ಎಸೆಸೆಲ್ಸಿ : ಶಿಕ್ಷಕರ ಸಮಸ್ಯೆಗಳಿಗೆ ಹತ್ತಾರು ಆಯಾಮ; ಬೋಧಿಸುವ ಒತ್ತಡ, ಫ‌ಲಿತಾಂಶದ ಹೊಣೆ


Team Udayavani, Oct 24, 2020, 6:40 AM IST

ಎಸೆಸೆಲ್ಸಿ : ಶಿಕ್ಷಕರ ಸಮಸ್ಯೆಗಳಿಗೆ ಹತ್ತಾರು ಆಯಾಮ; ಬೋಧಿಸುವ ಒತ್ತಡ, ಫ‌ಲಿತಾಂಶದ ಹೊಣೆ

ಸಾಂದರ್ಭಿ ಚಿತ್ರ

ವಿದ್ಯಾರ್ಥಿಗಳಿಗೆ ಪಾಠ ಬೋಧಿಸಿ ಒಳ್ಳೆಯ ಫ‌ಲಿತಾಂಶ ಪಡೆಯು ವುದರಲ್ಲಿ ಶಿಕ್ಷಕರ ಪಾತ್ರ ಬಹಳ ದೊಡ್ಡದು. ಅವುಗಳ ಸಮರ್ಥ ನಿರ್ವಹಣೆಗೆ ಸಾಕಷ್ಟು ಕಾಲಾವಧಿ ಮತ್ತು ಸೌಲಭ್ಯಗಳೂ ಬೇಕು. ಈ ಸರಪಳಿ ಎಲ್ಲಿ ಕಡಿದರೂ ಫ‌ಲಿತಾಂಶದಲ್ಲಿ ದೊಡ್ಡ ಏರುಪೇರು ಆಗಿ ವಿದ್ಯಾರ್ಥಿಗಳ ಭವಿಷ್ಯಕ್ಕೇ ಕುತ್ತಾಗುತ್ತದೆ. ಹಾಗಾಗಿ ಲಕ್ಷಾಂತರ ಮಕ್ಕಳ ಭವಿಷ್ಯದ ಹೊಣೆ ಹೊತ್ತ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಶೀಘ್ರವೇ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಒಂದು ಆದೇಶ ಹೊರಡಿಸಿ, ವಾಪಸ್‌ ಪಡೆಯುವಂಥ ಗೊಂದಲದ ನಡೆ ಸಮಸ್ಯೆಯ ತೀವ್ರತೆಯನ್ನು ಹೆಚ್ಚಿಸಬಲ್ಲದು.

ಮಣಿಪಾಲ: ಈ ವರ್ಷ ಎಸೆಸೆಲ್ಸಿ ವಿದ್ಯಾರ್ಥಿಗಳಿಗಷ್ಟೇ ಅಲ್ಲ; ಶಿಕ್ಷಕರು ಮತ್ತು ಹೆತ್ತರಿಗೂ ಅಗ್ನಿಪರೀಕ್ಷೆ. ಯಾವಾಗಲೂ ಮ್ಯಾರಥಾನ್‌ನಲ್ಲಿ ಸ್ಪರ್ಧಿಸುತ್ತಿದ್ದವರಿಗೆ ಇದ್ದಕ್ಕಿ ದ್ದಂತೆ ನೂರು ಮೀಟರ್‌ ರೇಸ್‌ಗೆ ಸ್ಪರ್ಧಿಸಿ ಗೆಲ್ಲಬೇಕಾದ ಅನಿವಾರ್ಯತೆ.

ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪರ್ಯಾಯ ಆಲೋಚನೆಗಳನ್ನು ಮಾಡದ ಕಾರಣ ಇಂಥ ದೊಂದು ಇಕ್ಕಟ್ಟಿನ ಸ್ಥಿತಿ ಉದ್ಭವಿಸಿದೆ. ಶಾಲೆಗಳು ಆರಂಭವಾಗುವುದೇ ತಡವಾಗುವುದರಿಂದ ಪರೀಕ್ಷೆ ಇತ್ಯಾದಿ ಉಳಿದ ಉಪಕ್ರಮಗಳಿಗೆ ಒಟ್ಟಿಗೇ ಆಲೋಚಿಸಬೇಕಿತ್ತು. ಅದಾವುದೂ ಆಗದಿರುವುದು ವಿದ್ಯಾರ್ಥಿಯ ಶೈಕ್ಷಣಿಕ ಅವಧಿಯ ಬಹುಮುಖ್ಯ ವರ್ಷವನ್ನೇ ಗೊಂದಲದಲ್ಲಿಟ್ಟಂತಾಗಿದೆ. ವಿದ್ಯಾರ್ಥಿಗಳ ಸಂಕಷ್ಟ ಒಂದಾದರೆ, ಶಿಕ್ಷಕರ ಸಂಕಷ್ಟ ಹೇಳತೀರದು.

ಒಂದಲ್ಲ, ಹತ್ತಾರು ಸಮಸ್ಯೆ ಒಂದು ವೇಳೆ ನವೆಂಬರ್‌ನೊಳಗೆ ಪಠ್ಯಕ್ರಮ ಪ್ರಕಟಿಸಿ ಶಾಲೆ ಆರಂಭಿಸಿದರೆ ಅಥವಾ ವೀಡಿಯೋ ತರಗತಿ ಮೂಲಕ
ಪಾಠ ಬೋಧಿಸುವುದಾದರೆ ಮುಂದಿನ ಎಪ್ರಿಲ್‌ನಲ್ಲಿ ಪರೀಕ್ಷೆ ನಡೆಸಲು ಸಾಧ್ಯವೇ ಎಂಬ ಪ್ರಶ್ನೆಯನ್ನು ಹಲವು ಶಿಕ್ಷಕರ ಮುಂದಿಟ್ಟರೆ ಸಿಗುವ ಅಭಿಪ್ರಾಯ ಒಂದೇ-ಅದು ಕಷ್ಟ. ಇದಕ್ಕೆ ಬಹು ಆಯಾಮಗಳ ಕಾರಣಗಳಿವೆ.  ಕೆಲವು ತಿಂಗಳಿನಿಂದ ವೀಡಿಯೋ ತರ ಗತಿಗಳ ಮೂಲಕ ಒಂದಿಷ್ಟು ಪಠ್ಯವನ್ನು ಬೋಧಿಸ ಲಾಗಿದೆ. ಅವುಗಳನ್ನು ವಿದ್ಯಾರ್ಥಿಗಳು ಪೂರ್ಣ ಅರಿತು ಕೊಳ್ಳ ದಿದ್ದರೂ ಸ್ವಲ್ಪವಾದರೂ ಕಲಿತಿರುತ್ತಾರೆ. ಉಳಿದ ಪಠ್ಯಕ್ರಮವನ್ನು ಬೋಧಿಸಬಹುದು. ಆದರೆ ಫ‌ಲಿತಾಂಶ ಸುಧಾರಣೆಗೆ ಇಷ್ಟೇ ಸಾಕಾಗದು.

ಶಾಲೆ ಆರಂಭವಾದ ಮೇಲೆ ಈ ವೀಡಿಯೋ ತರಗತಿಗಳ ಪುನರವಲೋಕನ ಕಡ್ಡಾಯ. ಅಲ್ಲದೆ ಎಲ್ಲರೂ ಟಿವಿ ತರಗತಿಗಳನ್ನು ನೋಡಿಲ್ಲ. ಅದಕ್ಕೆ ನೆಟ್‌ವರ್ಕ್‌, ವಿದ್ಯುತ್‌ ಪೂರೈಕೆ ಇತ್ಯಾದಿ ಸಮಸ್ಯೆಗಳಿರಬಹುದು. ಗಣಿತ ಮತ್ತು ವಿಜ್ಞಾನದಂಥ ಪ್ರಮುಖ ವಿಷಯಗಳಿಗಂತೂ ಬರೀ ಟಿವಿ/ವೀಡಿಯೋ ತರಗತಿ ಸಾಕಾಗದು. ಅವೆಲ್ಲವೂ ಪುನರವಲೋಕನವಲ್ಲ, ಪುನರಾವರ್ತನೆಯಾದಷ್ಟೂ ಫ‌ಲಿತಾಂಶಕ್ಕೆ ಒಳ್ಳೆಯದು. ಅವೆಲ್ಲವನ್ನೂ ಕೈಗೊಂಡು, ಉಳಿದ ಪಠ್ಯಕ್ರಮವನ್ನು ಪೂರೈಸಬೇಕು. ಆ ಬಳಿಕ ಒಟ್ಟು ಪುನರವಲೋಕನ ಮತ್ತು ಪೂರ್ವ ಸಿದ್ಧತಾ ಪರೀಕ್ಷೆ- ಇಷ್ಟೆಲ್ಲವೂ ನಾಲ್ಕೈದು ತಿಂಗಳಲ್ಲಿ ಬಹಳ ಕಷ್ಟ ಎಂಬುದು ಹಲವರ ಅಭಿಪ್ರಾಯ.

ಪಾಳಿ ಮಾಡಿದರೆ ಏನು ಸಮಸ್ಯೆ?
ವಿದ್ಯಾರ್ಥಿಗಳಿಗೆ ಪಾಳಿ ಆಧಾರದಲ್ಲಿ ಪಾಠ ಬೋಧಿಸಿದರೆ ಸಮಸ್ಯೆ ಬಗೆಹರಿದೀತು ಎಂಬ ಆಲೋಚನೆಯೂ ಸಂಪೂರ್ಣ ಪರಿಹಾರವಲ್ಲ. ಕಡಿಮೆ ವಿದ್ಯಾರ್ಥಿಗಳಿದ್ದರೆ ಹೇಗೋ ನಿರ್ವಹಿಸಬಹುದು. ಆದರೆ ಹೆಚ್ಚು ವಿದ್ಯಾರ್ಥಿಗಳಿದ್ದರೆ ಸಾಮಾಜಿಕ ಅಂತರ ಇತ್ಯಾದಿ ನಿಯಮ ಪಾಲಿಸಿಕೊಂಡು ಒಮ್ಮೆಲೆ ಮುಗಿಸಲಾಗದು. ಪಾಳಿ ಮಾಡುವುದಕ್ಕೆ ಅಲ್ಲಿರುವ ಸೀಮಿತ ಸಂಖ್ಯೆಯ ಶಿಕ್ಷಕರನ್ನೇ ಹೊಂದಿಸಬೇಕು. ಆಗ ಶಿಕ್ಷಕರ ಮೇಲೆ ನೂರರಷ್ಟು ಹೆಚ್ಚು ಒತ್ತಡ ಬೀಳುವುದು ಖಚಿತ ಎಂಬ ಅಭಿಪ್ರಾಯವಿದೆ. ಕೆಲವೆಡೆ ಹೆಚ್ಚು ವಿದ್ಯಾರ್ಥಿಗಳಿದ್ದು, ಪಾಳಿ ಪ್ರಕಾರ ಮಾಡಲು ಹೋದರೆ ಇನ್ನಷ್ಟು ಹೆಚ್ಚು ಸಮಯ ಬೇಕಾದೀತು.

ಸರಕಾರಿ ಶಾಲೆಗಳಲ್ಲಿ ಹತ್ತಿರದ ಶಾಲೆಗಳ ಶಿಕ್ಷಕರನ್ನು ನಿಯೋಜಿಸಿ ನಿರ್ವಹಿಸಬಹುದಾದರೂ ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲಿ ಖಂಡಿತ ಸಾಧ್ಯವಿಲ್ಲ. ನಿಗದಿತ ಸಂಖ್ಯೆಯ ಬೋಧಕ ಸಂಪನ್ಮೂಲವನ್ನು ಪಾಳಿ ಲೆಕ್ಕದಲ್ಲಿ ಬಳಸುವುದು ಅಸಾಧ್ಯ ಎನ್ನುವಂತಾಗಿದೆ.

ಕೊಠಡಿಯೂ ಇಲ್ಲ, ಡೆಸ್ಕ್ಗಳೂ ಲಭ್ಯವಿಲ್ಲ
ಶಾಲೆ ಆರಂಭಿಸಿದ ಮೇಲೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಷ್ಟ. ರಾಜ್ಯದ ಹಲವು ಶಾಲೆಗಳಲ್ಲಿ ಒಂದು ತರಗತಿಯಲ್ಲಿ 60-70ರಷ್ಟು ವಿದ್ಯಾರ್ಥಿಗಳನ್ನು ಸೇರಿಸಿ ಪಾಠ ಮಾಡಲು ಬೆಂಚ್‌, ಡೆಸ್ಕ್ಗಳೂ ಇಲ್ಲ. ಇದರೊಂದಿಗೆ ಇಷ್ಟೊಂದು ವಿದ್ಯಾರ್ಥಿಗಳನ್ನು ಒಂದೇ ತರಗತಿಯಲ್ಲಿ ಹಾಕಿದಾಗ ಸಾಮಾಜಿಕ ಅಂತರ ಪಾಲನೆ ಕಷ್ಟ ಸಾಧ್ಯ. ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಕೊರತೆ-ಅವೆಲ್ಲವೂ ಬೇರೆ ಸಮಸ್ಯೆಗಳು.

ಯಂತ್ರಗಳಾಗುವರಾ ಮಕ್ಕಳು ?
ಇದು ಪೋಷಕರನ್ನು ಮತ್ತು ಶಿಕ್ಷಕರನ್ನು ಕಾಡುತ್ತಿರುವ ಮತ್ತೂಂದು ಬಗೆಯ ಆತಂಕ. ಐದಾರು ತಿಂಗಳ ಅವಧಿಯಲ್ಲಿ ಸತತವಾಗಿ ಪಾಠ ಬೋಧಿಸಿದರೂ ಮಕ್ಕಳನ್ನು ಕ್ರಿಯಾಶೀಲವಾಗಿ ಕಲಿಕಾ ಚಟುವಟಿಕೆಗಳತ್ತ ತೊಡಗಿಸಲು ಸಾಧ್ಯವಾಗುವುದಿಲ್ಲ. ಅದು ಅವರನ್ನು ಯಾಂತ್ರಿಕಗೊಳಿಸಿಬಿಡಬಹುದು. ಯಂತ್ರಗಳಂತೆ ಬರೀ ಕೇಳುವುದು, ಬರೆಯುವುದು (ವಿಶ್ರಾಂತಿ ಇಲ್ಲದೇ) ಆದರೂ ಭವಿಷ್ಯದಲ್ಲಿ ಅವರ ಕಲಿಕೆ ಮತ್ತು ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಶೈಕ್ಷಣಿಕ ವರ್ಷವನ್ನೇ ಬದಲಾಯಿಸಿದರೆ?
ಈ ಕುರಿತಾಗಿಯೂ ಶಿಕ್ಷಕರು ಕೆಲವು ಸಲಹೆಗಳನ್ನು ನೀಡುತ್ತಾರಾದರೂ ತೀರ್ಮಾನವನ್ನು ಇಲಾಖೆಯೇ ಕೈಗೊಳ್ಳಬೇಕಿದೆ. ಬೇಸಗೆಯಲ್ಲಿ ಬಿಸಿಲು ಮತ್ತು ನೀರಿನ ಅಭಾವ ಕಾಡುವ ಕಾರಣ ಆಗ ಮಧ್ಯಂತರ ರಜೆ ಕೊಟ್ಟು, ಬಳಿಕ ದಸರಾ-ದೀಪಾವಳಿ ಸಂದರ್ಭ ಕಡಿಮೆ ರಜೆ ಕೊಟ್ಟು ನಿರ್ವಹಿಸಬಹುದು. ಆಗ ಅಷ್ಟೊಂದು ಸಮಸ್ಯೆಯಾಗದು ಎಂಬ ಸಲಹೆಯೂ ಇದೆ.

ನಿಗದಿಪಡಿಸುತ್ತಿರುವ ಪಠ್ಯಕ್ರಮದಲ್ಲಿ ಇದುವರೆಗೆ ವೀಡಿಯೋ ತರಗತಿಗಳಲ್ಲಿ ಪೂರೈಸಿದ ಅಂಶವನ್ನು ಕೈಬಿಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅದು ಹೌದಾದರೆ, ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲಿ ಏರ್ಪಡುವ ಪ್ರಮುಖ ಗೊಂದಲವೆಂದರೆ, ಅದುವರೆಗೆ ಕೇಳಿದ್ದು-ಕಲಿತದ್ದು ಪರೀಕ್ಷೆಗೆ ಬರುವುದಿಲ್ಲವೇ ಎಂಬುದು. ಒಂದುವೇಳೆ ಪರೀಕ್ಷೆಗೆ ಬರುವುದಾದರೆ, ಪುನರವಲೋಕನ ತರಗತಿಯನ್ನು ಕಡಿತಗೊಳಿಸಿದ ಪಠ್ಯಕ್ಕಷ್ಟೇ ಸೀಮಿತಗೊಳಿಸಲಾಗದು. ಒಂದುವೇಳೆ ಸೀಮಿತಗೊಳಿಸಿದರೆ, ವಿದ್ಯಾರ್ಥಿಗಳು ಹಳೆಯ ಪಠ್ಯ (ವೀಡಿಯೋ ತರಗತಿಗಳ)ವನ್ನು ಮರೆತು ಅದಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸುವಲ್ಲಿ ಎಡವಿ, ಅನುತ್ತೀರ್ಣರಾಗುವವರ ಸಂಖ್ಯೆ ಹೆಚ್ಚ ಬಹುದು. ಆದ ಕಾರಣ ಈ ಅಂಶವನ್ನೂ ಶಿಕ್ಷಣ ಇಲಾಖೆ ಮತ್ತು ಡಿಎಸ್‌ಸಿಆರ್‌ಟಿ ಪ್ರಮುಖವಾಗಿ ಗಮನಿಸಬೇಕು.

ಎಸೆಸೆಲ್ಸಿ – ಶಾಲಾ ಶಿಕ್ಷಕರ ಅಭಿಪ್ರಾಯ
ಮಕ್ಕಳಿಗೆ ಶೈಕ್ಷಣಿಕ ವರ್ಷ ನಷ್ಟವಾಗದಿರಲಿ
ಶಾಲೆ ಪುನರಾರಂಭದ ಬಗ್ಗೆ ಇನ್ನೂ ಖಚಿತವಾಗಿಲ್ಲ. ಆದರೂ 4-5 ತಿಂಗಳ ಅವಕಾಶ ದೊರಕಿದರೆ ಚಟುವಟಿಕೆ ಪೂರ್ಣಗೊಳಿಸಲು ಪ್ರಯತ್ನಿಸಬಹುದು. ಕಡಿಮೆ ಅವಧಿ ಸಿಗುವುದರಿಂದ ಸಿಲೆಬಸ್‌ ಕಡಿತ ಮಾಡುವುದು ಅನಿವಾರ್ಯವಾದಿತು. ಪೂರ್ಣ ಕಡಿತ ಮಾಡಿದರೆ ನಷ್ಟವಾಗುತ್ತದೆ. ಅದಕ್ಕೆ ಶೇ. 30ರಷ್ಟು ಕಡಿತ ಮಾಡಬೇಕು. ರಜಾ ದಿನಗಳನ್ನು ರದ್ದುಪಡಿಸಬೇಕು. ಸುಲಭ ವಿಧಾನದ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಬೇಕು. ಮಕ್ಕಳಿಗೆ ಪರೀಕ್ಷಾ ಮಂಡಳಿ 3 ಮಾದರಿ ಪ್ರಶ್ನೆ ಪತ್ರಿಕೆಯನ್ನು ಮೊದಲೇ ಬಿಡುಗಡೆ ಮಾಡಬೇಕು. ಶೈಕ್ಷಣಿಕ ವರ್ಷ ಬದಲಾಯಿಸಿದರೆ ಮುಂದಿನ ವರ್ಷದವರಿಗೆ ತೊಂದರೆಯಾಗುತ್ತದೆ. ಜೂನ್‌-ಜುಲೈಯಲ್ಲಿ ಪರೀಕ್ಷೆ ನಡೆಸಿ, ಮಧ್ಯೆ ಅಂತರ ನೀಡದೆ ಇನ್ನುಳಿದ 7 ಮತ್ತು 8ನೇ ತರಗತಿಯವರಿಗೆ ಪರೀಕ್ಷೆ ನ‌ಡೆಸಬೇಕು. ಮಕ್ಕಳಿಗೆ ಶೈಕ್ಷಣಿಕ ವರ್ಷಗಳು ನಷ್ಟವಾಗದಂತೆ ನೋಡಿಕೊಳ್ಳಬೇಕು.
ಬಾಬುರಾಯ ಕಾಮತ್‌, ಪ್ರೌಢಶಾಲಾ ಶಿಕ್ಷಕರು, ಹಿರ್ಗಾನ- ಕಾರ್ಕಳ

ಮಕ್ಕಳಿಗೆ ಪೂರಕ ವಾತಾವರಣ ಸೃಷ್ಟಿಯಾಗಲಿ
ಹಿಂದಿನ ಪಠ್ಯಕ್ರಮವಿದ್ದರೆ ಅದನ್ನು ಪಾಠ ಮಾಡಿ ಮುಗಿಸುವುದು ಅಸಾಧ್ಯ. ಆದರೆ ಶೇ. 50 ಪಠ್ಯ ಕ್ರಮ ಕಡಿಮೆ ಮಾಡಿದರೆ ಉಳಿದಿರುವ ಅವಧಿಯಲ್ಲಿ ಪೂರೈಸಬಹುದು. ಹಿಂದೆ ಡಿಸೆಂಬರ್‌ಗೆ ಪೂರ್ತಿ ಪಠ್ಯಕ್ರಮ ಮುಗಿದು ಜನವರಿಯಿಂದ ಪುನರವಲೋಕನ ಆರಂಭವಾಗುತ್ತಿತ್ತು. ಶೇ.50 ಇಳಿಸಿದರೆ ಪುನರವಲೋಕನ, ಪೂರ್ವಸಿದ್ಧತಾ ಪರೀಕ್ಷೆ ನಡೆಸಿ ಎಪ್ರಿಲ್‌ 2ನೇ ವಾರದಲ್ಲಿ ಪರೀಕ್ಷೆ ನಡೆಸಬಹುದು. ಪೂರ್ತಿ ಪಠ್ಯಕ್ರಮವಿದ್ದರೆ ಶಿಕ್ಷಕರು ಪಾಠ ಮಾಡಿ ಮುಗಿಸುವುದಕ್ಕಿಂತಲೂ ಅವರಿಗೆ ಜ್ಞಾನ ನೀಡುವ ಕಾರ್ಯ ಮಾಡಬೇಕು. ಒಂದು ಪಾಠವನ್ನು 5 ತರಗತಿಗಳಲ್ಲಿ ಮುಗಿಸಬಹುದು ಅಥವಾ ಒಂದೇ ತರಗತಿಯಲ್ಲೂ ಮುಗಿಸಬಹುದು. ಮಕ್ಕಳನ್ನು ಪರೀಕ್ಷೆಗೆ ತಯಾರು ಮಾಡುವುದಕ್ಕಿಂತಲೂ ಜ್ಞಾನವಂತರನ್ನಾಗಿಸುವುದು ಅತೀ ಮುಖ್ಯ. ಸಾಮಾನ್ಯವಾಗಿ ಎಪ್ರಿಲ್‌-ಮೇ ತಿಂಗಳು ಬಿಸಿಲು ಹೆಚ್ಚಿರುವ ಕಾರಣ ಈ ಅವಧಿಯಲ್ಲಿ ರಜೆ ನೀಡಲಾಗುತ್ತದೆ. ಹೀಗಾಗಿ ಬದಲಾವಣೆ ಮಾಡುವುದು ಸಮಂಜಸವಲ್ಲ. ಒಟ್ಟಿನಲ್ಲಿ ಮಕ್ಕಳಿಗೆ ಪೂರಕವಾಗುವ ವಾತಾವರಣವನ್ನು ಸೃಷ್ಟಿಸುವ ಕೆಲಸವಾಗಬೇಕು.
ರಮಾನಂದ್‌, ಉಪಪ್ರಾಂಶುಪಾಲರು, ಸಿದ್ಧಕಟ್ಟೆ ಪ.ಪೂ. ಕಾಲೇಜು, ಪ್ರೌಢಶಾಲಾ ವಿಭಾಗ

ನಾಲ್ಕೈದು ತಿಂಗಳಲ್ಲಿ ಪಠ್ಯಕ್ರಮ ಪೂರೈಕೆ ಸಾಧ್ಯ
ನಾಲ್ಕೈದು ತಿಂಗಳಲ್ಲಿ ಪಠ್ಯಕ್ರಮ ಪೂರೈಸಲು ಖಂಡಿತ ಸಾಧ್ಯ. ಆದರೆ ಪಠ್ಯಕ್ರಮದಲ್ಲಿ ಒಂದಷ್ಟು ಕಡಿತವನ್ನು ಮಾಡಲೇಬೇಕು. ಈಗಾಗಲೇ ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ “ಸಂವೇದ’ ಕಾರ್ಯಕ್ರಮವು ಅತ್ಯುತ್ತಮವಾಗಿದೆ. ಆದರೆ ನಮ್ಮ ಗ್ರಾಮೀಣ ಮಟ್ಟದ ವಿದ್ಯಾರ್ಥಿಗಳಿಗೆ ತಲುಪುವಲ್ಲಿ ಒಂದಷ್ಟು ತೊಡಕುಗಳು ಇವೆ. ಅದನ್ನು ನಿವಾರಿಸಿದಲ್ಲಿ ಈ ಕಾರ್ಯಕ್ರಮವು ಯಶಸ್ಸಿನ ದೀವಿಗೆಯಾಗುವುದರಲ್ಲಿ ಸಂಶಯವಿಲ್ಲ. ಪುನರವಲೋಕನ ಮತ್ತು ಪೂರ್ವಸಿದ್ಧತಾ ಪರೀಕ್ಷೆ ನಡೆಸಲು ಆಯಾಯ ಜಿಲ್ಲೆಗೆ ಅನುಗುಣವಾದ ರೂಪುರೇಷೆಯನ್ನು ತಯಾರಿ ಮಾಡಿಕೊಳ್ಳಲು ಅವಕಾಶ ಕೊಟ್ಟರೆ ಖಂಡಿತ ಯಶಸ್ಸು ಗಳಿಸಲು ಸಾಧ್ಯ. ನೂರಕ್ಕೆ ನೂರರಷ್ಟು ಈ ಶೈಕ್ಷಣಿಕ ವರ್ಷವನ್ನು ಸರ್ವರ ಅಭಿಪ್ರಾಯವನ್ನು ಪಡೆದು ಬದಲಾಯಿಸುವುದು ಅತ್ಯುತ್ತಮ. ಜನವರಿಯಿಂದ ಡಿಸೆಂಬರ್‌ವರೆಗೆ ಈ ಶೈಕ್ಷಣಿಕ ವರ್ಷವನ್ನು ಮಾಡಿದರೆ ಉತ್ತಮ ಎಂದು ಹಲವಾರು ಪೋಷಕರು ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಆದರೆ ಈ ರೀತಿಯ ಶೈಕ್ಷಣಿಕ ವರ್ಷ ಎಲ್ಲ ರಾಜ್ಯಗಳಲ್ಲಿಯೂ ಆದರೆ ಮಾತ್ರ ಅದರಲ್ಲಿ ಉತ್ತಮ ಫಲವನ್ನು ಕಾಣಬಹುದು. ಇಲ್ಲಿ ಸೆಮಿಸ್ಟರ್‌ ಪದ್ಧತಿಗೆ ಒಂದಷ್ಟು ಸಮಸ್ಯೆಗಳು ಉಂಟಾಗಬಹುದು. ಅದಕ್ಕೂಎಲ್ಲ ವಿಭಾಗಗಳಲ್ಲಿ ಚರ್ಚಿಸಿ ಅಂತಿಮ ರೂಪಕ್ಕೆ ಬರಲು ಸಾಧ್ಯವಿದೆ. ಕಾರ್ಯವೆಸಗುವ ಮನಸ್ಸಿದ್ದರೆ ಸಾಧನೆಯ ದಾರಿ ತೆರೆದುಕೊಳ್ಳುತ್ತದೆ.
-ಧರಣೇಂದ್ರ ಕೆ., ಶಿಕ್ಷಕರು ಕೆ.ಪಿ.ಎಸ್‌., ಪುಂಜಾಲಕಟ್ಟೆ

ಗೊಂದಲದಲ್ಲಿ ಮಕ್ಕಳು, ಶಿಕ್ಷಕರು
ಮಕ್ಕಳು ಈಗಾಗಲೇ ಸಾಕಷ್ಟು ಗೊಂದಲದಲ್ಲಿದ್ದಾರೆ. ಆನ್‌ಲೈನ್‌ ಪಾಠ ಎಲ್ಲರಿಗೂ ತಲುಪುತ್ತಿಲ್ಲ. ವಿದ್ಯಾಗಮ ನಿಲ್ಲಿಸಲಾಗಿದೆ. ಶಿಕ್ಷಕರೂ ಮುಂದೆ ಏನು ಮಾಡಬೇಕು ಎಂಬ ಗೊಂದಲದಲ್ಲಿದ್ದಾರೆ. ತಜ್ಞರ ಸಲಹೆಗಳನ್ನು ಒಳಗೊಂಡು ಪಠ್ಯ ಪುಸ್ತಕವನ್ನು ಕಡಿತ ಮಾಡಿ ಎಷ್ಟು ಶೀಘ್ರವೋ ಅಷ್ಟು ಬೇಗ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಅದು ತಲುಪುವಂತೆ ಮಾಡಬೇಕು. ಅಲ್ಲದೆ ತರಗತಿ ಅಥವಾ ವಿದ್ಯಾಗಮ ಮುಖಾಂತರ ಮಕ್ಕಳನ್ನು ಶಿಕ್ಷಕರ ಎದುರೇ ಕಲಿಯುವಂತೆ ಮಾಡಬೇಕು. ಎಸೆಸೆಲ್ಸಿ ಮಕ್ಕಳಿಗೆ ಇದು ತೀರಾ ಅಗತ್ಯ. ಶೈಕ್ಷಣಿಕ ವರ್ಷವನ್ನು ಬದಲಾಯಿಸುವ ಬಗ್ಗೆ ನಾವು ಹೇಳಲಾಗುವುದಿಲ್ಲ. ಆದರೆ ಪರೀಕ್ಷೆ ಮತ್ತು ಶಾಲಾರಂಭದ ನಡುವಿನ ಸಮಯವನ್ನು ಲೆಕ್ಕ ಹಾಕಿ ಅದಕ್ಕೆ ತಕ್ಕ ರೀತಿಯ ಪಠ್ಯಕ್ರಮ ಅಳವಡಿಸಿಕೊಳ್ಳುವಲ್ಲಿ ಮುತುವರ್ಜಿ ವಹಿಸಬೇಕು. ಇಲ್ಲವಾದಲ್ಲಿ ನಾಲ್ಕೈದು ತಿಂಗಳೊಳಗೆ ಪಠ್ಯಕ್ರಮ ಪೂರೈಸಲು ಸಾಧ್ಯವಾಗದು.
-ರಘು ಟಿ. ವೈ., ಮುಖ್ಯೋಪಾಧ್ಯಾಯರು, ಶ್ರೀ ಸತ್ಯಸಾಯಿ ಲೋಕಸೇವಾ ಪ್ರೌಢಶಾಲೆ ಅಳಿಕೆ

ಬೋರ್ಡ್‌ ಬಳಕೆಯ ಪಾಠ ಅಗತ್ಯ
ಈ ಹಿಂದೆ ಒಮ್ಮೆ ಎಸೆಸೆಲ್ಸಿ ಕಡಿತಗೊಳಿಸಿದ ಪಠ್ಯ ಅಂತಿಮವಾಗಿತ್ತು. ಆದರೆ ಮತ್ತೆ ಅದನ್ನು ಹಿಂಪಡೆಯಲಾಗಿದೆ. ತರಗತಿ ನಡೆಸುವುದಕ್ಕೆ ಪಠ್ಯಪುಸ್ತಕ ತೀರಾ ಆವಶ್ಯಕ. ಶಾಲಾರಂಭದ ದಿನದಿಂದ ಪರೀಕ್ಷೆ ದಿನಕ್ಕನುಗುಣವಾಗಿ ಪಠ್ಯ ಕಡಿತಗೊಳಿಸಿ ಬಿಡುಗಡೆ ಮಾಡಬೇಕು. ಇಲ್ಲವಾದರೆ ಆ ಪಾಠಗಳನ್ನು ಪೂರ್ಣಗೊಳಿಸುವುದಕ್ಕೂ ಶಿಕ್ಷಕರು ಒತ್ತಡ ಅನುಭವಿಸಬೇಕಾಗುತ್ತದೆ. ಬೋರ್ಡ್‌ ಬಳಸದೆ ಮಕ್ಕಳಿಗೆ ಪಾಠ ಮಾಡಿದರೆ ಗಣಿತ, ವಿಜ್ಞಾನದಂತಹ ಪಠ್ಯಗಳು ಅರ್ಥವಾಗುವುದಿಲ್ಲ. ಶಾಲೆಗೆ ಹೋಗದೆ, ಮಕ್ಕಳು-ಶಿಕ್ಷಕರು ಮುಖಾಮುಖೀಯಾಗದೆ ಪಾಠ ಮಾಡುವುದೇ ದೊಡ್ಡ ಸವಾಲಾಗಿದೆ.
-ವಿನಯಾ, ಮುಖ್ಯೋಪಾಧ್ಯಾಯಿನಿ, ಅನುದಾನಿತ ಭಾರತ್‌ ಪ್ರೌಢಶಾಲೆ ಉಳ್ಳಾಲ

ಪರೀಕ್ಷಾ ವ್ಯವಸ್ಥೆಯೂ ಬದಲಾಗಬೇಕು
ವಿದ್ಯಾರ್ಥಿಗಳ ಭವಿಷ್ಯವನ್ನು ಗಮನಿಸಿ ಪಠ್ಯ ಕಡಿತಗೊಳಿಸಬೇಕು. ಪರೀಕ್ಷಾ ವ್ಯವಸ್ಥೆಯಲ್ಲಿಯೂ ಬದಲಾವಣೆಯಾಗಬೇಕು. ಈಗ ನಡೆಯುತ್ತಿರುವ ಆನ್‌ಲೈನ್‌ ಕಲಿಕೆಯಿಂದಾಗಿ ನಿಧಾನಗತಿಯ ಕಲಿಕೆಯವರಿಗೆ ಸಮಸ್ಯೆಗಳು ಉಂಟಾಗುತ್ತಿವೆ. ಓದಿನಲ್ಲಿ ಮುಂದೆ ಇರುವ ವಿದ್ಯಾರ್ಥಿಗಳು ಚೆನ್ನಾಗಿ ಅರ್ಥೈಸಿಕೊಳ್ಳುತ್ತಾರೆ. ಮುಂದಿನ ದಿನಗಳಲ್ಲಿ ಶಾಲೆಗಳಲ್ಲಿ ಅಂತರ ಕಾಯ್ದುಕೊಂಡು ಪಾಠ ಮಾಡಿದರೆ ಉತ್ತಮ. ಶೈಕ್ಷಣಿಕ ವರ್ಷವನ್ನು ಬದಲಾಯಿಸಿದರೆ ಸೆಕೆಗಾಲದಲ್ಲಿ ಮಕ್ಕಳಿಗೆ ನೀರಿನ ಸಮಸ್ಯೆ ಸಹಿತ ಇತರ ಸಮಸ್ಯೆಗಳು ಪ್ರಾರಂಭವಾಗಬಹುದು. ಈ ನಿಟ್ಟಿನಲ್ಲಿ ಆದಷ್ಟು ಬೇಗನೇ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಶಾಲೆಗಳನ್ನು ಆರಂಭಿಸಿದರೆ ಉತ್ತಮ.
-ಡಾ| ಅನಿತ್‌ ಕುಮಾರ್‌, ಶಿಕ್ಷಕರು, ಸರಕಾರಿ ಪ್ರೌಢಶಾಲೆ ಹೆಜಮಾಡಿಕೋಡಿ

ಶೇ.50ರಷ್ಟು ಪಠ್ಯಕ್ರಮ ಕಡಿತದಿಂದ ಅನುಕೂಲ
ಈಗಾಗಲೇ ಶೈಕ್ಷಣಿಕ ವರ್ಷಾರಂಭ ವಿಳಂಬವಾಗಿರುವುದರಿಂದ ಎಸೆಸೆಲ್ಸಿ ಪಠ್ಯಕ್ರಮದಲ್ಲಿ ಸಿಬಿಎಸ್‌ಇನಂತೆ ಶೇ. 50ರಷ್ಟು ಕಡಿತ ಮಾಡಿದರೆ ಅನುಕೂಲವಾಗಲಿದೆ. ಈಗಾಗಲೇ ನಮ್ಮ ಶಾಲೆಯಲ್ಲಿ ವಠಾರ ತರಗತಿಯ ಮೂಲಕ ಶೇ. 30ರಷ್ಟು ಪಠ್ಯ ಬೋಧನೆ ಪೂರ್ಣಗೊಂಡಿದೆ. ಶೈಕ್ಷಣಿಕ ವರ್ಷವನ್ನು ಜನವರಿಯಿಂದ ಡಿಸೆಂಬರ್‌ವರೆಗೆ ಮಾಡಿದರೆ ಎಪ್ರಿಲ್‌- ಮೇನಲ್ಲಿ ಶಾಲೆಗಳಲ್ಲಿ ನೀರಿನ ಸಮಸ್ಯೆಯಿಂದ ಮಕ್ಕಳಿಗೆ ತೊಂದರೆಯಾಗಬಹುದು. ಆಗ ಸ್ವಲ್ಪ ದಿನ ರಜೆ ನೀಡಿ, ಮತ್ತೆ ಮುಂದುವರಿಸಿದರೆ ಯಾವುದೇ ಸಮಸ್ಯೆಯಾಗಲಾರದು. ಆದರೆ ಈ ಪ್ರಕ್ರಿಯೆಯನ್ನು ಆದಷ್ಟು ಬೇಗ ಮಾಡಿದರೆ ಮಕ್ಕಳ ಮೇಲಿನ ಒತ್ತಡ, ಆತಂಕ ಕಡಿಮೆಯಾಗಬಹುದು.
– ಬಾಬು ಶೆಟ್ಟಿ, ಮುಖ್ಯ ಶಿಕ್ಷಕರು, ಹೆಸ್ಕಾತ್ತೂರು ಸರ ಕಾರಿ ಪ್ರೌಢಶಾಲೆ, ಕುಂದಾಪುರ

ಕೆಲವು ಸಲಹೆಗಳು ಇಲ್ಲಿವೆ
01- ಪಠ್ಯಕ್ರಮ ಕಡಿತ ಎಷ್ಟು ಎಂಬುದನ್ನು ನಿರ್ಧರಿ ಸುವುದಕ್ಕಿಂತ ಮೊದಲು ಪರೀಕ್ಷೆಯ ತಾತ್ಕಾಲಿಕ ದಿನಾಂಕ (ಕೊನೇ ಪಕ್ಷ ತಿಂಗಳು) ಯೋಜಿಸಬೇಕು.

02 – ಹಾಗೆ ಯೋಜಿಸುವಾಗ ಬೋಧಿಸಬೇಕಾದ ಪಠ್ಯ ಕ್ರಮಕ್ಕೆ ಅವಧಿ, ಪುನರಾವಲೋಕನ ಮತ್ತು  ಪೂರ್ವಸಿದ್ಧತಾ ಪರೀಕ್ಷೆಗೆ ತಗಲುವ ಕಾಲಾವಧಿಯನ್ನು ಲೆಕ್ಕ ಹಾಕಿಕೊಳ್ಳಬೇಕು.

03 – ಶಾಲೆ ಆರಂಭಿಸಿದ ಬಳಿಕ ಮತ್ತು ಪರೀಕ್ಷೆಯ ದಿನಾಂಕದ ಮಧ್ಯೆ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಆಗಾಗ್ಗೆ ಬೋಧನೆಯ ಪ್ರಗತಿ ವರದಿ ತರಿಸಿಕೊಂಡು, ಅದರ ಆಧಾರದಲ್ಲಿ ಪರೀಕ್ಷಾ ದಿನಾಂಕ ಅಂತಿಮಗೊಳಿಸಬೇಕು.

04 – ಪರೀಕ್ಷೆಯನ್ನು ಮುಂದಿನ ಮಾರ್ಚ್‌-ಎಪ್ರಿಲ್‌ ಎಂದು ಹಠ ಹಿಡಿಯದೆ, ಎಲ್ಲರ ಅಭಿಪ್ರಾಯ ಪಡೆದು ದಿನಾಂಕ ನಿರ್ಧರಿಸಬೇಕು.

05 – ಶಾಲೆ ಆರಂಭಿಸಿ ಯಾವುದೇ ಪದ್ಧತಿ ತರುವುದಿದ್ದರೂ (ಪಾಳಿ ಪದ್ಧತಿ ಇತ್ಯಾದಿ) ಅದಕ್ಕಿಂತ ಮೊದಲು ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ವಿದ್ಯಾರ್ಥಿಗಳ ಸಂಖ್ಯೆ, ಶಾಲೆಯಲ್ಲಿ ಇರುವ ಮೂಲ ಸೌಲಭ್ಯಗಳನ್ನು ಪರಿಶೀಲಿಸಬೇಕು. ಕಡಿಮೆ ಇದ್ದಲ್ಲಿ ಅದಕ್ಕೆ ಪೂರಕ ವ್ಯವಸ್ಥೆ ಮಾಡಿಯೇ ಆರಂಭಿಸ ಬೇಕು. ಯಾವುದೇ ಕಾರಣಕ್ಕೂ ರಾಜ್ಯಕ್ಕಿಡೀ ಒಂದೇ ಮಾನದಂಡ ಮಾಡಿ ಆದೇಶ ಹೊರಡಿಸದೆ, ಆಯಾ ಪ್ರದೇಶದ ಸಮಸ್ಯೆಗೆ ಅನುಗುಣವಾಗಿ ಪರಿಹಾರಗಳನ್ನು ಕಂಡುಕೊಳ್ಳಲು ಅವಕಾಶವಿರಬೇಕು.

06 – ಈ ಕ್ಷಿಪ್ರ ಶೈಕ್ಷಣಿಕ ಅವಧಿಯಲ್ಲಿ ಕೈಗೊಳ್ಳುವ ಪ್ರತೀ ತೀರ್ಮಾನವನ್ನೂ ಆದಷ್ಟು ಬೇಗ ಕೈಗೊಳ್ಳಬೇಕು. ಕೊನೇ ಗಳಿಗೆಯಲ್ಲಿ ತೀರ್ಮಾನ ಅಥವಾ ಸುತ್ತೋಲೆ ಹೊರಡಿಸಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರಿಗೆ ಗೊಂದಲ ಉಂಟು ಮಾಡಬಾರದು.

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ

Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.