ರಾಜನೀತಿ: ಅಮೆರಿಕನ್ ಚುನಾವಣೆ: ಗೆಲವು ಯಾರಿಗೆ?
Team Udayavani, Oct 6, 2020, 6:45 AM IST
ಅಮೆರಿಕನ್ ಮತದಾರರು ಮುಂದಿನ ಅಧ್ಯಕ್ಷರನ್ನು ಆಯ್ಕೆ ಮಾಡಲು ನವೆಂಬರ್ 3 ರಂದು ಮತದಾನ ಮಾಡಲಿದ್ದಾರೆ.
ಅವರು ಮತ್ತೆ ರಿಪಬ್ಲಿಕನ್ ನಾಯಕ ಡೊನಾಲ್ಡ್ ಟ್ರಂಪ್‌ಗೆ 4 ವರ್ಷ ಅಧಿಕಾರ ಮುಂದುವರಿಸುವ ಅವಕಾಶ ಕೊಡಲಿದ್ದಾರೋ ಅಥವಾ ಶ್ವೇತ ಭವನದ ಕೀಲಿಕೈಯನ್ನು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ, ಮಾಜಿ ಉಪಾಧ್ಯಕ್ಷ 77 ವರ್ಷದ ಜೋ ಬೈಡನ್‌ಗೆ ಕೊಡಲಿದ್ದಾರೋ?
ಈ ಪ್ರಶ್ನೆಗೆ ಉತ್ತರ ಹುಡುಕುವ ಸಮಯದಲ್ಲೇ ಅಮೆರಿಕನ್ ಚುನಾವಣೆಯಲ್ಲಿ ಹಠಾತ್ ತಿರುವು ಎದುರಾಗಿದೆ. ಅಕ್ಟೋಬರ್ 2 ರಂದು ಅಧ್ಯಕ್ಷ ಟ್ರಂಪ್ ಕೋವಿಡ್ ಸೋಂಕಿನಿಂದಾಗಿ ಆಸ್ಪತ್ರೆ ಸೇರಿದ್ದಾರೆ. ಟ್ರಂಪ್ ಅವರಿಗೀಗ 74 ವರ್ಷ ವಯಸ್ಸು, ಅಧಿಕ ತೂಕದ ಸಮಸ್ಯೆಯನ್ನೂ ಅವರು ಎದುರಿಸುತ್ತಿದ್ದಾರೆ.
ಉಸಿರಾಟದ ತೊಂದರೆಯೂ ಕಾಣಿಸಿಕೊಂಡಿರುವುದರಿಂದಾಗಿ ಸಾಂಕ್ರಾಮಿಕದ ಹೈ ರಿಸ್ಕ್ ಕೆಟಗರಿಯಲ್ಲಿ ಬರುತ್ತಾರೆ. ಒಂದು ವೇಳೆ, ಕೋವಿಡ್ ಸಮಸ್ಯೆಯೇನಾದರೂ ಅವರಿಗೆ ಹೆಚ್ಚಾಗಿ ಕಾಡಿತೆಂದರೆ, ಚುನಾವಣೆ ಕಥೆ ಪಲ್ಲಟವಾಗುವುದೇ ಎನ್ನುವ ಪ್ರಶ್ನೆ ಎದುರಾಗುತ್ತಿದೆ.
ಚುನಾವಣೆಗೆ ಇನ್ನು ಒಂದೇ ತಿಂಗಳು ಉಳಿದಿದ್ದು, ಇದು ಬಹುನಿರ್ಣಾಯಕ ಸಮಯ. ಆರೋಗ್ಯ ಹದಗೆಟ್ಟರೆ ಬೆಂಬಲಿಗರನ್ನು ಉದ್ದೇಶಿಸಿ ಹಲವು ಕಾರ್ಯಕ್ರಮಗಳಲ್ಲಿ ಮಾತನಾಡಲು, ಎದುರಾಳಿಗಳ ಮೇಲೆ ವಾಗ್ಬಾಣ ಹರಿಸಿ ಮತದಾರರಲ್ಲಿ ಹುರುಪು ತುಂಬುವ ಅವಕಾಶವನ್ನಂತೂ ಟ್ರಂಪ್ ಕಳೆದುಕೊಳ್ಳುತ್ತಾರೆ.
ಅಮೆರಿಕದಲ್ಲಿ ಚುನಾವಣಾ ಪೂರ್ವದಲ್ಲಿ ಡೆಮಾಕ್ರಟಿಕ್ ಹಾಗೂ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಗಳ ನಡುವೆ ಚರ್ಚೆ ಏರ್ಪಡಿಸಲಾಗುತ್ತದೆ. ಕಳೆದ ಬಾರಿಯ ಚರ್ಚೆಯಲ್ಲಿ ಹಿಲರಿ ವಿರುದ್ಧ ಟ್ರಂಪ್ ಮೇಲುಗೈ ಸಾಧಿಸಿದ್ದರಾದರೂ ಈ ಬಾರಿ ಚರ್ಚೆ ಬಹಳ ಕೆಟ್ಟ ರೀತಿಯಲ್ಲಿ ರೂಪ ಪಡೆಯಿತು. ಬೈಡನ್-ಟ್ರಂಪ್ ಪರಸ್ಪರ ಏಕವಚನದಲ್ಲಿ ಆಪಾದನೆ ಮಾಡಿದರಷ್ಟೇ ಅಲ್ಲದೇ, ಒಂದು ಹಂತದಲ್ಲಂತೂ ಟ್ರಂಪ್‌ರ ಒರಟು ಮಾತುಗಳಿಂದ ಕಿರಿಕಿರಿಗೊಂಡ ಬೈಡನ್ ” Will you shut up, man ” ಎಂದೂ ರೇಗಿದರು.
ಈ ಚರ್ಚೆಯಲ್ಲಿ ಬೈಡನ್ ಮೇಲುಗೈ ಸಾಧಿಸಿದರು ಎನ್ನುವುದು ಡೆಮಾಕ್ರಾಟ್‌ಗಳ ಅಭಿಪ್ರಾಯ. ಇದಷ್ಟೇ ಅಲ್ಲ, ಇಂಥ ಚರ್ಚೆಗಳಿಂದ ತಪ್ಪಿಸಿಕೊಂಡು ಜನರ ಅನುಕಂಪ ಗಿಟ್ಟಿಸಿಕೊಳ್ಳುವುದಕ್ಕಾಗಿಯೇ ಟ್ರಂಪ್ ಕೋವಿಡ್ ನಾಟಕವಾಡುತ್ತಿದ್ದಾರೆ ಎಂಬ ಆಪಾದನೆಗಳೂ ಎದುರಾಳಿ ಪಕ್ಷದ ಬೆಂಬಲಿಗರಿಂದ ಕೇಳಿಬಂದಿವೆ. ರಾಜಕೀಯದಲ್ಲಿ ಏನು ಬೇಕಾದರೂ ನಡೆಯುತ್ತದೆ. ಆದರೆ ಈಗಿನ ಆರೋಪದಲ್ಲಿ ಸತ್ಯವಿಲ್ಲ ಎನ್ನುವುದು ಸ್ಪಷ್ಟವಾಗಿದೆ.
ಈ ಹೊತ್ತಲ್ಲಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ವಿಚಾರವನ್ನು ಇಲ್ಲಿ ಉಲ್ಲೇಖಿಸಲೇಬೇಕು. ಬ್ರಿಟನ್‌ನಲ್ಲಿ ಕೋವಿಡ್ ಹಾವಳಿ ಹೆಚ್ಚಾದಾಗ, ಅದನ್ನು ತಡೆಯಲು ವಿಫಲರಾಗಿದ್ದಾರೆ ಎಂದು ಬೋರಿಸ್ ವಿರುದ್ಧ ಜನಾಕ್ರೋಶ ಹೆಚ್ಚಾಗಿತ್ತು. ಅವರ ಜನಪ್ರಿಯತೆಯ ರೇಟಿಂಗ್ 4 ಪ್ರತಿಶತಕ್ಕೆ ಕುಸಿದಿದೆ ಎಂದು ಸಮೀಕ್ಷೆಗಳು ಹೇಳಿದವು.
ಆದರೆ ಅಂಥ ಬಿಕ್ಕಟ್ಟಿನ ಸಮಯದಲ್ಲೇ ಬೋರಿಸ್ ಜಾನ್ಸನ್‌ರಿಗೆ ಕೋವಿಡ್ ಸೋಂಕು ತಗುಲಿತು. ಒಂದು ಸಮಯದಲ್ಲಂತೂ ಅವರ ಆರೋಗ್ಯ ಸ್ಥಿತಿ ಹದಗೆಡುವ ಹಂತ ತಲುಪಿತ್ತು. ಆದರೆ, ಯಾವಾಗ ಕೋವಿಡ್‌ನಿಂದ ಚೇತರಿಸಿಕೊಂಡು ಮತ್ತೆ ಹಿಂದಿರುಗಿದರೋ ಹಠಾತ್ತನೆ 4 ಪ್ರತಿಶತ ಇದ್ದ ಅವರ ಜನಪ್ರಿಯತೆಯ ರೇಟಿಂಗ್ 40 ಪ್ರತಿಶತಕ್ಕೆ ಏರಿತು.
ಟ್ರಂಪ್ ವಿಷಯದಲ್ಲೂ ಹಾಗೆಯೇ ಆಗಬಹುದೇನೋ ಎಂಬ ಆತಂಕ ಡೆಮಾಕ್ರಟಿಕ್ ಪಕ್ಷದವರಿಗಿದೆ. ಹಾಗೆ ಆಗದಿದ್ದರೂ, ಟ್ರಂಪ್ ಕೋವಿಡ್ ತಡೆಯುವಲ್ಲಿ ತೋರಿದ ವೈಫಲ್ಯ ಅವರ ಕುರ್ಚಿಗೆ ಕುತ್ತು ತರಲಿದೆ ಎಂಬ ಭರವಸೆ ಎದುರಾಳಿಗಳಲ್ಲಿದೆ.
ಕೋವಿಡ್ ಸಾಂಕ್ರಾಮಿಕದ ಹಾವಳಿ, ಸಾವುಗಳು ಅಮೆರಿಕದಲ್ಲೇ ಅತ್ಯಧಿಕವಿದ್ದರೂ ಆ ರಾಷ್ಟ್ರದಲ್ಲಿ ಎಂದಿಗೂ ಪೂರ್ಣ ಲಾಕ್‌ಡೌನ್ ಆಗಿಯೇ ಇಲ್ಲ. ಆರಂಭದಿಂದಲೂ ಬ್ಯುಸಿನೆಸ್‌ಗಳು ನಿಧಾನಕ್ಕೆ ನಡೆದೇ ಇದ್ದವು. ಇದರ ಪರಿಣಾಮವಾಗಿ ಈಗ ಅಲ್ಲಿನ ಆರ್ಥಿಕತೆಯು ಚೇತರಿಕೆಯ ಹಾದಿಯಲ್ಲಿ ಸಾಗುತ್ತಿದ್ದು, ಟ್ರಂಪ್ ಆಡಳಿತ ಈ ವಿಷಯವನ್ನು ತನ್ನ ಸಾಧನೆಯಾಗಿ ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿದೆ.
ಸಮೀಕ್ಷೆಗಳೇನು ಹೇಳುತ್ತಿವೆ?
ಪ್ರಸಕ್ತ ಬಹುತೇಕ ಸಮೀಕ್ಷಾ ವರದಿಗಳು ಟ್ರಂಪ್‌ರ ರೇಟಿಂಗ್ ಕುಸಿದಿದೆ, ಜೋ ಬೈಡನ್‌ರನ್ನೇ ಜನ ಗೆಲ್ಲಿಸುತ್ತಾರೆ ಎನ್ನುತ್ತಿವೆ. ಅಮೆರಿಕದ ಚುನಾವಣಾ ಪೂರ್ವ ಸಮೀಕ್ಷೆಗಳಿಗೂ ಜನಾಭಿಪ್ರಾಯಕ್ಕೂ ಯಾವಾಗಲೂ ತಾಳ ಮೇಳವಿರುವುದಿಲ್ಲ. ಈಗಲೂ ಅಮೆರಿಕನ್ನರು ಟ್ರಂಪ್‌ರ ಕೈ ಹಿಡಿಯಲಿದ್ದಾರೆಯೇ ಅಥವಾ ಕೋವಿಡ್ ವಿಚಾರದಲ್ಲಿ ಟ್ರಂಪ್‌ವೈಫಲ್ಯದಿಂದಾಗಿ ಅವರು ಭ್ರಮನಿರಸನಗೊಂಡಿದ್ದಾರಾ?
ಶ್ವೇತವರ್ಣೀಯ ಪೊಲೀಸ್ ಅಧಿಕಾರಿಯೊಬ್ಬ ಜಾರ್ಜ್ ಫ್ಲಾಯ್ಡ್ ಎನ್ನುವ ಕಪ್ಪು ವರ್ಣೀಯ ವ್ಯಕ್ತಿಯನ್ನು ಕೊಂದ ವಿಚಾರ ಕೆಲವು ತಿಂಗಳಿಂದ ಅಮೆರಿಕದಲ್ಲಿ ಬೃಹತ್ ಪ್ರತಿಭಟನೆಗಳಿಗೆ ಕಾರಣವಾಗಿದೆ. ಈ ಪ್ರತಿಭಟನೆಗಳಿಗೆ ಬೆಂಬಲ ನೀಡುತ್ತಿರುವ ಡೆಮಾಕ್ರಟಿಕ್ ಪಕ್ಷವು “ಟ್ರಂಪ್ ಅವಧಿಯಲ್ಲಿ ಜನಾಂಗೀಯ ದ್ವೇಷ ಹೆಚ್ಚಾಗುತ್ತಿದೆ’ ಎಂದು ಆರೋಪಿಸುತ್ತಿದೆ. ಆದರೆ ‘ಡೆಮಾಕ್ರಟಿಕ್ ಪಕ್ಷವು ಈ ಘಟನೆ ಯನ್ನು ದುರ್ಬಳಕೆ ಮಾಡಿಕೊಂಡು ಟ್ರಂಪ್ ವಿರುದ್ಧ ಜನರನ್ನು ಎತ್ತಿಕಟ್ಟಲು ಪ್ರಯತ್ನಿಸುತ್ತಿದೆ’ ಎನ್ನುವುದು ರಿಪಬ್ಲಿಕನ್ನರ ವಾದ.
ನಿರ್ಣಾಯಕ ರಾಜ್ಯಗಳು
ಅಮೆರಿಕನ್ ಚುನಾವಣೆಯಲ್ಲಿ ಮೊದಲಿನಿಂದಲೂ ಪೆನ್ಸಿಲ್ವೇನಿಯಾ, ವಿಸ್ಕಾನ್ಸಿನ್, ಮಿಶಿಗನ್, ಒಹಾಯೋ, ಫ್ಲೋರಿಡಾ, ಅರಿಝೋನಾ, ನೆವಾಡಾ, ಉತ್ತರ ಕ್ಯಾರೊಲೀನಾ, ಟೆಕ್ಸಾಸ್, ನ್ಯೂ ಹ್ಯಾಂಪ್‌ಶೈರ್, ಮಿನಿ ಸೋಟ, ಜಾರ್ಜಿಯಾ ಹಾಗೂ ಅಯೋವಾ ರಾಜ್ಯ ನಿರ್ಣಾಯಕ ಪಾತ್ರ ವಹಿಸುತ್ತಾ ಬಂದಿವೆ.
ಈ 13 ರಾಜ್ಯಗಳಲ್ಲಿ ಯಶಸ್ಸು ದೊರೆತವರಿಗೇ ಅಧ್ಯಕ್ಷ ಪಟ್ಟ ಕಟ್ಟಿಟ್ಟಬುತ್ತಿ ಎಂಬ ಭಾವನೆ ಇದೆ. ಇತ್ತೀಚಿನ ಸಮೀಕ್ಷೆಗಳು, ಅಯೋವಾ ಹೊರತುಪಡಿಸಿ ಉಳಿದೆಲ್ಲ ರಾಜ್ಯಗಳಲ್ಲೂ ಬೈಡನ್‌ಗೆ ಹೆಚ್ಚು ರೇಟಿಂಗ್ ಇದೆ ಎಂದು ಹೇಳುತ್ತಿವೆ.
2016ರ ಚುನಾವಣೆಯಲ್ಲಿ ಈ 13 ರಾಜ್ಯಗಳಲ್ಲಿ ಟ್ರಂಪ್ 10ರಲ್ಲಿ ಗೆಲುವು ಸಾಧಿಸಿದ್ದರು. ಅಮೆರಿಕದ ಅಧ್ಯಕ್ಷರು ಜನರ ನೇರ ಮತಗಳಿಂದ ಆಯ್ಕೆಯಾಗುವುದಿಲ್ಲ, ಬದಲಾಗಿ ಎಲೆಕ್ಟೋರಲ್ ಕಾಲೇಜುಗಳ ಮೂಲಕ ಆಯ್ಕೆಯಾಗುತ್ತಾರೆ.
ಯಾರಿಗೆ 279 ಎಲಕ್ಟೋರಲ್ ಕಾಲೇಜ್‌ಗಳ ಮತಗಳು ಸಿಗುತ್ತವೋ ಅವರು ವಿಜಯಿ. ಈ 13 ರಾಜ್ಯಗಳಲ್ಲೇ 199 ಎಲಕ್ಟೋರಲ್ ಕಾಲೇಜುಗಳಿದ್ದು, ಇವು ಸರಕಾರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ಗಮನಾರ್ಹ ಸಂಗತಿಯೆಂದರೆ, ಕೋವಿಡ್ ಸಂದರ್ಭದಲ್ಲೂ ಈ ಎಲ್ಲ ರಾಜ್ಯಗಳಲ್ಲಿ ರಿಪಬ್ಲಿಕನ್ ಪಕ್ಷವು ಮನೆ ಮನೆ ಪ್ರಚಾರ ಮಾಡುತ್ತಿದೆ. ಅತ್ತ ಡೆಮಾಕ್ರಾಟ್‌ಗಳು ವರ್ಚುವಲ್ ಪ್ರಚಾರಕ್ಕೇ ಸೀಮಿತವಾಗಿದ್ದಾವೆ. ಇನ್ನು ಈ ಪ್ರದೇಶಗಳಲ್ಲಿ ಭಾರತೀಯ ಮೂಲದವರ ಸಂಖ್ಯೆಯೂ ಅಧಿಕವಿದ್ದು, ಇವರನ್ನು ಸೆಳೆಯುವುದಕ್ಕಾಗಿ ಡೆಮಾಕ್ರಟಿಕ್ ಪಕ್ಷ ಕಮಲಾ ಹ್ಯಾರಿಸ್‌ರನ್ನು ಪ್ರಚಾರದ ಮುನ್ನೆಲೆಗೆ ನಿಲ್ಲಿಸಿದೆ. ಆದರೆ ಕಾಶ್ಮೀರದ ವಿಚಾರದಲ್ಲಿ ಭಾರತ ವಿರೋಧಿ ನಿಲುವು ತೋರಿಸಿದ್ದ ಕಮಲಾ ಹ್ಯಾರಿಸ್ ನಿಜಕ್ಕೂ ಭಾರತೀಯ ಮತದಾರರನ್ನು ತಮ್ಮ ಪಕ್ಷದತ್ತ ಸೆಳೆಯಬಲ್ಲರೇ ಎನ್ನುವ ಪ್ರಶ್ನೆ ಉದ್ಭವವಾಗುತ್ತದೆ.
ರಾಜತಾಂತ್ರಿಕ ನಡೆಗಳು ಸಹಾಯ ಮಾಡಬಲ್ಲವೇ?
“ಅಧಿಕಾರಕ್ಕೆ ಬಂದರೆ ಅಕ್ರಮ ವಲಸಿಗರನ್ನು ಹೊರಹಾಕುತ್ತೇನೆ, ಮೆಕ್ಸಿಕೋ ಗಡಿಯುದ್ದಕ್ಕೂ ಗೋಡೆ ನಿರ್ಮಿಸುತ್ತೇನೆ, ಅಮೆರಿಕನ್ ಪಡೆಗಳನ್ನು ಅಫ್ಘಾನಿಸ್ಥಾನದಿಂದ ಸಂಪೂರ್ಣ ಹಿಂದಕ್ಕೆ ಕರೆಸಿಕೊಳ್ಳುತ್ತೇನೆ, ಅಮೆರಿಕನ್ ಕೆಲಸಗಳು ಹೊರಗಿನವರಿಗೆ ಹೋಗದಂತೆ ನೋಡಿಕೊಳ್ಳುತ್ತೇನೆ’ ಎಂಬ ಭರವಸೆ ನೀಡಿ ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದ ಬೆಂಬಲ ಪಡೆದು ಅಧಿಕಾರಕ್ಕೇರಿದ್ದರು ಟ್ರಂಪ್.
ಸ್ಥಳೀಯರಿಗೆ ಉದ್ಯೋಗ ಸೃಷ್ಟಿಸುವ ವಿಚಾರವನ್ನು ಹೊರತುಪಡಿಸಿ, ಉಳಿದ ಭರವಸೆಗಳು ಈಡೇರಿಲ್ಲ. ಆದಾಗ್ಯೂ, ಎಚ್-1ಬಿ ವಿಚಾರದಲ್ಲಿ ನಿರ್ಬಂಧಗಳನ್ನು ಜಾರಿ ಮಾಡುವ ಮೂಲಕ ತಮ್ಮ ಬೆಂಬಲಿಗರ ಮನವೊಲಿಸಲಂತೂ ಅವರು ಪ್ರಯತ್ನಿಸಿದ್ದಾರೆ. ಇನ್ನು ಚೀನದ ವಿರುದ್ಧ ಹಲವು ನಿರ್ಣಾಯಕ ತೀರ್ಮಾನಗಳನ್ನು ತೆಗೆದು ಕೊಳ್ಳಲು ಅವರು ಹಿಂಜರಿದಿಲ್ಲ. ದೇಶದ ಆರ್ಥಿಕತೆಯ ವಿಚಾರದಲ್ಲೂ ಟ್ರಂಪ್ ಆಡಳಿತ ಆಶಾದಾಯಕ ಹೆಜ್ಜೆಯಿಟ್ಟಿದೆ. ಆದರೆ ಈ ಸಂಗತಿಗಳೆಲ್ಲ ಟ್ರಂಪ್‌ಗೆ ಪೂರಕವಾಗುತ್ತವೋ ಅಥವಾ ಕೋವಿಡ್ ಸ್ಫೋಟ ಟ್ರಂಪ್‌ಗೆ ಎದುರೇಟು ನೀಡುತ್ತದೋ ಸ್ಪಷ್ಟವಿಲ್ಲ.
ಡೆಮಾಕ್ರಾಟ್‌ಗಳ ವಿಚಾರಕ್ಕೆ ಬರುವುದಾದರೆ, ಈ ವರ್ಷದ ಆರಂಭದವರೆಗೂ ಆ ಪಕ್ಷದ ಪ್ರಮುಖ ಚಹರೆಯಾಗಿದ್ದವರು ಬರ್ನಿ ಸ್ಯಾಂಡರ್ಸ್. ಟ್ರಂಪ್‌ರಂತೆಯೇ ಮಧ್ಯಮ ಹಾಗೂ ಬಡ ವರ್ಗದಲ್ಲಿ ಜನಪ್ರಿಯತೆ ಗಳಿಸಿರುವ ಸ್ಯಾಂಡರ್ಸ್ ಅಭ್ಯರ್ಥಿಯಾದರೆ ಅವರು ಮೇಲುಗೈ ಸಾಧಿಸುವುದು ಖಚಿತ ಎಂದೇ ಪರಿಣತರು ಹೇಳುತ್ತಿದ್ದರು.
ಆದರೆ ಡೆಮಾಕ್ರಟಿಕ್ ಪಕ್ಷ ಅದೇಕೋ ಬರ್ನಿಯವರನ್ನು ಹಿಂದೆ ತಳ್ಳಿ, ಬೈಡನ್‌ರನ್ನು ಅಭ್ಯರ್ಥಿಯನ್ನಾಗಿಸಿದೆ. ಬರ್ನಿಯವರನ್ನು ಮೂಲೆಗುಂಪಾಗಿಸಿರುವ ಸಂಗತಿ ಡೆಮಾಕ್ರಟಿಕ್ ಪಕ್ಷಕ್ಕೆ ಋಣಾತ್ಮಕವಾಗಿ ಪರಿಣಮಿಸಲಿದೆಯೇ? ಈ ಪ್ರಶ್ನೆಗಳಿಗೆಲ್ಲ ಉತ್ತರ ಶೀಘ್ರದಲ್ಲೇ ತಿಳಿಯಲಿದೆ.
– ರಾಘವೇಂದ್ರ ಆಚಾರ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ
CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ
B Z Zameer ahmed khan ಹೇಳಿಕೆ ಹಿಂದೆ ಎಚ್‌ಡಿಕೆಯದ್ದೇ ಕೈವಾಡ ಎಂದ ಕೈ ಶಾಸಕ
Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ
November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.