ಸಿಟಿಗಳ ಮನೆಗಳಲ್ಲಿ ಹಿತ್ತಲು ಕಾಣುವುದು ದೂರದ ಮಾತು
Team Udayavani, Oct 28, 2020, 8:02 PM IST
ಪ್ರತಿಯೊಂದು ಮನೆಗೂ ಒಂದೊಂದು ಹಿತ್ತಲು ಹಾಗೂ ಹಿಂಬಾಗಿಲು ಎಂಬುದು ಇರಲೇಬೇಕು.
ಪ್ರತಿಯೊಂದು ಮನೆಗೂ ಹಿತ್ತಲೇ ಭೂಷಣ. ಈಗಿನ ಸಿಟಿಗಳ ಮನೆಗಳಲ್ಲಿ ಹಿತ್ತಲು ಕಾಣುವುದು ದೂರದ ಮಾತು. ಆದರೆ ಹಳ್ಳಿಯ ಕಡೆ ಹಾಗಲ್ಲ. ಅಲ್ಲಿ ಮನೆ ಜತೆಗೆ ಎಲ್ಲರೂ ನೋಡುವುದು ಹಿತ್ತಲು ಇದೆಯೋ ಇಲ್ಲವೋ ಎನ್ನುವುದನ್ನು. ಮುಂಬಾಗಿಲಂತೆ ಹಿಂಬಾಗಿಲು ಎನ್ನುವುದು ಆ ಮನೆಯ ರೂಪಕವಿದ್ದಂತೆ.
ಹಿತ್ತಲು ಎನ್ನುವುದು ಕೇವಲ ಖಾಲಿ ಜಾಗವಲ್ಲ. ಅದೊಂದು ವಿನೂತನ ಪ್ರಪಂಚ. ಹೆಚ್ಚಿನ ಹೆಂಗಳೆಯರ ಮಾತಿನ ಹರಟೆಯ ಜಾಗವದು. ಹಿತ್ತಲಿನಲ್ಲಿ ಸದ್ದಾಗದೆ ಮಾತಾಡಲೂ ಬಂದು ಕೂತರೆ ಅಷ್ಟೊತ್ತಿನವರೆಗೆ ಅಲ್ಲಿ ಮೌನ ತಾಂಡವಾಡುತ್ತಿದ್ದು ಒಮ್ಮೆಲೇ ಅದು ಕೂಡ ಇವರ ಮಾತಿನ ಗಲಿಬಿಲಿಯನ್ನು ತಾಳಲಾರದೆ ಕಿವಿ ಮುಚ್ಚಿಕೊಳ್ಳುತ್ತದೆ.
ಹಿತ್ತಲಿನ ತುಂಬೆಲ್ಲ ಹಾರಾಡುತ್ತಿರುವ ಅಮ್ಮನ, ಅಕ್ಕನ ತಲೆಗೂದಲು, ಮೂಲೆಯಲ್ಲಿ ಸಣ್ಣ ಗುಡ್ಡದ ಹಾಗೆ ಒತ್ತೂತ್ತಾಗಿಟ್ಟಿರುವ ಕಟ್ಟಿಗೆ ತುಂಡು, “ಹಿತ್ತಲ ಗಿಡವು ಮದ್ದಲ್ಲ’ ಎಂಬ ಗಾದೆಯೊಂದು ಅಸ್ತಿತ್ವದಲ್ಲಿದ್ದರೂ, ಈ ಪಕ್ಕದ ಮೂಲೆಯಲ್ಲಿ ಬೆಳೆದಿರುವ ಸೊಪ್ಪು, ಹೂವು, ತರಕಾರಿ ಗಿಡಗಳು. ಅಣ್ಣ, ತಮ್ಮಂದಿರು ಮನೆಗೆ ಲೇಟಾಗಿ ಬಂದರೆ ಮನೆಯೊಳಗೆ ಸೇರುವಂತಹ ಕಳ್ಳದಾರಿ. ಹೀಗೆ ಹಿತ್ತಲು ಎಂಬು ದು ಕೇವಲ ಖಾಲಿ ಜಾಗವಲ್ಲ. ಅಲ್ಲಿ ಹಲವಾರು ಭಾವಗಳಿವೆ.
ಸೂರ್ಯ ರಾತ್ರಿಯ ತಣ್ಣನೆಯ ನಿದ್ದೆಯನ್ನು ಮುಗಿಸಿ ಮುಂಜಾನೆ ಎಚ್ಚೆತ್ತು ನಿಧಾನಕ್ಕೆ ಮೈಮುರಿದಂತೆ ಮನೆಯ ಅಂಗಳದೊಂದಿಗೆ ಹಿತ್ತಲೂ ಕೂಡ ನಿಧಾನಕ್ಕೆ ಅರಳುತ್ತದೆ. ಅಮ್ಮನು ಅಲ್ಲೇ ಹಿಂಬಾಗಿಲ ಮೂಲೆಯಲ್ಲಿ ಇಟ್ಟಿರುವ ಪಾತ್ರೆಗಳನ್ನು ಉಳಿದ ಮನೆಯ ಮಂದಿಗೆ ಬೈಯುತ್ತಾ ತೊಳೆಯುತ್ತಿದ್ದರೆ, ಎಲ್ಲರಿಗೂ ಅದೊಂದು ಸುಪ್ರಭಾತವಿದ್ದ ಹಾಗೆ. ಅಡುಗೆಯ ಹೆಚ್ಚಾದ ನೀರು ಪಟ್ಟನೆ ಅಡುಗೆ ಮನೆಯಿಂದ ನೇರವಾಗಿ ಸಿಡಿಯುವುದು ಇದೇ ಹಿತ್ತಲಿಗೆ. ಮನೆಯ ಗಂಡಸರಿಗೂ ಯಾರ ಗಮನಕ್ಕೂ ಬಾರದ ಹವ್ಯಾಸಗಳು ಬಿಡುವಿದ್ದಾಗ ಪ್ರಕಟಗೊಳ್ಳುವುದು ಇಲ್ಲಿಯೇ. ಹಾಡೊಂದು ಆಲಾಪವಾಗಿ ಗುನುಗುನಿಸುತ್ತಿರುತ್ತದೆ. ಅಕ್ಕನ ಚಿತ್ತಾರವೇನಿದ್ದರೂ ಮಣ್ಣಿನ ಕಲ್ಲಿನಲ್ಲಿ ಮಾತ್ರ. ಇದನ್ನು ಹಿತ್ತಲು ಮಾತ್ರ ಗಮನಿಸುತ್ತದೆ ಅವರ ಅರಿವಿಗೂ ಬಾರದಂತೆ.
ಹಿತ್ತಲಿನ ಉಪಯೋಗ, ಮಹತ್ವ ಎಲ್ಲರಿಗೂ ಹೆಚ್ಚಿಗೆ ಗಮನಕ್ಕೆ ಬರುವುದು ಸದ್ದಿಲ್ಲದೆ ಮಳೆಯೊಂದು ಟಿಸಿಲೊಡೆದು ಭೂಮಿಗೆ ರಪ್ಪೆಂದು ರಚ್ಚೆ ಹಿಡಿದ ಮಗುವಿನಂತೆ ಅಪ್ಪಳಿಸಿದಾಗ. ಮೂಲೆಯಲ್ಲಿ ಒತ್ತೂತ್ತಾಗೆ ಸೇರಿ ಸಿರುವ ಕಟ್ಟಿಗೆಯ ಗುಂಪಿಗೆ ಬೇಸಗೆಯಲ್ಲಿಯೇ ಅದನ್ನು ಬೆಚ್ಚಗೆ ಮಳೆಗಾಲ, ಚಳಿಗಾಲದವರೆಗೂ ಹೇಗೆ ಕಾದಿರುಸುವುದು ಎಂಬ ಉಪಾಯ ಸಣ್ಣಗೆ ಜಾರಿಯಾಗತೊಡಗಿರುತ್ತದೆ. ಮಳೆಗಾಲಕ್ಕೆ ಎಲ್ಲವನ್ನೂ ಬೆಚ್ಚಗೆ ಕಾಪಿಟ್ಟುಕೊಳ್ಳುವ ಹೆಚ್ಚಿನ ಜವಾಬ್ದಾರಿಯ ಹೊಣೆಯೊಂದು ಹಿತ್ತಲಿನ ಮೇಲೆ ಸಣ್ಣಗೆ ಆಜ್ಞಾಪೂರ್ವಕವಾಗಿ ಜಾರಿಯಾಗುತ್ತೆ.
ಶಿಶಿರ ಋತುವೊಂದು ಮೆಲ್ಲ ಮೆಲ್ಲನೆ ಹೆಜ್ಜೆ ಇಟ್ಟೊಡನೆ, ಹಿತ್ತಲಿನ ಇಕ್ಕಟ್ಟಿನ ಜಾಗದ ನಡುವೆಯೇ ಅಲ್ಲಿಯೇ ಬೆಳೆದಿದ್ದ ಮರಗಳ ರೆಂಬೆ, ಕೊಂಬೆಗಳು, ತರಗಲೆಗಳು ಹೀಗೆ ಚಳಿಗೆ ಬೆಚ್ಚನೆಯ ಬೆಂಕಿ ಕಾಯಿಸಿಕೊಳ್ಳಲು ಉರಿಗೆ ಆಹುತಿಯಾಗುತ್ತವೆ. ಒಮ್ಮೊಮ್ಮೆ ಅದೃಷ್ಟವಿದ್ದಲ್ಲಿ ಹಿತ್ತಲಿನ ನಡುವಲ್ಲಿಯೇ ಬೆಳದಿಂಗಳ ಊಟದ ಸವಿಯನ್ನು ಸವಿಯಬಹುದು. ಆಗ ಊಟವೂ ಕೂಡ ಮತ್ತಷ್ಟು ರುಚಿಯಾಗಿರುತ್ತದೆ. ಊಟದ ಪ್ರೀತಿಯೊಂದಿಗೆ ಎಲ್ಲರ ಒಗ್ಗಟ್ಟಿನ ಬಲವೊಂದು ಅಪರಿಮಿತವಾಗಿ ಅದರೊಂದಿಗೆ ಮಿಳಿತವಾಗಿರುತ್ತದೆ.
ಮನೆ ಆಚೆಗೆ ಹೋಗಲು ಬಿಡದ ಬಸುರಿಯರಿಗೆಲ್ಲ ಹಿತ್ತಲೆ ಒಂದು ಪ್ರಪಂಚವಿದ್ದಂತೆ. ಹಿತ್ತಲಿನ ಬಟ್ಟೆಯನ್ನು ಒಗೆಯುವ ಕಟ್ಟೆಯ ಮೇಲೆ ಕೂಸನ್ನು ಅಜ್ಜಿಯು ತನ್ನ ತೊಡೆಯ ಮೇಲೆ ಮಲಗಿಸಿಕೊಂಡು ಅದರ ಮೈಯನ್ನು ಹದವಾಗಿ ನೀವಿ ಸ್ನಾನ ಮಾಡಿಸುತ್ತಿದ್ದರೆ, ಅದರ ಮೈಯ ಪರಿಮಳವೊಂದು ಗಂಧದಂತೆ ಸುತ್ತಲೂ ಆಘ್ರಾಣಿಸುತ್ತದೆ. ಮತ್ತೂಮ್ಮೆ ಆ ಕ್ಷಣದಲ್ಲಿ ಅಲ್ಲಿದ್ದ ಎಲ್ಲರಿಗೂ ಮಗುವಾಗಬೇಕೆಂಬ ಭಾವ ಒಮ್ಮೆಲೇ ಅಡಿಯಿಡುತ್ತದೆ.
ಹಿತ್ತಲೂ ಹೀಗೆ ಇದ್ದೂ ಇಲ್ಲದಂತೆ ತನ್ನ ಅಸ್ತಿತ್ವವನ್ನೂ ಎಲ್ಲರಿಗೂ ತೋರುತ್ತದೆ. ಒಮ್ಮೊಮ್ಮೆ ಊರಿನ ಜನರಿಗೆ ತಿಳಿಯಂದತಹ ಕೆಲವೊಂದು ಮುಚ್ಚಿಡಬೇಕಾದ ಸತ್ಯಗಳು ಹಿತ್ತಲಿನಲ್ಲಿಯೆ ಸಮಾಧಿಯಾಗುತ್ತವೆ. ಒಂದೊಂದು ವಸ್ತು, ಸ್ಥಳಗಳ ಉಪಯೋಗ ಒಮ್ಮೆಲೆ ಅರಿವಿಗೆ ಬಾರದಿದ್ದರೂ ನಿಧಾನಕ್ಕೆ ಅವುಗಳ ಸಹಚರ್ಯವಿಲ್ಲದೆ ಬದುಕು ಕಷ್ಟವಾಗು ತ್ತದೆ. ಹಿತ್ತಲೆಂಬುದು ಹಾಗೆಯೇ, ಹಿತ್ತಲು ಯಾಕೆ ಬೇಕು ಎಂದರೂ, ಅದು ಅನಿವಾರ್ಯ ಸಂಗತಿ. ಅಗತ್ಯವೂ ಹೌದು. ಅಲ್ಲಿ ಕಾಡುವ ದನಿಯಿದೆ. ಸಂಜೆಯಷ್ಟೇ ಅರಳಿ ಮರೆಯಾದ ಪಾರಿಜಾತದ ಹೂವಿನ ಘಮವಿದೆ. ಅವ್ವನ ಏರು ಬೈಗುಳ, ಅಪ್ಪನ ಬೆವರು, ಅಕ್ಕನ ನಾಚಿಕೆ, ಅಣ್ಣನ ಕಾಳಜಿ, ಹೀಗೆ ಹಿತ್ತಲಿನಲ್ಲಿ ಎಲ್ಲವೂ ಅಡಗಿದೆ.
ರಾಜೇಶ್ವರಿ ಲಕ್ಕಣ್ಣವರ, ಮಾನಸ ಗಂಗೋತ್ರಿ ಮೈಸೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.