ಭಾರತದ ಹೆಮ್ಮೆಯ ಕ್ರೀಡೆ ಮಲ್ಲಕಂಬ; ಮರಾಠ ದೊರೆ ಎರಡನೇ ಪೇಶ್ವೆ ಬಾಜಿರಾವ್ ಕಾಲದ ಇತಿಹಾಸ
Team Udayavani, Oct 19, 2020, 8:52 PM IST
ಎಣ್ಣೆ ಸವರಿದ ಕಂಬದ ಮೇಲೆ ವಿವಿಧ ಕಸರತ್ತನ್ನು ಮಾಡುತ್ತ ಮೈ ನವಿರೇಳಿಸುವ ಕ್ರೀಡೆ ಮಲ್ಲಕಂಬ.
ಸರಳವಾಗಿ ಹೇಳುವುದಾದರೆ ನೆಲದ ಮೇಲೆ ಮಾಡುವ ಯೋಗಾಸನವನ್ನು ಕಂಬದ ಮೇಲೆ ಚಾಕಚಕ್ಯತೆಯಿಂದ ಮಾಡುವ ಕಲೆಯೇ ಮಲ್ಲಕಂಬ.
ಮಲ್ಲಕಂಬದ ಇತಿಹಾಸವು ಸುದೀರ್ಘವಾದುದು. ರಾಮಾಯಣ, ಮಹಾಭಾರತ ಕಾಲಘಟ್ಟದಲ್ಲಿ ಹನುಮಂತ, ಜರಾಸಂಧ, ಭೀಮ ದುರ್ಯೋಧನರು ಕುಸ್ತಿಯ ಪಟ್ಟುಗಳನ್ನು ಅಭ್ಯಸಿಸಲು ಮಲ್ಲಕಂಬ ಬಳಸುತ್ತಿದ್ದರೆಂಬ ಪ್ರತೀತಿ ಇದೆ. ಆದರೆ ಮಲ್ಲಕಂಬದ ಬಗೆಗೆ ನಿರ್ದಿಷ್ಟವಾದ ಮಾಹಿತಿ ಸಿಗುವುದು, ಕ್ರಿ.ಶ. 1135ರಲ್ಲಿ ಸೋಮೇಶ್ವರ ರಚಿಸಿರುವ “ಮನಸೋಲ್ಲಾಸ ‘ಎಂಬ ಕೃತಿಯಲ್ಲಿ ಈ ಕ್ರೀಡೆಯ ಬಗ್ಗೆ ಕೆಲವು ಮಾಹಿತಿಗಳು ಕಂಡುಬರುತ್ತವೆ.
ಏಳನೇ ಶತಮಾನದ ಅನಂತರ ಮರಾಠ ದೊರೆ ಎರಡನೇ ಪೇಶ್ವೆ ಬಾಜಿರಾವ್ ಈ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡಿದ್ದರೆಂದು ಇತಿಹಾಸ ಹೇಳುತ್ತದೆ. ಅವರ ಆಸ್ಥಾನದಲ್ಲಿ ಪೈಲ್ವಾನ್ ಮತ್ತು ಶಿಕ್ಷಕರಾಗಿದ್ದ ದಾದಾ ದೇವದಾರ್ ಬಾಳಂಬಟ್ಟ (1780-1840) ದೇಶದೆಲ್ಲಡೆ ಸಂಚರಿಸಿ ಗರಡಿ ಮನೆಗಳನ್ನು ಸ್ಥಾಪಿಸಿ ಮಲ್ಲಕಂಬವನ್ನು ಸ್ವತಂತ್ರ ಕ್ರೀಡೆಯನ್ನಾಗಿಸಲು ಶ್ರಮಿಸಿದರು. ಅದರಲ್ಲಿ ಸಫಲರಾದರು ಕೂಡ. ಇವರನ್ನು ಮಲ್ಲಕಂಬದ ಪಿತಾಮಹ ಎಂದು ಕರೆಯಲಾಗುತ್ತದೆ.
ಬಾಲಗಂಗಾಧರ ತಿಲಕರಿಂದ ಉತ್ತೇಜನ
ಮಲ್ಲಕಂಬಕ್ಕೆ ಬಾಲಗಂಗಾಧರ ತಿಲಕರು ಆಶ್ರಯದಾತರಾದರು. ಅವರೇ ಸ್ಥಾಪಿಸಿದ ಅಮರಾವತಿಯ ಹನುಮಾನ್ ವ್ಯಾಯಾಮ ಶಾಲೆಯಲ್ಲಿ ತರಬೇತಿ ಆರಂಭಗೊಳಿಸಿದರು. ಸ್ವತಂತ್ರ ಕ್ರೀಡೆ ಆಗಲು ಇದಕ್ಕೆ ಇನ್ನೂ ಹೆಚ್ಚಿನ ಅವಕಾಶ ಸಿಕ್ಕಂತಾಯಿತು. ಇದು 1936ರ ಒಲಂಪಿಕ್ಸ್ ನಲ್ಲಿ ಹಿಟ್ಲರ್ ಸಮ್ಮುಖದಲ್ಲಿ ಪ್ರದರ್ಶನಗೊಂಡು ಮೆಚ್ಚುಗೆ ಪಡೆಯಿತು. ಮಿರಜನ ದೊರೆ ಪಟವರ್ಧನ ಮಹಾರಾಜ 9 ಕ್ರೀಡೆಗಳ ಜ್ಞಾನಕೋಶವನ್ನು ಪ್ರಕಟಿಸಿದರು. ಅದರ ಆರನೇ ಸಂಹಿತೆಯಲ್ಲಿ ಮಲ್ಲಕಂಬದ ಬಗೆಗೆ ಸಂಪೂರ್ಣ ಮಾಹಿತಿ ಇದೆ. ಮೀರಜ್ ನಿಂದ ಪೈಲ್ವಾನ ಪಾಠಕ್ ಮಾಸ್ತರರು ಗದಗ ಜಿಲ್ಲೆಯ ಲಕ್ಷ್ಮೇಶ್ವರಕ್ಕೆ ಬಂದು ತರಬೇತಿ ನೀಡಿದರು.
ಮಲ್ಲಕಂಬ ಮಹಾಮಂಡಲ
ಮರಾಠಿಗರು ಮಲ್ಲಕಂಬದ ಪುನಶ್ಚೇತನಕ್ಕೆ ಶ್ರಮಪಟ್ಟರೆ ಕನ್ನಡಿಗರು ರಾಷ್ಟ್ರೀಯ ಮಲ್ಲಕಂಬ ಮಹಾಮಂಡಲ ರಚಿಸಲು ಪ್ರಯತ್ನಿಸಿದರು. 1981ರಲ್ಲಿ ಅಮೃತಸರದಲ್ಲಿ ರಾಷ್ಟ್ರೀಯ ಮಲ್ಲಕಂಬ ಮಹಾಮಂಡಲವನ್ನು ಸ್ಥಾಪಿಸಿದಾಗ ರಾಜೇಶ್ ಪೈಲಟ್ ಅಧ್ಯಕ್ಷರಾಗಿದ್ದರು. ಕನ್ನಡಿಗರಾದ ಲಕ್ಷ್ಮೇಶ್ವರದ ಎನ್.ಎಸ್.ಪಾಟೀಲ್ ಕಾರ್ಯದರ್ಶಿಯಾಗಿದ್ದರು.
ರಷ್ಯಾದಲ್ಲಿ ನಡೆದ ಭಾರತ ಉತ್ಸವದಲ್ಲಿ ಮಲ್ಲಕಂಬದ ಪ್ರದರ್ಶನವನ್ನು ಕಂಡು ಅಲ್ಲಿನ ಮಾಧ್ಯಮಗಳು ಹಾಡಿ ಹೊಗಳಿವೆ. ಇದು ರಾಜ್ಯ ಯುವಜನ ಮತ್ತು ಕ್ರೀಡಾ ಇಲಾಖೆಯ ಸಾಂಸ್ಕೃತಿಕ ಮಾನ್ಯತೆ ಪಡೆದಿದೆ. ಅಂತೆಯೇ ಮಲ್ಲಕಂಬ ಭಾರತಾದ್ಯಂತ ಸುಮಾರು 20ರಿಂದ 25 ರಾಜ್ಯಗಳಲ್ಲಿ ಪ್ರಚಲಿತದಲ್ಲಿವೆ. ಮಧ್ಯಪ್ರದೇಶ ಸರಕಾರವು ಈಗಾಗಲೇ ಇದನ್ನು ರಾಜ್ಯ ಕ್ರೀಡೆಯನ್ನಾಗಿ ಘೋಷಿಸಿದೆ.
ರಿಯಾಲಿಟಿ ಶೋಗಳಲ್ಲೂ ಪ್ರದರ್ಶನ
ಅಮೆರಿಕನ್ ಗಾಟ್ ಟ್ಯಾಲೆಂಟ್, ರಷ್ಯನ್ ಗಾಟ್ ಟ್ಯಾಲೆಂಟ್, ಇಂಡಿಯನ್ ಗಾಟ್ ಟ್ಯಾಲೆಂಟ್‌ನಂತಹ ರಿಯಾಲಿಟಿ ಶೋಗಳಲ್ಲಿ ಪ್ರದರ್ಶನ ಕಂಡಿರುವ ಮಲ್ಲಕಂಬ ಪ್ರಸಿದ್ಧಿ ಪಡೆಯುತ್ತಿದೆ.ಯಾವ ಪಡಸಾಲೆಯ ಟಿವಿಯಿಂದ ಪಾಪ್ ಸಂಗೀತದ ಹಾಡು ಕೇಳುತ್ತಿತ್ತೋ, ಇವತ್ತು ಅದೇ ಟಿವಿಯಿಂದ ಮಲ್ಲಕಂಬ ಪ್ರದರ್ಶನವಾಗುತ್ತಿರುವುದು ಸಂತಸದ ವಿಷಯ. ಭಾರತೀಯ ಶಾಲಾ ಕ್ರೀಡೆಗಳ ಫೆಡರೇಶನ್ (SGFI) ಈ ಕ್ರೀಡೆಗೆ ಶೈಕ್ಷಣಿಕ ವಿಭಾಗದಲ್ಲಿ ಮಾನ್ಯತೆ ಕೊಟ್ಟಿರುವುದು ಮಲ್ಲಕಂಬಕ್ಕೆ ದೊರೆತ ದೊಡ್ಡ ಗೆಲುವು.
ಮೂರು ವಿಭಾಗ
ಮಲ್ಲಕಂಬದ ಆಸನದ ಹೆಸರು ಇರುವುದು ಮರಾಠಿಯಲ್ಲಿ. ಇದರಲ್ಲಿನ ಸಲಾಮ, ಧಸರಂಗ, ನಿಕ್ಕಿ ಕಪ್, ಬಜರಂಗಿ ಹೀಗೆ ಹಲವು ಆಸನಗಳು ನೋಡುಗರನ್ನು ಮಂತ್ರಮುಗ್ಧರನ್ನಾಗಿ ಸುತ್ತವೆ. ಮಲ್ಲಕಂಬ ಅಭಿವೃದ್ಧಿ ಆದಂತೆಲ್ಲ ಮೂರು ವಿಭಾಗಗಳಾಗಿ ವಿಂಗಡಣೆಯಾಗಿದೆ. 1) ಸ್ಥಿರ ಮಲ್ಲಕಂಬ 2)ನೇತಾಡುವ ಮಲ್ಲಕಂಬ 3)ರೋಪ್ ಮಲ್ಲಕಂಬ. ಸ್ಥಿರ ಮಲ್ಲಕಂಬವು ಪುರುಷರಿಗೆ ಸೀಮಿತವಾದರೆ ರೋಪ್ ಮಲ್ಲಕಂಬದಲ್ಲಿ ಮಹಿಳೆಯರಿಗೆ ಮತ್ತು ಪುರುಷರಿಬ್ಬರಿಗೂ ಆದ್ಯತೆ ಇದೆ. ಕಳೆದ ವರ್ಷ ನಡೆದ ಅಂತಾರಾಷ್ಟ್ರೀಯ ಮಲ್ಲಕಂಬ ಸ್ಪರ್ಧೆಯಲ್ಲಿ 15 ದೇಶಗಳ ಸ್ಪರ್ಧಿಗಳು ಭಾಗವಹಿಸಿದ್ದರು. ಈ ಸ್ಪರ್ಧೆಯ ಆತಿಥ್ಯವನ್ನು ಭಾರತ ವಹಿಸಿತ್ತು ಎನ್ನುವುದು ವಿಶೇಷ. ಈ ಸ್ಪರ್ಧೆಯಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ವೀರಭದ್ರ ಮುಧೋಳ ಚಿನ್ನದ ಪದಕವನ್ನು ಪಡೆದಿದ್ದರು.
ದ್ರೋಣಾಚಾರ್ಯ ಪ್ರಶಸ್ತಿ
ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿಗಳಲ್ಲೊಂದಾದ ದ್ರೋಣಾಚಾರ್ಯ ಪ್ರಶಸ್ತಿ ಪ್ರಸಕ್ತ ಸಾಲಿನಲ್ಲಿ ಮಧ್ಯಪ್ರದೇಶದ ಯೋಗೇಶ್ ಮಾಳವೀಯ (ಮಲ್ಲಕಂಬ ತರಬೇತಿದಾರರು) ಅವರಿಗೆ ಲಭಿಸಿದೆ. ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿಯನ್ನೂ ಮಲ್ಲಕಂಬಕ್ಕೆ ನೀಡಲಾಗುತ್ತಿದೆ. ಈ ವರ್ಷದ ಸೆಪ್ಟಂಬರ್ 1ರಂದು ಕೇಂದ್ರ ಪ್ರಕಟಿಸಿದ ಕ್ರೀಡೆಗಳ ಪಟ್ಟಿಯಲ್ಲಿ ಸಿ ಗ್ರೂಪ್ ಹು¨ªೆಗಳಿಗೆ ಮಲ್ಲಕಂಬವನ್ನೂ ಪರಿಗಣಿಸಲಾಗಿದೆ.
ಪ್ರಾಧ್ಯಾನತೆ ಸಿಗಬೇಕು
ಮಲ್ಲಕಂಬ ನಮ್ಮ ದೇಸಿ ಕ್ರೀಡೆ ಎಂಬುದು ಹೆಮ್ಮೆಯ ವಿಷಯ. ಕ್ರಿಕೆಟ್, ಫುಟ್‌ಬಾಲ್, ವಾಲಿಬಾಲ್, ಬಾಸ್ಕೆಟ್ ಬಾಲ್‌ನಂತಹ ಕ್ರೀಡೆಗಳು ಹುಟ್ಟುವ ಸಾವಿರಾರು ವರ್ಷಗಳ ಮೊದಲೇ ಮಲ್ಲಕಂಬ ಹುಟ್ಟಿತ್ತು. ಯಾವ ಜಿಮ್ನಾಸ್ಟಿಕ್ ಇಡೀ ಜಗತ್ತು ಬೆರಗುಗಣ್ಣಿನಿಂದ ನೋಡುವಂತೆ ಮಾಡಿದೆಯೋ, ಅದೇ ಜಿಮ್ನಾಸ್ಟಿಕ್ ಅನ್ನು ಸರಿಗಟ್ಟ ಬಲ್ಲ ಶಕ್ತಿ ಮಲ್ಲಕಂಬಕ್ಕಿದೆ. ಅದೇನೇ ಇದ್ದರೂ ಮಲ್ಲಕಂಬಕ್ಕೆ ಇನ್ನೂ ಹೆಚ್ಚಿನ ಪ್ರಾಧಾನ್ಯತೆ ಸಿಗಬೇಕು ಎನ್ನುವುದು ಮಲ್ಲಕಂಬ ಪಟುಗಳ ಆಶಯ.
ಅಮೋಘ ಸಾಂಬಯ್ಯ ಹಿರೇಮಠ, ಕೆಎಲ್‌ಇ ಕಾಲೇಜು, ಸಂಶಿ, ಧಾರವಾಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.