![1-dee](https://www.udayavani.com/wp-content/uploads/2025/02/1-dee-1-415x221.jpg)
![1-dee](https://www.udayavani.com/wp-content/uploads/2025/02/1-dee-1-415x221.jpg)
Team Udayavani, Nov 26, 2020, 6:05 AM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ಒಬ್ಬನೇ ಫಲಾನುಭವಿ; ಎರಡು ಕಡೆ ಸಂಧ್ಯಾ ಸುರಕ್ಷಾ ಪಿಂಚಣಿ ! ಇದು ಎಲ್ಲ ಸಮುದಾಯಗಳಲ್ಲಿ ಆರ್ಥಿಕವಾಗಿ ಹಿಂದುಳಿದಿರುವವರಿಗೆ ಸಾಮಾಜಿಕ ಭದ್ರತೆ ನೀಡುವ ಸಲುವಾಗಿ ರೂಪಿಸಿರುವ “ಸಂಧ್ಯಾಸುರಕ್ಷಾ’ ಸೇರಿದಂತೆ ವಿವಿಧ ಮಾಸಾಶನ ಯೋಜನೆಗಳಲ್ಲಿ ಆಗುತ್ತಿರುವ ಗೋಲ್‌ಮಾಲ್.
ವಿಶೇಷವೆಂದರೆ ಈ ಪಿಂಚಣಿ ಗೋಲ್‌ಮಾಲ್ ಪತ್ತೆಗೆ ನೆರವಾಗಿರುವುದು ಆಧಾರ್ ಕಾರ್ಡ್ ಜೋಡಣೆ. ಯೋಜನೆಯಲ್ಲಿ ದುರುಪಯೋಗವಾಗುತ್ತಿದೆ ಎಂಬ ಅನುಮಾನದ ಹಿನ್ನೆಲೆಯಲ್ಲಿ ಆಧಾರ್ ಕಾರ್ಡ್ ಜೋಡಣೆ ಮಾಡಿದಾಗ ಫಲಾನುಭವಿಗಳ ಹೆಸರು ಎರಡೆರಡು ಕಡೆ ಪಡಿತರ ಚೀಟಿಯಲ್ಲಿ ದಾಖಲಾಗಿರುವುದು ಪತ್ತೆಯಾಗಿದೆ. ರಾಜ್ಯದಲ್ಲಿ ಇಂತಹ 50 ಸಾವಿರ ನಕಲಿ ಫಲಾನುಭವಿಗಳು ಸಿಕ್ಕಿಬಿದ್ದಿದ್ದಾರೆ.
ಗೋಲ್‌ಮಾಲ್ ಹೇಗೆ?
ಉದಾಹರಣೆಗೆ ತುಮಕೂರಿನಲ್ಲಿರುವ ವ್ಯಕ್ತಿ ಅಲ್ಲಿ ಪಡೆದಿರುವ ಪಡಿತರ ಚೀಟಿಯಲ್ಲಿ ತನ್ನ ವೃದ್ಧ ತಂದೆ-ತಾಯಿ ಹೆಸರು ಸೇರ್ಪಡೆ ಮಾಡಿರುತ್ತಾನೆ. ಬಳಿಕ ಚಿಕ್ಕಬಳ್ಳಾಪುರ ಅಥವಾ ಕೋಲಾರದಲ್ಲಿನ ತನ್ನ ಸ್ವಗ್ರಾಮದಲ್ಲಿನ ಪಡಿತರ ಚೀಟಿಯಲ್ಲೂ ತಂದೆ-ತಾಯಿಯ ಹೆಸರು ಸೇರಿಸಿರುತ್ತಾನೆ. ಕೆಲವೆಡೆ ಮಧ್ಯವರ್ತಿಗಳು ಹಿರಿಯ ನಾಗರಿಕರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಮಾಸಾಶನ ಪಡೆಯುತ್ತಿದ್ದಾರೆ.
ಶೇ. 95.6 ಪೂರ್ಣ ಆಧಾರ್ ಜೋಡಣೆ ಕಾರ್ಯ ಶೇ. 95.6ರಷ್ಟು ಪೂರ್ಣಗೊಂಡಿದೆ. ಸಿಕ್ಕಿಬಿದ್ದಿರುವ 50 ಸಾವಿರ ಪ್ರಕರಣಗಳ ನೈಜತೆ ಪರಿಶೀಲನೆಗೆ ವಾರ್ಡ್, ಗ್ರಾಮ ಹಾಗೂ ತಾಲೂಕು ಹಂತದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಬ್ಯಾಂಕ್ ಅಕೌಂಟ್ ಲಿಂಕ್
ಶೇ. 100ರಷ್ಟು ಆಧಾರ್ ಜೋಡಣೆಯಾದ ತತ್‌ಕ್ಷಣ ಬ್ಯಾಂಕ್ ಖಾತೆಗೆ ಬಾಕಿ ಸಮೇತ ಮಾಸಾಶನ ಹಣ ತಲುಪಿಸಲು ಕ್ರಮ ಕೈಗೊಳ್ಳಲಾಗಿದೆ.
ಪಿಂಚಣಿ ಯೋಜನೆಗಳು
ರಾಜ್ಯದಲ್ಲಿ ಕಂದಾಯ ಇಲಾಖೆಯಡಿ ಜಾರಿಯಲ್ಲಿರುವ ವೃದ್ಧಾಪ್ಯ, ಸಂಧ್ಯಾಸುರಕ್ಷಾ, ನಿರ್ಗತಿಕ ವಿಧವಾ, ಮನಸ್ವಿನಿ, ಮೈತ್ರಿ ಯೋಜನೆಗಳನ್ನು ಜಾರಿಗೊಳಿಸಿ 600ರಿಂದ 1 ಸಾವಿರ ರೂ. ವರೆಗೆ ಮಾಸಾಶನ ನೀಡಲಾಗುತ್ತಿದೆ. ಒಟ್ಟು 49 ಲಕ್ಷ ಫಲಾನುಭವಿಗಳಿದ್ದಾರೆ. ಸಂಧ್ಯಾ ಸುರಕ್ಷಾ ಯೋಜನೆಯಡಿ 32.92 ಲಕ್ಷ ಫಲಾನುಭವಿಗಳಿದ್ದಾರೆ. 8.50 ಲಕ್ಷ ಅಂಗವಿಕಲರು, 29.21 ಲಕ್ಷ ದೇವದಾಸಿಯರು ಇದ್ದಾರೆ.
ಸಾವಿರಾರು ಪ್ರಕರಣಗಳಲ್ಲಿ ಮಾಸಾಶನ ಹಣ ಮಧ್ಯವರ್ತಿಗಳ ಪಾಲಾಗುತ್ತಿದೆ. ಹೀಗಾಗಿ ಆಧಾರ್ ಸಂಖ್ಯೆ ಜೋಡಣೆ, ಬ್ಯಾಂಕ್ ಖಾತೆ ಕಡ್ಡಾಯ ಮಾಡಿ ನೇರವಾಗಿ ಯಾರದೇ ಹಸ್ತಕ್ಷೇಪ ಇಲ್ಲದೆ ಖಾತೆಗೆ ಹಣ ಜಮಾವಣೆಯಾಗಲಿದೆ. ಅವರ ಮನೆ ಬಾಗಿಲಿಗೆ ಮಾಸಾಶನ ತಲುಪಿಸುವ ವ್ಯವಸ್ಥೆ ರೂಪಿಸಲಾಗುತ್ತಿದೆ.
– ಆರ್. ಅಶೋಕ್, ಕಂದಾಯ ಸಚಿವರು
- ಎಸ್. ಲಕ್ಷ್ಮೀನಾರಾಯಣ
You seem to have an Ad Blocker on.
To continue reading, please turn it off or whitelist Udayavani.