ಜಿಲ್ಲೆಯಲ್ಲಿ ವೇಗ ಪಡೆದ ಕೋವಿಡ್ ಕಿಚ್ಚು
ಜಿಲ್ಲೆಯಲ್ಲಿ ಕೋವಿಡ್ ಭಯವಿದ್ದರೂ ನಿಯಮ ಪಾಲನೆ ಇಲ್ಲ ,ನಿತ್ಯ ಸೋಂಕಿತರು-ಸಾವಿನ ಸಂಖ್ಯೆ ಹೆಚ್ಚಳ
Team Udayavani, Sep 24, 2020, 1:49 PM IST
ದೇವನಹಳ್ಳಿ: ಲಾಕ್‌ಡೌನ್ ತೆರವಾದ ಮೇಲೆ ಕೋವಿಡ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು ಮಾಸ್ಕ್ ಇಲ್ಲದೆ ಜನತೆ ನಿರ್ಲಕ್ಷ್ಯ ವಹಿಸಿರುವುದೇ ಸೋಂಕು ಹೆಚ್ಚಳಕ್ಕೆ ಕಾರಣವಾಗಿದೆ. ಪ್ರಾರಂಭದಲ್ಲಿ ಅನುಸರಿಸಿದ ನಿಯಮಗಳನ್ನು ಜನ ಗಾಳಿಗೆ ತೂರುತ್ತಿದ್ದಾರೆ. ಸರ್ಕಾರದಿಂದ ವ್ಯಾಪಕ ಜಾಗೃತಿ ಪ್ರಚಾರ, ಅರಿವು ಮೂಡಿಸಿದರೂ ಪ್ರಯೋಜನಕ್ಕೆ ಬಾರದಂತಾಗಿದೆ. ಕೋವಿಡ್ ಸಾಮಾನ್ಯ ಕಾಯಿಲೆ ಅಲ್ಲದಿದ್ದರೂ ಇದೀಗ ಸಾಮಾನ್ಯ ಕಾಯಿಲೆಯಂತೆ ಆಗಿದೆ. ಕಡ್ಡಾಯ ಮಾಸ್ಕ್ ಬಳಕೆ, ನಿಯಮಗಳ ಪಾಲನೆ ಮಾಡದಿದ್ದರಿಂದ ಸೋಂಕಿತರು ದಿನೇ ದಿನೆ ಹೆಚ್ಚಾಗುತ್ತಿದ್ದಾರೆ.
ದೇವನಹಳ್ಳಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಜಿಲ್ಲೆಯ ಆರ್‌ಟಿಪಿಸಿಆರ್ ಪ್ರಯೋಗಾಲಯವಾಗಿರುವುದರಿಂದ ಬೆಂಗಳೂರಿಗೆ ಕೋವಿಡ್ ಪರೀಕ್ಷೆ ಮಾದರಿ ಕಳುಹಿಸಬೇಕಾಗಿತ್ತು. ಇದೀಗ 4 ತಾಲೂಕುಗಳ ಕೋವಿಡ್ ಮಾದರಿಗಳನ್ನು ದೇವನಹಳ್ಳಿಯಲ್ಲಿಯೇ ಪರೀಕ್ಷೆ ಮಾಡಲಾಗುತ್ತಿದೆ.
ಎಲ್ಲೆಲ್ಲಿ ಚಿಕಿತ್ಸೆ?: 4 ತಾಲೂಕುಗಳಲ್ಲಿ ದೇವನಹಳ್ಳಿ ತಾಲೂಕಿನಲ್ಲಿ 60 ಆಕ್ಸಿಜನ್ ಹಾಸಿಗೆ, 8 ವೆಂಟಿಲೇಟರ್, ದೊಡ್ಡಬಳ್ಳಾಪುರ60 ಆಕ್ಸಿಜನ್ ಹಾಸಿಗೆ,4 ವೆಂಟಿಲೇಟರ್, ಹೊಸಕೋಟೆ 30 ಆಕ್ಸಿಜನ್,4ವೆಂಟಿಲೇಟರ್, ನೆಲಮಂಗಲ 30 ಹಾಸಿಕೆ,4 ವೆಂಟಿಲೇಟರ್ ಹೊಂದಿದೆ. ಎಂವಿಜೆ ಹೊಸಕೋಟೆ, ದೇವನಹಳ್ಳಿ ಆಕಾಶ್ ಆಸ್ಪತ್ರೆ, ನೆಲಮಂಗಲ ಸಿದ್ದಾರ್ಥ ಆಸ್ಪತ್ರೆಗಳಲ್ಲಿ ಕೋವಿಡ್ ಪರೀಕ್ಷೆ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ವೈದ್ಯರ ಕೊರತೆ ಎದ್ದುಕಾಣುತ್ತಿದೆ. ಇರುವ ವೈದ್ಯರನ್ನೇ ಬಳಸಿ ಚಿಕಿತ್ಸೆ ನೀಡಲಾಗುತ್ತಿದೆ. ದಿನದಿಂದ ದಿನಕ್ಕೆ ಸಾವಿನ ಪ್ರಕರಣಗಳು ಹೆಚಳವಾಗುತ್ತಿದೆ. ಈವರೆಗೆ ಸುಮಾರು 7905 ಪ್ರಕರಣ ದೃಢಪಟ್ಟಿದ್ದು, ಅದರಲ್ಲಿ 685 ಪ್ರಕರಣ ಬೇರೆ ಜಿಲ್ಲೆ ಹಾಗೂ ಬೇರೆ ರಾಜ್ಯದವರದ್ದಾಗಿದೆ. ಉಳಿದ 7220 ಪ್ರಕರಣ ಜಿಲ್ಲೆಯದ್ದಾಗಿವೆ. ಈ 7905 ಪ್ರಕರಣಗಳಲ್ಲಿ 5996ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. 1837 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 77ಮಂದಿ ಸಾವನ್ನಪ್ಪಿದ್ದಾರೆ.
ನಿಯಮ ಪಾಲನೆ ಇಲ್ಲ: ಜಿಲ್ಲೆಯ ಯಾವುದೇ ಆಸ್ಪತ್ರೆಯ ಲ್ಲಿ ಹಾಸಿಗೆ ಕೊರತೆ ಇಲ್ಲ. ಬರುವ ಎಲ್ಲಾ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈಗ ಪ್ರತಿಯೊಬ್ಬರಲ್ಲಿಯೂ ಕೋವಿಡ್ ಭಯ ಇದ್ದೆ ಇದೆ. ಆದರೂ, ಸರ್ಕಾರದ ನಿಯಮಗಳನ್ನು ಪಾಲಿಸ್ತುಲ್ಲ.
ಜ್ವರ,ಕೆಮ್ಮು ಬಂದರೆ ಪರೀಕ್ಷಿಸಿ : ಕೋವಿಡ್ ಸೋಂಕಿತರಿಗೆ ಅನುಕೂಲ ಕಲ್ಪಿಸಲು ಆಮ್ಲಜನಕಯುಕ್ತ ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ. ಕೋವಿಡ್ ಸೋಂಕಿರುವ ರೋಗಿಗಳಲ್ಲಿ ಕೋವಿಡ್ ವೈರಾಣು ಶ್ವಾಸಕೋಶಕ್ಕೆ ಹಾನಿಯುಂಟು ಮಾಡುವುದರಿಂದ ಹಾಗೂ ದೇಹದಲ್ಲಿ ಆಮ್ಲಜನಕ ಸರಬರಾಜು ಕಡಿಮೆ ಮಾಡುವುದರಿಂದ ಕೃತಕ ಆಮ್ಲಜನಕ ಅನಿವಾರ್ಯ. ಸಾರ್ವಜನಿಕರು ಜ್ವರ,ಕೆಮ್ಮು, ನೆಗಡಿಯಂತಹ ಕಾಯಿಲೆ ಕಾಣಿಸಿಕೊಂಡರೆ, ಸ್ವಯಂ ಔಷಧಿ ತೆಗೆದುಕೊಳ್ಳದೇ, ಸರ್ಕಾರಿ ಫೀವರ್ ಕ್ಲಿನಿಕ್‌ಗಳಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಜಿಲ್ಲೆಯಲ್ಲಿ ಹೋಂ ಐಸೋಲೇಷನ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮಂಜುಳಾದೇವಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕೋವಿಡ್ ವ್ಯಾಪಕವಾಗಿ ಹರಡುತ್ತಿದ್ದು ಮುಂಜಾಗೃತಾಕ್ರಮ ಕೈಗೊಳ್ಳಬೇಕು. ಸೋಂಕು ರೋಗ ಲಕ್ಷಣಗಳಿದ್ದರೆ, ತಕ್ಷಣ ಪರೀಕ್ಷೆ ಮಾಡಿಸಿಕೊಳ್ಳಬೇಕು. ಆರೋಗ್ಯದ ಬಗ್ಗೆಯಾರೂ ನಿರ್ಲಕ್ಷ್ಯ ವಹಿಸಬಾರದು. – ಪಿ.ಎನ್.ರವೀಂದ್ರ, ಜಿಲ್ಲಾಧಿಕಾರಿ
ಕೋವಿಡ್ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೂ ಜನ ತಮ್ಮ ಪ್ರಾಣ ರಕ್ಷಣೆಯನ್ನು ತಾವೇಮಾಡಿಕೊಳ್ಳಬೇಕಿದೆ. ಜನ ಮುಂಜಾಗೃತಕ್ರಮ ಕೈಗೊಂಡರೆ, ಕೋವಿಡ್ ತೊಲಗಿಸಬಹುದು. – ನಾರಾಯಣಸ್ವಾಮಿ, ದೇವನಹಳ್ಳಿ ನಾಗರಿಕ
ಎಸ್.ಮಹೇಶ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.