ಅಮೆರಿಕ ಚುನಾವಣೆ ವೆಚ್ಚ 1.4 ಲ.ಕೋ. ರೂ?
Team Udayavani, Oct 30, 2020, 6:02 AM IST
ಸಾಂದರ್ಭಿಕ ಚಿತ್ರ
ವಾಷಿಂಗ್ಟನ್/ನ್ಯೂಯಾರ್ಕ್: ಪ್ರಸಕ್ತ ವರ್ಷ ನಡೆಯುವ ಅಮೆರಿಕ ಅಧ್ಯಕ್ಷೀಯ ಚುನಾವಣೆ ಇತಿಹಾಸದಲ್ಲಿಯೇ ಅತ್ಯಂತ ಹೆಚ್ಚು ವೆಚ್ಚದಾಯಕವಾಗುವ ಸಾಧ್ಯತೆ ಇದೆ. ದ ಸೆಂಟರ್ ಫಾರ್ ರೆಸ್ಪಾನ್ಸಿವ್ ಪಾಟಿಕ್ಸ್ ಎಂಬ ಸಂಶೋಧನಾ ಸಂಸ್ಥೆ ನಡೆಸಿರುವ ಅಧ್ಯಯನದ ಪ್ರಕಾರ ಹಾಲಿ ಚುನಾವಣೆಗೆ 1.04 ಲಕ್ಷ ಕೋಟಿ ರೂ. (14 ಬಿಲಿಯನ್ ಅಮೆರಿಕನ್ ಡಾಲರ್) ವೆಚ್ಚವಾಗುವ ಸಾಧ್ಯತೆ ಇದೆ. ರಾಜಕೀಯ ಪಕ್ಷಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ದೇಣಿಗೆ ಹರಿದು ಬರುತ್ತಿರುವುದು ಮತ್ತು ಅಮೆರಿಕ ಸಂಸತ್‌ನ ಮೇಲ್ಮನೆಯೇ ಚುನಾವಣೆ ವೆಚ್ಚ 81, 774 ಕೋಟಿ ರೂ. (11 ಬಿಲಿಯನ್ ಅಮೆರಿಕನ್ ಡಾಲರ್) ಆಗಬಹುದು ಎಂಬ ನಿರೀಕ್ಷೆ ಮಾಡಿರುವಂತೆಯೇ ಹೊಸ ಅಂದಾಜು ಪ್ರಕಟಗೊಂಡಿದೆ.
ಡೆಮಾಕ್ರಾಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್ 7,486 ಕೋಟಿ ರೂ. (1 ಬಿಲಿಯನ್ ಅಮೆರಿಕನ್ ಡಾಲರ್) ಮೊತ್ತವನ್ನು ದಾನಿಗಳಿಂದ ಸಂಗ್ರಹಿಸಿದ್ದಾರೆ. ಜತೆಗೆ ಇಷ್ಟು ದೊಡ್ಡ ಮೊತ್ತವನ್ನು ಸಂಗ್ರಹಿಸಿದ ಮೊದಲ ಅಭ್ಯರ್ಥಿಯಾಗಿದ್ದಾರೆ. ಅ.14ಕ್ಕೆ ಮುಕ್ತಾಯ ವಾದಂತೆ ವಿವಿಧೆಡೆ ನಡೆಸಿದ ಪ್ರಚಾರದಿಂದ 6,976 ಕೋಟಿ ರೂ. (938 ಮಿಲಿಯನ್ ಅಮೆರಿಕನ್ ಡಾಲರ್) ದೇಣಿಗೆ ಸಂಗ್ರಹಿಸಿದ್ದಾರೆ.
2016ರ ಚುನಾವಣೆಯಲ್ಲಿ ವೆಚ್ಚ ಮಾಡಿದ್ದಕ್ಕಿಂತ ಎರಡು ಪಾಲು ಹೆಚ್ಚು ಮೊತ್ತವನ್ನು ಪ್ರಸಕ್ತ ಸಾಲಿನಲ್ಲಿ ವಿನಿಯೋಗ ಮಾಡಲಾಗುತ್ತಿದೆ. 2018 ಮತ್ತು ಹಾಲಿ ವರ್ಷ ಹೆಚ್ಚಿನ ಪ್ರಮಾಣದಲ್ಲಿ ದೇಣಿಗೆಯನ್ನು ಪಕ್ಷಗಳು ಸಂಗ್ರಹಿಸಿವೆ ಎಂದು ಸಂಶೋಧನಾ ಸಂಸ್ಥೆಯ ಶೀಲಾ ಕ್ರಮ್‌ಜೋಲ್ ತಿಳಿಸಿದ್ದಾರೆ.
ರಾಷ್ಟ್ರೀಯ ನೋಂದಣಿ ಬೇಕು
ಮತ್ತೂಂದೆಡೆ ವಾಷಿಂಗ್ಟನ್‌ನಲ್ಲಿ ಆಯೋಜಿಸಲಾಗಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಡೆಮಾಕ್ರಾಟಿಕ್ ಪಕ್ಷದ ಉಪಾಧ್ಯಕ್ಷ ಹುದ್ದೆಯ ಅಭ್ಯರ್ಥಿ ಕಮಲಾ ಹ್ಯಾರಿಸ್ ಮಾತನಾಡಿ ಕಳಂಕಿತ ಪೊಲೀಸ್ ಅಧಿಕಾರಿಗಳ ಬಗ್ಗೆ ರಾಷ್ಟ್ರೀಯ ನೋಂದಣಿ ರಚಿಸಬೇಕಾಗಿರುವ ಅಗತ್ಯವಿದೆ ಎಂದಿದ್ದಾರೆ.
ಆರೋಪ ತಿರಸ್ಕಾರ
ಸಾಮಾಜಿಕ ಜಾಲತಾಣಗಳಲ್ಲಿ ಟ್ರಂಪ್ ವಿರೋಧಿ ಅಭಿಪ್ರಾಯಗಳು ಹೆಚ್ಚು ಪ್ರಚಾರ ವಾಗಲು ಅನುವು ಮಾಡಿಕೊಡಲಾಗುತ್ತದೆ ಎಂಬ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ಬೆಂಬಲಿಗರ ಆರೋಪವನ್ನು ಟ್ವಿಟರ್, ಪೇಸ್‌ಬುಕ್ ಮತ್ತು ಗೂಗಲ್‌ನ ಸಿಇಒಗಳು ತಿರಸ್ಕರಿಸಿದ್ದಾರೆ. ಅಮೆರಿಕ ಸಂಸತ್‌ನ ಮೇಲ್ಮನೆ ಸೆನೆಟ್ ಸಮಿತಿ ಮುಂದೆ ವಿಚಾರಣೆಗಾಗಿ ಹಾಜರಾದ ಸಂದರ್ಭದಲ್ಲಿ ಸಿಇಒಗಳು ಆರೋಪ ತಿರಸ್ಕರಿಸಿದ್ದಾರೆ. ಜತೆಗೆ ಮುಂದಿನ ವಾರ ನಡೆಯಲಿರುವ ಚುನಾವಣೆ ಸಂದರ್ಭದಲ್ಲಿ ಜಾಲತಾಣಗಳನ್ನು ದುರ್ಬಳಕೆ ಮಾಡಲು ಅವಕಾಶ ನೀಡುವುದಿಲ್ಲ ಎಂದು ಸಮಿತಿಗೆ ವಾಗ್ಧಾನ ಮಾಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.