ಸಂಕ್ರಾಂತಿ ಹಬ್ಬದ ಬಳಿಕ ವಿದ್ಯಾಗಮ ಪುನರಾರಂಭ?
ಲೋಪ ನಿವಾರಿಸಿ ಜಾರಿ, ಶಾಲಾವರಣದಲ್ಲೇ ಪಾಠ, ಸುರಕ್ಷಾ ಮಾರ್ಗಸೂಚಿ ಪ್ರಕಟ ಸಾಧ್ಯತೆ
Team Udayavani, Dec 5, 2020, 6:35 AM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ಸ್ಥಗಿತಗೊಂಡಿದ್ದ “ವಿದ್ಯಾಗಮ’ ಯೋಜನೆಯನ್ನು ಸಂಕ್ರಾಂತಿಯ ಬಳಿಕ ಹೊಸ ರೂಪದಲ್ಲಿ ಮರು ಆರಂಭಿಸಲು ರಾಜ್ಯ ಸರಕಾರ ತೀರ್ಮಾನಿಸಿದೆ. ಯೋಜನೆಯಲ್ಲಿದ್ದ ಲೋಪಗಳನ್ನು ನಿವಾರಿಸಿ ವಿದ್ಯಾಗಮ ಯೋಜನೆಯನ್ನು ಅರಂಭಿ ಸಲು ಇಲಾಖೆ ಸಿದ್ಧತೆ ಮಾಡಿ ಕೊಂಡಿದೆ ಎಂದು ಉನ್ನತ ಮೂಲಗಳು “ಉದಯವಾಣಿ’ಗೆ ಖಚಿತಪಡಿಸಿವೆ.
ಹಂತ ಹಂತವಾಗಿ ಪ್ರಾಥಮಿಕ, ಪ್ರೌಢಶಾಲೆ, ಪಿಯು ತರಗತಿಗಳನ್ನು ಆರಂಭಿಸುವಂತೆ ಈಗಾಗಲೇ ಕೊರೊನಾ ತಾಂತ್ರಿಕ ಸಲಹಾ ಸಮಿತಿ ಸರಕಾರಕ್ಕೆ ಶಿಫಾರಸು ಮಾಡಿದೆ. ಈ ಹಿನ್ನೆಲೆಯಲ್ಲಿ ಮಾಸಾಂತ್ಯದಲ್ಲಿ ಸರಕಾರ ಶಾಲಾರಂಭದ ನಿರ್ಧಾರ ತೆಗೆದುಕೊಳ್ಳಲಿದೆ. ಅದರ ಜತೆಗೆ ವಿದ್ಯಾಗಮ ಯೋಜನೆಯ ಅನುಷ್ಠಾನದ ಬಗ್ಗೆಯೂ ನಿರ್ಧಾರ ಪ್ರಕಟಿಸಲಿದೆ. ಸುರಕ್ಷೆಗೆ ಒತ್ತು ನೀಡಿ ಈ ಬಾರಿ ಶಾಲಾವರಣದಲ್ಲೇ ಬೋಧನೆ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ.
ಸರಕಾರಿ ಶಾಲಾ ಮಕ್ಕಳ ನಿರಂತರ ಕಲಿಕೆಗೆ ವಿದ್ಯಾಗಮ ಸಾಕಷ್ಟು ಪರಿಣಾಮಕಾರಿ ಯಾಗಿತ್ತು. ಅನುಷ್ಠಾನ ದಲ್ಲಾದ ಕೆಲವು ದೋಷ ಮತ್ತು ನ್ಯೂನತೆಯಿಂದ ಮತ್ತು ಕೆಲವು ಶಿಕ್ಷಕರು ಕೊರೊನಾ ಸೋಂಕಿಗೆ ತುತ್ತಾ ಗಿದ್ದರಿಂದ ಯೋಜನೆಯನ್ನೇ ಸರಕಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು. ಅನಂತರ ಗ್ರಾಮೀಣ ಭಾಗದ ಮಕ್ಕಳ ನಿರಂತರ ಕಲಿಕೆಗೆ ಯಾವುದೇ ಹೊಸ ಯೋಜನೆಯನ್ನು ಸರಕಾರ ಜಾರಿಗೆ ತಂದಿಲ್ಲ. ಇತ್ತೀಚೆಗೆ 5ರಿಂದ 7ನೇ ತರಗತಿ ಮಕ್ಕಳಿಗೆ ದೂರದರ್ಶನ ಮೂಲಕ ಸಂವೇದಾ ತರಗತಿಗಳನ್ನು ನಡೆಸುತ್ತಿದೆ. ಆದರೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನೇರ ಮುಖಾಮುಖೀ ಆಗುತ್ತಿಲ್ಲ. ಆನ್‌ಲೈನ್ ಶಿಕ್ಷಣವಂತೂ ಸರಕಾರಿ ಶಾಲಾ ಮಕ್ಕಳಿಗೆ ಗಗನ ಕುಸುಮವೇ ಸರಿ. ಹೀಗಾಗಿ ವಿದ್ಯಾಗಮವನ್ನೇ ಪರಿಷ್ಕೃತ ಮಾದರಿಯಲ್ಲಿ ಅನುಷ್ಠಾನಕ್ಕೆ ತರಲು ಸಿದ್ಧತೆ ನಡೆಸಲಾಗುತ್ತಿದೆ.
ಹಿರಿಯ ಪ್ರಾಥಮಿಕ, ಪ್ರೌಢ ತರಗತಿಗಳಿಗೆ ಒತ್ತು?
ಪರಿಷ್ಕೃತ ರೂಪದ ವಿದ್ಯಾಗಮ ಯೋಜನೆಯಲ್ಲಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. 5ರಿಂದ 7ನೇ ತರಗತಿ ಹಾಗೂ 8 ಮತ್ತು 9ನೇ ತರಗತಿ -ಹೀಗೆ ಪ್ರತ್ಯೇಕ ವಾಗಿ ಆಯಾ ತರಗತಿಗಳಲ್ಲಿ ಇರುವ ಮಕ್ಕಳ ಸಂಖ್ಯೆ, ಎಸೆಸೆಲ್ಸಿಗೆ ಬೋಧನೆ ಮಾಡುವ ಶಿಕ್ಷಕರು ಹೊರತುಪಡಿಸಿ, ವಿದ್ಯಾಗಮಕ್ಕೆ ಸಿಗಬಹುದಾದ ಶಿಕ್ಷಕರ ಸಂಖ್ಯೆಗೆ ಅನುಗುಣವಾಗಿ ಕಾರ್ಯಕ್ರಮ ಅನುಷ್ಠಾನವಾಗಲಿದೆ.
ಶಾಲಾವರಣದಲ್ಲೇ ವಿದ್ಯಾಗಮಕ್ಕೆ ಅವಕಾಶ ನೀಡುವುದರಿಂದ ಶಿಕ್ಷಕರ ಬಹುತೇಕ ಸಮಸ್ಯೆಗೂ ಪರಿಹಾರ ಸಿಗಲಿದೆ.
ಅನುಷ್ಠಾನ ಹೇಗೆ?
– ಶಾಲಾವರಣದಲ್ಲೇ ವಿದ್ಯಾಗಮದಡಿ ಬೋಧನೆ.
– ಸಾಮಾಜಿಕ ಅಂತರ, ಕೊರೊನಾ ಸುರಕ್ಷಾ ಕ್ರಮ, ಪಾಳಿ ಪದ್ಧತಿ ಅಥವಾ ದಿನಕ್ಕೊಂದು ತರಗತಿಯಂತೆ ಜಾರಿ.
– ಶಿಕ್ಷಕರ ಲಭ್ಯತೆ, ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಅನುಷ್ಠಾನ.
– 1-9ನೇ ತರಗತಿ ಯಾ 5-9ನೇ ತರಗತಿಗಳಿಗೆ ಹಂತ ಹಂತವಾಗಿ ಜಾರಿ ಸಾಧ್ಯತೆ.
ಕೆಲವು ಮಾರ್ಪಾಟುಗಳೊಂದಿಗೆ ವಿದ್ಯಾಗಮ ಅನುಷ್ಠಾನಕ್ಕೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದೇವೆ. ಶಾಲಾರಂಭ ಮತ್ತು ವಿದ್ಯಾಗಮಗಳ ಅನುಷ್ಠಾನದ ನಿರ್ಧಾರವನ್ನು ಸರಕಾರವು ಪ್ರಕಟಿಸಿದ ಅನಂತರ ಇದು ಜಾರಿಗೆ ಬರಲಿದೆ.
-ಎಸ್.ಆರ್. ಉಮಾಶಂಕರ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ
- ರಾಜು ಖಾರ್ವಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.