ನಾನು ನಿಮ್ಮ ಮನೆ ಮಗಳು,ನಿಮ್ಮ ಸೇವಕಿ: ಕುಸುಮಾ
ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ | ನಿಮ್ಮ ಕಷ್ಟಸುಖದಲ್ಲಿ ನಾನು ಭಾಗಿ ಎಂದ ಕೈ ಅಭ್ಯರ್ಥಿ
Team Udayavani, Oct 25, 2020, 11:54 AM IST
ಬೆಂಗಳೂರು: “ನಾನು ಜನನಾಯಕಿ ಅಲ್ಲ; ನಿಮ್ಮ ಮನೆ ಮಗಳು. ನಿಮ್ಮ ಸೇವಕಿ. ಈ ಬಾರಿ ನಾನು ಚುನಾವಣೆಗೆ ನಿಂತಿದ್ದೇನೆ. ನೀವೆಲ್ಲರೂ ನನ್ನ ಕೈಬಿಡುವುದಿಲ್ಲ ಎಂಬ ಭರವಸೆ ಇದೆ. ನಿಮ್ಮ ಸೇವೆ ಮಾಡಲು ನನಗೆ ಅವಕಾಶ ಕೊಡಿ’ ಎಂದು ರಾಜರಾಜೇಶ್ವರಿ ನಗರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಮನವಿ ಮಾಡಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರ ಜತೆಗೂಡಿ ಪೀಣ್ಯ ಸೇರಿದಂತೆ ಕ್ಷೇತ್ರದ ವಿವಿಧೆಡೆ ಶನಿವಾರ ಬಿರುಸಿನ ಪ್ರಚಾರ ನಡೆಸಿ ಮಾತನಾಡಿದರು, “ಮುನಿರತ್ನ ಅವರನ್ನು ಎರಡು ಬಾರಿ ಗೆಲ್ಲಿಸಿದ್ದೀರಿ. ಆದರೆ ಅವರು ಬಿಜೆಪಿಗೆ ಹೋದರು. ನಿಮ್ಮನ್ನ ಕೇಳಿ ಅವರು ಬಿಜೆಪಿಗೆ ಹೋದರೇ? ಸೋನಿಯಾ ಗಾಂಧಿ ಅವರು ನಿಮ್ಮ ಕುಸುಮಾಗೆ ಟಿಕೆಟ್ ಕೊಟ್ಟಿದ್ದಾರೆ. ನಿಮ್ಮ ಕಷ್ಟ ಸುಖಕ್ಕೆ ನಾವು ಭಾಗಿಯಾಗುತ್ತೇವೆ ಎಂದು ಹೇಳಿದರು.
ನೀವು ಯಾರೂ ಹೆದರಬೇಡಿ. ಅವನ್ಯಾರೋ ನಾಯ್ಡು, “ಕೇಸ್ ಹಾಕಿರಿ ಅಂತಾನಂತೆ. ಯಾವ್ಯಾವ ಅಧಿಕಾರಿ ಏನೇನು ಮಾಡುತ್ತಾರೆ ಗೊತ್ತಿದೆ. ಅವರ್ಯಾರಿಗೂ ನೀವು ಹೆದರಬೇಕಿಲ್ಲ. ನಿಮ್ಮ ರಕ್ಷಣೆಗೆ ನಾವು ನಿಲ್ಲುತ್ತೇವೆ’ ಎಂದರು. ನಿಷ್ಠಾವಂತ ಬಿಜೆಪಿ ಕಾರ್ಯಕರ್ತರು ಪ್ರಚಾರದಲ್ಲಿಲ್ಲ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, “ರಾಜರಾಜೇಶ್ವರ ನಗರದ ಉಪ ಚುನಾವಣೆಯಲ್ಲಿ ಮುನಿರತ್ನ ಪರ ಸ್ವತಃ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರು ಯಾರೂ ಪ್ರಚಾರಕ್ಕೆ ಬರುತ್ತಿಲ್ಲ. ಇಂತಹವರಿಂದಾಗಿ (ಮುನಿರತ್ನ ಅವರಂತಹವರು) ಆ ಪಕ್ಷದವರಿಗೆ ಅಧಿಕಾರ ಇಲ್ಲದಂತಾಗಿದೆ’ ಎಂದು ಟಾಂಗ್ ಕೊಟ್ಟರು. “ಸ್ವತಃ ಬಿಜೆಪಿಯವರೇ ಇದೊಂದು ಬಾರಿ ಅವಕಾಶ ಕೊಡುತ್ತೇವೆ ಎಂದಿದ್ದಾರೆ. ಮುಂದಿನ ಬಾರಿ ಇವರಿಗೆ (ಮುನಿರತ್ನ ಅವರಿಗೆ) ಅವಕಾಶ ಇರುವುದಿಲ್ಲ. ಹೀಗಾಗಿ, ಇವರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಇವರನ್ನು ಖಾಲಿ ಮಾಡಿಸಿ ಕ್ಷೇತ್ರಕ್ಕೆ ಮುಕ್ತಿ ತಂದುಕೊಡಬೇಕು. ಬಿಜೆಪಿ, ಜೆಡಿಎಸ್ ಕಾರ್ಯಕರ್ತರಿಗೆ ಮುಕ್ತಿ ಸಿಗಬೇಕು ಎಂದರೆ ಒಂದೇ ದಾರಿ, ಅದು ಕುಸುಮಾ ಅವರ ಗೆಲುವು. ಇದರಿಂದ ಪೊಲೀಸ್ ಸಿಬ್ಬಂದಿ ಕೂಡ ಒಳಗೊಳಗೇ ಖುಷಿ ಆಗುತ್ತಾರೆ’ ಎಂದರು.
“ಜಾತಿ ಒಡೆಯುತ್ತಿದ್ದಾರೆ’ ಎಂಬ ಮುನಿರತ್ನ ಹೇಳಿಕೆಗೆ ತಿರುಗೇಟು ನೀಡಿದ ಡಿ.ಕೆ. ಶಿವಕುಮಾರ್, “ಪಾಪ ಮುನಿರತ್ನ ಟೆನ್ಷನ್‌ನಲ್ಲಿದ್ದಾರೆ. ಯಾಕೆ ಇಂತಹ ಕೆಲಸ ಮಾಡಿದೆ ಅಂತ ಅನಿಸುತ್ತಿದೆ. ಒಂದು ವರ್ಷ ಮನೆಯಲ್ಲಿ ಅವರನ್ನು ಕೂರಿಸಲಾಯಿತು. ಜತೆಗೆ ತಮ್ಮದೇ ಪಕ್ಷದವರಾರೂ ಪ್ರಚಾರಕ್ಕೆ ಬಾರದಿರುವುದು ಇನ್ನಷ್ಟು ಭ್ರಮನಿರಸನಗೊಳಿಸಿದೆ’ ಎಂದು ತೀಕ್ಷ್ಣವಾಗಿ ಹೇಳಿದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಸೇರಿದಂತೆ ಆ ಪಕ್ಷದ ಯಾವೊಬ್ಬ ಸಚಿವರೂ, ನಿಷ್ಠಾವಂತ ಕಾರ್ಯಕರ್ತರೂ ಮುನಿರತ್ನ ಪರ ಪ್ರಚಾರಕ್ಕೆ ಬರುತ್ತಿಲ್ಲ. ಇವರಿಗೆ ಮಿನಿಸ್ಟರ್ ಮಾಡಿಸಿ, ನಮಗೇನೂ ಇಲ್ಲ ಅನ್ನುವಂತಾಗಿದೆ. ಎಲ್ಲರಿಗೂ ಅಧಿಕಾರ ಸಿಕ್ಕಿಲ್ಲ ಎಂಬ ಬೇಸರ ಇದೆ. -ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.