“ಬೂದು ಪಟ್ಟಿ’ಯಿಂದ ಹೊರಬರಲು ಹರಸಾಹಸ: ಅಮೆರಿಕ ಪುಸಲಾಯಿಸಲು ಪಾಕ್ “ಲಾಬಿ ದಾರಿ’
Team Udayavani, Oct 12, 2020, 8:55 AM IST
ಇಸ್ಲಾಮಾಬಾದ್ : ಉಗ್ರರಿಗೆ ಹಣಕಾಸು ನೆರವು ನೀಡಿದ ಆರೋಪ ಹೊತ್ತು, “ಬೂದು ಪಟ್ಟಿ’ಯಲ್ಲಿರುವ ಪಾಕಿಸ್ಥಾನ ಹೊಸ ಲಾಬಿ ಆರಂಭಿಸಿದೆ. ಆರ್ಥಿಕ ಕ್ರಿಯಾ ಕಾರ್ಯಪಡೆ (ಎಫ್ಎಟಿಎಫ್) ಸಭೆಗೂ ಮುನ್ನ ಅಮೆರಿಕಕ್ಕೆ ಬೆಣ್ಣೆ ಹಚ್ಚಿ ಹೇಗಾದರೂ “ಬೂದು ಪಟ್ಟಿ’ಯಿಂದ ಹೊರಬರಲು ಪಾಕ್ “ಲಾಬಿ ದಾರಿ’ ಹಿಡಿದಿದೆ.
ಹೌದು, ಉಗ್ರರ ಹಣಕಾಸು ಚಟುವಟಿಕೆ ಮೇಲೆ ಕಣ್ಣಿಡುವ ಎಫ್ಎಟಿಎಫ್ ಪ್ಯಾರಿಸ್‌ನಲ್ಲಿ ಅ.21-23ರವರೆಗೆ ಸಭೆ ಸೇರಲಿದೆ. ಭಾರತ, ಪಾಕ್ ಸೇರಿದಂತೆ 39 ಸದಸ್ಯ ರಾಷ್ಟ್ರಗಳು ಇದರಲ್ಲಿ ಪಾಲ್ಗೊಳ್ಳಲಿವೆ. ಇವುಗಳಲ್ಲಿ ಕನಿಷ್ಠ 12 ರಾಷ್ಟ್ರಗಳು ಬೆಂಬಲಿಸಿದರಷ್ಟೇ ಪಾಕ್ “ಬೂದು ಪಟ್ಟಿ’ಯಿಂದ ಹೊರಬರಲಿದೆ. ಆದರೆ, ಆ ಸಾಧ್ಯತೆ ತೀರಾ ಕಡಿಮೆ.
ಪಾಕ್‌ಗೆ ಮೂರೇ ಮತ?
ಪಾತಕಿ ಪಾಕ್ ಉಗ್ರರ ತವರು ಎನ್ನುವುದು ಜಗಜ್ಜಾಹೀರ ಸಂಗತಿ. ಪರಮಸ್ನೇಹಿತ ಚೀನ ಸೌದಿಯನ್ನು ಧಿಕ್ಕರಿಸುತ್ತಿರುವ ಟರ್ಕಿ, ಇಮ್ರಾನ್ ಖಾನ್ ಆಪ್ತರಾಷ್ಟ್ರ ಮಲೇಷ್ಯಾ ಬಿಟ್ಟರೆ ಮಿಕ್ಕವರಾರೂ ತನಗೆ ಮತ ಚಲಾಯಿಸುವುದಿಲ್ಲ ಎನ್ನುವುದು ಪಾಕ್‌ಗೆ ಚೆನ್ನಾಗಿ ತಿಳಿದಿದೆ. ಹೀಗಾಗಿ, ಕನಿಷ್ಠ 12 ಮತ ಪಡೆಯುವುದು ಕನಸಿನ ಮಾತು ಎನ್ನಲಾಗುತ್ತಿದೆ.
ಅಮೆರಿಕಕ್ಕೆ ಬೆಣ್ಣೆಹಚ್ಚುತ್ತಾ?
ಉಗ್ರರಿಗೆ ನೆರವಾದ ಕಾರಣಕ್ಕೆ ಇಸ್ಲಾಮಾಬಾದ್ ಅನ್ನು ಟ್ರಂಪ್ ಆಡಳಿತ ಯಾವತ್ತೋ ದೂರ ಇಟ್ಟಿದೆ. ಈಗ ಟ್ರಂಪ್ ಸರಕಾರವನ್ನು ಸುಳ್ಳು ಅಂಕಿ ಅಂಶಗಳಿಂದ ಪುಸಲಾಯಿಸಲು ಜಗತ್ತಿನ ಮುಂಚೂಣಿ “ಲಾಬಿ ಏಜೆನ್ಸಿ’ ಮೂಲಕ ಪಾಕ್ ಕಾರ್ಯ ಸಾಧಿಸಲು ಹೊರಟಿದೆ.
ಇದನ್ನೂ ಓದಿ:ವಾಟ್ಸಾಪ್ ನಲ್ಲಿರುವ “ಟೆರರ್’ ಗ್ರೂಪ್ ಸದಸ್ಯರಿಗಾಗಿ ಎನ್‌ಎಐ ಶೋಧ
“ಲಿಂಡೆನ್’ಗೆ ಹೊಣೆ!
ಹ್ಯೂಸ್ಟನ್‌ನ ಹೆಸರಾಂತ ಲಾಬಿ ಏಜೆನ್ಸಿ “ಲಿಂಡೆನ್ ಸ್ಟ್ರಾಟೆಜೀಸ್’ಗೆ ತನ್ನ ಸಾಚಾತನದ ಪರ ವಕಾಲತ್ತು ವಹಿಸಲು, ಟ್ರಂಪ್ ಸರಕಾರಕ್ಕೆ ಸುಳ್ಳು ಮಾಹಿತಿಗಳ ಮೂಲಕ ಮನವೊಲಿಸುವ ಹೊಣೆ ವಹಿಸಿದೆ. ಇದಕ್ಕಾಗಿ ಪಾಕ್ ತನ್ನ “ಸಭ್ಯತೆ’ಗಳ ದೊಡ್ಡ ಪಟ್ಟಿಯನ್ನು ಏಜೆನ್ಸಿಯ ಮುಂದಿಟ್ಟಿದೆ. 2019ರಲ್ಲಿ ಎಫ್ಎಟಿಎಫ್ ಹೊರಿಸಿದ್ದ ಆರೋಪದ ಕಳಂಕಗಳನ್ನೆಲ್ಲ ತೊಳೆದುಕೊಳ್ಳಲು ಯತ್ನಿಸಿದೆ.
ಪಾಕ್ ಹೇಳುವುದೇನು?
1 ತಾಲಿಬಾನ್, ಹಖ್ಖಾನಿ, ಅಲ್ ಕಾಯಿದಾ ಮತ್ತು ದಾಯೇಶ್- ಈ ಜಾಗತಿಕ ಉಗ್ರ ಸಂಘಟನೆಗಳ ಮೂಲ ಪಾಕ್ ಅಲ್ಲ, ಅಫ್ಘಾನಿಸ್ಥಾನ.
2 ಇವುಗಳಿಗೆ ಯಾವುದೇ ನಿಧಿ ಕೊರತೆ ಇಲ್ಲ. ಪಾಕ್ ನೆರವು ನೀಡಿಲ್ಲ.
3 ಬಹವಾಲ್ಪುರ ಮೂಲದ ಜೆಇಎಂ ಉಗ್ರ ಸಂಘಟನೆ ಅಫ್ಘಾನ್ ಮೂಲದ ಕಾರ್ಯಾಚರಣೆ ಮಾದರಿ ಹೊಂದಿದೆ. ಇದರ ಮುಖಂಡರು ಪಾಕಿಸ್ಥಾನಕ್ಕೆ ಸೇರಿಲ್ಲ.
4 ಜೆಇಎಂ ಮುಖ್ಯಸ್ಥ ಮಸೂದ್ ಅಜರ್ ಪಂಜಾಬ್ ಪ್ರಾಂತ್ಯದಲ್ಲಿ ಹಾಸಿಗೆ ಹಿಡಿದಿದ್ದಾನೆ.
5 ಮಸೂದ್ ಅಜರ್ ಸೋದರ ಮುಫ್ತಿ ರಾಫ್ ಅಸ್ಘರ್ ಪಾಕಿಸ್ಥಾನದಷ್ಟೇ ಅಫ್ಘಾನಿಸ್ಥಾನದ ಡ್ಯುರಾಂಡ್ ಲೈನ್‌ನಲ್ಲೂ ಟ್ರೈನಿಂಗ್ ಕ್ಯಾಂಪ್ ಹೊಂದಿದ್ದಾನೆ.
6 ಎಫ್ಎಟಿಎಫ್ ಈ ಹಿಂದೆ ಗುರುತಿಸಿದ್ದ 4 ಉಗ್ರರು, ಇಬ್ಬರು ಹಿರಿಯ ಮುಖ್ಯಸ್ಥರನ್ನು ಪಾಕ್ ಈಗಾಗಲೇ ಶಿಕ್ಷೆಗೊಳಪಡಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.