ಕೋವಿಡ್ ಯೋಧರು ಹುತಾತ್ಮ; ಪರಿಹಾರ ವಿಳಂಬ ಸಲ್ಲ
Team Udayavani, Oct 19, 2020, 6:34 AM IST
ಸಾಂದರ್ಭಿಕ ಚಿತ್ರ
ಯೋಧರ ಸೇವೆಯನ್ನು ಗೌರವಿಸುವ ಮತ್ತು ಅವರ ಬಲಿದಾನವನ್ನು ರಾಷ್ಟ್ರಪ್ರೇಮ ಹಾಗೂ ಭಾವನಾತ್ಮಕತೆಯ ಹಿನ್ನೆಲೆಯಲ್ಲಿ ಸ್ಮರಿಸುವ ಪರಂಪರೆ ನಮ್ಮದು. ಗಡಿ ಕಾಯುವ ಯೋಧರು ಮತ್ತವರ ಕುಟುಂಬದವರ ಬಗ್ಗೆ ದೇಶದ ಪ್ರತಿಯೊಬ್ಬರೂ ವಿಶೇಷ ಗೌರವ ಹೊಂದಿರುತ್ತಾರೆ. ಸದ್ಯ ದೇಶವನ್ನು ಕಾಡುತ್ತಿರುವ ಕೊರೊನಾ ವಿರುದ್ಧ ಸರಕಾರಗಳಿಗೆ ಹೆಗಲು ಕೊಟ್ಟು ತಮ್ಮ ಪ್ರಾಣದ ಹಂಗು ತೊರೆದು ಕಳೆದ ಆರೇಳು ತಿಂಗಳಿಂದ ಅಹರ್ನಿಶಿ ದುಡಿಯುತ್ತಿರುವ ಮುಂದಾಳುಗಳನ್ನು “ಕೊರೊನಾ ಯೋಧರು’ ಎಂದು ಕೇಂದ್ರ ಮತ್ತು ರಾಜ್ಯ ಸರಕಾರಗಳು ಕರೆದಿವೆ. ಅದಕ್ಕೆ ಪೂರಕವಾಗಿ ಸಮಾಜ ಸಹ ಅವರನ್ನು ಯೋಧರಂತೆ ಕಂಡು ಗೌರವಿಸುತ್ತಿದೆ.
ಅನೇಕ ಸಂದರ್ಭಗಳಲ್ಲಿ ಕೊರೊನಾ ಯೋಧರ ಆರೋಗ್ಯ, ಆರೈಕೆ ಗೌಣವಾಗಿರುವ ನಿದರ್ಶನಗಳು ಕಂಡಿದ್ದೇವೆ. ಪ್ರಾಣ ಕಳೆದುಕೊಂಡ ಕೊರೊನಾ ಯೋಧರನ್ನು “ಹುತಾತ್ಮ’ರೆಂದು ಘೋಷಿಸುವ ಒತ್ತಾಯಗಳು ಕೇಳಿ ಬರುತ್ತಿವೆ. ಕೋವಿಡ್-19 ವಿರುದ್ಧದ ಸಮರದಲ್ಲಿ ಮುಂಚೂಣಿಯಲ್ಲಿರುವ ವೈದ್ಯರು, ದಾದಿಯರು, ಆಶಾ ಕಾರ್ಯಕರ್ತೆಯರು ಕೋವಿಡ್ ಕರ್ತವ್ಯದಲ್ಲಿದ್ದಾಗ ಅಥವಾ ಕೊರೊನಾ ಸೋಂಕಿಗೆ ತುತ್ತಾಗಿ ಪ್ರಾಣ ಕಳೆದುಕೊಂಡರೆ ಅಂತಹವರ ಕುಟುಂಬದವರಿಗೆ ಕೇಂದ್ರ ಸರಕಾರದ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ 50 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ. ಆದರೆ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಸಿಬಂದಿ, ಹೋಮ್ ಗಾರ್ಡ್, ನಾಗರಿಕ ರಕ್ಷಣಾ ಸಿಬಂದಿ, ಪೊಲೀಸ್ ಅಧಿಕಾರಿಗಳು, ಆಗ್ನಿ ಶಾಮಕ ಸಿಬಂದಿ, ಕಾರಾಗೃಹದ ಸಿಬಂದಿ, ಪೌರಕಾರ್ಮಿಕರು ಕೋವಿಡ್ ಕರ್ತವ್ಯದಲ್ಲಿದ್ದಾಗ ಅಥವಾ ಸೋಂಕಿನಿಂದ ಪ್ರಾಣ ಕಳೆದುಕೊಂಡರೆ ಅಂತಹವರ ಕುಟುಂಬಕ್ಕೆ 30 ಲಕ್ಷ ರೂ. ಪರಿಹಾರ ನೀಡುವ ಯೋಜನೆಯನ್ನು ರಾಜ್ಯ ಸರಕಾರ ಜಾರಿಗೆ ತಂದಿತು.
ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆ ವ್ಯಾಪ್ತಿಗೆ ಬರುವ ಕೊರೊನಾ ಯೋಧರ ಕೆಲಸ ಒಂದೇ ಆಗಿರುವಾಗ ಪರಿಹಾರದಲ್ಲಿ ವ್ಯತ್ಯಾಸ ಏಕೆ? ರಾಜ್ಯ ಸರಕಾರದ ವ್ಯಾಪ್ತಿಗೆ ಬರುವ ಕೊರೊನಾ ಯೋಧರಿಗೂ ಕೇಂದ್ರದ ಮಾದರಿಯಲ್ಲಿ 50 ಲಕ್ಷ ರೂ. ಪರಿಹಾರ ನೀಡುವ ಬಗ್ಗೆ ಪರಿಶೀಲಿಸಿ ಎಂದು ಹೈಕೋರ್ಟ್ ಹೇಳಿತ್ತು. ಆದರೆ ಹಣಕಾಸಿನ ಕೊರತೆ ಹಿನ್ನೆಲೆಯಲ್ಲಿ ಪರಿಹಾರ ಹೆಚ್ಚಳ ಸಾಧ್ಯವಿಲ್ಲ ಎಂದು ರಾಜ್ಯ ಸರಕಾರ ಹೇಳಿದೆ. ಯೋಧರು ಎಂದು ಕರೆದು ಪರಿಹಾರದಲ್ಲಿ ತಾರತಮ್ಯ ಎಷ್ಟು ಸರಿ ಅನ್ನುವುದನ್ನು ಸರಕಾರ ಸ್ವಯಂಪ್ರಶ್ನೆ ಮಾಡಿಕೊಳ್ಳಲಿ. ಈವರೆಗೆ ಪ್ರಾಣ ಕಳೆದುಕೊಂಡ ಕೊರೊನಾ ಯೋಧರ ಎಷ್ಟು ಕುಟುಂಬಗಳಿಗೆ ಸಕಾಲದಲ್ಲಿ ಪರಿಹಾರ ಸಿಕ್ಕಿದೆ ಎಂಬ ಲೆಕ್ಕವನ್ನೂ ಜನರ ಮುಂದಿಡುವ ಕೆಲಸ ಸರಕಾರ ಮಾಡಲಿ.
ಸರಕಾರವೇ ಘೋಷಿಸಿದ ಕೊರೊನಾ ಯೋಧರ ವಿಚಾರ ಹೀಗಿದ್ದರೆ, ಕೊರೊನಾ ಯೋಧರಂತೆ ಕೆಲಸ ಮಾಡುವ ಬಹುದೊಡ್ಡ ನೌಕರ ವರ್ಗ ವ್ಯವಸ್ಥೆಯ ಉಪೇಕ್ಷೆಗೆ ಒಳಗಾಗಿರುವುದು ಸುಳ್ಳಲ್ಲ. ಸರಕಾರಿ ನೌಕರರು ಕೊರೊನಾ ಸೋಂಕಿಗೆ ಒಳಗಾದರೆ ಚಿಕಿತ್ಸಾ ವೆಚ್ಚ ಮಾತ್ರ ಸರಕಾರ ಭರಿಸುತ್ತಿದೆ. ವೈದ್ಯಕೀಯ ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ಬರುವ ಸ್ವಾಯತ್ತ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಸಿಬಂದಿ ಸುವರ್ಣ ಅರೋಗ್ಯ ಸುರಕ್ಷಾ ಟ್ರಸ್ಟ್ ಯೋಜನೆಯಡಿ ನಗದು ರಹಿತ ಚಿಕಿತ್ಸೆ ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ ಎಂದು ಸರಕಾರ ಇತ್ತಿಚಿಗಷ್ಟೇ ಹೇಳಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳ ಪರಿಹಾರ ಯೋಜನೆ ವ್ಯಾಪ್ತಿಗೆ ಒಳಪಡದ ಸರಕಾರಿ ನೌಕರರು, ಶಾಲಾ ಶಿಕ್ಷಕರು, ಪೌರ ಕಾರ್ಮಿಕರು ಹೊರತುಪಡಿಸಿ ನಗರ ಸ್ಥಳೀಯ ಸಂಸ್ಥೆಗಳ, ಪಂಚಾಯಿತಿಗಳ ಇತರ ಸಿಬಂದಿ ಸೇರಿದಂತೆ ಕೋವಿಡ್-19 ಕರ್ತವ್ಯಕ್ಕೆ ಬಳಿಸಿಕೊಳ್ಳುವ ಪ್ರತಿಯೊಬ್ಬ ಸಿಬಂದಿ, ನೌಕರರನ್ನು “ಕೋವಿಡ್ ಯೋಧರು’ ಎಂದು ಸರಕಾರ ಪರಿಗಣಿಸಿಬೇಕು. ಪರಿಹಾರ ನೀಡುವ ವಿಚಾರದಲ್ಲಿ ವಿಳಂಬ ಧೋರಣೆ ಸಲ್ಲದು. ಮೃತ ಒಬ್ಬ ವ್ಯಕ್ತಿ ಅಲ್ಲ, ಸಂತ್ರಸ್ತ ಒಂದು ಕುಟುಂಬ ಎಂಬುದನ್ನು ಸರಕಾರ ಗಮನಿಸಬೇಕು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.