ಮಣಿಯದ ಸರಕಾರ : ಬಂದ್ ಶಾಂತಿಯುತ ; ಶಾ ಜತೆಗಿನ ಮಾತುಕತೆ ವಿಫಲ
Team Udayavani, Dec 9, 2020, 6:49 AM IST
ಹೊಸದಿಲ್ಲಿ: ಕೇಂದ್ರದ ಹೊಸ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಅನ್ನದಾತರು ಕರೆ ನೀಡಿದ್ದ ಭಾರತ ಬಂದ್ ಬಹುತೇಕ ಶಾಂತಿಯುತವಾಗಿ ನಡೆದಿದ್ದು, ದೇಶದ ಬಹುತೇಕ ರಾಜ್ಯಗಳಿಗೆ ಬಂದ್ ಬಿಸಿ ತಟ್ಟಿತು.
ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ ಹಲವು ರಾಜ್ಯಗಳಲ್ಲಿ ಅಂಗಡಿ-ಮುಂಗಟ್ಟುಗಳು ಮುಚ್ಚಿದ್ದು, ಕೆಲವೆಡೆ ವಿವಿಧ ಸಂಘಟನೆಗಳು ಮತ್ತು ರಾಜಕೀಯ ಪಕ್ಷ ಗಳ ಕಾರ್ಯಕರ್ತರು ಪ್ರತಿಭಟನ ರ್ಯಾಲಿ, ರಸ್ತೆ ತಡೆ-ರೈಲು ತಡೆಗಳನ್ನು ನಡೆಸಿದ ಕಾರಣ ಜನಜೀವನ ಅಸ್ತವ್ಯಸ್ತವಾಯಿತು.
ಪಂಜಾಬ್- ಹರಿಯಾಣಗಳಲ್ಲಿ ಬಂದ್ ಪೂರ್ಣ ಯಶಸ್ವಿಯಾಗಿದ್ದರೆ, ಮಹಾರಾಷ್ಟ್ರ, ಝಾರ್ಖಂಡ್, ಒಡಿಶಾ, ಪ. ಬಂಗಾಲ, ಬಿಹಾರ ಮತ್ತಿತರ ಕೆಲವು ರಾಜ್ಯಗಳಲ್ಲಿ ಆಂಶಿಕ ಪ್ರತಿ ಕ್ರಿಯೆ ವ್ಯಕ್ತವಾಯಿತು. ಉ. ಪ್ರದೇಶ, ಹಿಮಾ ಚಲ ಪ್ರದೇಶಗಳಲ್ಲಿ ಜನ ಜೀವನದ ಮೇಲೆ ಪರಿಣಾಮ ಬೀರಲಿಲ್ಲ. ಬಿಜೆಪಿ ಮತ್ತು ಮಿತ್ರಪಕ್ಷಗಳು ಅಧಿಕಾರದಲ್ಲಿರುವ ರಾಜ್ಯ ಗಳಲ್ಲಿ ಬಂದ್ ನೀರಸವಾಗಿತ್ತು. ಒಟ್ಟಾರೆ 25 ರಾಜ್ಯ ಗಳ 10 ಸಾವಿರ ಪ್ರದೇಶಗಳಲ್ಲಿ ಬಂದ್‌ಗೆ ಬೆಂಬಲ ವ್ಯಕ್ತವಾಯಿತು ಎಂದು ಸ್ವರಾಜ್ ಇಂಡಿಯಾ ನಾಯಕ ಯೋಗೇಂದ್ರ ಯಾದವ್ ಹೇಳಿದ್ದಾರೆ.
ಬುಧವಾರ ಕೇಂದ್ರ ಸರಕಾರ ಮತ್ತು ರೈತರ ನಡುವೆ 6ನೇ ಸುತ್ತಿನ ಮಾತುಕತೆ ನಡೆಯಲಿದ್ದು, ರೈತರು ಪಟ್ಟು ಸಡಿಲಿಸುವ ಲಕ್ಷಣ ಗೋಚರಿಸುತ್ತಿಲ್ಲ. ಹೀಗಾಗಿ ಕೇಂದ್ರ ಸರಕಾರವು ಅನ್ನದಾತರ ಆಗ್ರಹಕ್ಕೆ ಮಣಿಯುವುದೇ ಎಂಬ ಪ್ರಶ್ನೆ ಮೂಡಿದೆ.
ಇಂದು ವಿಪಕ್ಷಗಳಿಂದ ರಾಷ್ಟ್ರಪತಿ ಭೇಟಿ
ವಿಪಕ್ಷಗಳ ನಿಯೋಗವು ಬುಧವಾರ ಸಂಜೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ಭೇಟಿಯಾಗಲು ನಿರ್ಧರಿಸಿದ್ದು, ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಮನವಿ ಸಲ್ಲಿಸಲಿದೆ. ಕೊರೊನಾ ಹಿನ್ನೆಲೆಯಲ್ಲಿ ಐವರಿಗೆ ಮಾತ್ರ ರಾಷ್ಟ್ರಪತಿ ಭೇಟಿಗೆ ಅವಕಾಶವಿರುವ ಕಾರಣ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎನ್‌ಸಿಪಿ ವರಿಷ್ಠ ಶರದ್ ಪವಾರ್, ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ. ರಾಜಾ, ಸಿಪಿಎಂ ನಾಯಕ ಸೀತಾರಾಂ ಯೆಚೂರಿ, ಡಿಎಂಕೆಯ ಟಿಕೆಎಸ್ ಇಳಂಗೋವನ್ ಈ ನಿಯೋಗದಲ್ಲಿ ಇರಲಿದ್ದಾರೆ.
“ಹೌದು ಅಥವಾ ಇಲ್ಲ’ ಉತ್ತರ ಸಾಕು!
ಬಂದ್ ನಡೆದ ದಿನವೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಂಗಪ್ರವೇಶ ಮಾಡಿದ್ದಾರೆ. ರೈತ ಮುಖಂಡರನ್ನು ಮಾತುಕತೆಗೆ ಬರುವಂತೆ ಆಹ್ವಾನಿಸಿದ್ದಾರೆ. ಅದರಂತೆ ಮಂಗಳವಾರ ರಾತ್ರಿ 14 ಮಂದಿ ಮುಖಂಡರು ಶಾ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದಾರೆ. ಪ್ರತಿಭಟನಕಾರರು ಮತ್ತು ಕೇಂದ್ರದ ನಡುವೆ ಬುಧವಾರ ಮಾತುಕತೆ ನಡೆಯಲಿದ್ದು, ಇದಕ್ಕೆ ಮುನ್ನ ಈ ಬೆಳವಣಿಗೆ ನಡೆದಿದೆ. ಶಾ ಭೇಟಿಗೆ ಮುನ್ನ ಮಾತನಾಡಿದ ರೈತ ಮುಖಂಡರು, “ಕೇಂದ್ರ ಮಣಿದಿರುವುದು ಸ್ಪಷ್ಟ. ಶಾ ಅವರಿಂದಲೂ ನಾವು ನಿರೀಕ್ಷಿಸುವುದು ಹೌದು ಅಥವಾ ಇಲ್ಲ ಎಂಬ ಉತ್ತರ ಅಷ್ಟೆ’ ಎಂದಿದ್ದಾರೆ.
ದಿಲ್ಲಿಯಲ್ಲಿ ಹೈಡ್ರಾಮಾ
ಭಾರತ ಬಂದ್ ದಿನ ದಿಲ್ಲಿಯಲ್ಲಿ ಹೈಡ್ರಾಮಾ ನಡೆದಿದೆ. ಸಿಂಘು ಗಡಿಯಲ್ಲಿ ರೈತರನ್ನು ಭೇಟಿಯಾದ ಬೆನ್ನಲ್ಲೇ ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌ರನ್ನು ಪೊಲೀಸರು ಗೃಹಬಂಧನದಲ್ಲಿ ಇರಿಸಿದ್ದಾರೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ. ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಘಟನೆಯೂ ಸಂಭವಿಸಿದೆ. ಆದರೆ ಇದನ್ನು ಪೊಲೀಸರು ಅಲ್ಲಗಳೆದಿದ್ದಾರೆ.ರಾತ್ರಿ ಸಿಎಂ ಕೇಜ್ರಿವಾಲ್ ಮಾತನಾಡಿ, “ನಾನು ಪ್ರತಿಭಟನ ಸ್ಥಳಕ್ಕೆ ಒಬ್ಬ ಸಾಮಾನ್ಯನಂತೆ ತೆರಳಲು ಬಯಸಿದ್ದೆ. ಆದರೆ ಪೊಲೀಸರು ನನಗೆ ಹೊರ ಹೋಗಲು ಬಿಡಲಿಲ್ಲ’ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಪ್ರತಿಭಟನೆ ಕಾವು
ಬೆಂಗಳೂರು: ವಿವಿಧ ರೈತ ಸಂಘಟನೆ ಗಳು ಮಂಗಳವಾರ ಕರೆ ಕೊಟ್ಟಿದ್ದ ಕರ್ನಾಟಕ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಳೇ ಮೈಸೂರು ಭಾಗ, ಕಲ್ಯಾಣ ಕರ್ನಾಟಕ, ಮಧ್ಯ ಕರ್ನಾಟಕ ಭಾಗಗಳಲ್ಲಿ ಬಂದ್ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರ ಅಣಕು ಶವಯಾತ್ರೆ, ಪ್ರತಿಕೃತಿ ದಹನ, ರಸ್ತೆ ತಡೆ, ಎತ್ತಿನಗಾಡಿ ಮೆರವಣಿಗೆ, ಮಾನವ ಸರಪಳಿ ರಚನೆ, ಹೆದ್ದಾರಿ ಬಂದ್ ತಡೆ ಸೇರಿದಂತೆ ಭಿನ್ನ ರೀತಿಯ ಪ್ರತಿಭಟನೆಗಳು ನಡೆದವು. ಆದರೆ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ರೈತರ ಹೋರಾಟ ಅಷ್ಟೊಂದು ಕಾವು ಪಡೆಯಲಿಲ್ಲ. ಜತೆಗೆ ರಾಜಧಾನಿ ಬೆಂಗಳೂರಿನಲ್ಲಿ ಬಂದ್‌ಗೆ ಬೆಂಬಲ ದೊರೆಯಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.