ಸಂತ್ಯಾಗ ನಿಂತ ಸೈಕಲ್ ಕಬೀರ ಡಾ| ಐರಸಂಗ
| 4500 ಕವಿತೆಗಳ ಸರದಾರ | ಜನಮಾನಸದ ಮಧ್ಯೆ ಬೆಳೆದ ಕವಿ | ಸರಳತೆಯ ಸಾಂಗತ್ಯ | 49 ಕವನ ಸಂಕಲನ
Team Udayavani, Nov 14, 2020, 2:22 PM IST
ಇವರು ಸಾಮಾನ್ಯರಲ್ಲಿ ಅಸಾಮಾನ್ಯರು, ವ್ಯಾಕರಣದಲ್ಲಿ ದೊಡ್ಡ ಕುಲಕರ್ಣಿಗಳನ್ನು ಮೀರಿಸಿದವರು, ಛಂದಸ್ಸಿನ ವಿಚಾರದಲ್ಲಿ ಇವರು ಚಂದಮಾಮಾ, ಗುಣದಲ್ಲಿ ಮುಗ್ಧತೆ, ಸರಳ ಜೀವನದಲ್ಲಿ ಬಾಪುನೇ ಇವರಿಗೆ ಆದರ್ಶ, ಓದಿನಲ್ಲಿ ದೈತ್ಯ, ಬರಹದಲ್ಲಿ ನೈಪುಣ್ಯತೆ, ಇವರು ಗೌರವದಿಂದಲೇ ಡಾಕ್ಟರ್ ಆದರು, ಬರೆದು ಬರೆದು ಆಶುಕವಿಯಾದರು. ಒಟ್ಟಿನಲ್ಲಿ ಧಾರವಾಡಕ್ಕೆ ಧಾರವಾಡವೇ ಇವರ ಕವಿತ್ವ ಕೊಂಡಾಡುವಂತಾದರು.
ಹೌದು…, ಹೆಸರು ವೀರಭದ್ರನಾದರೂ ಅವರ ಗುಣಗಳು ಮಾತ್ರ ಅಪ್ಪಟ ನಂದೀಶನದ್ದು. ಹೀಗಾಗಿಯೇ ಇರಬೇಕು, ಐರಸಂಗ ಅವರು 91 ವರ್ಷ ಬದುಕಿದರೂ ಒಬ್ಬನೇ ಒಬ್ಬ ವ್ಯಕ್ತಿ, ಕವಿ, ನಾಟಕಕಾರ, ಸಂಗೀತಗಾರ ಅವರ ಬಗ್ಗೆ ಒಂದೇ ಒಂದು ಬಾರಿಯೂ ಅಪಸ್ವರದ ಮಾತಾಡಿದ್ದಿಲ್ಲ.
ದ.ರಾ. ಬೇಂದ್ರೆ ಅವರೇ ಇವರ ಕವಿತ್ವಕ್ಕೆ ದಂಗಾಗಿ ಹೋಗಿದ್ದರು. ಡಾ| ಆಮೂರ, ಕುರ್ತಕೋಟಿ, ಪ್ರೊ|ಚಂಪಾ, ಡಾ| ಕಂಬಾರ, ಡಾ| ಕಾರ್ನಾಡ, ಡಾ| ಗಿರಡ್ಡಿ, ಡಾ| ಪಟ್ಟಣಶೆಟ್ಟಿ ಹೀಗೆ ಎಲ್ಲಾ ಡಾಕ್ಟರ್‌ಗಳಿಗೂ ಡಾಕ್ಟರೇಟ್ ಬರುವ ಮುಂಚೆಯೇ ಇವರು ಸೈಕಲ್ ಮೇಲೆ ಕುಳಿತುಕೊಂಡೇ ಪಿಎಚ್‌ಡಿ ಪದವಿಗೆ ಸಾಕಾಗಿ ಉಳಿಯುವಷ್ಟು ಜನಮನದ ಕವಿತೆಗಳನ್ನು ಗೀಚಿ ಹಾಕಿದ್ದರು.
ಸಂತ್ಯಾಗ ನಿಂತ ಕಬೀರ: ಕಾವ್ಯ ಹುಟ್ಟುವುದಕ್ಕೆ ಕವಿಗಳು ನದಿ, ಸರೋವರ, ಸುಂದರ ತಾಣಗಳು, ಪ್ರವಾಸಿ ತಾಣಗಳತ್ತ ಪ್ರಯಾಣ ಬೆಳೆಸುತ್ತಾರೆ. ಅಷ್ಟೇಯಲ್ಲ, ಹೀಗೆ ಪ್ರಯಾಣ ಮಾಡಿದಾಗೆಲ್ಲ ಅವರ ಅನುಭವಗಳನ್ನು ತಮ್ಮ ಸಾಹಿತ್ಯದ ಭಾಗವಾಗಿಸಿಕೊಳ್ಳುತ್ತಾರೆ. ಆದರೆ ಡಾ| ಐರಸಂಗ ಅವರು ಮಾತ್ರ 91 ವರ್ಷಗಳ ಕಾಲ ಜೀವಿಸಿದ್ದರೂ ಯಾವ ದೇಶ, ವಿದೇಶ, ಹೊರರಾಜ್ಯಗಳಿಗೂ ಪ್ರವಾಸ ಮಾಡಿ ಕವಿತೆ, ಸಾಹಿತ್ಯ ರಚಿಸಿದವರಲ್ಲ. ಅವರು ಜನಮನದ ಜೊತೆ ಜೋಕಾಲಿ ಆಡಿದವರು. ಅವರ ಅನುಭವ ಏನಿದ್ದರೂ ಧಾರವಾಡ, ಹುಬ್ಬಳ್ಳಿ, ಹೆಚ್ಚೆಂದರೆ ತಾಯಿ ಊರು ರಾಣಿಬೆನ್ನೂರು.
ಧಾರವಾಡದ ಎಲ್ಲಾ ಧೀಮಂತ ಮತ್ತು ಶಿಷ್ಟ ಕವಿಗಳು, ಸಾಹಿತಿಗಳು ವಿಶ್ವದ ಶ್ರೇಷ್ಠ ಸಾಹಿತ್ಯವನ್ನು ಓದಿಕೊಂಡು ಅದನ್ನು ಕನ್ನಡದ ಅವತರಣಿಕೆಯಲ್ಲಿ ಅನುಸಂಧಾನ ಮಾಡುವ ಪ್ರಯತ್ನದಲ್ಲಿದ್ದಾಗಲೂ, ಐರಸಂಗರು ಮಾತ್ರ ಜನಮನದ ಭಾವಲೀಲೆಗಳನ್ನು ತಮ್ಮ ಸಣ್ಣ ಸಣ್ಣ ಸಾಹಿತ್ಯದ ತುಣುಕುಗಳಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡುತ್ತಿದ್ದರು. ಜನರೊಂದಿಗೆ ಇದ್ದುಕೊಂಡೇ ಕರ್ನಾಟಕ ವಿದ್ಯಾವರ್ಧಕ ಸಂಘ, ಸಂಗೀತ ಕಛೇರಿಗಳು, ಬೇಂದ್ರೆ ಭವನ, ಕವಿವಿ ವಿಚಾರ ಸಂಕಿರಣಗಳು, ಸಾಹಿತ್ಯ ಸಂವಾದ ವೇದಿಕೆಗಳಲ್ಲಿ ಹಿರಿಯ ಸಾಹಿತಿಗಳಿಗೆ ಸಮಬಲದ ಸಾಹಿತ್ಯ ಕುಸ್ತಿಯನ್ನಾಡುತ್ತಿದ್ದರು.
ಸೈಕಲ್ ಎಂಬ ಸಂಗಾತಿ: ವಿ.ಸಿ. ಐರಸಂಗರಿಗೂ ಸೈಕಲ್‌ಗೂ ಬಿಡದ ನಂಟು. ಅವರ ತಂದೆ ಕುಲಕರ್ಣಿಯಾಗಿದ್ದರು. ಅವರು ಗ್ರಾಮಗಳನ್ನು ಸೈಕಲ್ ಮೇಲೆ ಸುತ್ತಾಡುವಾಗಲೇ ಇವರಿಗೆ ಸೈಕಲ್ ಗೀಳಿತ್ತು. ಹೀಗಾಗಿ ತಾವು ರೈಲ್ವೆ ಇಲಾಖೆ ನೌಕರರಾಗಿ ಸೇವೆ ಸಲ್ಲಿಸುವಾಗಲೂ ಅವರು ಸೈಕಲ್ ಅನ್ನೇ ಬಳಸುತ್ತಿದ್ದರು. ನಿವೃತ್ತಿಯಾದ ಮೇಲಂತೂ ಸೈಕಲ್ ಬಿಟ್ಟುಇಳಿದಿದ್ದು ತುಂಬಾ ಕಡಿಮೆಯೇ. ಮಲ್ಲಕಂಬ, ಈಜಾಟ, ಕುಸ್ತಿ, ಓಟ, ಕಾವ್ಯ, ಸಂಗೀತ, ನಾಟಕ, ತಬಲಾ, ಹಾರ್ಮೋನಿಯಂ ಹೀಗೆ ವಿ.ಸಿ. ಐರಸಂಗರು ಚಿಕ್ಕಂದಿನಿಂದಲೂ ಬಹುಮುಖ ಪ್ರತಿಭೆಯಾಗಿ ಬೆಳೆದವರು. 1940-50ರ ದಶಕದ ಧಾರವಾಡ ಹೆಚ್ಚು ಕಡಿಮೆ ಹಳ್ಳಿಯೇ ಆಗಿತ್ತು. ಇಲ್ಲಿನ ಪರಿಸರಕ್ಕೆ ಅವರ ಓಡಾಟಕ್ಕೆ ಆಗ ಸೈಕಲ್ ಬಿಟ್ಟರೆ ಬೇರೆ ಬಸ್, ರೈಲು, ಲಾರಿಗಳು ಇದ್ದವು. ಆದರೆ ಅವರು ಮಾತ್ರ ಸೈಕಲ್ ಮೇಲೆಯೇ ಓಡಾಡುತ್ತಿದ್ದರು. ಕಾವ್ಯ ಹುಟ್ಟುತ್ತದೆ, ಬರೆಯಬೇಕೆಂದು ಅನ್ನಿಸಿದ ತಕ್ಷಣವೇ ಸೈಕಲ್‌ನ ಹಿಂದಿನ ಗಾಲಿ ಬ್ರೇಕ್ ಹಿಸುಕಿ ನಿಲ್ಲಿಸಿ, ಡಬಲ್ ಸ್ಟ್ಯಾಂಡ್‌ಗೆ ಒದಕಿ ಕೊಟ್ಟು ಸುಮ್ಮನೆ ನಿಲ್ಲುವಂತೆ ಸೈಕಲ್‌ಗೆ ಸನ್ನೆ ಮಾಡಿ ಬಿಡುತ್ತಿದ್ದರು. ಕಿಸೆಯಲ್ಲಿನ ಪೆನ್ನು-ಪ್ಯಾಡು ಹೊರಬಂದರಾಯಿತು, ಐದೋ ಹತ್ತೋ ಸುಂದರ ಸಾಲುಗಳು ರಚನೆಯಾಗುತ್ತಿದ್ದವು. ಅದಕ್ಕಾಗಿಯೇ ಅವರಿಗೆ ಸೈಕಲ್ ಸಂಗಾತಿಯಾಗಿತ್ತು.
ಜನಮಾನಸದಲ್ಲಿ ನಡೆಯುವ ವಿಚಾರಗಳೇ ಕವಿತೆಯ ಒಡಲಾಳ : ವಿ.ಸಿ. ಐರಸಂಗ ಸದಾ ಜನಮಾನಸದಲ್ಲಿ ಓಡಾಡುತ್ತಿದ್ದರು. ಧಾರವಾಡದ ಲೈನ್ ಬಝಾರ್, ಸುಭಾಷ ರಸ್ತೆ, ಎಲ್ ಇಎ ಕ್ಯಾಂಟೀನ್, ಹೊಸಯಲ್ಲಾಪುರ, ಬಸಪ್ಪ ಚೌಕ್‌ನಲ್ಲಿ ಸೈಕಲ್ ಮೇಲೆ ಸುತ್ತಾಡುತ್ತಿದ್ದರು. ಅತ್ತ ಜನಮಾನಸದಲ್ಲಿ ನಡೆಯುವ ವಿಚಾರಗಳನ್ನು ಕವಿತೆಯಲ್ಲಿ ಹಿಡಿದಿಟ್ಟುಕೊಂಡು ಬಿಳಿ ಕಟ್ಟಡ ಮತ್ತು ಕೆಂಪು ಕಟ್ಟಡ (ಕರ್ನಾಟಕ ವಿಶ್ವವಿದ್ಯಾಲಯ ಮತ್ತು ಕರ್ನಾಟಕ ಕಲಾ ಮಹಾವಿದ್ಯಾಲಯ)ದಲ್ಲಿ ಓದಿ, ಪಾಠ ಮಾಡುವ ಹಿರಿಯ ಸಾಹಿತ್ಯ ವಲಯವೇ ನಿಬ್ಬೆರಗಾಗುವಂತಹ ಸಾಹಿತ್ಯದ ಸಾಲುಗಳನ್ನು ಕಟ್ಟಿಕೊಂಡು ಅವರ ಮುಂದೆ ನಿಂತು ಮುಗುಳ್ನಗೆ ಬೀರುತ್ತಿದ್ದರು. ದೊಡ್ಡ ಕವಿಗೋಷ್ಠಿಗಳಲ್ಲಿ ಎಷ್ಟೋ ಸಲ ಡಾಕ್ಟರೇಟ್ ಪದವಿ ಪಡೆದ ಕವಿಗಳು ಐರಸಂಗರ ಕವಿತೆ ಓದಿದ್ದನ್ನು ನೋಡಿ ತಮ್ಮ ಕವಿತೆಗಳ ತುಲನೆ ಮಾಡಿ ಅವರಿಗೆ ಶರಣೆಂದಿದ್ದು ಉಂಟು.
ಸ್ಮೃತಿ ಪಟದಲ್ಲಿ ಕವಿತ್ವದ ಸಾಲು : ಕವಿತ್ವದ ಸಾಲುಗಳನ್ನು ಸದಾ ಸ್ಮೃತಿ ಪಟದಲ್ಲಿ ಇಟ್ಟುಕೊಳ್ಳುವುದಷ್ಟೇ ಅಲ್ಲ, ಮುದ್ರಿಸಿ ಕೊಂಡು ಒಂದು ಕೈ ಚೀಲದಲ್ಲಿ ಹಾಕಿಕೊಂಡು ಓಡಾಡುತ್ತಿದ್ದರು.ಯಾರೇ ಕಾವ್ಯಪ್ರಿಯರು ಸಿಕ್ಕರೂ ಅವರನ್ನು ಮಾತನಾಡಿಸಿ ಅವರ ಕೈಗೊಂದು ಕವಿತ್ವದ ಗುರುತಾಗಿ ಕವನ ಸಂಕಲನವನ್ನಿಟ್ಟು ಬೊಚ್ಚುಬಾಯಿಯಿಂದ ಅಚ್ಚಳಿಯದೇ ನೆನಪಿಡುವ ಒಂದು ಮುಗುಳ್ನಗೆ ನಕ್ಕು ಬಿಡುತ್ತಿದ್ದರು.
ಡಾ| ವಿ.ಸಿ. ಐರಸಂಗ ಅವರಿಗೆ ಕವಿವಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು. ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. ಡಾ| ಐರಸಂಗ ಸಾವಿರಾರು ಕವನಗಳನ್ನು ಬರೆದಿದ್ದರು. ಸೈಕಲ್ ಕವಿ ಅಂತಲೇ ಪ್ರಸಿದ್ಧಿಯಾಗಿದ್ದರು. ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಸೈಕಲ್ ಮೇಲೆಯೇ ಬಂದಿದ್ದರು. ಅವರ ಅಗಲಿಕೆಯಿಂದ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. –ಪ್ರಹ್ಲಾದ ಜೋಶಿ, ಕೇಂದ್ರ ಸಚಿವ
ಹಲವು ದಶಕಗಳಿಂದ ಆಕಾಶವಾಣಿ ಮೂಲಕ ಕೇಳುಗರಿಗೆ ಪರಿಚಿತರಾಗಿದ್ದ ಕವಿ ವಿ.ಸಿ. ಐರಸಂಗ ಅವರು ಸಹೃದಯರ ಮನ ಗೆದ್ದಿದ್ದರು. ಪ್ಯಾಕೆಟ್ ಪುಸ್ತಕಗಳನ್ನು ಸೈಕಲ್ ಮೂಲಕ ಮಾರಾಟ ಮಾಡುತ್ತ, ಮಲ್ಲಕಂಬದಲ್ಲಿಯೂ ಸಾಧನೆ ಮಾಡುತ್ತ ಮಾದರಿ ಬದುಕು ನಡೆಸಿದ್ದರು. ಅವರ ನಿಧನ ನಾಡಿಗೆ ತುಂಬಲಾರದ ನಷ್ಟವಾಗಿದೆ. –ಜಗದೀಶ ಶೆಟ್ಟರ, ಜಿಲ್ಲಾ ಉಸ್ತುವಾರಿ ಸಚಿವ
1960-70ರ ದಶಕದಲ್ಲಿ ಧಾರವಾಡ ಆಕಾಶವಾಣಿ ಐರಸಂಗರ ಕಾವ್ಯ ಪ್ರಚಾರಕ್ಕೆ ದೊಡ್ಡ ವೇದಿಕೆಯಾಗಿತ್ತು. ವಂದನ, ಅರ್ಪಣಾ, ಭಾವ ಸಂಗಮ ಸೇರಿದಂತೆ ಪ್ರತಿದಿನ ಕನಿಷ್ಠ ಎರಡ್ಮೂರು ಐರಸಂಗರ ಕವನಗಳು ಪ್ರಸಾರವಾಗುತ್ತಿದ್ದವು. ಅವರ ಆಶುಕವಿತ್ವ ಆಕಾಶವಾಣಿಗೆ ದೊಡ್ಡ ಆಸ್ತಿಯಾಗಿತ್ತು. –ಡಾ| ಶಶಿಧರ ನರೇಂದ್ರ, ಧಾರವಾಡ ಆಕಾಶವಾಣಿ ಉದ್ಘೋಷಕರು
– ಡಾ| ಬಸವರಾಜ ಹೊಂಗಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP ಡಬಲ್ ಗೇಮ್; ವಕ್ಫ್ ಆಸ್ತಿ ರಕ್ಷಣೆ ಬಗ್ಗೆ ಬಿಜೆಪಿ ಪ್ರಣಾಳಿಕೆಯಲ್ಲಿ ಉಲ್ಲೇಖ: ಸಿದ್ದು
Hubli: ಅಪ್ರಾಪ್ತೆಯೊಂದಿಗೆ ಅನುಚಿತ ವರ್ತನೆ: ಮುಖ್ಯ ಪೇದೆ ವಿರುದ್ದ ಪೋಕ್ಸೋ ಕೇಸ್
Hubli: ಹಣಕಾಸು ಆಯೋಗದ ಅನ್ಯಾಯದ ಬಗ್ಗೆ ಬಿಜೆಪಿಯರಿಂದ ಮೌನ: ಸಿದ್ದರಾಮಯ್ಯ ಕಿಡಿ
Hubli: ಜನರ ದಿಕ್ಕು ತಪ್ಪಿಸಲು ಬಿಜೆಪಿಯಿಂದ ವಕ್ಫ್ ಹೋರಾಟ: ಸಿಎಂ ಸಿದ್ದರಾಮಯ್ಯ
By Election: ಶಿಗ್ಗಾವಿ ಸಮರ: ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಮುಖಂಡರ ಸಭೆ
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.