ಕೋವಿಡ್: ಮಣ್ಣಿನ ಹಣತೆಗಳಿಗೆ ಸಿಗದ ಬೇಡಿಕೆ!
Team Udayavani, Nov 11, 2020, 4:57 PM IST
ಚಿಕ್ಕೋಡಿ: ದೀಪಗಳ ಹಬ್ಬ ದೀಪಾವಳಿಯಲ್ಲಿ ಬೆಳಕು ಸೂಸಲು ಅಪ್ಪಟ್ಟ ದೇಶಿ ಮಣ್ಣಿನಿಂದ ತಯಾರಾಗುತ್ತಿದ್ದ ಬಗೆ ಬಗೆಯ ಹಣತೆ ಬೇಡಿಕೆಯನ್ನು ಕೋವಿಡ್ ಕಸಿದುಕೊಂಡಿದೆ.
ಇದರಿಂದ ಹಣತೆ ತಯಾರಿಸುತ್ತಿದ್ದ ಕುಂಬಾರರ ಬದುಕಿಗೆ ಬೆಳಕು ನೀಡಬೇಕಾದ ದೀಪಾವಳಿ ಹಬ್ಬ ಈ ಬಾರಿ ಸಂಕಷ್ಟ ತಂದೊಡ್ಡಿದೆ.
ಹೌದು..ಚಿಕ್ಕೋಡಿ ತಾಲೂಕಿನ ಕೋಥಳಿ ಗ್ರಾಮದಲ್ಲಿ ಹತ್ತಾರು ಕುಟುಂಬಗಳು ಕುಂಬಾರಿಕೆಯಲ್ಲಿ ತೊಡಗಿಕೊಂಡು ಮಣ್ಣಿನ
ಸಾಮಗ್ರಿಗಳನ್ನು ತಯಾರಿಸುತ್ತಾರೆ. ಅದರಲ್ಲಿಯೂ ದೀಪಾವಳಿ ಹಬ್ಬಕ್ಕೆಂದೇ ವಿಶೇಷವಾಗಿ ಸಿದ್ಧಪಡಿಸುವ ಮಣ್ಣಿನ ಹಣತೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸಿದ್ಧಪಡಿಸುತ್ತಿದ್ದರು. ಪ್ರತಿ ವರ್ಷ ಲಕ್ಷಾಂತರ ಹಣತೆ ತಯಾರಿಸುತ್ತಿದ್ದ ಕುಟುಂಬಗಳು ಬೇಡಿಕೆ ಕುಸಿತದಿಂದಾಗಿ ಕೇವಲ 25 ರಿಂದ 30 ಸಾವಿರ ಹಣತೆ ತಯಾರಿಸಿದ್ದಾರೆ.
ಪ್ರತಿ ವರ್ಷ ಕೋಥಳಿಯ ಕುಂಬಾರ ಕುಟುಂಬಗಳು ಹಣತೆಗಳನ್ನು ತಯಾರಿಸಿ ಸ್ಥಳೀಯ ಮಾರುಕಟ್ಟೆ ಮಾತ್ರವಲ್ಲದೇ, ನೆರೆಯ
ಮಹಾರಾಷ್ಟ್ರದ ಸಾಂಗ್ಲಿ, ಕೊಲ್ಹಾಪುರ, ತಾಸಗಾಂವ, ಜಯಸಿಂಗಪುರ ಮೊದಲಾದೆಡೆ ಪೂರೈಸುತ್ತಿದ್ದವು. ಆದರೆ, ಮೂರ್ನಾಲ್ಕು ವರ್ಷಗಳಿಂದ ಬೇಡಿಕೆ ಕಡಿಮೆಯಾಗಿದೆ. ಪ್ರಸಕ್ತ ವರ್ಷ ಕೋವಿಡ್ ಕೂಡ ತೊಂದರೆ ನೀಡಿದೆ. ಕೊರೊನಾ ಹರಡುವಿಕೆ
ತಡೆಗಟ್ಟಲು ಸರಳ ಆಚರಣೆಗೆ ಜನರು ಮುಂದಾಗಿರುವುದರಿಂದ ನಮ್ಮ ಉತ್ಪನ್ನಗಳಿಗೆ ಬೇಡಿಕೆ ಇಲ್ಲವಾಗಿದೆ. 100 ಹಣತೆಗಳನ್ನು
ತಯಾರಿಸಲು ಅಂದಾಜು 110 ರೂ. ವೆಚ್ಚ ತಗಲುತ್ತದೆ. ಮಾರುಕಟ್ಟೆಯಲ್ಲಿ 100 ಹಣತೆಗಳಿಗೆ 130ರಿಂದ 140 ರೂ. ಬೆಲೆ ದೊರೆಯುತ್ತಿದೆ ಎನ್ನುತ್ತಾರೆ ವಿಠಲ ಕುಂಬಾರ.
ಇದನ್ನೂ ಓದಿ:ಪತ್ರಕರ್ತ ಅರ್ನಾಬ್ ಗೋಸ್ವಾಮಿಗೆ ಮಧ್ಯಂತರ ಜಾಮೀನು ನೀಡಿದ ಸುಪ್ರೀಂ ಕೋರ್ಟ್
ಸಂಕ್ರಾಂತಿಗೆ ಕುಡಿಕೆ, ದಸರೆ ಮತ್ತು ದೀಪಾವಳಿಗೆ ಹಣತೆ ತಯಾರಿಸಿ ಮಾರುತ್ತೇವೆ. ಮುಂಬರುವ ಸಂಕ್ರಾಂತಿಗೂ ಕುಡಿಕೆಗಳ ಬೇಡಿಕೆ ಕುಸಿಯುವ ಆತಂಕ ಎದುರಾಗಿದೆ. ಮಣ್ಣಿನ ಹಣತೆಗಳ ಬಳಕೆಯನ್ನು ಜನರು ಕಡಿಮೆ ಮಾಡಿದ್ದಾರೆ.
ಇದರಿಂದಾಗಿ ಈ ಕಸುಬು ನಂಬಿ ಬದುಕು ನಡೆಸುವುದು ಕಷ್ಟಕರವಾಗುತ್ತಿದೆ. ಹೀಗಾಗಿ, ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದೇವೆ ಎಂದು ರಾಜು ಕುಂಬಾರ ಹೇಳಿದರು.
ಕುಂಬಾರಿಕೆ ಕಸುಬು ಅವನತಿಯತ್ತ ಸಾಗುತ್ತಿದೆ. ಈ ವೃತ್ತಿಯಲ್ಲಿ ಆಧುನಿಕತೆ ಅಳವಡಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಖಾನಾಪುರದಲ್ಲಿ ಕುಂಬಾರಿಕೆ ತರಬೇತಿ ಕೇಂದ್ರವಿದೆ. ಆದರೆ, ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯ ಕುಂಬಾರ
ಕುಟುಂಬಗಳಿಗೆ ಈ ಕೇಂದ್ರದಿಂದ ಯಾವುದೇ ರೀತಿಯ ಸೌಕರ್ಯಗಳು ದೊರಕುತ್ತಿಲ್ಲ.
ಸರ್ಕಾರದ ಸವಲತ್ತುಗಳು ಗ್ರಾಮೀಣ ಪ್ರದೇಶದ ಕುಂಬಾರರಿಗೆ ಸರಿಯಾಗಿ ಸಿಗುತ್ತಿಲ್ಲ. ಸರ್ಕಾರ ಇತ್ತ ಗಮನಹರಿಸುವುದು ಅವಶ್ಯಕವಾಗಿದೆ ಎನ್ನುತ್ತಾರೆ ಕುಂಬಾರ ಸಮುದಾಯದ ಮುಖಂಡರು.
– ಮಹಾದೇವ ಪೂಜೇರಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.