ಎನ್‌ಡಿಎಗೆ “ಬಿಹಾರ” : ಸರಳ ಬಹುಮತ ಸಾಧಿಸಿದ ನಿತೀಶ್ ನೇತೃತ್ವದ ಎನ್‌ಡಿಎ
ಬಿಜೆಪಿಯೇ ದೊಡ್ಡ ಪಕ್ಷ , ಭಾರೀ ಸ್ಪರ್ಧೆ ಒಡ್ಡಿದ ಆರ್‌ಜೆಡಿ
Team Udayavani, Nov 11, 2020, 6:32 AM IST
ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮುನ್ನಡೆಯನ್ನು ಕಾರ್ಯಕರ್ತರು ಸಂಭ್ರಮದಿಂದ ಆಚರಿಸಿದರು.
ಪಟ್ನಾ /ಹೊಸದಿಲ್ಲಿ : ಉತ್ತರ ಭಾರತದ ಪ್ರಮುಖ ರಾಜ್ಯಗಳಲ್ಲಿ ಒಂದಾಗಿರುವ ಬಿಹಾರ ಮತ್ತೆ ಎನ್‌ಡಿಎ ಪಾಲಾಗಿದೆ. ಜೆಡಿಯು ನಾಯಕ ನಿತೀಶ್ ಕುಮಾರ್
ನೇತೃತ್ವದ ಎನ್‌ಡಿಎಗೆ 125 ಸ್ಥಾನಗಳು ಸಿಕ್ಕಿದ್ದರೆ ಆರ್‌ಜೆಡಿಯ ತೇಜಸ್ವಿ ಯಾದವ್ ನೇತೃತ್ವದ ಮೈತ್ರಿಕೂಟಕ್ಕೆ 110 ಸ್ಥಾನಗಳು ಲಭಿಸಿವೆ. ಕೊರೊನಾ ಸಂಕಷ್ಟದ ನಡುವೆ ನಡೆದ ಬಿಹಾರ ವಿಧಾನಸಭೆ ಚುನಾವಣೆ ಹಿಂದೆಂದೂ ಕಾಣದ ಜಿದ್ದಾಜಿದ್ದಿಗೆ ಸಾಕ್ಷಿಯಾಯಿತು.
ಮಂಗಳವಾರ ಬೆಳಗ್ಗೆ ಮತ ಎಣಿಕೆ ಆರಂಭವಾಗುತ್ತಿದ್ದಂತೆ ಎನ್‌ಡಿಎಗಿಂತ ಮುನ್ನಡೆ ಸಾಧಿಸಿದ್ದ ಆರ್‌ಜೆಡಿ ಪಾಳಯದಲ್ಲಿ ಸಂಭ್ರಮ ಮನೆಮಾಡಿತ್ತು. ಆದರೆ 11 ಗಂಟೆಯ ಅನಂತರ ಫಲಿತಾಂಶ ತಿರುವುಮುರುವಾಗಿ, ಆರ್‌ಜೆಡಿಗೆ ಹಿನ್ನಡೆಯಾದರೆ ಎನ್‌ಡಿಎ ಮುನ್ನಡೆ ಸಾಧಿಸಿತು. ಕೊರೊನಾ ಕಾರಣದಿಂದಾಗಿ ಮತ ಎಣಿಕೆಗೆ ಕಡಿಮೆ ಟೇಬಲ್‌ಗಳನ್ನು ವ್ಯವಸ್ಥೆ ಮಾಡಿದ್ದರಿಂದ ಎಣಿಕೆ ಪ್ರಕ್ರಿಯೆ ವಿಳಂಬವಾಯಿತು. ರಾತ್ರಿಯಾಗುತ್ತಿದ್ದಂತೆ ಎನ್‌ಡಿಎ ಮತ್ತು ಆರ್‌ಜೆಡಿ ನಡುವೆ ತೀವ್ರ ಸ್ಪರ್ಧೆ ಕಂಡು ಬಂದಿತು. ಬೆಳಗ್ಗಿನಿಂದಲೂ ಅತ್ತಿಂದಿತ್ತ ತೂಗುಯ್ನಾಲೆಯಾಡುತ್ತಲೇ ಇದ್ದ ವಿಜಯವು ರಾತ್ರಿ ವೇಳೆಗೆ ಎನ್‌ಡಿಎ ಕಡೆಗೆ ವಾಲಿತು.
ಬಿಜೆಪಿಗೆ ದೊಡ್ಡ ಗೆಲುವು
ನಿತೀಶ್ ನೇತೃತ್ವದಲ್ಲೇ ಚುನಾವಣೆ ಎದುರಿಸಿದರೂ ಬಿಹಾರದಲ್ಲಿನ ಎನ್‌ಡಿಎ ಮೈತ್ರಿಕೂಟದಲ್ಲಿ ಬಿಜೆಪಿಯು ಅತೀ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ಅದು 74 ಸ್ಥಾನಗಳನ್ನು ಗೆದ್ದು ಒಕ್ಕೂಟಕ್ಕೆ ಹಿರಿಯಣ್ಣನಾಯಿತು. ಉಳಿದಂತೆ ಜೆಡಿಯು 43, ಎಚ್‌ಎಎಂಎಸ್ 4, ವಿಐಪಿ 4ರಲ್ಲಿ ಗೆಲುವು ಸಾಧಿಸಿವೆ. ಈ ಮೂಲಕ ಒಟ್ಟು 125 ಸ್ಥಾನಗಳಲ್ಲಿ ಗೆದ್ದ ಎನ್‌ಡಿಎ ಸರಕಾರ ರಚನೆಗೆ ಬೇಕಾದ ಸರಳ ಬಹುಮತವನ್ನು ಸಾಧಿಸಿತು.
ಆರ್‌ಜೆಡಿಗೆ ಬಂಪರ್
ರಾಷ್ಟ್ರೀಯವಾದಿ ಜನತಾದಳ, ಕಾಂಗ್ರೆಸ್ ಮತ್ತು ಎಡಪಕ್ಷಗಳನ್ನು ಒಳಗೊಂಡ ಮಹಾಘಟಬಂಧನ್, ಎನ್‌ಡಿಎ ಮೈತ್ರಿಕೂಟಕ್ಕೆ ಭಾರೀ ಸ್ಪರ್ಧೆ ನೀಡುವಲ್ಲಿ ಯಶಸ್ವಿಯಾಯಿತು. ಈ ಚುನಾವಣೆಯಲ್ಲಿ ಆರ್‌ಜೆಡಿ ಮೈತ್ರಿಕೂಟವೇ ಗೆಲ್ಲಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಹೇಳಿದ್ದವು. ಗೆಲ್ಲಲು ಸಾಧ್ಯವಾಗದೆ ಹೋದರೂ ಭಾರೀ ಮಟ್ಟದ ಸ್ಪರ್ಧೆ ನೀಡಿದ್ದು ಲಾಲು ಕುಟುಂಬದ ತೇಜಸ್ವಿ ಯಾದವ್ ಅವರ ಸಾಧನೆ. ವಿಶೇಷವೆಂದರೆ 16 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಎಡಪಕ್ಷಗಳು ಉತ್ತಮ ಸಾಧನೆ ಮಾಡಿವೆ. ಈ ಬಾರಿ ಎಡಪಕ್ಷಗಳಿಗೆ 14 ಸ್ಥಾನ ಹೆಚ್ಚುವರಿಯಾಗಿ ದೊರೆತಿವೆ.
ಮೋದಿ ಪ್ರಭಾವದ ಲಾಭ
ನಿತೀಶ್ ಅವರ ಹೆಸರಿಗಿಂತ ಮೋದಿ ಪ್ರಭಾವದಿಂದಾಗಿಯೇ ಈ ಬಾರಿ ಜನ ಜೆಡಿಯುಗೆ ಮತ ಹಾಕಿದ್ದಾರೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ಸಾಕ್ಷಿ ಎಂಬಂತೆ ಪ್ರಧಾನಿ ಮೋದಿ ಅವರು ರ್ಯಾಲಿ ನಡೆಸಿದ್ದ ಸಸ್ರಾಮ್, ಗಯಾ, ಭಾಗಲ್ಪುರ, ದರ್ಭಾಂಗ, ಮುಝಾರ್ಪುರ, ಪಟ್ನಾ, ಚಪ್ರಾ, ಪೂರ್ವ ಚಂಪಾರಣ್, ಸಮಸ್ತಿಪುರ, ಪಶ್ಚಿಮ ಚಂಪಾರಣ್, ಸಹಸ್ರಾ ಮತ್ತು ಫೋರ್ಬೆಸ್‌ಗಂಜ್‌ಗಳಲ್ಲಿ ಎನ್‌ಡಿಎ ಕೂಟಕ್ಕೆ ಹೆಚ್ಚು ಮತಗಳು ಬಿದ್ದಿವೆ.
ನಿತೀಶ್ ಅವರೇ ಸಿಎಂ
ಎನ್‌ಡಿಎ ಮೈತ್ರಿಕೂಟದಲ್ಲಿ ಬಿಜೆಪಿಯೇ ದೊಡ್ಡ ಪಕ್ಷವಾಗಿದ್ದರೂ ನಿತೀಶ್ ಕುಮಾರ್ ಅವರೇ ಮುಂದಿನ ಐದು ವರ್ಷಗಳ ಕಾಲ ಸಿಎಂ ಆಗಿರುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸಂಜಯ್ ಬನ್ಸಾಲ್ ಹೇಳಿದ್ದಾರೆ. ಈ ವಿಚಾರದಲ್ಲಿ ಗೊಂದಲಗಳಿಲ್ಲ. ಪ್ರಧಾನಿ ಮೋದಿ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರೇ ಪ್ರಚಾರದ ವೇಳೆ ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ ಎಂದಿದ್ದಾರೆ.
ಎನ್‌ಡಿಎ ಗೆದ್ದದ್ದು ಹೇಗೆ?
1. ಪ್ರಧಾನಿ ಮೋದಿ, ನಿತೀಶ್ ವರ್ಚಸ್ಸು
2. ಅಭಿವೃದ್ಧಿ ಕುರಿತ ಹೇಳಿಕೆ
3. ನಿತೀಶ್ ಅವರ ಪರಿಶುದ್ಧ ಇಮೇಜ್
4. ಕೊರೊನಾ ನಿರ್ವಹಣೆ, ಲಸಿಕೆ ಭರವಸೆ
5. ಕಾರ್ಯಕರ್ತರಿಂದ ಸಂಘಟಿತ ಕೆಲಸ
ಆರ್‌ಜೆಡಿ+ ಸೋಲಿಗೆ ಕಾರಣ
1. ಹೆಚ್ಚು ಸ್ಥಾನ ಗೆಲ್ಲುವಲ್ಲಿ ಕಾಂಗ್ರೆಸ್ ವೈಫಲ್ಯ
2. ಜನ ಉದ್ಯೋಗ ಸೃಷ್ಟಿ ಭರವಸೆ ನಂಬದ್ದು
3. ಆಡಳಿತ ವೈಫಲ್ಯ ಸರಿಯಾಗಿ ಬಿಂಬಿಸದ್ದು
4. ರಾಹುಲ್, ತೇಜಸ್ವಿ ಯಾದವ್ ಮಾತ್ರ ತಾರಾ ಪ್ರಚಾರಕರು
5. ಅಭ್ಯರ್ಥಿ ಇಳಿಸಿ ಮತ ಒಡೆದ ಒವೈಸಿ
ಜೆಡಿಯುಗೆ ಎಲ್‌ಜೆಪಿ ಕಂಟಕ
ಚುನಾವಣೆಯಲ್ಲಿ ನಿತೀಶ್ ಅವರ ಜೆಡಿಯುಗೆ ಕಂಟಕವಾದದ್ದು ಎಲ್‌ಜೆಪಿಯ ರಾಮ್ ವಿಲಾಸ್ ಪಾಸ್ವಾನ್ ಅವರ ಪುತ್ರ ಚಿರಾಗ್ ಪಾಸ್ವಾನ್. ಅವರು ಜೆಡಿಯು ಮತಗಳನ್ನು ಸೆಳೆದರು. ಇದು ಆರ್‌ಜೆಡಿಗೂ ಕಂಟಕವಾಯಿತು.
ಎನ್‌ಡಿಎ 125 , ಆರ್‌ಜೆಡಿ + 110 , ಇತರ 08
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
“ಚೋಟಾ ಮೋದಿ”:ಡಿಸಿಎಂ ಹುದ್ದೆಗೆ ರಾಜೀನಾಮೆ, ರಾಜ್ಯಸಭೆಗೆ ಬಿಜೆಪಿಯಿಂದ ಸುಶೀಲ್ ಮೋದಿ ಆಯ್ಕೆ
ಇದೇ ಕೊನೆಯ ಚುನಾವಣೆ ಎಂದು ಹೇಳಿಯೇ ಇಲ್ಲ: ನಿತೀಶ್ ಕುಮಾರ್
ತೇಜಸ್ವಿ ಒಳ್ಳೆಯ ಹುಡುಗ, ಆದರೆ RJD ಅಧಿಕಾರದ ಗದ್ದುಗೆ ಏರಿದ್ದರೆ…ಉಮಾಭಾರತಿ ಹೇಳಿದ್ದೇನು?
ನಿತೀಶ್ ಪಟ್ಟಾಭಿಷೇಕಕ್ಕೆ ಮುಹೂರ್ತ ಫಿಕ್ಸ್: ಬಿಜೆಪಿ-ಜೆಡಿಯು ನಡುವೆ ಸಂಪುಟ ಕಸರತ್ತು ಆರಂಭ
ನಿತೀಶ್ ಕುಮಾರ್ ಬಿಹಾರದ ಮುಖ್ಯಮಂತ್ರಿ, ಇದು ನಮ್ಮ ಬದ್ಧತೆ: ಭಾರತೀಯ ಜನತಾ ಪಕ್ಷ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.