ವೇಣೂರು: ಕರಿಮಣೇಲು ಪರಿಸರದಲ್ಲಿ ಚಿರತೆ ಹಾವಳಿ! ಆತಂಕದಲ್ಲಿ ಗ್ರಾಮಸ್ಥರು
Team Udayavani, Oct 18, 2020, 7:35 PM IST
ವೇಣೂರು: ಮೂರು ದಿನಗಳ ಹಿಂದೆಯಷ್ಟೇ ಬೆಳ್ತಂಗಡಿ ತಾಲೂಕಿನ ಕರಿಮಣೇಲು ಗ್ರಾಮದಲ್ಲಿ ಹೋರಿಯನ್ನು ಬಲಿ ಪಡೆದಿದ್ದ ಚಿರತೆಯು ಶನಿವಾರ ರಾತ್ರಿ ಇದೇ ಪರಿಸರದಲ್ಲಿ ಮತ್ತೆ ಚಿರತೆ ಗಬ್ಬದ ಹಸುವಿನ ಮೇಲೆ ದಾಳಿ ಮಾಡಿ ಗಾಯಗೊಳಿಸಿದೆ.
ಕಳೆದ ಸುಮಾರು ಮೂರು ವರ್ಷಗಳ ಹಿಂದೆ ಇಲ್ಲಿ ಕಾಣಿಸಿಕೊಂಡಿದ್ದ ಚಿರತೆಯು ಕರಿಮಣೇಲು ಬಳಿಯ ತೋಟದ ಪಂಪ್‌ಶೆಡ್‌ನೊಳಗೆ ಬಿದ್ದು ಗಾಯಗೊಂಡು ಮೃತಪಟ್ಟಿತ್ತು. ಕಳೆದ ಮೂರು ದಿನಗಳ ಹಿಂದೆ ಇದೇ ಪರಿಸರದ ನಿವಾಸಿ ಕೃಷ್ಣ ರಾವ್ ಅವರ ಹೋರಿಯನ್ನು ಹಟ್ಟಿಯಿಂದ ಹೊತ್ತೊಯ್ದು ತಿಂದು ಹಾಕಿತ್ತು. ಇದೀಗ ಶನಿವಾರ ರಾತ್ರಿ ಮತ್ತೆ ಖಂಡಿಗ ನಿವಾಸಿ ಜಯರಾಮ್ ಶೆಟ್ಟಿಯರ ತೋಟದಲ್ಲಿ ಗಬ್ಬದ ಹಸುವಿಗೆ ಆಕ್ರಮಣ ಮಾಡಿ ಗಾಯಗೊಳಿಸಿದೆ. ಸ್ಥಳಕ್ಕೆ ಭೇಟಿ ನೀಡಿರುವ ವೇಣೂರು ಅರಣ್ಯ ಇಲಾಖೆಯ ಅಧಿಕಾರಿಗಳು ಬೋನ್ ಅಳವಡಿಸಿ ಶೀಘ್ರ ಚಿರತೆಯನ್ನು ಪತ್ತೆ ಮಾಡುವ ಭರವಸೆಯನ್ನು ಗ್ರಾಮಸ್ಥರಿಗೆ ನೀಡಿದ್ದಾರೆ. ಆದರೆ ಇಲ್ಲಿನ ಜನತೆ ಮಾತ್ರ ಭಯದ ವಾತಾವರಣದಲ್ಲಿ ಬದುಕುತ್ತಿದ್ದಾರೆ.
ಕುತ್ಲೂರಿನಲ್ಲಿ ಹುಲಿ ಪ್ರತ್ಯಕ್ಷ?
ಕುತ್ಲೂರು ಗ್ರಾಮದ ಬಜಿಲಪಾದೆಯಲ್ಲೂ ಶನಿವಾರ ರಾತ್ರಿ ಚಿರತೆ ಕಾಣಿಸಿಕೊಂಡಿರುವುದಾಗಿ ಇಲ್ಲಿನ ಕೆಲ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ವೇಣೂರು-ನಾರಾವಿ ರಸ್ತೆಯಲ್ಲಿ ರಾತ್ರಿ ೯.೧೫ರ ಸುಮಾರಿಗೆ ಬೈಕ್‌ನಲ್ಲಿ ಸಾಗುತ್ತಿದ್ದಾಗ ಚಿರತೆ ಕಾಣಿಸಿಕೊಂಡಿದೆ. ಸ್ವಲ್ಪ ಹೊತ್ತು ರಸ್ತೆಯಲ್ಲೇ ಇದ್ದ ಚಿರತೆ ಬಳಿಕ ಪೊದೆಯೊತ್ತ ಸಾಗಿದೆ ಎಂದು ಪ್ರತ್ಯಕ್ಷದರ್ಶಿ ರವಿ ಪೂಜಾರಿ ತಿಳಿಸಿದ್ದಾರೆ.
ಬಜಿಲಪಾದೆಯ ಸುತ್ತಮುತ್ತ ಎರಡು ವಾರಗಳ ಅಂತರದಲ್ಲಿ ನಾನು ಮೂರು ಬಾರಿ ಚಿರತೆಯನ್ನು ನೋಡಿದ್ದೇನೆ. ವಾರದ ಹಿಂದೆ ಗೂಡಂಗಡಿಯೊಂದರ ಹತ್ತಿರ ಕಾಣಿಸಿಕೊಂಡಿತ್ತು ಎಂದು ಮತ್ತೊಬ್ಬ ಪ್ರತ್ಯಕ್ಷದರ್ಶಿ ಪ್ರಭಾಕರ ಪೂಜಾರಿ ಹೇಳಿದ್ದಾರೆ.
ಗ್ರಾಮದಲ್ಲಿ ಆತಂಕ
ಗ್ರಾಮದಲ್ಲಿ ಕೆಲವು ನಾಯಿಗಳು ನಾಪತ್ತೆಯಾಗುತ್ತಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಅರಣ್ಯ ಇಲಾಖೆಯವರು ತಕ್ಷಣ ಹುಲಿಯನ್ನು ಸೆರೆಹಿಡಿದು ಸ್ಥಳಾಂತರ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.