ ಆಧಾರದ ಮೇಲೆ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಿದ್ದೀರಿ, ಜನರ ಪರವಾಗಿ ಇದ್ದೀನಿ ಎಂದು ತೋರಿಸಿಕೊಳ್ಳಲು ಧರಣಿ ಮಾಡಿದ್ದೀರಿ. 2016 ರಲ್ಲಿ ನಮ್ಮ ತಾಯಿ ಶಾಸಕಿಯಾಗಿದ್ದಾಗ, ರಸ್ತೆ ಅಗಲೀಕರಣಕ್ಕೆ ಪ್ರಯತ್ನ ಮಾಡಲಾಗಿತ್ತು. ಸಾರ್ವಜನಿಕವಾಗಿ ಆಟೋದಲ್ಲಿ ಪ್ರಚಾರ ಮಾಡಲಾಯಿತು. ದಿನಾಂಕ ನಿಗದಿ ಮಾಡಿದ್ದ ಸಂದರ್ಭದಲ್ಲಿ ಕಟ್ಟಡ ಮಾಲೀಕರು ಖಾಲಿ ಮಾಡಲು ಸೂಚಿಸಲಾಯಿತು. ಆದರೆ ಆಗ ಕೆ.ಎಚ್.ಮುನಿಯಪ್ಪರವರು ಎಂಪಿಯಾಗಿದ್ದರು. ದಿವ್ಯಾಗೋಪಿನಾಥ್ ಎಸ್ಪಿಯಾಗಿದ್ದರು. ಅವರ ಮೇಲೆ ಪ್ರಭಾವ ಬೀರಿ ಕಟ್ಟಡ ತೆರವು ಬಿಡಲು ಅವಕಾಶ ಮಾಡಿಕೊಡಲಿಲ್ಲ ಎಂದು ಆರೋಪಿಸಿದರು.
ಜಿಲ್ಲಾಧಿಕಾರಿಗೆ ಬೆದರಿಕೆ: 2013-14 ರಲ್ಲಿ ಬಿಜೆಪಿ ಸರ್ಕಾರವಿದ್ದಾಗ ಅನುದಾನ ಬಂದಿತು. 3 ಕೋಟಿಗೆ ಟೆಂಡರ್ ಕರೆಯ ಲಾಗಿತ್ತು. ನರಸೇಗೌಡ ಎಂಬವರಿಗೆ ಗುತ್ತಿಗೆ ನೀಡಲಾಗಿತ್ತು. ಇದನ್ನು ನಾವು ಮಾಡಿದ್ದು. ಅಧಿಕಾರ ಇದ್ದಾಗ ಮುನಿಯಪ್ಪರವರು ಏನೂ ಕೆಲಸ ಮಾಡಲಿಲ್ಲ. ನಮ್ಮ ತಾಯಿ ಶಾಸಕಿಯಾಗಿದ್ದಾಗ ಏನೂ ಕೆಲಸ ಮಾಡಲು ಬಿಡಲಿಲ್ಲ. ಆದರೂ 2017 ರಲ್ಲಿ ರಸ್ತೆ ಅಗಲೀ ಕರಣಕ್ಕೆ ನಾನು ಕೋಲಾರದಲ್ಲಿ ಧರಣಿ ಮಾಡಿದ್ದೇನೆ. ಆದರೆ ಶಾಸಕಿಯಾಗಿ ನೀವು ಜಿಲ್ಲಾಧಿಕಾರಿಗಳನ್ನು ಬೆದರಿಸುತ್ತಿದ್ದೀರಿ ಎಂದು ಆರೋಪಿಸಿದರು.
ಗಣಿ ತೆರೆಯಲು ಅವಕಾಶ ನೀಡಲಿಲ್ಲ: ಮೈನ್ಸ್ ಮುಚ್ಚಿದ್ದು, ಅದನ್ನು ತೆರೆಯಬೇಕುಎಂದು ಶಾಸಕಿಯಾಗಿದ್ದಾಗ ನಮ್ಮ ತಾಯಿ ಅಧಿವೇಶನದಲ್ಲಿ ಮಾತನಾಡಿದರು. ಕೇಂದ್ರ ಸರ್ಕಾರ ಎಲ್ಲಾ ಪ್ರದೇಶವನ್ನು ನಿಮಗೆಕೊಡುತ್ತೇವೆ ಎಂದರು. ಆದರೆ ಸಿದ್ದರಾಮಯ್ಯ ಸರ್ಕಾರ, ಒಪ್ಪದೆ 1600 ಕೋಟಿ ಬಾಕಿ ನಾವು ಕೊಡಲು ಸಾಧ್ಯವಿಲ್ಲ ಎಂದು ಗಣಿಯನ್ನು ತೆರೆಯಲು ಅವಕಾಶ ನೀಡಲಿಲ್ಲ ಎಂದು ದೂರಿದರು.
ಒತ್ತಡ ಸರಿಯಲ್ಲ: ಜಿಲ್ಲಾಧಿಕಾರಿಗಳು ರಸ್ತೆ ಅಗಲೀಕರಣ ಮಾಡುತ್ತೇನೆಂದು ಹೇಳಿದ್ದಾರೆ. ಮಾಡುವುದಿಲ್ಲ ಎಂದು ಹೇಳಿಲ್ಲ. ಕೇಂದ್ರ ಮತ್ತು ರಾಜ್ಯದಲ್ಲಿ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಮೇಲೆ ಒತ್ತಡ ತರುವುದು, ಸರ್ಕಾರಕ್ಕೆ ಕೆಟ್ಟ ಹೆಸರು ತರುವುದು ಏಕೆ ಎಂದು ಮಾಜಿ ಶಾಸಕ ಸಂಪಂಗಿ ಹಾಲಿ ಶಾಸಕರನ್ನು ಪ್ರಶ್ನಿಸಿದರು. ಶಾಸಕಿ ರೂಪಕಲಾ ಅವರು ಹೊಸ ಕೆಲಸ ಮಾಡಿ ನಿಮ್ಮ ಸಾಧನೆ ತೋರಿಸಿ. ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಕೆಲಸವನ್ನು ನಮ್ಮದೆಂದು ತೋರಿಸಬೇಡಿ ಎಂದರು.
ಎಂ.ಜಿ.ಮಾರುಕಟ್ಟೆ, ಗೌತಮನಗರ, ಸಿಂಧೂ ನಗರ ನಿವಾಸಿಗಳ ಸಮಸ್ಯೆಯನ್ನು ಪರಿಹಾರ ಮಾಡಲು ಶಾಸಕರಿಗೆ ಆಗಲಿಲ್ಲ. ರಸ್ತೆಗಳನ್ನು ದುರಸ್ತಿ ಮಾಡಲು ಸಾಧ್ಯವಾಗಿಲ್ಲ ಎಂದು ದೂರಿದರು. ಬಿಜೆಪಿ ಮುಖಂಡರಾದ ಕಣ್ಣೂರುವಿಜಿ,ಜಯಕುಮಾರ್,ವೆಂಕಟರೆಡ್ಡಿ ,ಮೇಘನಾಥನ್, ನಾಗರಾಜ್, ಗಂಟ್ಲಪ್ಪ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.