ಬೆದ್ರೋಡಿ ಡಾಮರು ಮಿಶ್ರಣ ಘಟಕ: ಪರಿಸರ ಮಾಲಿನ್ಯ ಸ್ಥಳೀಯರಿಂದ ಆರೋಪ
Team Udayavani, Nov 26, 2020, 3:05 AM IST
ಉಪ್ಪಿನಂಗಡಿ: ಬೆದ್ರೋಡಿ ಜನತಾ ಕಾಲನಿ ಸಮೀಪ ಕೆಲವು ದಿನಗಳಿಂದ ಡಾಮರು ಮಿಶ್ರಣ ಘಟಕವೊಂದು ಕಾರ್ಯಾಚರಿಸುತ್ತಿದ್ದು, ಇದರಿಂದಾಗಿ ಪರಿಸರ ಮಾಲಿನ್ಯಗೊಂಡು ಜನರ ನೆಮ್ಮದಿಯ ಬದುಕಿಗೆ ಭಂಗ ಉಂಟಾಗಿದೆ. ಮನೆ ಮಂದಿಯಲ್ಲಿ ರೋಗ ಭೀತಿ ಕಾಡತೊಡಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಡಾಮರು ಮಿಶ್ರಣ ಮಾಡುವ ವೇಳೆ ಹೊರ ಬರುವ ಮಲಿನ ಹೊಗೆ ಹಾಗೂ ಜಲ್ಲಿ ಹುಡಿಯ ಧೂಳು ಪರಿಸರದಲ್ಲಿ ಹರಡಿ ಉಸಿರಾಟಕ್ಕೂ ತೊಡಕು ಉಂಟು ಮಾಡುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ನಾದುರಸ್ತಿಯಲ್ಲಿರುವ ಯಂತ್ರ
ಡಾಮರು ಮಿಶ್ರಣ ಮಾಡುವ ಯಂತ್ರ ಹಳೆಯದಾಗಿದ್ದು, ನಾದುರಸ್ತಿಯಲ್ಲಿದ್ದು ಅದರ ಚಿಮಿಣಿಯ ಮೂಲಕ ಎತ್ತರಕ್ಕೆ ಹೋಗಬೇಕಾದ ಹೊಗೆ ಯಂತ್ರದ ಬುಡದಿಂದಲೇ ಹೊರ ಬರುತ್ತಿರುವುದರಿಂದ ಸಮಸ್ಯೆ ಎದುರಾಗಿದೆ. ಡಾಮರು ಮಿಶ್ರಣ ಘಟಕದಿಂದಾಗಿ ಇಲ್ಲಿನ ಕೆಲವರಲ್ಲಿ ಈಗಾಗಲೇ ಕೆಮ್ಮು ಕಾಣಿಸಿಕೊಳ್ಳಲಾರಂಭಿಸಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಪ್ರತಿಭಟನೆಯ ಎಚ್ಚರಿಕೆ
ಬೆದ್ರೋಡಿಯಲ್ಲಿ 2 ಡಾಮರು ಮಿಶ್ರಣ ಘಟಕ ಕಾರ್ಯಾಚರಿಸುತ್ತಿದ್ದು, ಬಹಳ ಹಿಂದಿನಿಂದಲೂ ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಆದರೆ ಈಚೆಗೆ ಪ್ರಾರಂಭವಾದ ಘಟಕದಿಂದ ಸಮಸ್ಯೆ ಮತ್ತಷ್ಟು ಜಟಿಲ ವಾಗಿದೆ, ಸಮಸ್ಯೆಯನ್ನು ಡಾಮರು ಮಿಶ್ರಣ ಘಟಕ ದದವರ ಗಮನಕ್ಕೆ ತಂದಿದ್ದು ಪರಿಹಾರ ಕಂಡುಕೊಳ್ಳದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥರು ಹೇಳಿದ್ದಾರೆ.
ಅಗತ್ಯ ಕ್ರಮ ಕೈಗೊಳ್ಳಬೇಕು
ಈ ಹಿಂದೆ 1 ಘಟಕ ಕಾರ್ಯಾಚರಿಸುತ್ತಿತ್ತು, ಇದೀಗ 2 ಘಟಕ ಆಗಿದೆ. ಪಂಚಾಯತ್ ಪರವಾನಿಗೆಯೂ ಪಡೆದಿಲ್ಲ, ಇನ್ನು ಘಟಕದಿಂದ ಪರಿಸರದಲ್ಲಿ ಆಗುವ ಹಾನಿಯ ಬಗ್ಗೆ ಹೇಳಿದರೂ ಕೇಳುವವರಿಲ್ಲದಂತಾಗಿದೆ. ಮಾಲಿನ್ಯ ತುಂಬಿದ ಗಾಳಿಯಿಂದಾಗಿ ಜನತೆ ರೋಗ ಭೀತಿ ಎದುರಿಸುವಂತಾಗಿದೆ. ಧೂಳು ಕೃಷಿಗೆ ಹಾನಿ ಉಂಟು ಮಾಡುತ್ತಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ.
-ಧನಂಜಯ ಬೆದ್ರೋಡಿ, ಮಾಜಿ ಅಧ್ಯಕ್ಷರು, ಗ್ರಾ. ಪಂ.ಬಜತ್ತೂರು
ಕ್ರಮ ಜರಗಿಸಲಾಗುವುದು
ಡಾಮರು ಮಿಶ್ರಣ ಘಟಕ ಕಳೆದ ಒಂದು ತಿಂಗಳಿಂದ ನಡೆಯುತ್ತಿದೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಪರಿಸರ ಮಾಲಿನ್ಯದ ಕುರಿತು ಗ್ರಾಮಸ್ಥರಿಂದ ಲಿಖೀತ ದೂರುಗಳು ಬಂದಲ್ಲಿ ಪರಿಶೀಲಿಸಿ ಕ್ರಮ ಜರಗಿಸಲಾಗುವುದು.
-ಪ್ರವೀಣ ಕುಮಾರ್, ಪಿಡಿಒ ಗ್ರಾ.ಪಂ.ಬಜತ್ತೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.