ಮುಖ್ಯಮಂತ್ರಿಗಳೇ ಗಮನಿಸಿ: ಪ್ರಸಿದ್ಧ ಮಹದೇಶ್ವರ ಬೆಟ್ಟದಲ್ಲಿ ಸುಸಜ್ಜಿತ ಆಸ್ಪತ್ರೆಯೇ ಇಲ್ಲ !
ಈಗಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಓರ್ವ ವೈದ್ಯರು ಮಾತ್ರ: ತುರ್ತುಚಿಕಿತ್ಸೆಗಾಗಿ ಚಿಕಿತ್ಸೆಗೆ 80 ಕಿ.ಮೀ. ದೂರ ಹೋಗಬೇಕು!
Team Udayavani, Nov 26, 2020, 7:34 AM IST
ಚಾಮರಾಜನಗರ: ರಾಜ್ಯದ ಪ್ರಸಿದ್ಧ ಯಾತ್ರಾ ಸ್ಥಳವಾದ ಮಲೆ ಮಹದೇಶ್ವರ ಬೆಟ್ಟದಲ್ಲಿ ಇಂದು(ನ.26) 110 ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನಡೆಯುತ್ತಿದೆ. ಭಕ್ತಾದಿಗಳ ಕಾಣಿಕೆಯಿಂದಾಗಿ ಪ್ರಾಧಿಕಾರಕ್ಕೆ ಬರುತ್ತಿರುವ ಆದಾಯದಿಂದಾಗಿ ದಿನೇ ದಿನೇ ಬೆಟ್ಟದಲ್ಲಿ ಕಟ್ಟಡಗಳ ಮೇಲೆ ಕಟ್ಟಡಗಳು ಏಳುತ್ತಲೇ ಇವೆ. ಆದರೇ ವಿಪರ್ಯಾಸವೆಂದರೆ ಇಂಥ ಪ್ರಸಿದ್ಧ ಕ್ಷೇತ್ರದಲ್ಲಿ ಸಮುದಾಯ ಆರೋಗ್ಯ ಕೇಂದ್ರವಿಲ್ಲ! ಒಳರೋಗಿಗಳಾಗಿ ಚಿಕಿತ್ಸೆ ಪಡೆಯಲು, ಬೆಟ್ಟದ ತೀವ್ರ ತಿರುವಿನಲ್ಲಿ 2 ಗಂಟೆ ಪ್ರಯಾಣ ಮಾಡಿ, 80 ಕಿ.ಮೀ. ದೂರ ಸಾಗಬೇಕು!
ಮಹದೇಶ್ವರ ಬೆಟ್ಟಕ್ಕೆ ಪ್ರತಿನಿತ್ಯ ಸರಾಸರಿ 4 ಸಾವಿರ ಜನ ಭಕ್ತಾದಿಗಳು ಭೇಟಿ ನೀಡುತ್ತಾರೆ. ಜಾತ್ರೆ ಸಂದರ್ಭಗಳಲ್ಲಿ ಪ್ರತಿ ನಿತ್ಯ 1 ಲಕ್ಷದಿಂದ 3 ಲಕ್ಷದವರೆಗೂ ಜನರು ಬರುತ್ತಾರೆ. ಒಟ್ಟಾರೆಯಾಗಿ ಪ್ರತಿ ವರ್ಷ 50 ಲಕ್ಷ ಜನರು ಬೆಟ್ಟಕ್ಕೆ ಭೇಟಿ ನೀಡುತ್ತಾರೆ.
ಮಲೆ ಮಹದೇಶ್ವರ ಗ್ರಾ.ಪಂ. ಹಾಗೂ ಗೋಪಿನಾಥಂ ಗ್ರಾ.ಪಂ.ನ ಒಟ್ಟು 29 ಹಳ್ಳಿಗಳ ವ್ಯಾಪ್ತಿಗೆ ಬೆಟ್ಟವೇ ಕೇಂದ್ರ ಸ್ಥಾನವಾಗಿದೆ. ಈ ವ್ಯಾಪ್ತಿಯಲ್ಲಿ 18 ಸಾವಿರ ಜನಸಂಖ್ಯೆಯಿದೆ. ಕಾಡಿನಲ್ಲಿರುವ ಈ ಕುಗ್ರಾಮಗಳ ಜನರ ಆರೋಗ್ಯದಲ್ಲಿ ತೊಂದರೆ ಕಾಣಿಸಿಕೊಂಡರೆ ಮಹದೇಶ್ವರ ಬೆಟ್ಟಕ್ಕೆ ಬರಬೇಕು.
ಇದನ್ನೂ ಓದಿ: ಮೂಲ-ವಲಸಿಗ ಫೈಟ್ ಜೋರು; ಸಂಪುಟ ಸರ್ಜರಿ ಮಾತುಗಳ ಬೆನ್ನಲ್ಲೇ ಹೊಸ ಬೆಳವಣಿಗೆ
ಬೆಟ್ಟದಲ್ಲಿ ಇರುವುದು ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ ಮಾತ್ರ! ಇಲ್ಲಿ ಒಬ್ಬ ಆಯುಷ್ ವೈದ್ಯರು, ಇಬ್ಬರು ನರ್ಸ್‌ಗಳಿದ್ದಾರೆ ಅಷ್ಟೇ. ಇಲ್ಲಿ ಏನಿದ್ದರೂ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಹೊರ ರೋಗಿ ಚಿಕಿತ್ಸೆ ಮಾತ್ರ ಲಭ್ಯ. ಹೆರಿಗೆಗೆ ದಾಖಲಾದರೆ ಅದು ನಾರ್ಮಲ್ ಡೆಲಿವರಿ ಆಗಬೇಕು. ಸಿಜೇರಿಯನ್ ಅಗತ್ಯಬಿದ್ದರೆ ಅಥವಾ ಇನ್ನಾವುದೇ ತುರ್ತು ಚಿಕಿತ್ಸೆಗೆ 80 ಕಿ.ಮೀ. ದೂರದಲ್ಲಿರುವ ಕೊಳ್ಳೇಗಾಲ ಅಥವಾ 60 ಕಿ.ಮೀ. ದೂರದಲ್ಲಿರುವ ತಮಿಳುನಾಡಿನ ಮೆಟ್ಟೂರಿಗೆ ಹೋಗಬೇಕು. ಬೆಟ್ಟದ ತೀವ್ರ ತಿರುವಿನ ಹಾದಿಯಲ್ಲಿ ತಲುಪಲು ಕನಿಷ್ಟ 3 ಗಂಟೆ ಬೇಕು. ಅಲ್ಲಿಯವರೆಗೆ ತುರ್ತು ಚಿಕಿತ್ಸೆಯ ಅಗತ್ಯವಿರುವವರ ಆರೋಗ್ಯ ಸ್ಥಿತಿ ವಿಷಮಿಸುತ್ತದೆ. ಖಾಸಗಿ ಆಸ್ಪತ್ರೆ ಸಹ ಇಲ್ಲಿಲ್ಲ!
2019ರ ಜನವರಿಯಿಂದ 2020ರ ಅಕ್ಟೋಬರ್‌ವರೆಗೆ ಆರೋಗ್ಯ ಇಲಾಖೆಯಿಂದ 410 ತಾಯಿ ಕಾರ್ಡ್ ರಿಜಿಸ್ಟರ್ ಆಗಿದೆ. ಸಿಜೇರಿಯನ್ ಅಗತ್ಯವಿದ್ದ 143 ಮಂದಿ ತಾಯಂದಿರು ಮೆಟ್ಟೂರಿಗೋ, ಕೊಳ್ಳೇಗಾಲ, ಚಾಮರಾಜನಗರ, ಮೈಸೂರಿಗೋ ಹೋಗಿದ್ದಾರೆ.
ಗ್ರಾಮಗಳ ಜನರದು ಒಂದು ಪಾಡಾದರೆ, ಬೆಟ್ಟಕ್ಕೆ ಬಂದ ಭಕ್ತಾದಿಗಳಿಗೆ ಹೃದಯಾಘಾತ, ಉಸಿರಾಟದ ತೊಂದರೆಯಂಥ ಗಂಭೀರ ಸಮಸ್ಯೆಗಳು ಕಾಣಿಸಿಕೊಂಡರೆ ತುರ್ತು ಚಿಕಿತ್ಸೆ ಲಭ್ಯವಿಲ್ಲದೇ ಮೆಟ್ಟೂರಿಗೆ ಹೋಗಬೇಕಾಗಿದೆ. ಇಂಥ ಅನೇಕ ಪ್ರಸಂಗಗಳು ಆಗಾಗ ಘಟಿಸುತ್ತಲೇ ಇವೆ.
ಇದನ್ನೂ ಓದಿ: ಫುಟ್ಬಾಲ್ ದಂತಕಥೆ ಡಿಗೋ ಮರಡೋನ ಇನ್ನಿಲ್ಲ
ಇಲ್ಲಿ ಇನ್ನೊಂದು ವಿಷಯ ಗಮನಿಸಬೇಕು. ಮಲೆ ಮಹದೇಶ್ವರ ಬೆಟ್ಟ ಇರುವ 29 ಗ್ರಾಮಗಳ ಜನರು ಕಾಡಿನಲ್ಲಿ, ಕಾಡಂಚಿನಲ್ಲಿದ್ದು, ರಕ್ಷಿತ ಅರಣ್ಯದಲ್ಲಿರುವ ಕಾರಣ ರಸ್ತೆಯಿಲ್ಲ. ಹೀಗಾಗಿ ಇಲ್ಲಿನ ಜನರು ಮಹದೇಶ್ವರ ಬೆಟ್ಟಕ್ಕೆ ರೋಗಿಗಳನ್ನು ಜೋಲಿಯಲ್ಲಿ ಹೊತ್ತು ತರುತ್ತಾರೆ. ಕೆಲವು ಗ್ರಾಮಗಳವರು ಬಾಡಿಗೆ ಜೀಪಿನಲ್ಲಿ ಬರುತ್ತಾರೆ. ಅಲ್ಲಿಂದ ಬರುವಾಗಲೇ ಸಾಕಷ್ಟು ಸಮಯವಾಗಿರುತ್ತದೆ. ರೋಗಿಗಳನ್ನು ಕರೆತರಲು ಬಾಡಿಗೆ ಜೀಪಿಗೆ 2000 ರೂ. ತೆರಬೇಕು. ಮತ್ತೆ ಇಲ್ಲಿಂದ 80 ಕಿ.ಮೀ. ದೂರ ವಾಹನದಲ್ಲಿ ಹೋಗಲು 3-4 ಸಾವಿರ ರೂ. ಬಾಡಿಗೆ ನೀಡಬೇಕು. ಬಡ ಜನರು ಈ ಹಣವನ್ನು ಹೊಂದಿಸಲಾಗದೇ ಎಷ್ಟೋ ವೇಳೆ ಆದದ್ದಾಗಲಿ ಎಂದು ನಿಸ್ಸಹಾಯಕರಾಗುತ್ತಾರೆ.
ಏನು ಮಾಡಬೇಕು?:
ಈಗಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಿ ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮಾಡಬೇಕೆಂದು ಇಲ್ಲಿನ ಜನರ ಒತ್ತಾಯ. ಇದಕ್ಕೆ ಆರೋಗ್ಯ ಇಲಾಖೆ ಸ್ಪಂದಿಸಿ ಬೆಟ್ಟದಲ್ಲಿ ಸಮುದಾಯ ಆರೋಗ್ಯ ಕೇಂದ್ರ ನಿರ್ಮಿಸುವ ಸಲುವಾಗಿ 10.30 ಕೋಟಿ ರೂ. ವೆಚ್ಚದಲ್ಲಿ ಅಂದಾಜು ಪಟ್ಟಿ ತಯಾರಿಸಿತ್ತು. ಆದರೆ ಆರೋಗ್ಯ ಇಲಾಖೆಯಲ್ಲಿ ಜಾಗ ಇಲ್ಲವಾದ ಕಾರಣ, 2 ಎಕರೆ ಜಾಗ ನೀಡುವಂತೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರಕ್ಕೆ 2016ರಲ್ಲಿ ಪತ್ರ ಬರೆಯಲಾಗಿತ್ತು. ಆದರೆ ಜಾಗ ಇಲ್ಲ ಎಂದು ಅಂದಿನ ಪ್ರಾಧಿಕಾರದ ಕಾರ್ಯದರ್ಶಿಯವರು ಹಿಂಬರಹ ನೀಡಿದ್ದಾರೆ. ಹೀಗಾಗಿ ಆರೋಗ್ಯ ಇಲಾಖೆ ಸಿದ್ಧವಿದ್ದರೂ, ಪ್ರಾಧಿಕಾರ ಜಾಗ ನೀಡದೇ ಇರುವುದರಿಂದ ಬೆಟ್ಟದಲ್ಲಿ ಸಮುದಾಯ ಆರೋಗ್ಯ ಕೇಂದ್ರ ನಿರ್ಮಿಸಲು ಹಿನ್ನೆಡೆಯಾಗಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇಂದು ಮಲೆ ಮಹದೇಶ್ವರ ಬೆಟ್ಟದಲ್ಲಿ 110 ಕೋಟಿ ರೂ.ಗಳ ವಿವಿಧ ಕಾಮಗಾರಿಗೆ ಶಂಕುಸ್ಥಾಪನೆ ಮಾಡುತ್ತಿದ್ದಾರೆ. 14 ಕೋಟಿ ರೂ.ಗಳ ಕಾಮಗಾರಿ ಉದ್ಘಾಟಿಸುತ್ತಿದ್ದಾರೆ. ಅತ್ಯಂತ ಅಗತ್ಯವಾದ ಆರೋಗ್ಯ ಸೇವೆ ನೀಡುವ ಸಮುದಾಯ ಆಸ್ಪತ್ರೆ ನಿರ್ಮಿಸಲು ಗಮನ ಹರಿಸಬೇಕೆಂಬುದು ಸ್ಥಳೀಯರ ಒತ್ತಾಯ. ಪ್ರಾಧಿಕಾರದಿಂದ ಜಾಗ ನೀಡಿದರೆ 29 ಗ್ರಾಮಗಳ 19 ಸಾವಿರ ಜನರಿಗೆ, ಮಹದೇಶ್ವರ ಬೆಟ್ಟಕ್ಕೆ ಬರುವ ಲಕ್ಷಾಂತರ ಭಕ್ತಾದಿಗಳಿಗೆ ಆರೋಗ್ಯ ಸೇವೆಗಳ ಸೌಲಭ್ಯ ದೊರಕುತ್ತದೆ.
ಇದನ್ನೂ ಓದಿ: ಪಾಕ್ To ಕಾಂಬೋಡಿಯ: ಏರ್ ಲಿಫ್ಟ್ ಮೂಲಕ ‘ಕಾವನ್’ ಸ್ಥಳಾಂತರ: ಯಾರಿವನು ?
ಮಹದೇಶ್ವರ ಬೆಟ್ಟದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಒತ್ತಾಯಿಸಿ 12 ವರ್ಷಗಳಿಂದ ಹೋರಾಟ ನಡಸುತ್ತಿದ್ದೇವೆ. ಪ್ರತಿಭಟನೆಗಳು ಸಹ ನಡೆದಿವೆ. ಬೆಟ್ಟದಲ್ಲಿ ಹೈಟೆಕ್ ಹೋಟೆಲ್, ಕಟ್ಟಡಗಳು ಮೇಲೇಳುತ್ತಿವೆ. ಆದರೆ ಆರೋಗ್ಯ ಸೌಲಭ್ಯ ಇಲ್ಲದಿದ್ದ ಮೇಲೆ ಪ್ರಯೋಜನವೇನು? ಮುಖ್ಯಮಂತ್ರಿಯವರು ಆಸ್ಪತ್ರೆ ನಿರ್ಮಾಣಕ್ಕೆ ಜಾಗ ದೊರಕಿಸಿಕೊಡಬೇಕು. -ಎಂ. ನಾಗೇಂದ್ರ,ಅಧ್ಯಕ್ಷ ಮಲೆ ಮಹದೇಶ್ವರ ಪ್ರಗತಿಪರ ಚಿಂತಕರ ವೇದಿಕೆ.
ಪ್ರಸಿದ್ಧ ಯಾತ್ರಾ ಸ್ಥಳ ಮಹದೇಶ್ವರ ಬೆಟ್ಟದಲ್ಲಿ ಸುಸಜ್ಜಿತ ಆಸ್ಪತ್ರೆಯ ಕೊರತೆ: ತುರ್ತುಚಿಕಿತ್ಸೆಗಾಗಿ ಜನರ ಪರದಾಟ !
-ಕೆ.ಎಸ್. ಬನಶಂಕರ ಆರಾಧ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ನವೆಂಬರ್ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ
MUST WATCH
ಹೊಸ ಸೇರ್ಪಡೆ
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ನವೆಂಬರ್ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.