ಹೊರನಾಡ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ
Team Udayavani, Nov 8, 2020, 8:37 PM IST
ಮುಂಬಯಿ, ನ. 7: ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನ. 7ರಂದು ನಡೆದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಂಬಯಿ ಸಮಾಜ ಸೇವಕ, ಕೊಡುಗೈ ದಾನಿ, ಭವಾನಿ ಶಿಪ್ಪಿಂಗ್ ಸರ್ವಿಸಸ್ ಪ್ರೈ. ಇಂಡಿಯಾ ಲಿ.ನ ಕಾರ್ಯಾಧ್ಯಕ್ಷ, ಭವಾನಿ ಫೌಂಡೇಶನ್ ಮುಂಬಯಿ ಸಂಸ್ಥಾಪಕ ಕಾರ್ಯಾಧ್ಯಕ್ಷ ಕೆ. ಡಿ. ಶೆಟ್ಟಿ ಮತ್ತು ಉಪನಗರ ಮುಲುಂಡ್‌ನ ಶ್ರೀ ಸತ್ಯಧ್ಯಾನ ವಿದ್ಯಾಪೀಠ ಇದರ ಕುಲಪತಿ ವಿದ್ವಾನ್ ವಿದ್ಯಾಸಿಂಹಾಚಾರ್ಯ ಮಾಹುಲಿ ಅವರಿಗೆ ಕರ್ನಾಟಕ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರದಾನ ಮಾಡಿ ಶುಭ ಹಾರೈಸಿದರು. ಉಪ ಮುಖ್ಯಮಂತ್ರಿಗಳಾದ ಗೋವಿಂದ ಎಂ. ಕಾರಜೋಳ, ಡಾ| ಸಿ. ಎನ್. ಅಶ್ವತ್ಥ್ನಾರಾಯಣ್, ಲಕ್ಷ್ಮಣ್ ಸಂಗಪ್ಪ ಸವದಿ, ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ. ಟಿ. ರವಿ, ಇಲಾಖೆಯ ಕಾರ್ಯದರ್ಶಿ ವಿ. ರಶ್ಮಿ ಮಹೇಶ್, ಇಲಾಖೆಯ ನಿರ್ದೇಶಕ ಎಸ್. ರಂಗಪ್ಪ ಮೊದಲಾದವರು ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿ ಶುಭ ಹಾರೈಸಿದರು.
ಕೆ. ಡಿ. ಶೆಟ್ಟಿ ಸಾಧನೆ :
ಕೆ. ಡಿ. ಶೆಟ್ಟಿ ಅವರಿಗೆ ಮಹಾರಾಷ್ಟ್ರ ಮತ್ತು ಊರಿನಲ್ಲಿ ಸಲ್ಲಿಸುತ್ತಿರುವ ಸಮಾಜ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಹಲವು ಪ್ರತಿಷ್ಠಿತ ಕಂಪೆನಿಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿ ತಾಯಿ ಭವಾನಿ ದೇರಣ್ಣ ಶೆಟ್ಟಿ ಅವರ ಹೆಸರಿನಲ್ಲಿ ಭವಾನಿ ಶಿಪ್ಪಿಂಗ್ ಸರ್ವಿಸಸ್ ಇಂಡಿಯಾ ಪ್ರೈ. ಲಿ. ಸಂಸ್ಥೆಯನ್ನು ಪ್ರಾರಂಭಿಸಿದರು. ಭವಾನಿ ಫೌಂಡೇಶನ್ ಟ್ರಸ್ಟ್ ಮುಖಾಂತರ ಮಹಾರಾಷ್ಟ್ರ ಸಹಿತ ಊರಿನಲ್ಲೂ ಸಮಾಜಪರ ಕಾರ್ಯಕ್ರಮಗಳನ್ನು ಆಯೋಜಿಸಿ ಬಡವರ ಕಣ್ಣೀರೊರೆಸುವ ಕಾಯಕದಲ್ಲಿ ನಿರತರಾಗಿದ್ದಾರೆ. ಮುಂಬಯಿ ಹಾಗೂ ಊರಿನ ಹಲವಾರು ದೈವ – ದೇವಸ್ಥಾನಗಳ ಜೀರ್ಣೋದ್ಧಾರ, ವಿವಿಧ ಶಿಕ್ಷಣ ಸಂಸ್ಥೆಗಳ ಜೀರ್ಣೋದ್ಧಾರ ಕಾರ್ಯಗಳಿಗೆ ಕೋಟ್ಯಂತರ ರೂ. ದೇಣಿಗೆ ನೀಡಿದ ಶ್ರೇಯಸ್ಸು ಇವರದ್ದಾಗಿದೆ. ಹೊರನಾಡು ಮತ್ತು ಒಳನಾಡು ಸಂಘಟನೆಗಳ ಪೋಷಕರೆಂದೇ ಪ್ರಸಿದ್ಧರು. ಮಹಾರಾಷ್ಟ್ರ ಸರಕಾರದಿಂದ ನಿರ್ಲಕ್ಷ್ಯಕ್ಕೊಳಗಾಗಿ ಶಿಕ್ಷಣದಿಂದ ವಂಚಿತವಾಗಿದ್ದ ಪನ್ವೇಲ್‌ನ ಪಿರ್ಕಟ್‌ವಾಡಿಯ ಆದಿವಾಸಿ ಜನಾಂಗದ ಮೂರು ಗ್ರಾಮಗಳನ್ನು ದತ್ತು ಸ್ವೀಕರಿಸಿ ಅಲ್ಲಿನ ಶಾಲೆ ಮತ್ತು ಸಮಾಜ ಮಂದಿರವನ್ನು ಜೀರ್ಣೋದ್ಧಾರಗೊಳಿಸಿದ ಹೆಗ್ಗಳಿಕೆಯೂ ಇವರಿಗಿದೆ. ಶಿಪ್ಪಿಂಗ್ ಉದ್ಯಮದ ವಿಶೇಷ ಸಾಧನೆಗೆ ಮತ್ತು ಅವರ ಸಮಾಜಪರ ಕಾರ್ಯಗಳಿಗೆ ಹಲವಾರು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳು ಲಭಿಸಿವೆ.
ವಿದ್ವಾನ್ ವಿದ್ಯಾಸಿಂಹಾಚಾರ್ಯ ಮಾಹುಲಿ :
ಮಾಹುಲಿ ಮನೆತನದವರಾದ ವೇ| ಮೂ| ಪಂಡಿತ್ ವಿದ್ಯಾಸಿಂಹಾಚಾರ್ಯ ಮಾಹುಲಿ ಅವರು ಮಾಟುಂಗಾದ ವಾಣಿವಿಹಾರ ಹಾಗೂ ಮುಲುಂಡ್‌ನ ಶ್ರೀ ಸತ್ಯಧ್ಯಾನ ವಿದ್ಯಾಪೀಠದ ಕುಲಪತಿಗಳಾಗಿ ನೂರಾರು ವಿದ್ಯಾರ್ಥಿಗಳಿಗೆ ಗುರುಕುಲ ಪದ್ಧತಿಯಲ್ಲಿ ಶಿಕ್ಷಣ ನೀಡುತ್ತಿದ್ದಾರೆ. ಹಲವಾರು ಸಂಘ-ಸಂಸ್ಥೆಗಳ ಮುಖಾಂತರ ಸಮಾಜ ಸೇವೆಯಲ್ಲಿ ತೊಡಗಿರುವ ಅವರು ವಿಶೇಷವಾಗಿ ಬಡ ಶಾಲಾ ಮಕ್ಕಳಿಗೆ ಆರ್ಥಿಕ ನೆರವು ನೀಡುತ್ತಿದ್ದಾರೆ. ಮಹಾನಗರದಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಶಿಕ್ಷಣದೊಂದಿಗೆ ಅನ್ನ ಹಾಗೂ ವಸತಿ ವ್ಯವಸ್ಥೆಯೊಂದಿಗೆ ಉಚಿತವಾಗಿ ಶಿಕ್ಷಣದ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿದ್ದಾರೆ. ವಿದ್ಯಾಪೀಠದಲ್ಲಿರುವ ಸಹಸ್ರ ಸಂಖ್ಯೆಯ
ವಿವಿಧ ವಿಷಯಗಳಿಗೆ ಸಂಬಂಧಿಸಿದ ಗ್ರಂಥ ಭಂಡಾರವು ಆಚಾರ್ಯರ ವಿದ್ಯಾಪ್ರೇಮಕ್ಕೆ ಸಾಕ್ಷಿಯಾಗಿದೆ. ಸಾಹಿತ್ಯ ಕ್ಷೇತ್ರಕ್ಕೂ ವಿಶೇಷ ಯೋಗದಾನ ನೀಡಿದ ಅವರು, ಶ್ರೀ ವಿಷ್ಣು ತೀರ್ಥರ ಅಧ್ಯಾತ್ಮ ರಸರಂಜನಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಅವರ ಸಾಧನೆಗಳಿಗೆ ಹಲವಾರು ಪ್ರಶಸ್ತಿಗಳು ಲಭಿಸಿವೆ.
ಜೀವಮಾನದ ಅತೀ ಸಂತೋಷದ ಕ್ಷಣ ಇದಾಗಿದೆ. ನನಗೆ ಲಭಿಸಿದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯು ಮಹಾರಾಷ್ಟ್ರದ ತುಳು-ಕನ್ನಡಿಗರಿಗೆ ಸಿಕ್ಕಿದ ಗೌರವವಾಗಿದೆ. ವಿಟ್ಲದ ಸೀಮೆಗೆ ದೊರೆತ ಗೌರವವಾಗಿದೆ. ಹೆತ್ತಬ್ಬೆಯ ಆಶೀರ್ವಾದ ಮತ್ತು ದೇವರ ಅನುಗ್ರಹದಿಂದ ಇವೆಲ್ಲ ಸಾಧ್ಯವಾಗಿದೆ. ಪ್ರಶಸ್ತಿಯಿಂದ ನನ್ನ ಸಮಾಜ ಸೇವಾ ಜವಾಬ್ದಾರಿ ಹೆಚ್ಚಿದೆ. ಭವಿಷ್ಯದಲ್ಲಿ ಆರ್ಥಿಕವಾಗಿ ಹಿಂದುಳಿದ ಬಂಧುಗಳ ವೈದ್ಯಕೀಯ ಸೇವೆಗಾಗಿ ಆಸ್ಪತ್ರೆಯೊಂದರ ನಿರ್ಮಾಣ ನನ್ನ ಕನಸಾಗಿದೆ. ನಾನು ಕಲಿತ ಶಿಕ್ಷಣ ಸಂಸ್ಥೆಯ ಅಭಿವೃದ್ಧಿಯತ್ತವೂ ಚಿತ್ತ ಹರಿಸುತ್ತಿದ್ದೇನೆ. ಎಲ್ಲರ ಪ್ರೀತಿ, ಅಭಿಮಾನ, ಗೌರವಕ್ಕೆ ಋಣಿಯಾಗಿದ್ದೇನೆ. -ಕೆ. ಡಿ. ಶೆಟ್ಟಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು
ತಾಯ್ನಾಡಿನ ಅತ್ಯಂತ ಶ್ರೇಷ್ಠ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿದ್ದು ಸಂತಸ ತಂದಿದೆ. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಹಿರಿಯ ಸಾಧಕರನ್ನು ಗುರುತಿಸಿ ಗೌರವಿಸುತ್ತಿರುವ ಕರ್ನಾಟಕ ಸರಕಾರದ ಕಾರ್ಯ ಅಭಿನಂದನೀಯ. ಕಾರ್ಯಕ್ರಮ ನಿರ್ವಹಣೆ ಅತ್ಯಂತ ಅಚ್ಚುಕಟ್ಟಾಗಿತ್ತು. ಎಲೆಮರೆಯ ಕಾಯಿಯಂತೆ ಸೇವೆ ಸಲ್ಲಿಸುತ್ತಿರುವ ನಮಂತಹ ಸದ್ದಿಲ್ಲದ ಸಾಧಕರನ್ನು ಗುರುತಿಸಿ ಗೌರವಿಸುತ್ತಿರುವುದು ಹೆಮ್ಮೆಯ ಸಂಗತಿ. ಕರ್ನಾಟಕ ಸರಕಾರ ನೀಡಿದ ಈ ಪ್ರಶಸ್ತಿಯನ್ನು ನನ್ನ ತಂದೆ-ತಾಯಿ, ಗುರುಹಿರಿಯರು ಹಾಗೂ ನನ್ನ ಅಭಿಮಾನಿಗಳಿಗೆ ಅರ್ಪಿಸುತ್ತೇನೆ. -ವಿದ್ವಾನ್ ವಿದ್ಯಾಸಿಂಹಾಚಾರ್ಯ ಮಾಹುಲಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.