ಆರ್ಥಿಕತೆ ಚೇತರಿಕೆಗೆ ಆತ್ಮನಿರ್ಭರ ಲಸಿಕೆ
ಭಾರತೀಯ ಆರ್ಥಿಕತೆಯು ಸುಧಾರಣೆಯ ಹಾದಿಯಲ್ಲಿದೆ
Team Udayavani, Nov 13, 2020, 6:28 AM IST
ಹೊಸದಿಲ್ಲಿ: ಕೊರೊನಾ ಸೋಂಕು ಹಾಗೂ ದೀರ್ಘಾವಧಿಯ ಲಾಕ್‌ಡೌನ್ ಬಳಿಕ ದೇಶದ ಆರ್ಥಿಕತೆಯಲ್ಲಿ “ಚೇತರಿಕೆಯ ಬೆಳಕು’ ಮೂಡಿದ್ದು, ಭಾರತದ ಅರ್ಥವ್ಯವಸ್ಥೆಯು ಬಲಿಷ್ಠ ಸುಧಾರಣೆಯನ್ನು ಕಾಣುತ್ತಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಅಭಿವೃದ್ಧಿಯ ಎಂಜಿನ್‌ಗೆ ಮತ್ತಷ್ಟು ಇಂಧನ ತುಂಬುವಂತೆ ಗುರುವಾರ ಹೊಸ ಉತ್ತೇಜನಾ ಪ್ಯಾಕೇಜ್ ಘೋಷಿಸಿದ ಸಚಿವೆ ನಿರ್ಮಲಾ, ಆರ್ಥಿಕತೆಯ ಸೂಚ್ಯಂಕವು ಚೇತರಿಕೆಯತ್ತ ಬೆರಳು ತೋರುತ್ತಿದೆ ಎಂಬ ಭರವಸೆಯ ಮಾತುಗಳನ್ನಾಡಿದ್ದಾರೆ. ಈ ಮಾತುಗಳನ್ನು ಪುಷ್ಟೀಕರಿಸುವಂತೆ ಹಲವು ಅಂಕಿ ಅಂಶಗಳನ್ನೂ ಅವರು ದೇಶದ ಮುಂದಿಟ್ಟಿದ್ದಾರೆ.
ಅಕ್ಟೋಬರ್ ತಿಂಗಳಲ್ಲಿ ದೇಶದ ಖರೀದಿ ಸೂಚ್ಯಂಕ (ಪಿಎಂಐ) ಶೇ.58.9ಕ್ಕೇರಿದೆ. ಸೆಪ್ಟಂಬರ್‌ನಲ್ಲಿ ಇದು ಶೇ.54.6ರಷ್ಟಿತ್ತು. ಅಂದರೆ, 9 ವರ್ಷಗಳಲ್ಲೇ ಸೂಚ್ಯಂಕ ಇದೇ ಮೊದಲ ಬಾರಿಗೆ ಈ ಮಟ್ಟಕ್ಕೇರಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಏರಿಕೆಯ ಹಾದಿಯಲ್ಲಿ: ಇಂಧನ ಬಳಕೆಯಲ್ಲಿನ ಪ್ರಗತಿಯೂ ಹೆಚ್ಚಳವಾಗಿದೆ. ಜಿಎಸ್‌ಟಿ ಸಂಗ್ರಹ ಶೇ.10 ಏರಿಕೆಯಾಗಿ, 1.05 ಲಕ್ಷ ಕೋಟಿ ರೂ. ಸಂಗ್ರಹಿಸ ಲಾಗಿದೆ. ಬ್ಯಾಂಕ್ ಸಾಲದ ಮೊತ್ತವು ಶೇ. 5.1ರಷ್ಟು ಸುಧಾರಣೆ ಕಂಡಿದೆ. ರೈಲ್ವೆ ಸರಕು ಸಾಗಣೆ ಸರಾಸರಿ ಶೇ.20 ಏರಿಕೆಯಾಗಿದೆ. ಎಪ್ರಿಲ್‌ನಿಂದ ಆಗಸ್ಟ್ ವರೆಗೆ ವಿದೇಶಿ ನೇರ ಬಂಡವಾಳ 2.64 ಲಕ್ಷ ಕೋಟಿ ರೂ. ಆಗಿದ್ದು, ಇದು ಕೂಡ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.13ರಷ್ಟು ಹೆಚ್ಚು ಎಂದೂ ಸಚಿವೆ ತಿಳಿಸಿದ್ದಾರೆ.
ಈ ಹಿಂದೆ ಘೋಷಿಸಲಾದ ಆತ್ಮನಿರ್ಭರ ಅಭಿಯಾನದಿಂದ ಉಂಟಾದ ಅನುಕೂಲತೆಗಳನ್ನೂ ಅವರು ಪಟ್ಟಿ ಮಾಡಿದ್ದಾರೆ 28 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳನ್ನು ಸೆ.1ರಿಂದಲೇ ಅನ್ವಯವಾಗುವಂತೆ ರಾಷ್ಟ್ರೀಯ ಪಡಿತರ ಕಾರ್ಡ್ ಪೋರ್ಟಬಿಲಿಟಿ ಸೌಲಭ್ಯ ದೊಳಗೆ ತರಲಾಗಿದೆ. ಇದರಿಂದಾಗಿ 68.6 ಕೋಟಿ ಫಲಾನುಭವಿಗಳಿಗೆ ಲಾಭವಾಗಿದ್ದು, ಅವರು ದೇಶದ ಯಾವುದೇ ಪ್ರದೇಶದ ಪಡಿತರ ಅಂಗಡಿಯಿಂದಲೂ ಆಹಾರ ಧಾನ್ಯಗಳನ್ನು ಪಡೆಯುವಂತಾಗಿದೆ ಎಂದಿದ್ದಾರೆ.
ಎಷ್ಟೆಷ್ಟು ವಿತರಣೆ?: ಪ್ರಧಾನಮಂತ್ರಿ ಬೀದಿಬದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿಯನ್ವಯ 26.62 ಲಕ್ಷ ಸಾಲದ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಆ ಪೈಕಿ 1,373.33 ಕೋಟಿ ರೂ. ಸಾಲ ವಿತರಣೆ ನಡೆದಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ 2.5 ಕೋಟಿ ರೈತರಿಗೆ ಅನುಕೂಲ ಕಲ್ಪಿಸಲಾಗಿದೆ. ಈವರೆಗೆ 188.14 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದು, 157.44 ಲಕ್ಷ ಅರ್ಹ ಫಲಾನುಭವಿಗಳಿಗೆ ಈ ಕಾರ್ಡ್ ವಿತರಿಸಲಾಗಿದೆ. ಹೆಚ್ಚುವರಿ ತುರ್ತು ಬಂಡವಾಳ ನಿಧಿಯಡಿ ರೈತರಿಗೆ 25 ಸಾವಿರ ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. 7227 ಕೋಟಿ ರೂ.ಗಳನ್ನು ಎನ್‌ಬಿಎಫ್ಸಿ ಮತ್ತು ಹೌಸಿಂಗ್ ಫೈನಾನ್ಸ್ ಕಂಪೆನಿಗಳಿಗೆ ಬಿಡುಗಡೆ ಮಾಡಲಾಗಿದೆ. ವಿದ್ಯುತ್ಛಕ್ತಿ ವಿತರಣಾ ಕಂಪೆನಿಗಳಿಗೆ ಹಣಕಾಸು ನೆರವು ಒದಗಿಸಲು 1.18 ಕೋಟಿ ರೂ.ಗಳ ಸಾಲವನ್ನು ವಿತರಿಸಲಾಗಿದೆ. ರಸ್ತೆ ಸಾರಿಗೆ ಮತ್ತು ರಕ್ಷಣಾ ಸಚಿವಾಲಯಕ್ಕೆ ಹೆಚ್ಚುವರಿ ಬಂಡವಾಳ ವೆಚ್ಚವಾಗಿ 25 ಸಾವಿರ ಕೋಟಿ ರೂ.ಗಳನ್ನು ಒದಗಿಸಲಾಗಿದೆ. 39.79 ಲಕ್ಷ ತೆರಿಗೆದಾರರಿಗೆ 1,32,800 ಕೋಟಿ ರೂ.ಗಳ ಆದಾಯ ತೆರಿಗೆ ಮರುಪಾವತಿಯನ್ನೂ ಮಾಡಲಾಗಿದೆ ಎಂದೂ ವಿತ್ತ ಸಚಿವೆ ಮಾಹಿತಿ ನೀಡಿದ್ದಾರೆ.
ಕಾಮತ್ ವರದಿಯ ಫಲ; 26 ವಲಯಗಳಿಗೆ ವರ
ಕೊರೊನಾ ಲಾಕ್‌ಡೌನ್‌ನಿಂದಾಗಿ 26 ವಲಯಗಳು ಸಂಕಷ್ಟಕ್ಕೀಡಾಗಿವೆ ಎಂಬ ಕೆ.ವಿ.ಕಾಮತ್ ಸಮಿತಿಯ ವರದಿಯನ್ನು ಅಂಗೀಕರಿಸಿರುವ ಕೇಂದ್ರ ಸರಕಾರ, ಅದರಂತೆ, ಆರೋಗ್ಯ ವಲಯ ಮತ್ತು ಇತರೆ 26 ವಲಯಗಳಿಗೆ ಸಾಲ ಖಾತ್ರಿ ಯೋಜನೆಯನ್ನು ಘೋಷಿಸಿದೆ.
ಈ ವಲಯದ ವ್ಯಾಪ್ತಿಗೆ ಬರುವ ಸಂಸ್ಥೆಗಳಿಗೆ, ಸದ್ಯ ಬಾಕಿಯಿರುವ ಸಾಲದ ಮೊತ್ತದ ಶೇ.20 ರಷ್ಟು ಹೆಚ್ಚುವರಿ ಸಾಲ ಒದಗಿಸಲಾಗುತ್ತದೆ. ಈ ಸಾಲದ ಮರುಪಾವತಿಗೆ 5 ವರ್ಷಗಳ ಕಾಲಾವಕಾಶವನ್ನೂ ನೀಡಲಾಗಿದೆ. ಮರುಪಾವತಿ ಪ್ರಕ್ರಿಯೆಯು 1 ವರ್ಷದ ಮೊರಟೋರಿಯಂ (ಸಾಲದ ಕಂತು ಮುಂದೂಡಿಕೆ) ಮತ್ತು 4 ವರ್ಷಗಳ ಮರುಪಾವತಿ ಅವಧಿಯನ್ನು ಒಳಗೊಂಡಿರುತ್ತದೆ. 2020ರ ಫೆಬ್ರವರಿ 29ರವರೆಗೆ 50 ರೂ.ಗಳಿಂದ 500 ಕೋಟಿ ರೂ.ಗಳವರೆಗೆ ಸಾಲ ಬಾಕಿ ಹೊಂದಿರುವ ಸಂಸ್ಥೆಗಳು ಈ ಯೋಜನೆಗೆ ಅರ್ಹತೆ ಪಡೆಯುತ್ತವೆ.
ಈ ಮೊತ್ತವು ಸಂಕಷ್ಟಕ್ಕೀಡಾಗಿರುವ ಸಂಸ್ಥೆಗಳಿಗೆ ರಿಲೀಫ್ ನೀಡಲಿದ್ದು, ಭಾದ್ಯತೆ ಪೂರೈಸಲು ಮತ್ತು ಉದ್ಯೋಗಿಗಳನ್ನು ಉಳಿಸಿಕೊಳ್ಳಲು ನೆರವಾಗಲಿದೆ. ಲಕ್ಷಾಂತರ ಕಾರ್ಮಿಕರಿಗೆ ಕೆಲಸ ನೀಡಿರುವ ಎಂಎಸ್‌ಎಂಇ ವಲಯಕ್ಕೆ ಈ ಯೋಜನೆ ಬಹಳಷ್ಟು ಸಹಾಯ ಮಾಡಲಿದೆ.
ಆರ್‌ಬಿಐನಿಂದ ನೇಮಕಗೊಂಡಿದ್ದ ಕಾಮತ್ ಸಮಿತಿಯು ಸೆಪ್ಟಂಬರ್‌ನಲ್ಲಿ ವರದಿ ನೀಡಿತ್ತು. ವಿದ್ಯುತ್, ನಿರ್ಮಾಣ, ರಸ್ತೆ, ರಿಯಲ್ ಎಸ್ಟೇಟ್, ಸಗಟು ವ್ಯಾಪಾರ, ಜವಳಿ, ವಿಮಾನಯಾನ, ಲಾಜಿಸ್ಟಿಕ್ಸ್, ಹೋಟೆಲ್, ಪ್ರವಾಸೋದ್ಯಮ ಸೇರಿದಂತೆ 26 ವಲಯಗಳು ಲಾಕ್‌ಡೌನ್‌ನಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿವೆ ಎಂದು ಹೇಳಿತ್ತು.
ಕೈಗಾರಿಕೋದ್ಯಮಿಗಳಿಂದ ಸ್ವಾಗತ
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿರುವ 3ನೇ ಹಂತದ ಉತ್ತೇಜನಾ ಪ್ಯಾಕೇಜ್ ಅನ್ನು ಕೈಗಾರಿಕೋದ್ಯಮಿಗಳು ಸ್ವಾಗತಿಸಿದ್ದಾರೆ. ಹೊಸ ಯೋಜನೆಗಳು ದೇಶದ ಆರ್ಥಿಕತೆಯ ಚೇತರಿಕೆಗೆ ಇಂಬು ನೀಡುವುದರ ಜೊತೆಗೆ, ಜನರ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿದೆ ಎಂದಿದ್ದಾರೆ. ಆರ್ಥಿಕ ಬಿಕ್ಕಟ್ಟಿನ ನಡುವೆಯೂ ಹೆಚ್ಚುವರಿ 2.65 ಲಕ್ಷ ಕೋಟಿ ರೂ.ಗಳನ್ನು ವೆಚ್ಚ ಮಾಡುವ ಮೂಲಕ ಸರಕಾರವು ಆರ್ಥಿಕತೆಯ ಸುಧಾರಣೆಗೆ ಹೆಜ್ಜೆಯಿಟ್ಟಿರುವುದು ಖುಷಿಯ ಸಂಗತಿ ಎಂದಿದ್ದಾರೆ.
ಲಸಿಕೆ ಸಂಶೋಧನೆಗೆ 900 ಕೋಟಿ ರೂ. ಮೀಸಲು
ಕೊರೊನಾ ಲಸಿಕೆ ಸಂಶೋಧನೆಗಾಗಿ ಜೈವಿಕ ತಂತ್ರಜ್ಞಾನ ಕ್ಷೇತ್ರಕ್ಕೆ 900 ಕೋಟಿ ರೂ.ಗಳನ್ನು ಘೋಷಿಸಲಾಗಿದೆ. “ಕೋವಿಡ್ ಸುರಕ್ಷಾ ಮಿಷನ್ ಅಡಿಯಲ್ಲಿ ಲಸಿಕೆ ಸಂಶೋಧನೆ ಮತ್ತು ಅಭಿವೃದ್ಧಿಗೆ 900 ಕೋಟಿ ರೂ.ಗಳನ್ನು ಜೈವಿಕ ತಂತ್ರಜ್ಞಾನ ವಿಭಾಗಕ್ಕೆ ಮೀಸಲಿಡಲಾಗಿದೆ. ಆದರೆ, ಲಸಿಕೆ ಖರೀದಿ ಮತ್ತು ಸರಬರಾಜು ವೆಚ್ಚಕ್ಕೆ ಈ ಹಣ ವಿನಿಯೋಗವಾಗುವುದಿಲ್ಲ. ಲಸಿಕೆ ಲಭ್ಯವಾದ ಬಳಿಕವಷ್ಟೇ ನಾವು ಅದಕ್ಕೆ
ಅಗತ್ಯ ಹಣ ಬಿಡುಗಡೆ ಮಾಡುತ್ತೇವೆ’ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ರಸಗೊಬ್ಬರ ಖರೀದಿಗೆ 65 ಸಾವಿರ ಕೋಟಿ ರೂ. ಸಬ್ಸಿಡಿ
ಆರ್ಥಿಕತೆ ಉತ್ತೇಜನ ನೀಡುವ ಸಲುವಾಗಿ ರಸಗೊಬ್ಬರ ಖರೀದಿಸಲು ರೈತರಿಗೆ 65 ಸಾವಿರ ಕೋಟಿ ರೂ. ಬೃಹತ್ ಸಬ್ಸಿಡಿಯನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. “65 ಸಾವಿರ ರೂ. ಸಬ್ಸಿಡಿ ಅನುದಾನವು ರೈತರಿಗೆ ಸಾಕಷ್ಟು ರಸಗೊಬ್ಬರ ಪೂರೈಕೆಯ ಖಾತ್ರಿ ನೀಡಲಿದೆ. ಅಲ್ಲದೆ, ಮುಂದಿನ ಬೆಳೆ ಋತುವಿನಲ್ಲಿ ಸಮಯೋಚಿತವಾಗಿ ರಸಗೊಬ್ಬರ ಖರೀದಿಸಲು ಅನುಕೂಲ ಮಾಡಿಕೊಡಲಿದೆ’ ಎಂದು ತಿಳಿಸಿದ್ದಾರೆ.
7 ಸಂಸ್ಥೆಗಳ ಷೇರು ಏರಿಕೆ: 65 ಸಾವಿರ ಕೋಟಿ ರೂ. ಸಬ್ಸಿಡಿ ಘೋಷಿಸುತ್ತಿದ್ದಂತೆ ಇತ್ತ ಷೇರು ಮಾರು ಕಟ್ಟೆಯಲ್ಲಿ 7 ರಸಗೊಬ್ಬರ ಸಂಸ್ಥೆಗಳ ಷೇರುಗಳು 0.87ರಿಂದ ಶೇ.6.56ರವರೆಗೆ ಏರಿಕೆಯಾಗಿದೆ. ಮಂಗಳೂರು ಕೆಮಿಕಲ್ಸ್ ಆ್ಯಂಡ್ ಫರ್ಟಿಲೈಸರ್ಸ್‌ನ ಷೇರುಗಳು ಶೇ.6.56, ಫರ್ಟಿಲೈಸರ್ಸ್ ಆ್ಯಂಡ್ ಕೆಮಿಕಲ್ಸ್ ಟ್ರಾವಂಕೋರ್- ಶೇ.3.63ಕ್ಕೆ, ದೀಪಕ್ ಫರ್ಟಿಲೈರ್ಸ್ ಆ್ಯಂಡ್ ಪೆಟ್ರೋ ಕೆಮಿಕಲ್ಸ್ – ಶೇ.2.24ಕ್ಕೆ, ರಾಷ್ಟ್ರೀಯ ಫರ್ಟಿಲೈಸರ್ಸ್‌ನ ಷೇರುಗಳ ಬೆಲೆ ಶೇ.1.89ಕ್ಕೆ ಏರಿಕೆಯಾಗಿ ಮುಂಚೂಣಿಯಲ್ಲಿವೆ.
ತೆರಿಗೆ ವಿನಾಯಿತಿ: ಮನೆ ಖರೀದಿಸುವವರಿಗೆ ಲಾಭ
ಹಬ್ಬದ ಋತುವಿನಲ್ಲಿ ಬೇಡಿಕೆ ಹೆಚ್ಚುವಂತೆ ಮಾಡಿ, ರಿಯಲ್ ಎಸ್ಟೇಟ್ ವಲಯಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರಕಾರವು ಮನೆ ಖರೀದಿಸುವವರು ಮತ್ತು ರಿಯಲ್ ಎಸ್ಟೇಟ್ ಡೆವಲಪರ್‌ಗಳಿಗೆ ಆದಾಯ ತೆರಿಗೆ ರಿಲೀಫ್ ಘೋಷಿಸಿದೆ. ಅದರಂತೆ, 2 ಕೋಟಿ ರೂ. ಮೌಲ್ಯದವರೆಗಿನ ರಿಯಲ್ ಎಸ್ಟೇಟ್ ಮಾರಾಟ(ಮನೆಗಳ ಆರಂಭಿಕ ಮಾರಾಟ)ಗಳಿಗೆ ಸರ್ಕಲ್ ರೇಟ್(ಮಾರ್ಗಸೂಚಿ ದರ) ಮತ್ತು ಒಪ್ಪಂದದ ಮೌಲ್ಯದ ನಡುವಿನ ವ್ಯತ್ಯಾಸವನ್ನು ಈಗಿರುವ ಶೇ.10ರಿಂದ ಶೇ.20ಕ್ಕೇರಿಸಲಾಗಿದೆ. ಈ ಮೊತ್ತಕ್ಕೆ ತೆರಿಗೆ ವಿನಾಯ್ತಿಯ ಕೊಡುಗೆ ದೊರೆಯಲಿದ್ದು, ಅದು 2021ರ ಜೂ.30ರವರೆಗೆ ಲಭ್ಯವಿರಲಿದೆ. ಈ ಸೌಲಭ್ಯದಿಂದಾಗಿ, ಮಾರಾಟವಾಗದೇ ಉಳಿದಿರುವ ಆಸ್ತಿಪಾಸ್ತಿಗಳು ಬೇಗನೆ ಮಾರಾಟವಾಗಲಿವೆ, ಮನೆ ಖರೀದಿದಾರರಿಗೆ ಕಡಿಮೆ ವೆಚ್ಚಕ್ಕೆ ಮನೆ ಸಿಗಲಿದೆ.
ಆವಾಸ ಯೋಜನೆಗೆ ಹೆಚ್ಚುವರಿ ಮೊತ್ತ: ಇದೇ ವೇಳೆ, ರಿಯಲ್ ಎಸ್ಟೇಟ್ ಯೋಜನೆಗಳನ್ನು ಪೂರ್ಣಗೊಳಿಸಲು ನೆರವಾಗುವಂತೆ 18 ಸಾವಿರ ಕೋಟಿ ರೂ.ಗಳ ಹೆಚ್ಚುವರಿ ಮೊತ್ತವನ್ನು ನಗರ ಗೃಹ ನಿರ್ಮಾಣ ಯೋಜನೆಗಳಿಗೆ ನೀಡುವುದಾಗಿ ಸಚಿವೆ ನಿರ್ಮಲಾ ಘೋಷಿಸಿದ್ದಾರೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯ 2020-21ರ ಬಜೆಟ್ ಅಂದಾಜಿಗಿಂತ ಹೆಚ್ಚುವರಿಯಾಗಿ 18 ಸಾವಿರ ಕೋಟಿ ರೂ. ಒದಗಿಸಲಾಗುತ್ತದೆ. ಇದರಿಂದಾಗಿ 12 ಲಕ್ಷ ಮನೆಗಳ ನಿರ್ಮಾಣ ಕಾರ್ಯ ಆರಂಭವಾಗಲು ಮತ್ತು 18 ಲಕ್ಷ ಮನೆಗಳ ಕಾಮಗಾರಿ ಪೂರ್ಣಗೊಳ್ಳಲು ನೆರವಾಗಲಿದೆ ಎಂದೂ ನಿರ್ಮಲಾ ಹೇಳಿದ್ದಾರೆ.
ಕೈಗಾರಿಕಾ ಉತ್ಪಾದನೆ ಹೆಚ್ಚಳ
ಕಳೆದ 7 ತಿಂಗಳಲ್ಲೇ ಮೊದಲ ಬಾರಿಗೆ ಸೆಪ್ಟಂಬರ್‌ನಲ್ಲಿ ಭಾರತದ ಕೈಗಾರಿಕಾ ಉತ್ಪಾದನೆ ಏರಿಕೆ ಕಂಡಿದೆ. ಆಗಸ್ಟ್‌ನಲ್ಲಿ ಶೇ.7.4ರಷ್ಟು ಕುಸಿತ ಕಂಡಿದ್ದ ಕೈಗಾರಿಕಾ ಉತ್ಪಾದನೆ ಸೂಚ್ಯಂಕ ಸೆಪ್ಟಂಬರ್‌ನಲ್ಲಿ ಶೇ.0.2ರ ಅಲ್ಪ ಪ್ರಗತಿ ದಾಖಲಿಸಿದೆ. ಇನ್ನೊಂದೆಡೆ, ಆಹಾರ ಉತ್ಪನ್ನಗಳ ಬೆಲೆ ಏರಿಕೆಯ ಪರಿಣಾಮವಾಗಿ, ಅಕ್ಟೋಬರ್ ತಿಂಗಳ ಚಿಲ್ಲರೆ ಹಣದುಬ್ಬರ ಶೇ.7.61ಕ್ಕೇರಿದೆ. ಸೆಪ್ಟಂಬರ್‌ನಲ್ಲಿ ಇದು ಶೇ.7.27 ಹಾಗೂ ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಶೇ.4.62 ಆಗಿತ್ತು ಎಂದು ಸರಕಾರದ ಅಂಕಿಅಂಶ ಹೇಳಿದೆ.
ತಾಂತ್ರಿಕ ಹಿಂಜರಿತಕ್ಕೆ ಕಾಲಿಟ್ಟಿತ್ತು ಭಾರತ
ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತದ ಆರ್ಥಿಕತೆ 2020-21ರ ಮೊದ ಲಾರ್ಧದಲ್ಲಿ ಹಿಂದೆಂದೂ ಕೇಳರಿಯದ “ತಾಂತ್ರಿಕ ಹಿಂಜರಿತ’ಕ್ಕೆ ಪ್ರವೇಶ ಪಡೆದಿತ್ತು ಎಂದು ಆರ್‌ಬಿಐನ ಉಪ ಗವರ್ನರ್ ಮೈಕೆಲ್ ಪಾತ್ರಾ ಸೇರಿದಂತೆ ಪ್ರಮುಖ ಆರ್ಥಿಕ ತಜ್ಞರ ತಂಡ ವಸ್ತುಸ್ಥಿತಿ ತೆರೆದಿಟ್ಟಿದೆ. ಎಪ್ರಿಲ್‌ನಿಂದ ಮಾರ್ಚ್ ವರೆಗೆ ಆರ್ಥಿಕತೆ ಶೇ.24ರಷ್ಟು ಕುಸಿತ ಕಂಡಿತ್ತು. ಈ ಆರ್ಥಿಕ ಅಧಃಪತನ ಮೊದಲ ಅರ್ಧದ ಕೊನೆಯ ತಿಂಗಳು ಸೆಪ್ಟಂಬರ್‌ನಲ್ಲಿ ಶೇ.8.6ಕ್ಕೆ ನಿಂತಿದೆ. ಸಾಕಷ್ಟು ಕಂಪೆನಿಗಳು ವೆಚ್ಚ ಕಡಿತಗೊಳಿಸಲು ಕೈಗೊಂಡ ಕ್ರಮಗಳಿಂದಾಗಿ, ಮಾರಾಟವೂ ಕುಸಿತ ಕಂಡು ಈ ಸ್ಥಿತಿ ನಿರ್ಮಾಣವಾಗಿತ್ತು ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
Govt Employees: 8ನೇ ವೇತನ ಆಯೋಗ ಶಿಫಾರಸು ಜಾರಿಯಾದರೆ ಕನಿಷ್ಠ ವೇತನ 51000 ರೂ.!
Winter Session: ಸಂಸತ್ ಅಧಿವೇಶನ ನಾಡಿದ್ದಿಂದ:”ವಕ್ಫ್’ ವಿಧೇಯಕ ಮಂಡನೆ?
Election Results: ಝಾರ್ಖಂಡ್, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?
Adani ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್?
MUST WATCH
ಹೊಸ ಸೇರ್ಪಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.