ಕಣ್ಣೀರ ಮೇಲೆ ರಾಜಕಾರಣದ ಅಗತ್ಯವಿಲ್ಲ: ಮುನಿರತ್ನ
Team Udayavani, Oct 30, 2020, 12:32 PM IST
ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಉಪಚುನಾವಣೆ ಪ್ರಚಾರ ಭರಾಟೆ ರಂಗೇರಿದೆ. ಮೂರು ಪಕ್ಷಗಳಿಂದಲೂ ಆರೋಪ- ಪ್ರತ್ಯಾರೋಪಗಳು ನಡೆದಿವೆ. ಕಾಂಗ್ರೆಸ್ -ಬಿಜೆಪಿ ಅಭ್ಯರ್ಥಿಗಳು ಜನರ ಮುಂದೆ ಭಾವುಕರಾದ ಪ್ರಸಂಗಗಳೂ ನಡೆದಿದೆ. ಭಾವುಕತೆಯನ್ನೂ ಪಕ್ಷಗಳ ನಾಯಕರು ಟೀಕಿಸಿದ್ದೂ ಆಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ವಿರುದ್ಧ ಟೀಕೆಗಳಿಗೆ ಪ್ರಸ್ತುತ ಉದಯವಾಣಿ ಸಂದರ್ಶನದಲ್ಲಿ ಉತ್ತರ ನೀಡಿದ್ದಾರೆ.
ಬೆಂಗಳೂರು: ಕಳೆದುಕೊಂಡ ತಾಯಿಯನ್ನು ನೆನೆದು ಕಣ್ಣೀರು ಹಾಕಿದ್ದೇನೆಯೇ ಹೊರತು ಅದು ರಾಜಕೀಯದ ಓಟಿನ ಕಣ್ಣೀರಲ್ಲ. ಕಣ್ಣೀರ ಮೇಲೆ ರಾಜಕಾರಣ ಮಾಡುವ ಅಗತ್ಯ ನನಗಿಲ್ಲ. ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದು, ಅದರ ಆಧಾರದ ಮೇಲೆ ಮತ ಕೇಳುತ್ತಿದ್ದೇನೆ. ಇದು ರಾಜರಾಜೇಶ್ವರಿನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರ ಮಾತು. ಉಪಚುನಾವಣೆ ಬಗ್ಗೆ ಮುನಿರತ್ನ “ಉದಯವಾಣಿ’ಗೆ ಸಂದರ್ಶನ ನೀಡಿದ್ದು ವಿವರ ಹೀಗಿದೆ.
- ನೀವು ಕಣ್ಣೀರು ಹಾಕಿದ್ದಕ್ಕೆ ಸಿನಿಮಾದವರಾದ ಮುನಿರತ್ನ ಅವರಿಗೆ ಕಟ್ ಆ್ಯಂಡ್ ಪೇಸ್ಟ್ ಎಲ್ಲಾ ಗೊತ್ತಿದೆ ಎಂದು ಕಾಂಗ್ರೆಸ್ ನಾಯಕರು ವ್ಯಂಗ್ಯವಾಡಿರುವುದಕ್ಕೆ ಏನು ಹೇಳುವಿರಿ?
ಅಂದು ದೆಹಲಿಯಲ್ಲಿ ಅವರು ಕಣ್ಣೀರು ಹಾಕಿದಾಗ ನಾನು ನಾಟಕ ಎಂದು ಹೇಳಿದ್ದೇನೆಯೇ. ಆ ಸಂದರ್ಭದಲ್ಲಿ ನಾನು ಕರುಣೆ ತೋರಿದ್ದೇನೆ. ಅವರು ಕಣ್ಣೀರು ಹಾಕಿದಾಗ ನನಗೆ ಕರುಳು ಹಿಂಡಿದಂತಾಗಿ, ಅಯ್ಯೋ ಪಾಪ ಎನಿಸಿತು. ಆದರೆ ನನ್ನ ಕಣ್ಣೀರು ಅವರಿಗೆ ಸಿನಿಮಾ ತರ ಕಾಣುತ್ತಿದೆ. ದೆಹಲಿಯಲ್ಲಿ ಅವರು ಕಣ್ಣೀರು ಹಾಕಲಿಲ್ಲವೇ? ಅವರ ತಾಯಿ ಕಣ್ಣೀರಿಡಲಿಲ್ಲವೇ? ಆ ಕಣ್ಣೀರ ಬಗ್ಗೆ ನಾನು ಮಾತನಾಡಿದ್ದೇನೆಯೇ? ಕಣ್ಣೀರು ಕಣ್ಣೀರಷ್ಟೆ. ಇದು ಕುಟುಂಬದ ಭಾವನೆಯ ಕಣ್ಣೀರೇ ಹೊರತು ರಾಜಕೀಯದ ಓಟಿನ ಕಣ್ಣೀರಲ್ಲ. ಕಳೆದುಕೊಂಡ ತಾಯಿಯ ಜ್ಞಾಪಕದ ಕಣ್ಣೀರು ಅಷ್ಟೇ. ನಾನು ಕಣ್ಣೀರ ಮೇಲೆ ರಾಜಕಾರಣಮಾಡುವುದಿಲ್ಲ. ನನ್ನ ಕೆಲಸದ ಮೇಲೆ ಮತ ಕೇಳುತ್ತಿದ್ದೇನೆ. ಮಾಸಾಂತ್ಯಕ್ಕೆ ಅವರದ್ದೇ ಹೊಸ ಸೆಂಟಿಮೆಂಟ್ ಸಿನಿಮಾ ಬಿಡುಗಡೆಯಾಗಲಿದೆ ಕಾದು ನೋಡಿ.
- ಕ್ಷೇತ್ರದಲ್ಲಿ ನಿಮಗೆ ಪ್ರತಿಸ್ಪರ್ಧಿ ಯಾರು?
ಉಪಚುನಾವಣೆಯಲ್ಲಿ ನನಗೆ ಜೆಡಿಎಸ್ ಪಕ್ಷವೇ ಪ್ರತಿಸ್ಪರ್ಧಿ. ಕ್ಷೇತ್ರದಲ್ಲಿ ಜೆಡಿಎಸ್, ಮಾಜಿ ಪ್ರಧಾನಿ ಎಚ್ .ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಎಚ್ .ಡಿ.ಕುಮಾರಸ್ವಾಮಿಯವರ ವರ್ಚಸ್ಸು ಜಾಸ್ತಿ ಇದೆ. 2013ರ ಚುನಾವಣೆಯಲ್ಲಿ ಜೆಡಿಎಸ್ ಎರಡನೇ ಸ್ಥಾನದಲ್ಲಿತ್ತು. 2018ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ 60,000 ಮತ ಪಡೆದಿದ್ದರು. ಇನ್ನು 20,000 ಮತ ಗಳಿಸಿದ್ದರೆ ಅವರೇ ಗೆಲ್ಲುತ್ತಿದ್ದರು. ಹಾಗಾಗಿ ನನಗೆ ಜೆಡಿಎಸ್ ಮಾತ್ರ ಪ್ರತಿಸ್ಪರ್ಧಿ. ಕಾಂಗ್ರೆಸ್‌ನಲ್ಲಿ ಯಾರೂ ಇಲ್ಲ.
- ಹಣ ಪಡೆದು ಬಿಜೆಪಿ ಸೇರಿದ್ದಾರೆ ಎಂದು ನಾನಾ ಆರೋಪ ಮಾಡುತ್ತಿದ್ದಾರಲ್ಲಾ?
ನಮ್ಮ ಪಕ್ಷದ ನಾಯಕರು 100ಕ್ಕೆ 100 ನನ್ನ ಪರವಾಗಿದ್ದಾರೆ. ದೊಡ್ಡ ಸಂಖ್ಯೆಯಲ್ಲಿ ಪಕ್ಷದ ಘಟಾನುಘಟಿ ನಾಯಕರು ನನ್ನ ಪರ ಪ್ರಚಾರ ನಡೆಸಿ ಮತ ಯಾಚಿಸುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ಒಬ್ಬರೂ ಬರುವುದಿಲ್ಲ. “ಬಿ- ಫಾರಂ’ ಕೊಟ್ಟರೆ ಮುಗಿಯಿತು. ಅಷ್ಟೇ ಅವರ ಕತೆ.ನಾಯಕರೆಲ್ಲಾ ನಿಮ್ಮ ಪರವಾಗಿದ್ದಾರೆ ಎನ್ನುತ್ತೀರಿ, ತುಳಸಿ ಮುನಿರಾಜುಗೌಡ ಅವರು ಪ್ರಚಾರದಲ್ಲೆಲ್ಲೂ ಕಂಡಿಲ್ಲವಲ್ಲ? ತುಳಸಿ ಮುನಿರಾಜುಗೌಡ ಅವರು ಪಕ್ಷದ ಹಿರಿಯ ಮುಖಂಡರು. ಅವರು ತುಸು ಸಂಘಟನೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
- ಉಪಚುನಾವಣೆಯಲ್ಲಿ ಅಭ್ಯರ್ಥಿಗಿಂತ ಪಕ್ಷಕ್ಕೆ ಮತ ಹಾಕಿ ಎನ್ನಲಾಗುತ್ತಿದೆಯಲ್ಲಾ?
ವ್ಯಕ್ತಿಗಿಂತ ಪಕ್ಷಕ್ಕೆ ಮತ ಹಾಕಿ ಎನ್ನುವುದು ಸರಿಯಾಗಿಯೇ ಇದೆ. ಅದರಲ್ಲಿ ತಪ್ಪೇನೂ ಇಲ್ಲ. ಆದರೆ ಎಲ್ಲ ನಾಯಕರು ಪ್ರಚಾರದ ವೇಳೆ ಮುನಿರತ್ನ ಅವರಿಗೆ ಮತ ಹಾಕಿ. ಮುನಿರನ್ನ ಅವರನ್ನು ಗೆಲ್ಲಿಸಿ. ಮುನಿರತ್ನನನ್ನು ಬೆಂಬಲಿಸಿ ಎಂದು ಮನವಿ ಮಾಡುತ್ತಿದ್ದಾರೆ. ಉಪಮುಖ್ಯಮಂತ್ರಿಗಳು, ಹಲವು ಸಚಿವರು, ಪ್ರಮುಖರು ನಿರಂತರವಾಗಿ ಪ್ರಚಾರ ನಡೆಸುತ್ತಿದ್ದಾರೆ. ಮುಖ್ಯಮಂತ್ರಿಗಳು ಒಂದು ದಿನವಿಡೀ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ.
- ಯಾವ ವಿಚಾರಗಳ ಮೇಲೆ ಮತ ಯಾಚಿಸುತ್ತಿದ್ದೀರಿ?
2013ರಿಂದ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು, ಸದ್ಯ ಪ್ರಗತಿಯಲ್ಲಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮತದಾರಿಗೆ ತಿಳಿದಿದೆ. ಮುಂದೆ ಕೈಗೊಳ್ಳಲಿರುವ ಅಭಿವೃದ್ಧಿ ವಿಚಾರಗಳನ್ನು ತಿಳಿಸಿ ಮತ ಯಾಚಿಸುತ್ತಿದ್ದೇನೆ. ಕ್ಷೇತ್ರದ ಅಭಿವೃದ್ಧಿಗಾಗಿ ಮತ ಕೇಳುತ್ತಿದ್ದೇನೆ. ಕಾಂಗ್ರೆಸ್‌ನವರಿಗೆ ಉಪ ಚುನಾವಣೆಗೆ ವಿಚಾರವಿಲ್ಲದ ಕಾರಣ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಆದರೆ ಮತದಾರರಿಗೆ ವಾಸ್ತವದ ಅರಿವಿದೆ.
–ಎಂ.ಕೀರ್ತಿಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chennai: ನಟಿ ಕಸ್ತೂರಿ ಶಂಕರ್‌ಗೆ ನ.29ರ ವರೆಗೆ ನ್ಯಾಯಾಂಗ ಬಂಧನ
Malpe: ನಿಲ್ಲಿಸಲಾಗಿದ್ದ ಬುಲೆಟ್ ಕಳವು
Maharashtra: ಬಿಜೆಪಿ ನಾಯಕಿ ನವನೀತ್ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್ ದಾಖಲು
Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್ ನೀಡಿದ ಬೋಯಿಂಗ್
Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.