ರಮೇಶ್ ಜಾರಕಿಹೊಳಿ ನಿವಾಸ ಈಗ ಬಿಜೆಪಿಯ ಹೊಸ ಪವರ್ ಸೆಂಟರ್
Team Udayavani, Nov 12, 2020, 12:09 PM IST
ಬೆಂಗಳೂರು: ಉಪಚುನಾವಣೆಯಲ್ಲಿ ಭರ್ಜರಿ ಗೆಲ್ಲುವುದರಿಂದಿಗೆ ಮತ್ತಷ್ಟು ಶಕ್ತಿ ಹೆಚ್ಚಿಸಿಕೊಂಡಿರುವ ಬಿಜೆಪಿಯಲ್ಲಿ ಮಹತ್ತರ ಬೆಳವಣಿಗೆಳು ನಡೆಯುತ್ತಿದೆ. ಕೆಲವೇ ದಿನಗಳಲ್ಲಿ ಸಂಪುಟ ವಿಸ್ತರಣೆ ಮಾಡುವುದಾಗಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಹೇಳಿದ್ದು, ಸಚಿವ ಸ್ಥಾನ ಆಕಾಂಕ್ಷಿಗಳ ಓಡಾಟ ಹೆಚ್ಚಿಸುವಂತೆ ಮಾಡಿದೆ.
ಈ ಹಿಂದೆ ಸಂಪುಟ ವಿಸ್ತರಣೆ ವಿಚಾರ ಬರುತ್ತಿದ್ದಂತೆ ಆಕಾಂಕ್ಷಿಗಳು, ಸಿಎಂ ಬಿಎಸ್ ವೈ ಮನೆ ಅಥವಾ ಡೆಲ್ಲಿಗೆ ದೌಡಾಯಿಸುತ್ತಿದ್ದರು. ಈ ಮೂಲಕ ಸಚಿವ ಸ್ಥಾನ ರೇಸ್ ನಲ್ಲಿ ತಾವೂ ಇದ್ದೇವೆ ಎಂದು ಗುರುತಿಸಿಕೊಳ್ಳುತ್ತಿದ್ದರು. ಅದರೆ ಇದೀಗ ಹೊಸ ಬಿಜೆಪಿ ಶಾಸಕರಿಗೆ ಹೊಸ ದಾರಿ ಕಂಡುಕೊಂಡಿದ್ದಾರೆ. ಅದುವೇ ಸಚಿವ ರಮೇಶ್ ಜಾರಕಿಹೊಳಿ.
ಹೌದು, ಕಾಂಗ್ರೆಸ್ ನಿಂದ ಬಿಜೆಪಿಗೆ ವಲಸೆ ಬಂದು ಸಚಿವರಾಗಿರುವ ‘ಸಾಹುಕಾರ್’ ರಮೇಶ್ ಜಾರಕಿಹೊಳಿ ಈಗ ಪಕ್ಷದಲ್ಲಿ ಪ್ರಭಾವ ಹೆಚ್ಚಿಸಿಕೊಂಡಿದ್ದಾರೆ. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ, ಶಾಸಕರಾದ ರಾಜುಗೌಡ, ಪೂರ್ಣಿಮಾ ಶ್ರೀನಿವಾಸ್, ಶಿವರಾಜ್ ಪಾಟೀಲ್ ಇತರರು ರಮೇಶ್ ಜಾರಕಿಹೊಳಿ ಅವರ ಸದಾಶಿವನಗರ ನಿವಾಸದಲ್ಲಿ ಬುಧವಾರ ಮಧ್ಯಾಹ್ನ ಸಭೆ ನಡೆಸಿದ್ದರು. ಸಭೆ ಬಳಿಕ ರಮೇಶ್ ಜಾರಕಿಹೊಳಿ ಸೇರಿದಂತೆ ಇತರರು ಗುರುವಾರ ಸಚಿವ ಸಂಪುಟ ಸಭೆ ನಡೆಯಲಿರುವ ಹಿನ್ನೆಲೆಯಲ್ಲಿ ಚರ್ಚಿಸಲಾಗಿದೆ. ಸಚಿವ ಸ್ಥಾನ, ಪುನಾರಚನೆ ಇತರೆ ವಿಚಾರಗಳ ಬಗ್ಗೆ ಚರ್ಚಿಸಿಲ್ಲಎಂದು ಹೇಳಿಕೆ ನೀಡಿದ್ದರೂ ದಿಢೀರ್ ಭೋಜನಕೂಟ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ:ಸಂಪುಟ ಕಸರತ್ತು ಬಿರುಸು; ಸಿಎಂ ನಿವಾಸಕ್ಕೆ ದೌಡಾಯಿಸಿದ ಆಕಾಂಕ್ಷಿಗಳು
ಇತ್ತೀಚೆಗಷ್ಟೇ ಉಪಚುನಾವಣೆಯಲ್ಲಿ ಜಯ ಸಾಧಿಸಿದ ಮುನಿರತ್ನ ಅವರು ಕೂಡಾ ಗುರುವಾರ ರಮೇಶ್ ಜಾರಕಿಹೊಳಿ ಅವರನ್ನು ಭೇಟಿಯಾಗಿದ್ದಾರೆ.
ಮೂಲ ಬಿಜೆಪಿಗರ ಭೇಟಿ: ಇತ್ತೀಚೆಗಷ್ಟೇ ಬಿಜೆಪಿ ಸೇರಿದ ಶಾಸಕರು ಮಾತ್ರವಲ್ಲದೆ ಮೂಲ ಬಿಜೆಪಿ ನಾಯಕರು ಕೂಡಾ ಜಾರಕಿಹೊಳಿ ಮನೆಗೆ ದೌಡಾಯಿಸುತ್ತಿದ್ದಾರೆ. ರಮೇಶ್ ಜಾರಕಿಹೊಳಿ ಅವರು ಡೆಲ್ಲಿ ಮಟ್ಟದಲ್ಲಿ ಕೂಡಾ ಪ್ರಭಾವ ಹೆಚ್ಚಿಸುತ್ತಿರುವ ಕಾರಣ ಸಚಿವ ಸ್ಥಾನ ಆಕಾಂಕ್ಷಿ ಶಾಸಕರು ಸಾಹುಕಾರ್ ಮನೆ ಕಡೆಗೆ ಸಾಗುತ್ತಿದ್ದಾರೆ ಎನ್ನಲಾಗಿದೆ.
ಏಳು ಸ್ಥಾನಗಳು: ಬಿಎಸ್‌ವೈ ಸಂಪುಟದಲ್ಲಿ ಸದ್ಯ ಏಳು ಸ್ಥಾನಗಳು ಖಾಲಿ ಇವೆ. ಮೊದಲಿಗೆ 6 ಸ್ಥಾನಗಳನ್ನು ಖಾಲಿ ಉಳಿಸಿಕೊಳ್ಳಲಾಗಿತ್ತು. ಸಿ.ಟಿ.ರವಿ ರಾಜೀನಾಮೆ ನೀಡಿದ ನಂತರ 7ಕ್ಕೆ ಏರಿಕೆಯಾಗಿದೆ. ಈಗಷ್ಟೇ ಗೆದ್ದಿರುವ ಮುನಿರತ್ನ ಹಾಗೂ ಎಂಟಿಬಿ ನಾಗರಾಜ್, ಆರ್. ಶಂಕರ್‌ಗೆ ಸಚಿವ ಸ್ಥಾನಕೊಡಬೇಕಾಗಿದೆ. ಉಳಿದ 4 ಸ್ಥಾನಕ್ಕಾಗಿ ಪೈಪೋಟಿ ಜೋರಾಗಿದೆ.
ದೀಪಾವಳಿ ಹಬ್ಬದ ಬಳಿಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿಯಾಗಿ ಸಂಪುಟ ವಿಸ್ತರಣೆ ಇಲ್ಲವೇ ಪುನಾರಚನೆಗೆ ಒಪ್ಪಿಗೆ ಪಡೆಯುವ ಸಾಧ್ಯತೆ ಇದೆ. ಮಸ್ಕಿ, ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ದಿನಾಂಕ ಸದ್ಯದಲ್ಲೇ ಘೋಷಣೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆ ಇಲ್ಲವೇ ಪುನಾರಚನೆಯನ್ನು ತ್ವರಿತವಾಗಿ ನಡೆಸಲು ಯಡಿಯೂರಪ್ಪ ಬಯಸಿದ್ದಾರೆ ಎನ್ನಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.